ಸರಗೂರು(ಸರಗೂರು ದಾಸೇಗೌಡ): ತಾಲ್ಲೂಕಿನ ಗದ್ದೇಹುಂಡಿ ಗ್ರಾಮದಲ್ಲಿ ಶ್ರೀ ಉದ್ದವಮೂರ್ತಿ ಶ್ರೀ ಕಾಡು ಮಹದೇಶ್ವರಸ್ವಾಮಿಯವರ ಜಾತ್ರಾ ಮಹೋತ್ಸವವು ಫೆ.22 ರಿಂದ ಆರಂಭಗೊಂಡಿದ್ದು 24ರವರೆಗೆ ಮೂರು ದಿನಗಳ ಕಾಲ ಭಕ್ತಿಭಾವದೊಂದಿಗೆ ಜರುಗಲಿದೆ.

ಫೆ.22ರಂದು ಭಾನುವಾರ ಬೆಳಿಗ್ಗೆ ದೇವಸ್ಥಾನದಲ್ಲಿ ರುದ್ರಾಭಿಷೇಕ, ಪುಣ್ಯವರ್ಚನೆ, ನವಗ್ರಹ ಪೂಜೆ–ಹೋಮ, ಅಷ್ಟ ದಿಕ್ಷಾಲಕರ ಪೂಜೆ, ವಾಸ್ತು ಪೂಜೆ, ಬಿಲ್ವಾರ್ಚನೆ ಅಷ್ಟೋತ್ತರ ಪೂಜೆ ಹಾಗೂ ಮಹಾಮಂಗಳಾರತಿಯೊಂದಿಗೆ ಆರಂಭಗೊಂಡಿದ್ದು, ರಾತ್ರಿ ಹುಣಸೂರು ತಾಲ್ಲೂಕಿನ ಸಿಂಗರಮಾರನಹಳ್ಳಿ ಗ್ರಾಮದ ಡ್ರಾಮಾ ಮಾಸ್ಟರ್ ಎಸ್.ವಿ. ರಾಜಣ್ಣ, ಜ್ಯೋತಿ ಪುಟ್ಟದಾಸ್ ಹಾಗೂ ಹಾರ್ಮೋನಿಯಂ ಮಾಸ್ಟರ್ ಎಸ್.ಪಿ. ಚಿನ್ನಸ್ವಾಮಿ ಅವರಿಂದ ‘ಶ್ರೀ ಶನಿಪ್ರಭಾವ ಅಥವಾ ರಾಜಾವಿಕ್ರಮ’ ಎಂಬ ಪೌರಾಣಿಕ ನಾಟಕ ಪ್ರದರ್ಶನ ನಡೆಯುತ್ತಿದೆ.

ಫೆ.23ರಂದು ಸೋಮವಾರ ವಿದ್ಯುತ್ ದೀಪಾಲಂಕೃತ ಬೆಳ್ಳಿ ಪಲ್ಲಕ್ಕಿ ಮಂಟಪದಲ್ಲಿ ಶ್ರೀ ಮಹದೇಶ್ವರಸ್ವಾಮಿಯವರ ಮೆರವಣಿಗೆ ವಿಜೃಂಭಣೆಯಿಂದ ನಡೆಯಲಿದೆ. ಜೊತೆಯಲ್ಲಿ ಪ್ರಸಿದ್ಧ ಬಸವರಾದ ತುರಗನೂರಿನ ಶ್ರೀ ನಡುಗದ್ದೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಬಸವರನ್ನು ಕರೆ ತಂದು ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೆ ವಿವಿಧ ವೇಷಭೂಷಣ, ಚಂಡವಾದ್ಯ, ತಮಟೆ, ಮಂಗಳವಾದ್ಯ, ವೀರಗಾಸೆ ಹಾಗೂ ಹೂವಿನ ಅಲಂಕಾರದೊಂದಿಗೆ ಗ್ರಾಮದ ಬೀದಿಗಳಲ್ಲಿ ಮೆರವಣಿಗೆ ಸಾಗಲಿದೆ.

ಬೆಳಿಗ್ಗೆ 10 ಗಂಟೆಗೆ ಹಾಲು ಹರವಿ ಸೇವೆ, ಮಧ್ಯಾಹ್ನ 12 ಗಂಟೆಗೆ ಕೊಂಡೋತ್ಸವ ನಡೆಯಲಿದ್ದು, ಮಧ್ಯಾಹ್ನ 1 ಗಂಟೆಗೆ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ಮತ್ತೊಮ್ಮೆ ಸ್ವಾಮಿಯವರ ಮೆರವಣಿಗೆ ಜರುಗಲಿದೆ.

ಫೆ.24ರಂದು ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಅಭಿಷೇಕ ಹಾಗೂ ಮಂಗಳಾರತಿ ನೆರವೇರಿದ ಬಳಿಕ ಗೋವುಗಳ ಪೂಜೆ ನಡೆಯಲಿದೆ. ಜಾತ್ರಾ ಮಹೋತ್ಸವಕ್ಕೆ ಸರ್ವ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಶ್ರೀ ಜ್ಯೋತಿ ಪ್ರಕಾಶ್ ಮಹದೇಶ್ವರಸ್ವಾಮಿ ಗುಡ್ಡಪ್ಪನವರು, ಅರ್ಚಕರಾದ ಯೋಗೀಶ್, ಜಿ.ಎಂ. ಮಹೇಂದ್ರ, ಊರಿನ ಗುಡಿಗೌಡರು ಹಾಗೂ ಗ್ರಾಮಸ್ಥರು ತಿಳಿಸಿರುತ್ತಾರೆ. ಸಂಪರ್ಕಕ್ಕೆ: 9008050911.
ಫೆ.25ರಿಂದ 28 ರವರೆಗೆ ಶ್ರೀ ಗುರು ಕೆಂಡಗಣೇಶ್ವರಸ್ವಾಮಿ – ಶ್ರೀ ಮಹದೇಶ್ವರಸ್ವಾಮಿ ಜಾತ್ರೆ








