Editor choiceLatest

ಮಗ್ಗಲು ಬದಲಿಸಿದ ಪತ್ರಿಕೋದ್ಯಮ… ಈಗ ನಕಲಿ ಪತ್ರಕರ್ತರ ಸಂಖ್ಯೆ ಹೆಚ್ಚಾಗಿದೆ ಎಚ್ಚರ…!

ಅಚ್ಚುಮೊಳೆಯಿಂದ ಇನ್ ಡಿಸೈನ್ ತನಕದ ಹಂತ, ಹಂತದ ತಂತ್ರಜ್ಞಾನದ ಅಭಿವೃದ್ಧಿ ಪತ್ರಿಕೋದ್ಯಮವನ್ನು  ನಾವು ನೋಡಿದ್ದೇವೆ ಮತ್ತು ಸಾಕ್ಷಿಯಾಗಿದ್ದೇವೆ.. ಒಮ್ಮೆ ತಿರುಗಿನೋಡಿದರೆ ಹಿಂದಿನ ಮತ್ತು ಬದಲಾದ  ಇವತ್ತಿನ  ಪತ್ರಿಕೋದ್ಯಮ ಅಚ್ಚರಿ ಮೂಡಿಸುತ್ತದೆ. ಅವತ್ತು ಮುಂದೆ ಪತ್ರಿಕೋದ್ಯಮ ಹೀಗೂ ಬದಲಾಗಬಹುದೆಂದು ಯಾರೂ ಊಹಿಸಿರಲಿಲ್ಲ. ಆದರೂ ಕಾಲಕ್ಕೆ ತಕ್ಕಂತೆ ತಂತ್ರಜ್ಞಾನ ಆವಿಷ್ಕಾರಗೊಂಡಂತೆಲ್ಲ ಎಲ್ಲ ಕ್ಷೇತ್ರಗಳಲ್ಲಿ ಬದಲಾವಣೆಗಳು ಆಗಿವೆ ಅದೇ ರೀತಿ ಪತ್ರಿಕೋದ್ಯಮದಲ್ಲಿಯೂ ಆಗಿದೆ…

ಇವತ್ತು ಹಣವೊಂದಿದ್ದರೆ ಯಾರು ಬೇಕಾದರೂ ಪತ್ರಿಕೆಗಳನ್ನು ಸುಲಭವಾಗಿ ಹೊರ ತರಬಹುದು… ಆದರೆ ಅವತ್ತು ಪತ್ರಿಕೆ ನಡೆಸುವುದು ಎಂದರೆ ಹುಲಿ ಮೇಲಿನ ಸವಾರಿಯಂತಾಗಿತ್ತು. ಇವತ್ತು ಸವಾಲ್ ಆಗಿರುವುದು ಪತ್ರಿಕೆಯನ್ನು ನಡೆಸುವುದಲ್ಲ…. ಜನರನ್ನು ಓದಿಸುವುದಾಗಿದೆ.  ಹೀಗಾಗಿಯೇ ಪತ್ರಿಕೆಯವರು ಜನರು ಏನು ಓದುತ್ತಾರೆ ಎಂಬುದನ್ನು ಅರಿತುಕೊಂಡು ಅದಕ್ಕೆ ತಕ್ಕಂತೆ ಮುನ್ನಡೆಯಬೇಕಾದ ಪರಿಸ್ಥಿತಿ ಬಂದೊದಗಿದೆ.

ಯುವ ತಲೆಮಾರು ಪತ್ರಿಕೆ ಓದುವುದರಿಂದ ಅಂತರ ಕಾಪಾಡಿಕೊಂಡಿದೆ. ಬಹುತೇಕರಿಗೆ ಅದರ ಅಭ್ಯಾಸವವೇ ಇಲ್ಲದಾಗಿದೆ.  ಇದಕ್ಕೆ ಕಾರಣವೂ ಇದೆ ಅವರು ಹುಟ್ಟುವ ಹೊತ್ತಿಗೆ ಮೊಬೈಲ್ ಬಂದಿತ್ತು. ಚಿಕ್ಕಂದಿನಿಂದಲೇ ಮೊಬೈಲ್ ನಲ್ಲಿಯೇ ಎಲ್ಲವೂ ಸಿಗುವಂತಾಗಿದೆ. ಹೀಗಾಗಿ ಪತ್ರಿಕೆ ಹಿಡಿದು ಓದುವುದರಿಂದಲೇ ವಿಚಾರ ತಿಳಿಯಬೇಕಾಗಿಲ್ಲ  ಮೊಬೈಲ್ ನಲ್ಲಿ ತಮಗೆ ಬೇಕಾದ್ದನ್ನ ನೋಡುವ ಮತ್ತು ಕೇಳುವ ಅವಕಾಶವಿರುವಾಗ ಓದಿ ಅರ್ಥ ಮಾಡಿಕೊಳ್ಳುವ  ಗೋಜಿಗೆ ಹೋಗುತ್ತಿಲ್ಲ.

