LatestMysore

ಹಾರಂಗಿಯಿಂದ ನೀರು ಹರಿಸದೆ ರೈತರೊಂದಿಗೆ ಚೆಲ್ಲಾಟ… ರೈತ ಸಂಘದಿಂದ ಪ್ರತಿಭಟನೆ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಹಾರಂಗಿ ಹುಣಸೂರು ಬ್ರಾಂಚ್ ನಾಲಾ ವ್ಯಾಪ್ತಿಗೆ ನೀರು ಹರಿಸದೆ ಹಾರಂಗಿ ಇಲಾಖೆ ಎಂಜಿನಿಯರ್‌ ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ ಎಂದು ನಾಲಾ ಬಯಲಿನ ರೈತರು ಹಾರಂಗಿ ನೀರಾವರಿ ಇಲಾಖೆ ಕಚೇರಿ ಎದುರು ಪ್ರತಿಭಟಿಸಿ ನೀರಿಗಾಗಿ ಹೋರಾಟ ನಡೆಸಿದರು.

ನಗರದ ಹಾರಂಗಿ ನೀರಾವರಿ ಇಲಾಖೆ ಎದುರು ಹುಣಸೂರು ಮತ್ತು ಹನಗೋಡು ಬ್ರಾಂಚ್‌ ನಾಲಾ ವ್ಯಾಪ್ತಿಯ ರೈತರು ರೈತ ಸಂಘ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್‌ ನೇತೃತ್ವದಲ್ಲಿ ಪ್ರತಿಭಟಿಸಿ ಮಾತನಾಡಿ, ಹಾರಂಗಿ ನೀರು ಅಣೆಕಟ್ಟೆಯಲ್ಲಿ ಭರ್ತಿ ಇದ್ದ ಸಮಯದಲ್ಲಿ ಕೆರೆ ಕಟ್ಟೆಗಳಿಗೆ ಭರ್ತಿ ಮಾಡದ ಎಂಜಿನಿಯರ್‌  ತಮಿಳು ನಾಡಿಗೆ ಹರಿಬಿಟ್ಟು ಈಗ ಅಣೆಕಟ್ಟೆ ಖಾಲಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಅಣೆ ಕಟ್ಟೆ ರಾಜ್ಯದ ರೈತರ ಹಿತಾಸಕ್ತಿ ಕಾಯಲು ನಿರ್ಮಾಣವಾಗಿದ್ದು, ರೈತರನ್ನು ರಕ್ಷಿಸುವ ಬದಲಿಗೆ ತಮಿಳುನಾಡಿನ ರೈತರನ್ನು ರಕ್ಷಿಸುವ ಕೆಲಸ ಹಾರಂಗಿ ಇಲಾಖೆ ಅಧಿಕಾರಿಗಳಿಂದ ನಡೆದಿದೆ ಎಂದರು.

ಹಾರಂಗಿ ನೀರಾವರಿ ಮಹಾಮಂಡಳಿಯಲ್ಲಿ ಮೈಸೂರು ಕೊಡಗು ಜಿಲ್ಲೆಯ ಜನಪ್ರತಿನಿಧಿಗಳು ಸದಸ್ಯರಿದ್ದರೂ ನಾಲೆಗಳಿಗೆ ನೀರು ಹರಿಸಿ ಕೆರೆಗಳನ್ನು ಭರ್ತಿ ಮಾಡಿಸುವ ಬಗ್ಗೆ ಕ್ರಮವಹಿಸದೆ ಮೌನಕ್ಕೆ ಶರಣಾಗಿ ಈಗ ಅಧಿಕಾರಿಗಳಿಗೆ ಕೆರೆಗೆ ನೀರು ತುಂಬಿಸಿ ಎಂದು ಹೇಳಿಕೆ ನೀಡುತ್ತಿದ್ದಾರೆ. ಜನಪ್ರತಿನಿಧಿಗಳು ರೈತರೊಂದಿಗೆ ಮತ್ತು ಅಧಿಕಾರಿಗಳೊಂದಿಗೆ ಉತ್ತಮ ಸಂಬಂಧ ಕಾದುಕೊಳ್ಳುವ ನಾಟಕವಾಡಿ ರೈತರನ್ನು ಮುಳುಗಿಸುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.

