ArticlesDasaraLatest

ಮೈಸೂರಿನ ಕಟ್ಟಿಗೆಯ ಅರಮನೆ ಏನಾಯಿತು?  ಇದು ಅಂಬಾವಿಲಾಸ ಅರಮನೆ ರಹಸ್ಯ!

ಮೈಸೂರು ಎಂದಾಕ್ಷಣ ವಿದ್ಯುತ್ ದೀಪಗಳಿಂದ ಜಗಮಗಿಸುವ, ವಿಶಿಷ್ಟ ವಾಸ್ತುಶಿಲ್ಪ, ವಿಭಿನ್ನ ವಿನ್ಯಾಸದಿಂದ ನಿರ್ಮಾಣಗೊಂಡ ಅಂಬಾವಿಲಾಸ ಅರಮನೆ  ಕಣ್ಮುಂದೆ ಬಂದು ನಿಲ್ಲುತ್ತದೆ… ಈ ಅರಮನೆ ಮೈಸೂರು ನಗರದ ಹೃದಯಭಾಗದಲ್ಲಿರುವ ಕಾರಣದಿಂದ ಇದರ ನೋಟ ಮೈಸೂರಿಗೆ ಆಗಮಿಸುವ ಪ್ರತಿಯೊಬ್ಬರಿಗೂ ಲಭ್ಯವಾಗುತ್ತದೆ.

ಬಹಳಷ್ಟು ಜನರಿಗೆ ಈ ಅರಮನೆ ಹೇಗೆ ನಿರ್ಮಾಣವಾಯಿತು? ಇದರ ನಿರ್ಮಾಣಕ್ಕೆ ಕಾರಣವಾದ ಘಟನೆ ಏನು? ಎಂಬುದೇ ಗೊತ್ತಿಲ್ಲ.

ಬಹುಶಃ ಆ ಘಟನೆ ನಡೆಯದೆ ಹೋಗಿದ್ದರೆ ಅಂಬಾವಿಲಾಸ ಅರಮನೆ ನಿರ್ಮಾಣವಾಗದೆ ಹಳೆಯ ಅರಮನೆಯೇ ಇವತ್ತಿಗೂ ಉಳಿದಿರುತ್ತಿತ್ತೇನೋ? ಹಾಗಾದರೆ ಇವತ್ತಿನ ಅರಮನೆಯಿದ್ದ ಜಾಗದಲ್ಲಿ ಹಿಂದೆ ಅರಮನೆಯಿತ್ತಾ? ಅದೇನಾಯಿತು? ಎಂಬಿತ್ಯಾದಿ ಪ್ರಶ್ನೆಗಳು ನಮ್ಮ ಮನಪಟಲದಲ್ಲಿ ಗಿರಕಿಹೊಡೆಯದಿರದು.

ಇಷ್ಟಕ್ಕೂ ಕಟ್ಟಿಗೆಯಿಂದ ನಿರ್ಮಾಣಗೊಂಡಿದ್ದ ಆ ಅರಮನೆ ಹೇಗಿತ್ತು? ಮತ್ತು ಅದು ಏನಾಯಿತು? ಎಂಬುದನ್ನು ತಿಳಿಯುವ ಮುನ್ನ  ಹಿಂದೆ ರಾಜಪರಿವಾರದವರು ವಾಸವಾಗಿದ್ದ ಹಳೆಯ ಅರಮನೆ ಬಗ್ಗೆ ಹೇಳಲೇ ಬೇಕಾಗುತ್ತದೆ. ಈ ಅರಮನೆಯನ್ನು 1800 ರಿಂದ 1804ರವರೆಗೆ ಕಟ್ಟಲಾಗಿತ್ತು. ಅಲ್ಲದೆ ಅರಮನೆಯು ಅವತ್ತಿನ ಕಾಲಕ್ಕೆ ಅರಮನೆ ಹೇಗಿರಬೇಕೋ ಹಾಗೆಯೇ ವೈಭವದಿಂದ ಕೂಡಿತ್ತು.

