LatestMysore

ಗದ್ದಿಗೆ  ಶ್ರೀ  ಕೆಂಡಗಣ್ಣೇಶ್ವರ, ಮಹದೇಶ್ವರ ಸ್ವಾಮಿಯ ವೈಭವದ ಜೋಡಿ ರಥೋತ್ಸವ -ಕೊಂಡೋತ್ಸವ

ಹುಣಸೂರು: ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಪ್ರಖ್ಯಾತ ಗದ್ದಿಗೆ ಶ್ರೀಕ್ಷೇತ್ರದಲ್ಲಿ ಶ್ರೀ  ಕೆಂಡಗಣ್ಣೇಶ್ವರ ಹಾಗೂ ಮಹದೇಶ್ವರ ಸ್ವಾಮಿಯ ವೈಭವದ ಜೋಡಿ ರಥೋತ್ಸವ  ಹಾಗೂ ಕೊಂಡೋತ್ಸವವು ಸಾವಿರಾರು  ಭಕ್ತರ ಉದ್ಘೋಷದ ನಡುವೆ ವಿಜೃಂಭಣೆಯಿಂದ ಜರುಗಿತು.

ಶನಿವಾರ ಬೆಳಿಗ್ಗೆ ಆದಿಚುಂಚನಗಿರಿ ಶಾಖಾ  ಮಠದ ಶ್ರೀಸೋಮೇಶ್ವರನಾಥ ಸ್ವಾಮೀಜಿ  ರಥೋತ್ಸವಕ್ಕೆ ಚಾಲನೆ  ನೀಡಿದರು.  ನಂತರ ಮಾತನಾಡಿ ನಾಡಿಗೆ ಉತ್ತಮ ಮಳೆ- ಬೆಳೆಯಾಗಲಿ ಎಂದರು.  ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ಕೆಂಡಗಣ್ಣೇಶ್ವರ ಮತ್ತು ಮಹದೇವಶ್ವರ ದೇವರ  ಆಶೀರ್ವಾದದ ಪಡೆದು ರಥೋತ್ಸವದಲ್ಲಿ ಭಾಗವಹಿಸಿ ರಥವನ್ನು ಎಳೆದು  ಮಾತನಾಡಿದ ಅವರು,  ಗದ್ದಿಗೆ ಕ್ಷೇತ್ರ ಮಹದೇಶ್ವರನ ಎರಡನೇ ಪಾದ, ಪ್ರತಿ ವರ್ಷ ಲಕ್ಷಾಂತರ ಭಕ್ತಾಧಿಗಳು ಭಾಗವಹಿಸಿ ದೇವರ ಅಶೀರ್ವಾದ ಪಡೆದು ಇಂದು ರಥೋತ್ಸವದಲ್ಲಿ ಹರಕೆ ತಿರಿಸಿ ಪುನೀತರಾಗುತ್ತಾರೆ.

ಪ್ರತಿವರ್ಷದಂತೆ ಈ ಬಾರಿಯೂ ಬಹಳ ವಿಜೃಂಭಣೆಯಿಂದ ಜಾತ್ರೆ ಜರುಗುತ್ತಿದ್ದು, ನನ್ನ ತಾಲೂಕಿನ ಜನಕ್ಕೆ  ಹಾಗೂ ರಾಜ್ಯದ ರೈತರಿಗೆ     ಕೆಂಡಗಣ್ಣೇಶ್ವರ ಉತ್ತಮ ಬೆಳೆ ಹಾಗೂ ಮಳೆಯನ್ನು ನೀಡಲಿ ಎಂದರು. ಶಾಸಕ ಜಿ.ಡಿ.ಹರೀಶ್ ಗೌಡರ ಪತ್ನಿ ವರ್ಷಹರೀಶಗೌಡ ಜಾತ್ರೆಗೆ ಭೇಟಿ ನೀಡಿ ರಥೋತ್ಸವದಲ್ಲಿ ಭಾಗವಹಿಸಿದ್ದರು.

ದೊಡ್ಡರಥದಲ್ಲಿ ಶ್ರೀ ಕೆಂಡಗಣ್ಣೇಶ್ವರಸ್ವಾಮಿ, ಚಿಕ್ಕರಥದಲ್ಲಿ ಮಹದೇಶ್ವರಸ್ವಾಮಿ ದೇವರ ಉತ್ಸವ ಮೂರ್ತಿಗಳನ್ನಿಟ್ಟು ಕುಟ್ಟವಾಡಿ ಗೇಟ್‌ವರೆಗೆ ನೆರೆದಿದ್ದ ಸಾವಿರಾರು ಮಂದಿ ಭಕ್ತರು  ಜೈಕಾರ ಹಾಕುತ್ತಾ ಒಂದರ ಹಿಂದೊಂದು ರಥವನ್ನೆಳೆದು ಪುನಿತರಾದರು. ಮತ್ತೆ ಸ್ವಸ್ಥಾನಕ್ಕೆ ರಥಗಳನ್ನು ತಂದು ನಿಲ್ಲಿಸಿದರು. ರಥೋತ್ಸವದ ವೇಳೆ ನವ ದಂಪತಿಗಳು, ಭಕ್ತರು ಹಣ್ಣು-ಜವನ  ಎಸೆಯುವ ಮೂಲಕ ಭಕ್ತಿ ಭಾವ ಮೆರೆದರು. ಹರಕೆ ಹೊತ್ತ ಭಕ್ತರು ರಥದ ಬಳಿ ತೆಂಗಿನ ಕಾಯಿಯನ್ನು ಈಡುಗಾಯಿ ಒಡೆದರು.

