ಮೈಸೂರು: ನಿರಂತರ’ ರಂಗ ಸಂಸ್ಥೆಯ ವತಿಯಿಂದ ಯುವ ಸಮುದಾಯ ಹಾಗೂ ಜೆನ್ ಝೆಡ್ ತಲೆಮಾರನ್ನೊಳಗೊಂಡ ಸತತ 20ನೇ ವರ್ಷದ ‘ಸಹಜ ರಂಗ’ ಡಿವೈಸ್ಡ್ ರಂಗ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ನಗರದ ಗಾಂಧಿ ಭವನದಲ್ಲಿ ಸಕ್ರಿಯ ರಂಗಾಸಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನಾಡಿದ ‘ನಿರಂತರ’ ಸಂಸ್ಥೆಯ ನಿರ್ದೇಶಕರಾದ ಪ್ರಸಾದ್ ಕುಂದೂರು ರವರು, ಕಳೆದ 30–35 ವರ್ಷಗಳಿಂದ ಸಂಸ್ಥೆಯೊಂದಿಗೆ ನಿಂತು ಬೆಂಬಲಿಸುತ್ತಿರುವ ಹಿತೈಷಿಗಳನ್ನು ಹಾಗೂ ಸಭಿಕರನ್ನು ಆತ್ಮೀಯವಾಗಿ ಸ್ವಾಗತಿಸಿದ, ಒಟ್ಟಾಗಿ ಕೆಲಸ ಮಾಡುವ ಮೂಲಕ ಪರಸ್ಪರ ಧೈರ್ಯ ತುಂಬಿಕೊಳ್ಳುವುದು ಮತ್ತು ನವಚೈತನ್ಯ ಪಡೆಯುವುದು ಇಂತಹ ಸಮಾವೇಶಗಳ ಮುಖ್ಯ ಉದ್ದೇಶ. ‘ಸಹಜ ರಂಗ’ ಕೇವಲ ಸಾಂಪ್ರದಾಯಿಕ ರಂಗಭೂಮಿ ಶಿಬಿರವಲ್ಲದೆ, ನಮ್ಮನ್ನು ನಾವು ಸಂಕೋಲೆಗಳಿಂದ ಮುಕ್ತಗೊಳಿಸಿಕೊಳ್ಳುವ ವಿಮೋಚನೆಯ ಮಾರ್ಗವಾಗಿದೆ ಎಂದರು.

ರಂಗಭೂಮಿಯು ‘ಕಲೆಗಾಗಿ ಕಲೆ’ ಆಗಿರದೆ ಸಮಾಜಕ್ಕೆ ಜವಾಬ್ದಾರಿಯುತವಾಗಿರಬೇಕು. ನಾಟಕದ ಅಂತಿಮ ಪ್ರದರ್ಶನಕ್ಕಿಂತ ‘ನಾಟಕ ಕಟ್ಟುವ ಪ್ರಕ್ರಿಯೆ’ ಅತ್ಯಂತ ಮುಖ್ಯವಾಗಿದ್ದು, ಇದು ಸ್ವಸ್ಥ ಮನಸ್ಸು, ಆರ್ದ್ರ ಹೃದಯ ಹಾಗೂ ಮಾನವೀಯತೆಯನ್ನು ರೂಪಿಸಲು ನೆರವಾಗುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ನಿರೂಪಕರು ಕವಿ ಜಿ. ಎಸ್. ಶಿವರುದ್ರಪ್ಪನವರ “ಹಣತೆ ಹಚ್ಚುತ್ತೇನೆ ನಾನು…” ಕವನದ ಸಾಲುಗಳನ್ನು ವಾಚಿಸಿ, ಅಂಧಕಾರದ ನಡುವೆ ಬೆಳಕಿನ ಆಶಯವನ್ನು ವ್ಯಕ್ತಪಡಿಸಿದರು. ನಂತರ ಗಣ್ಯರು ವೇದಿಕೆಯ ಮೇಲೆ ಒಂದು ಕಿರು ದೃಶ್ಯಾವಳಿಯ (ರಂಗ ಪ್ರಸ್ತುತಿಯ) ಮೂಲಕ ಶಿಬಿರವನ್ನು ಸಾಂಕೇತಿಕವಾಗಿ ಹಾಗೂ ಅರ್ಥಪೂರ್ಣವಾಗಿ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಎಸ್. ನರೇಂದ್ರ ಕುಮಾರ್ ಅವರು “ಸಂವಿಧಾನವೇ ನಮ್ಮ ಬಿಡುಗಡೆ” ಎಂಬ ಮುಖ್ಯ ಆಶಯದೊಂದಿಗೆ ಮಾತನಾಡಿದರು. “ಇಂದಿನ ಯುವ ಸಮುದಾಯವು ಕೃತಕತೆ, ಭ್ರಷ್ಟಾಚಾರ, ಜಾತೀಯತೆ, ಅಸ್ಪೃಶ್ಯತೆ ಮತ್ತು ಲಿಂಗ ತಾರತಮ್ಯದಂತಹ ಕ್ರೌರ್ಯದ ನಡುವೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ‘ನಿರಂತರ’ ಸಂಸ್ಥೆ ಕ್ರೌರ್ಯದ ಬದಲಿಗೆ ಕಾರುಣ್ಯವನ್ನು ತುಂಬುವ ಕೆಲಸ ಮಾಡುತ್ತಿದೆ.
ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ಅವರ ವಿಚಾರಗಳು ಹಾಗೂ ಕುವೆಂಪು ಅವರ ‘ವಿಶ್ವಮಾನವ’ ಸಂದೇಶಗಳು ಯುವಜನರ ಅಂತಃಕರಣವನ್ನು ತಟ್ಟಬೇಕು. ಬುದ್ಧ ಮತ್ತು ವೈಶಾಲಿಯ ವ್ಯಾಪಾರಿಯ ದೃಷ್ಟಾಂತದಂತೆ ಮಾರ್ಗದರ್ಶಕರು ಬೆಳಕಿನ ದಾರಿ ತೋರಿಸಬಲ್ಲರು; ಆದರೆ ಮುನ್ನಡೆಯುವುದು ಸ್ವಂತ ಇಚ್ಛಾಶಕ್ತಿಗೆ ಬಿಟ್ಟದ್ದು” ಎಂದು ತಿಳಿಸುತ್ತಾ, ಶಿಬಿರಾರ್ಥಿಗಳು ಸಮಾಜದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಈ ಬೆಳಕನ್ನು ಹಂಚುವ ಜವಾಬ್ದಾರಿ ಹೊರಬೇಕು ಎಂದು ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ರಂಗಕರ್ಮಿ ಪ್ರೊ. ಹೆಚ್. ಎಸ್. ಉಮೇಶ್ ಅವರು ಮಾತನಾಡಿ, “ಬಿಡುಗಡೆಯು ಮೂಲಭೂತ ಬಂಧನಗಳಿಂದ ಹಿಡಿದು ಶಿಕ್ಷಣದವರೆಗೆ ವಿಸ್ತರಿಸುತ್ತದೆ. ಶಿಕ್ಷಣದಲ್ಲಿ ‘ಹೇಗೆ ಕಲಿಯಬೇಕು’ ‘ಏನನ್ನು ಕಲಿಯಬಾರದು/ಬಿಡಬೇಕು’ (How not to learn) ಎಂಬುದನ್ನು ತಿಳಿಯುವುದು ಪ್ರಮುಖ. ರಿಚರ್ಡ್ ಫೈನ್ಮನ್ ಹಾಗೂ ಸರ್ ಸಿ.ವಿ. ರಾಮನ್ ಅವರ ಉದಾಹರಣೆಗಳಂತೆ, ಕೇವಲ ವಿಜ್ಞಾನ ಅಥವಾ ಪ್ರಶಸ್ತಿಗಳು ಜೀವನವನ್ನು ಪೂರ್ಣಗೊಳಿಸುವುದಿಲ್ಲ; ಕಲೆ ಮತ್ತು ಸಂಗೀತ ಮಾತ್ರ ಮನುಷ್ಯನನ್ನು ಸಂಪೂರ್ಣಗೊಳಿಸುತ್ತವೆ” ಎಂದರು.

ರಂಗಭೂಮಿಯಲ್ಲಿ ಕ್ಷೀಣಿಸುತ್ತಿರುವ ನಟರ ಸಂಖ್ಯೆಯ ಕುರಿತು ಕಳವಳ ವ್ಯಕ್ತಪಡಿಸಿ, ರಂಗಭೂಮಿ ಮತ್ತೆ ‘ಮೃಚ್ಛಕಟಿಕ’ ನಾಟಕದಂತೆ ಸಮಾಜದ ಎಲ್ಲಾ ವರ್ಗಗಳು ಒಂದಾಗುವ ಸಮುದಾಯ ಆಧಾರಿತ ಸ್ಥಿತಿಗೆ ಮರಳಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರದಲ್ಲಿ ನಿರಂತರದ ಸುಗುಣ, ಶ್ರೀನಿವಾಸ್ ಪಾಲಹಳ್ಳಿ, ಮಾರ್ಗದರ್ಶಕರಾದ ರಾಮಣ್ಣ, ಅಪ್ಪಾಜಿಗೌಡ ‘ಮಂಗಳಾ ಮೇಡಂ, ಮೆರೀನ ಪ್ರಸಾದ್, ಡಾ.ದೇವಕಿ ದರ್ಮಿಷ್ಟೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.