ಅರಮನೆ ನಿರ್ಮಾಣಕ್ಕೆ ಇಟ್ಟಿಗೆಯೊಂದಿಗೆ ಹೆಚ್ಚಿನ ಕಟ್ಟಿಗೆಯನ್ನು ಬಳಸಲಾಗಿತ್ತು. ಹಿಂದೂ ವೈಖರಿಯಲ್ಲಿದ್ದ ಅರಮನೆಯ ಪೂರ್ವಕ್ಕೆ ಮೊದಲನೇ ಅಂತಸ್ತು ಮತ್ತು ಉತ್ತರ ಭಾಗಕ್ಕೆ ದರ್ಬಾರ್ ಹಾಲ್ ಇತ್ತು. ಅವತ್ತಿನ ಕಾಲದಲ್ಲಿ ಇದೇ ಅರಮನೆ ಆವರಣದಲ್ಲಿ ದಸರಾವನ್ನು ಆಚರಿಸಲಾಗುತ್ತಿತ್ತು. ದರ್ಬಾರ್ ಕೂಡ ಇಲ್ಲಿಯೇ ನಡೆಯುತ್ತಿತ್ತು. ರಾಜಪರಿವಾರಗಳಿಂದ, ಸೇವಕರಿಂದ ಕೂಡಿದ ಅರಮನೆಯಲ್ಲಿ ಸದಾ ವೈಭವ ಮೇಳೈಸುತ್ತಿತ್ತು.

ಆದರೆ ಅದೊಂದು ನಡೆಯ ಬಾರದ ದುರ್ಘಟನೆಯೊಂದು ಅವತ್ತು ನಡೆದು ಹೋಗಿತ್ತು. ಆ ಘಟನೆಯ ಬಗ್ಗೆ ಹೇಳಬೇಕೆಂದರೆ ಅದು 1897 ಫೆಬ್ರವರಿ 28ರ ಭಾನುವಾರದ ದಿನ. ಇಡೀ ಅರಮನೆ ಚಾಮರಾಜೇಂದ್ರ ಒಡೆಯರ್ ಮತ್ತು ವಾಣಿವಿಲಾಸ ಸನ್ನಿಧಾನದವರ ಹಿರಿಯ ಪುತ್ರಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಹೋದರಿ ಜಯಲಕ್ಷ್ಮಮ್ಮಣ್ಣಿಯವರ ವಿವಾಹ ಸರ್ದಾರ್ ಕಾಂತರಾಜೇ ಅರಸ್ ಅವರೊಂದಿಗೆ ನಡೆಯುತ್ತಿತ್ತು. ಇಡೀ ರಾಜಪರಿವಾರ ವಿವಾಹ ಸಂಭ್ರಮದಲ್ಲಿ ತೇಲಾಡುತ್ತಿತ್ತು.

ಈ ವಿವಾಹದ ಸಡಗರ ಅರಮನೆಯನ್ನು ಆವರಿಸಿ ಎಲ್ಲರೂ ಖುಷಿಯಾಗಿ ಇರುವಾಗಲೇ ಅಲ್ಲೊಂದು ನಡೆಯಬಾರದ ಘಟನೆಯೊಂದು ನಡೆದು ಹೋಗಿತ್ತು. ಅದು ಏನೆಂದರೆ? ವಧು ಜಯಲಕ್ಷ್ಮಮ್ಮಣ್ಣಿಯವರ ಕೂದಲಿಗೆ ಸಾಂಬ್ರಾಣಿ ಹೊಗೆ ಕೊಡುವ ಸಂದರ್ಭ ಪರಿಚಾರಕರಿಗೆ ಕೆಂಡವೊಂದು ಕೆಳಗೆ ಬಿದ್ದದ್ದು ಗೊತ್ತಾಗಲೇ ಇಲ್ಲ.

ಆ ಕೆಂಡದಿಂದ ಉರಿದ ಬೆಂಕಿ ತೇಗದ ಮರಕ್ಕೆ ತಾಗಿ  ಹೊತ್ತಿ ಉರಿಯತೊಡಗಿತ್ತು. ಇದ್ದಕ್ಕಿದ್ದಂತೆಯೇ ಬೆಂಕಿ ಅರಮನೆಯನ್ನು ಆವರಿಸಿತು. ಅರಮನೆಯಲ್ಲಿದ್ದ ಸೇವಕರು ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅರಮನೆಯಿಂದ ಹೊರ ಓಡಿದರಲ್ಲದೆ, ಅರಮನೆಯಲ್ಲಿದ್ದ ರಾಜವಂಶಸ್ಥರನ್ನು ಹಾಗೂ ವಿವಾಹಕ್ಕೆ ಆಗಮಿಸಿದ್ದ ದೇಶವಿದೇಶಗಳ ಅತಿಥಿಯನ್ನು ಯಾವುದೇ ಪ್ರಾಣಾಪಾಯವಾಗದಂತೆ ಕಾಪಾಡಿದರು.