ಎಲ್ಲವನ್ನು ಗೂಗಲ್, ಯೂಟ್ಯೂಬ್ ಕೊಡುತ್ತಿರುವಾಗ ಪತ್ರಿಕೆಯನ್ನೇಕೆ ಓದಬೇಕು? ಎಂಬುದು ಬಹುತೇಕರ ಪ್ರಶ್ನೆಯಾಗಿದೆ. ಹಿಂದಿನ ಕಾಲದಲ್ಲಿ ಮಾಹಿತಿ ತಿಳಿಯಲು ಬೇರೆ ಯಾವ ಮಾಧ್ಯಮವೂ ಇರಲಿಲ್ಲ ಹೀಗಾಗಿ ಪತ್ರಿಕೆ ಓದಬೇಕಾಗಿತ್ತು. ಇವತ್ತು ಹಾಗೇನಿಲ್ಲ ಎಲ್ಲವನ್ನೂ ಮೊಬೈಲ್ ನೀಡುತ್ತಿರುವಾಗ ಪತ್ರಿಕೆಯಿಂದಲೇ ಎಲ್ಲವನ್ನೂ ತಿಳಿದುಕೊಳ್ಳಬೇಕೆಂಬ ಅಗತ್ಯ ಏನಿದೆ?

ದಿನದಿಂದ ದಿನಕ್ಕೆ ನ್ಯೂಸ್ ಪ್ರಿಂಟ್ ಬೆಲೆ ಏರಿಕೆಯಾಗುತ್ತಿದೆ… ಇಂಕು ಸೇರಿದಂತೆ ಎಲ್ಲ ವೆಚ್ಚಗಳು ಹೆಚ್ಚುತ್ತಿವೆ. ಇದೆಲ್ಲದರ ನಡುವೆ ಪತ್ರಿಕೆಗಳ ಪ್ರಸಾರ ಸಂಖ್ಯೆ ಕುಸಿಯುತ್ತಿವೆ… ಜಾಹೀರಾತಿನಿಂದಲೇ ಪತ್ರಿಕೆಗಳು ನಡೆಯಬೇಕಾಗಿರುವುದರಿಂದ ಪೈಪೋಟಿಗಳು ಶುರುವಾಗಿವೆ. ಜಾಹೀರಾತುದಾರರು ಪತ್ರಿಕೆಗಳನ್ನು ಹುಡುಕಿಕೊಂಡು ಬರುತ್ತಿದ್ದ ಕಾಲವಿತ್ತು. ಈಗ ಪತ್ರಿಕೆಗಳೇ ಜಾಹೀರಾತುದಾರರನ್ನು ಹುಡುಕಿಕೊಂಡು ಹೋಗುವಂತಾಗಿದೆ. ಕಮರ್ಷಿಯಲ್ ಜಾಹೀರಾತು ನೀಡುವವರು ಪತ್ರಿಕೆಗಳ ಪ್ರಸಾರ ಸಂಖ್ಯೆಯನ್ನು ಗಮನಿಸುತ್ತಿದ್ದಾರೆ. ಅವರಿಗೀಗ ಜಾಹೀರಾತು ನೀಡಲು ಬೇಕಾದಷ್ಟು ಮಾರ್ಗಗಳಿವೆ. ಹಾಗಾಗಿ ಕಡಿಮೆ ಖರ್ಚಿನಲ್ಲಿ  ಹೆಚ್ಚು ಜನರನ್ನು ತಲುಪುವ ಸಲುವಾಗಿ ಸೋಷಿಯಲ್ ಮೀಡಿಯಾ ಕಡೆಗೆ ಮುಖ ಮಾಡುತ್ತಿದ್ದಾರೆ.