ಇತ್ತೀಚೆಗೆ ಹುಣಸೂರಿನಲ್ಲಿ ಆರಂಭವಾದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ರೈತರಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸೆ 10 ರೊಳಗೆ ಹುಣಸೂರು ಮತ್ತು ಹನಗೋಡು ಬ್ರಾಂಚ್‌ ನಾಲೆಯಲ್ಲಿ ನೀರು ಬೀಟು ಕೆರೆಗಳಿಗೆ ನೀರು ತುಂಬಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಈಗಾಗಲೇ ಸೆ 15 ಕಳೆದರೂ ಒಂದು ಹನಿ ನೀರು ಬಿಡದೆ ನೆರೆಯ ತಾಲ್ಲೂಕು ಕೆ.ಆರ್.ನಗರ ಕೃಷ್ಣ ಬಲದಂಡೆ ನಾಲೆಯಲ್ಲಿ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಿರುವುದು ಎಷ್ಟು ಸಮಂಜಸ ? ಎಂದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ ಮಾತನಾಡಿ, ಮರೂರು ಬ್ರಾಂಚ್‌ ನಾಲೆ ವ್ಯಾಪ್ತಿಗೆ 24 ಕೆರೆ ಇದ್ದು ಒಂದು ಹನಿ ನೀರು ಇಲ್ಲ, ಬೇಸಿಗೆ ಈಗಾಗಲೇ ಆರಂಭವಾಗಿ ಜನಜಾನುವಾರುಗಳಿಗೆ ನೀರು ಇಲ್ಲವಾಗಿದೆ. ಬೇಸಾಯಕ್ಕೆ ಒಂದು ವರ್ಷ ರಜೆ ನೀಡಲು ರೈತರು ಸಿದ್ದವಿದ್ದೇವೆ ಆದರೆ ಜಾನುವಾರುಗಳಿಗೆ ನೀರು ಬೇಕಲ್ಲವೆ ? ಎಂದರು.

ಸ್ಪಷ್ಟನೆ: ಹಾರಂಗಿ ನೀರಾವರಿ ಇಲಾಖೆ ಇಇ ಆಶಾ  ಮಾತನಾಡಿ, ಕೃಷ್ಣರಾಜ ಬಲದಂಡೆ ನಾಲೆಗೆ ಆಗಸ್ಟ್‌ 21 ರಿಂದ ಸೆ 10 ವರಗೆ ಕ್ಯಾಲೆಂಡರ್‌ ಪ್ರಕಾರ ನೀರು ಬಿಡಬೇಕಿತ್ತು. ತಾಂತ್ರಿಕ ಸಮಸ್ಯೆ ಇಂದ ಮಧ್ಯದಲ್ಲಿ ನಾಲ್ಕು ದಿನ ನೀರು ಬಂದ್‌ ಮಾಡಲಾಗಿತ್ತು. ಕೊಡಗಿನಲ್ಲಿ ಮಳೆ ಕ್ಷೀಣಿಸಿದ್ದು ಅಣೆಕಟ್ಟೆ ಅಧಿಕಾರಿಗಳಿಗೆ ಮನವಿ ಮಾಡಿ ಸೆ 15 ರಿಂದ ನಾಲೆ ನೀರು ಹರಿವು ಹೆಚ್ಚಿಸಿ ಮರೂರು ನಾಲಾ ಬ್ಯಾಂಚ್‌ ನಲ್ಲಿ ಹರಿಸಿದ್ದೇವೆ.

ಸೆ 21 ಕ್ಕೆ ನೀರು ಬಿಡುವುದು ಸರ್ಕಾರದ ಸೂಚನೆಯಂತೆ ಅಂತ್ಯವಾಗಲಿದ್ದು, ಕ್ಷೇತ್ರದ ಶಾಸಕ ಜಿ.ಡಿ.ಹರೀಶ್‌ ಗೌಡರಲ್ಲಿ ಮನವಿ ಮಾಡಿ ಸೆಪ್ಟಂಬರ್‌ ಅಂತ್ಯದವರಗೆ ಅಣೆಕಟ್ಟೆಯಿಂದ ನೀರು ಬಿಡಲು ಸಂಬಂಧಿಸಿದವರ ಮೇಲೆ ಒತ್ತಡ ತರುವಂತೆ ಮನವಿ ಮಾಡಲಾಗಿದೆ. ಒಂದು ಸಮಯ ಈ ತಿಂಗಳ ಅಂತ್ಯದವರಗೆ ನೀರು ಬಂದಲ್ಲಿ ಹಾರಂಗಿ ವ್ಯಾಪ್ತಿಯ ಎಲ್ಲಾ ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಸಹಕಾರವಾಗಲಿದೆ ಎಂದರು.

ಪ್ರತಿಭಟನೆಯಲ್ಲಿ ರೈತ ಸಂಘದ ಸದಸ್ಯರಾದ ದನಂಜಯ,ಅಗ್ರಹಾರ ನೀರು ಬಳಕೆದಾರರ ಸಂಘದ ಅಧ್ಯಕ್ಷ ಶಿವಕುಮಾರ್‌, ಗೋಪಾಲೇಗೌಡ, ಕೃಷ್ಣೇಗೌಡ, ಮಹೇಶ್‌, ಕೃಷ್ಣನಾಯಕ್‌, ಶಿವಣ್ಣೇಗೌಡ, ತೀರ್ಥಕುಮಾರ್‌ ಸೇರಿದಂತೆ ಇತರರಿದ್ದರು

admin
the authoradmin

Leave a Reply