ಜಾಗೃತಗೊಂಡ ಅಲ್ಲಿದ್ದ ಸೈನಿಕರು ಮತ್ತು ಸೇವಕರು  ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲಿಲ್ಲ. ಅದೇ ಸಮಯಕ್ಕೆ  ಯಂತ್ರ ಕೆಟ್ಟು ಹೋಗಿದ್ದರಿಂದ ನಲ್ಲಿಯಲ್ಲಿ ನೀರು ಬರುತ್ತಿರಲಿಲ್ಲ. ಹೀಗಾಗಿ ನೀರನ್ನು ಹುಡುಕಿ ತಂದು ಆರಿಸುವ ಕೆಲಸ ಮಾಡುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ.  ಹೀಗಾಗಿ ನಾಲ್ಕು ದಿಕ್ಕಿಗೂ ಬೆಂಕಿಯ ಜ್ವಾಲೆ ಹರಡಿ ವಿರಾಟ ಸ್ವರೂಪ ತಾಳಿತ್ತು.

ರಾತ್ರಿಯಿಂದ ಬೆಳಿಗ್ಗೆ ತನಕವೂ ಅರಮನೆ ಹೊತ್ತಿ ಉರಿದಿತ್ತು. ಬೆಂಕಿಯನ್ನು ನಂದಿಸಲು ಸುತ್ತಮುತ್ತಲಿನ ಜನ ಸೇರಿದಂತೆ ಸುಮಾರು 8000 ಮಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿದರಾದರೂ ಸಂಪೂರ್ಣವಾಗಿ ನಂದಿಸಲು ಸಾಧ್ಯವಾಗಲಿಲ್ಲ.  ಪರಿಣಾಮ ಉಳಿದಿದ್ದು ಅರಮನೆಯ ಅವಶೇಷ ಮತ್ತು ರಾಶಿ ಬಿದ್ದ ಬೂದಿ ಮಾತ್ರ.

ಇದನ್ನು ನೋಡಿದ ರಾಜಪರಿವಾರ ಮಾತ್ರವಲ್ಲ  ಪ್ರಜೆಗಳು ಕಣ್ಣೀರಿಟ್ಟಿದ್ದರು. ಅರಮನೆ ಬೆಂಕಿಗೆ ಆಹುತಿಯಾದ ಕಾರಣ ರಾಜಪರಿವಾರದ ವಾಸ್ತವ್ಯವನ್ನು ಸಮೀಪದ ಜಗನ್ಮೋಹನ ಅರಮನೆಗೆ ಸ್ಥಳಾಂತರಿಸಲಾಯಿತು.

ಇದೇ ಸಮಯದಲ್ಲಿ ಅರಮನೆಯಲ್ಲಿದ್ದ ರತ್ನಾಭರಣ, ಬೆಳ್ಳಿ ಬಂಗಾರದ ಪದಾರ್ಥ, ಮುತ್ತಿನ ಹಾರ ಸೇರಿದಂತೆ ವಿವಿಧ ಬಗೆಯ ಬೆಲೆಬಾಳುವ ಪದಾರ್ಥಗಳನ್ನು ಹೊರಕ್ಕೆ ತಂದು ಬಯಲಲ್ಲಿ ರಾಶಿ ಹಾಕಿದ್ದರು. ಇಷ್ಟೇ ಅಲ್ಲದೆ ಅರಮನೆಯ ಪಂಚಕಳಶವೂ ಮೇಲಿಂದ ಬಿದ್ದಿತು. ಇದನ್ನು ಕಂಡ ಜನ ಇನ್ನಷ್ಟು ಕಣ್ಣೀರಿಟ್ಟು ರೋಧಿಸಿದ್ದರಂತೆ.

ಇದಾದ ನಂತರ ಹೊಸ ಮಾದರಿಯಲ್ಲಿ ಬೆಂಕಿ ಅವಘಡ ಸಂಭವಿಸಿದರೂ ಏನೂ ಆಗದ ರೀತಿಯಲ್ಲಿ ಹಿಂದೆಯಿದ್ದ ಕಟ್ಟಿಗೆಯ ಅರಮನೆಯ ವಿನ್ಯಾಸದಲ್ಲಿ ಹೊಸ ಮಾದರಿಯಲ್ಲಿ ಅರಮನೆಯನ್ನು ನಿರ್ಮಿಸಲು  ನಾಲ್ವಡಿ ಕೃಷ್ಣರಾಜ ಒಡೆಯರ್ ತೀರ್ಮಾನಿಸಿದರು. ಅರಮನೆಯ ನಕಾಶೆ ತಯಾರಿಸುವ ಜವಬ್ದಾರಿಯನ್ನು ಮದ್ರಾಸ್ ಸರ್ಕಾರದ ಸಲಹೆಗಾರ ಇಂಜಿನಿಯರಾದ ಹೆನ್ರಿ ಇರ್ವಿನ್ ರವರಿಗೆ ನೀಡಲಾಯಿತು. ಆದರೆ  ಅವತ್ತು ಅಗ್ನಿಗಾಹುತಿಯಾದ ಅರಮನೆಯ ನೀಲಿ ನಕ್ಷೆ ಇರಲಿಲ್ಲ. ಅದಕ್ಕಾಗಿ ಹುಡುಕಾಟ ನಡೆಸಲಾಯಿತು.