ಇವತ್ತಿನ ಹೆಚ್ಚಿನ ಸಣ್ಣ ಪತ್ರಿಕೆಗಳು ಸರ್ಕಾರ ನೀಡುವ ಜಾಹೀರಾತಿನ ಕಡೆಗೆ ನೋಡುವಂತಾಗಿದೆ. ದುರಂತ ಎಂದರೆ ಸರ್ಕಾರದ ಜಾಹೀರಾತಿಗಾಗಿಯೇ ಪತ್ರಿಕೆಗಳನ್ನು ನಡೆಸುವವರು ಹುಟ್ಟಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಗಳ ಮೂಲಕ ನೂರಾರು ಪತ್ರಿಕೆಗಳ ಲಿಂಕ್ ಗಳು ರಾರಾಜಿಸುತ್ತಿವೆ. ಜನರಿಗೆ ನಮ್ಮ ಪತ್ರಿಕೆ ಓದಿ ಎಂದು ಬಲವಂತ ಮಾಡುವಂತಾಗಿದೆ.. ಸೋಷಿಯಲ್ ಮೀಡಿಯಾದ ಜಮಾನವಾಗಿರುವುದರಿಂದ ನಿಜವಾದ ಪತ್ರಕರ್ತರು ಯಾರು ಎಂಬುದೇ ಅರ್ಥವಾಗದಂತಾಗಿದೆ.

ಬ್ಲಾಕ್ ಮೇಲ್, ಹಣವಸೂಲಿ, ಫೇಯ್ಡ್ ನ್ಯೂಸ್ ಬರೆಯುವವರು ಹೀಗೆ ಫೇಕ್ ಪತ್ರಕರ್ತರ ಸಂಖ್ಯೆ ಹೆಚ್ಚುತ್ತಿದೆ.. ಇವರ ಪೈಕಿ ಪ್ರಾಮಾಣಿಕರು ಯಾರು? ಯಾರನ್ನು ನಂಬಬೇಕು ಎಂದು ಜನರಿಗೂ ತಿಳಿಯದಾಗಿದೆ.  ಒಂದು ಕಾಲದಲ್ಲಿ ಎಲ್ಲೆಂದರಲ್ಲಿ ಹುಟ್ಟಿಕೊಂಡಿದ್ದ ಟ್ಯಾಬ್ಲಾಯ್ಡ್ ಪತ್ರಿಕೆಗಳು ವಸೂಲಿ ಮಾಡುತ್ತಿದ್ದವು. ಅವುಗಳ ಜಮಾನ ಮುಗಿದಿದೆ. ಫೇಕ್ ಪತ್ರಕರ್ತರು ಬೇರೆ ಮಾರ್ಗಗಳನ್ನು ಕಂಡು ಕೊಂಡಿದ್ದಾರೆ. ಮುಖದ ಮುಂದೆ ಮೈಕ್ ಹಿಡಿದು ಹಣ ವಸೂಲಿ ಮಾಡುತ್ತಿದ್ದಾರೆ..

ಪತ್ರಿಕೋದ್ಯಮ ಕಲುಷಿತಗೊಂಡರೆ ಅದರಿಂದ ಮಹಾ ಅಪಾಯವಿದೆ… ಜನಸಾಮಾನ್ಯರು ಫೇಕ್ ಅರ್ಥಾತ್ ನಕಲಿ ಪತ್ರಕರ್ತರನ್ನು ಗುರುತಿಸಿ ದೂರ ಇಡಬೇಕಾಗಿದೆ… ಕಾರ್ಯನಿರತ ಪತ್ರಕರ್ತರ ಸಂಘವೂ ಈ ನಿಟ್ಟಿನಲ್ಲಿ ಗಮನಹರಿಸಬೇಕಿದೆ. ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಇಡೀ ಪತ್ರಿಕೋದ್ಯಮವನ್ನು ಅನುಮಾನದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾದರೆ ಅಚ್ಚರಿಯಿಲ್ಲ…

 

admin
the authoradmin

ನಿಮ್ಮದೊಂದು ಉತ್ತರ