LatestMysore

ವಿದ್ಯಾರ್ಥಿಗಳು ಜ್ಞಾನವಂತ, ಪ್ರತಿಭಾವಂತರಾದರೆ ಸಾಲದು ವಿಚಾರಶೀಲರಾಗಬೇಕು: ಟಿ.ಸತೀಶ್ ಜವರೇಗೌಡ

ಮೈಸೂರು: ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪಠ್ಯಪುಸ್ತಗಳಿಗೆ ಸೀಮಿತವಾಗಿ ಜ್ಞಾನವಂತರೂ ಪ್ರತಿಭಾವಂತರೂ ಆದರೆ ಸಾಲದು. ವಿಚಾರಶೀಲರೂ ಆಗಬೇಕು ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಸಾಹಿತಿ ಟಿ.ಸತೀಶ್ ಜವರೇಗೌಡ ಕರೆ ನೀಡಿದರು.

ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಗರದ ಹೂಟಗಳ್ಳಿಯಲ್ಲಿರುವ ದಕ್ಷ ಕಾಲೇಜಿನಲ್ಲಿ ನಡೆದ ‘ವಿದ್ಯಾರ್ಥಿ ವಿಚಾರಗೋಷ್ಠಿ ಹಾಗೂ ಉಚಿತ ನೋಟ್ ಬುಕ್ ವಿತರಣೆ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿವಿಧ ಪ್ರಕಾರದ ಸಾಹಿತ್ಯಾತ್ಮಕ ಪುಸ್ತಕಗಳ ಮತ್ತು ದಿನಪತ್ರಿಕೆಗಳ ಓದಿನಿಂದ ವಿಚಾರಶೀಲತೆ ಬೆಳೆಯುವುದು. ಆದ್ದರಿಂದ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಮೈಗೂಡಿಸಿಕೊಳ್ಳಬೇಕು. ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ಗೋಷ್ಠಿಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಚಿಂತನ ಕ್ರಮವನ್ನು ಮೊನಚು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂದು ಶಿಕ್ಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಕೈಬರಹದ ಕಲೆಯೇ ಕ್ಷೀಣವಾಗಿದೆ. ನಮ್ಮ ವಿಚಾರಗಳನ್ನು ಡಿಜಿಟಲ್ ಸಾಧನಗಳಲ್ಲಿ ದಾಖಲಿಸಿ ಸಂಗ್ರಹಿಸುವ ಬದಲು ಕಾಗದದಲ್ಲಿ ದಾಖಲಿಸಿಡಬೇಕು. ಕೈಬರಹವೇ ಸಶಕ್ತ ಅಭಿವ್ಯಕ್ತಿ ಮಾಧ್ಯಮ. ನಮ್ಮ ಹಿರಿಯರು ಬಂಡೆಗಲ್ಲು, ತಾಮಪತ್ರ, ತಾಳೆಗರಿ, ಕಾಗದಗಳಲ್ಲಿ ಬರೆವಣಿಗೆ ಮಾಡದಿದ್ದರೆ ಇತಿಹಾಸ ಬರೆಯಲಾಗುತ್ತಿರಲಿಲ್ಲ ಎಂದು ನುಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ಲೋಬಲ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಪಿ. ಜಯಚಂದ್ರರಾಜು ಮಾತನಾಡಿ, ವಿದ್ಯಾರ್ಥಿಗಳು  ಮನೋಸ್ಥೈರ್ಯ ಮತ್ತು ಆತ್ಮವಿಶ್ವಾಸ ಬೆಳೆಸಿಕೊಂಡು ಯಾವುದೇ ಭಯವಿಲ್ಲದೆ ಮಾತನಾಡುವ ಸಾಮರ್ಥ್ಯ ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ಸಲಹೆ ನೀಡಿದರು.

ರಾಧೇ ಪುಸ್ತಕ ಸಂಗ್ರಹ ಮಂದಿರದ ಸಂಸ್ಥಾಪಕ‌ ಜಿ.ಆರ್. ರಾಜೇಶ್ ನಾಯಕ ಮಾತನಾಡಿ, ಮೊಬೈಲ್ ನ ಮಿತಿಮೀರಿದ ಬಳಕೆ ‘ಸಾಮಾಜಿಕ ಕಾಯಿಲೆ’ಯಾಗಿದೆ. ಇದಕ್ಕೆ ಮೂಲವಾದ ಮೊಬೈಲ್ ಮಾದಕ ವಸ್ತುವಿದ್ದಂತೆ. ಅದರ ನಶೆಗೆ ಮಕ್ಕಳು ಮತ್ತು ಪೋಷಕರಿಬ್ಬರೂ ಒಳಗಾಗಿದ್ದಾರೆ. ಇದರಿಂದ ನೆನಪಿನ ಶಕ್ತಿಯೂ ಕ್ಷೀಣವಾಗಿದೆ. ಈ ಕಾಯಿಲೆಯಿಂದ ಮುಕ್ತರಾಗಲು ಪುಸ್ತಕಗಳ ಜೊತೆಗೆ ಒಡನಾಟ ಬೆಳೆಸಿಕೊಳ್ಳಬೇಕು ಎಂದರು

ಸಮಾರಂಭದಲ್ಲಿ ಸಮಾಜ ಸೇವಕ ಹಾಗೂ ಪತ್ರಕರ್ತ ಎಸ್. ಕಣ್ಣನ್ ದಂಪತಿಗಳನ್ನು ಸನ್ಮಾನಿಸಲಾಯಿತು. ಸಮಾರಂಭದ ಆರಂಭಕ್ಕೂ ಮುನ್ನ ಇತ್ತೀಚೆಗೆ ನಿಧನ ಹೊಂದಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅವರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.

ವೇದಿಕೆಯಲ್ಲಿ ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ. ಗುಣವಂತ ಮಂಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಸ್. ಸತೀಶ್ ಕುಮಾರ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಗೌಡಯ್ಯ, ಕಲಾವಿದೆ ಯದುಗಿರಿ ಗೋಪಾಲನ್, ಕಾಲೇಜಿನ ಪ್ರಾಂಶುಪಾಲ ಅಭಿಷೇಕ್ ಉಪಸ್ಥಿತರಿದ್ದರು.

admin
the authoradmin

Leave a Reply