ಕರಿಮುದ್ದನಹಳ್ಳಿಯ ಅಕ್ಷಯ್ ವೆಂಚರ್ಸ್ ನ  ಅಂಬಿಕಾಸತೀಶ್  ಕುಟುಂಬದವರು ಹತ್ತು ಸಾವಿರ ಮಂದಿ ಭಕ್ತಾಧಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದರು. ಶುಕ್ರವಾರ ರಾತ್ರಿ ದೇವರಿಗೆ ಹಾಲರವಿ ಸೇವೆ,  ಶನಿವಾರ ಮುಂಜಾನೆಯಿಂದಲೇ ದೇವರಿಗೆ ಅಭಿಷೇಕ ಹಾಗೂ ಪ್ರಾರಂಭವಾದ ಜಾತ್ರಾ ಮಹೋತ್ಸವ ಅಂಗವಾಗಿ ದೇವರಿಗೆ ವಿವಿಧ  ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು.

ರಥೋತ್ಸವಕ್ಕೂ ಮುನ್ನ ದೇವಸ್ಥಾನದ  ಆವರಣದಲ್ಲಿನ ಲಕ್ಷಣತೀರ್ಥ ನದಿ ದಂಡೆಯಲ್ಲಿ ನಡೆದ ಕೊಂಡೊತ್ಸವಕ್ಕೆ ಮಾದಳ್ಳಿ ಉಕ್ಕಿನಕಂತೆ ಮಠದ ಸಾಂಬಸದಾಶಿವಸ್ವಾಮೀಜಿ ಚಾಲನೆ ನೀಡಿದರು. ನೆರೆದಿದ್ದ ಭಕ್ತರು ಕೆಂಡಗಣ್ಣೇಶ್ವರಸ್ವಾಮಿ ಮತ್ತು ಮಹದೇಶ್ವರಸ್ವಾಮಿಗೆ ಉಘೇ..ಉಘೇ.. ಎಂಬ  ಜಯಘೋಷಗಳ ನಡುವೆ ದೇವಾಲಯದ  ಅರ್ಚಕ ಮಹದೇವಸ್ವಾಮಿರವರ ಪುತ್ರ ಮಹೇಶ್ ಕೊಂಡಹಾಯ್ದರು. ನಂತರ ಭಕ್ತರು ಅರಳು, ವಿವಿಧ ಧಾನ್ಯಗಳು,ಉಪ್ಪು, ಗಂಧದಕಡ್ಡಿ,  ಕರ್ಪೂರವನ್ನು ಕೊಂಡಕ್ಕೆ ಸಮರ್ಪಿಸಿದರು. ಹರಕೆ ಹೊತ್ತವರು ಜಾನುವಾರುಗಳನ್ನು ಕೊಂಡದ ಸುತ್ತ ಪ್ರದಕ್ಷಿಣೆ ಹಾಕಿಸಿ ಹರಕೆ ತೀರಿಸಿದರು.

ಜಾತ್ರಾ ಸಂಭ್ರಮದಲ್ಲಿ ಬಸವಾಪಟ್ಟಣದ  ತೊಟ್ಟಿಮನೆ ಸಹೋದರರ ಕುಟುಂಬವರ್ಗ, ದೇವಸ್ಥಾನದ ರಿಸೀವರ್‌ಗಳಾದ ಮಹದೇವಪ್ಪ,  ಪುಣ್ಯಶೀಲ,     ಉದ್ಯಮಿ ರಾಜು, ಜಿಲ್ಲಾ ರೈತ ಘಟಕದ ಮಾಜಿ ಅಧ್ಯಕ್ಷ ವಸಂತ್ ಕುಮಾರ್,  ಗ್ರಾ.ಪಂ.   ಸದಸ್ಯರಾದ ಪ್ರಕಾಶ್,  ಯಜಮಾನರಾದ   ರಾಮೇಗೌಡ,  ಶಿವಲಿಂಗೇಗೌಡ,  ಸೋಮಶೇಖರ್, ಕುಟ್ಟವಾಡಿನಾಗಣ್ಣೆಗೌಡ,   ಬಸವನಹಳ್ಳಿ ಕುಂಟೇಗೌಡ, ಕೆಂಡಗಣ್ಣಪುರ ಚಿಕ್ಕನಾಯಕ,  ಅಕ್ರಮ- ಸಕ್ರಮ ಸಮಿತಿ ತಾಲ್ಲೂಕು ಸದಸ್ಯ ಗುಣಶೇಖರ್, ಮುಂಖಡರಾದ ಮರ್ಲಿಂಗ್ ನಾಯಕ್ ಮಂಜುನಾಥ್. ಡಿ.,  ಶಾಮಿಯಾನ ಮಹದೇವ್,   ತಾಲ್ಲೂಕು ಹಿಂದುಳಿದ ವರ್ಗಗಳ ಕಾಂಗ್ರೆಸ್ ಅಧ್ಯಕ್ಷ ವಿ.ಮಹದೇವ್,  ಸೇರಿದಂತೆ ಹದಿನೈದು ಸಾವಿರಕ್ಕೂ ಹೆಚ್ಚು ಮಂದಿ  ಭಕ್ತರು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want