ಕೊನೆಗೆ  ಬ್ರಿಟಿಷ್ ಸೈನಿಕನೊಬ್ಬ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದ್ದ ಫೋಟೋ ಅಧಿಕಾರಿಗಳಿಗೆ ಸಿಕ್ಕಿತ್ತು. ಅದನ್ನು ಪಡೆದುಕೊಂಡ ಹೆನ್ರಿ ಇರ್ವಿನ್  ಅವರು ಆ ಅರಮನೆಯಂತೆ ಈಗಿನ ಅರಮನೆಯ ನಕಾಶೆ ರೂಪಿಸಿದರು.  ಅರಮನೆಯ ನಕಾಶೆ ರೂಪಿಸಿದ ಹೆನ್ರಿಇರ್ವಿನ್ ರವರಿಗೆ ಅವತ್ತು ಮಹಾರಾಜರು ಶುಲ್ಕವಾಗಿ 12 ಸಾವಿರ ರೂಪಾಯಿಯನ್ನು ನೀಡಿದ್ದರಂತೆ.

ಅರಮನೆಯ ಇಂಜಿನಿಯರ್ ಆಗಿ ಬಿ.ಪಿ.ರಾಘವಲುನಾಯಿಡು ಕೆಲಸ ಮಾಡಿದರೆ, ಅರಮನೆಯಲ್ಲಿ ಚಿತ್ರರಚಿಸಲು ನಾಗರಾಜು ಎಂಬ ಕಲಾವಿದನನ್ನು ಚಿತ್ರರಚನೆಯ ಅಧ್ಯಯನಕ್ಕಾಗಿ ಯುರೋಪಿನ ರಾಜ್ಯಗಳಿಗೆ ಕಳುಹಿಸಲಾಯಿತು  ಇದಕ್ಕಾಗಿ ಒಡೆಯರ್ ಮಾಡಿದ ಖರ್ಚು 2439 ರೂಪಾಯಿ 4ಆಣೆ 8ಕಾಸಂತೆ. ಜೊತೆಗೆ ಹಳೆಬೀಡು, ಬೇಲೂರು ಹಾಗೂ ಸೋಮನಾಥಪುರ ದೇವಾಲಯದ ನಿರ್ಮಾಣದಲ್ಲಿ ಮಾಡಲಾದ ಕುಸುರಿ ಕೆತ್ತನೆಯನ್ನು ಅರಮನೆಯ ನಿರ್ಮಾಣದ ಸಂದರ್ಭ ಅನುಸರಿಸಲಾಯಿತು.

1897ರಿಂದಲೇ ಆರಂಭಗೊಂಡ ಅರಮನೆಯ ನಿರ್ಮಾಣ ಕಾರ್ಯ 1911-12ರಲ್ಲಿ ಸುಮಾರು 41,47,913ರೂಪಾಯಿ ವೆಚ್ಚದಲ್ಲಿ ಪೂರ್ಣಗೊಂಡಿತು. ಇವತ್ತಿನ ಭವ್ಯ ಅರಮನೆ ನೋಡುವಾಗಲೆಲ್ಲ ಇತಿಹಾಸ ತಿಳಿದವರಿಗೆ ಹಳೆಯ ಆ ಅರಮನೆ ನೆನಪಿಗೆ ಬಾರದಿರದು..

ಧ್ವನಿ: ಪೃಥ್ವಿ ದೇವರಾಜ್

 

B M Lavakumar

 

ಮೈಸೂರು ದಸರಾದ ಕಥೆ ಹೇಳುವ ‘ಸೀತಾವಿಲಾಸ ಛತ್ರ’ ಇದು ಇತಿಹಾಸದ ಸಾಕ್ಷಿ!

admin
the authoradmin

Leave a Reply