ಗೌರಿ ಹಬ್ಬದಂದು ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುವುದೇಕೆ? ಇದು ಹೊನ್ನಮ್ಮನ ತ್ಯಾಗದ ಕಥೆ!

ಕೊಡಗಿನಲ್ಲಿ ಗೌರಿಹಬ್ಬಕ್ಕೆ ಹೊನ್ನಮ್ಮನಿಗೆ ಬಾಗಿನ ಕೊಟ್ಟರೆ ಜೀವನ ಪಾವನವಾಗುತ್ತದೆ ಎಂಬ ಹೆಣ್ಮಕ್ಕಳಲ್ಲಿದೆ. ಹೀಗಾಗಿ ಮುತ್ತೈದೆಯರಯ ಹೊನ್ನಮ್ಮನ ದರ್ಶನ ಮಾಡಿ ಆಕೆಗೆ ಬಾಗಿನ ಅರ್ಪಿಸಲು ಸೋಮವಾರಪೇಟೆಯ ಡೊಡ್ಡಮಳ್ತೆಯ ಹೊನ್ನಮ್ಮನ ಕೆರೆಗೆ ಧಾವಿಸುವುದು ಮಾಮೂಲಿಯಾಗಿ ನಡೆಯುತ್ತದೆ. ಹೀಗಾಗಿ ಇತರೆ ದಿನಗಳಲ್ಲಿ ಜನಜಂಗುಳಿಯಿಂದ ದೂರವಾಗಿ ಪ್ರಶಾಂತವಾಗಿರುವ ಈ ತಾಣ ಭಕ್ತರಿಂದ ತುಂಬಿ ತುಳುಕುತ್ತದೆ.

ಹೊನ್ನಮ್ಮನ ಕೆರೆ ಕೊಡಗಿನ ಮಟ್ಟಿಗೆ ಪ್ರವಾಸಿ ತಾಣವೂ ಹೌದು.. ಭಕ್ತಿಭಾವ, ತ್ಯಾಗ ಬಲಿದಾನದ ಕಥೆ ಹೇಳುವ ಕ್ಷೇತ್ರವೂ ಹೌದು ಎನ್ನುವುದರಲ್ಲಿ ಎರಡು ಮಾತಿಲ್ಲ. ಸುತ್ತಲೂ ಬೆಟ್ಟ ಗುಡ್ಡಗಳು ಅದರಾಚೆಗೆ ಕಾಫಿ ತೋಟಗಳು ಗದ್ದೆ ಬಯಲುಗಳಿಂದ ಆವೃತ ಪ್ರದೇಶದಲ್ಲಿ ಬೃಹತ್ ಕೆರೆ ಆಕರ್ಷಿಸುತ್ತದೆ. ಕೆರೆಯದಡದಲ್ಲಿರುವ ದೇಗುಲ ಗಮನಸೆಳೆಯುತ್ತದೆ.
ಇಲ್ಲಿರುವ ಬ್ರಹತ್ ಕೆರೆ ಹೊನ್ನಮ್ಮ ಎಂಬ ಹೆಣ್ಣು ಮಗಳೊಬ್ಬಳ ತ್ಯಾಗಬಲಿದಾನದಿಂದ ನಿರ್ಮಾಣವಾದ ಕೆರೆಯಾಗಿದ್ದು ಹೊನ್ನಮ್ಮನ ಕೆರೆ ಎಂದೇ ಖ್ಯಾತಿ ಪಡೆದಿದೆಯಲ್ಲದೆ, ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತರು ಹಾಗೂ ಪ್ರವಾಸಿಗರಿಗೆ ಬಲಿದಾನಗೈದ ಆಕೆ ಕಥೆಯನ್ನು ಹೇಳುತ್ತಾ ಹೋಗುತ್ತದೆ.

ಹೊನ್ನಮ್ಮ ಯಾರು? ಆಕೆಯ ಹೆಸರನ್ನೇಕೆ ಕೆರೆಗಿಡಲಾಗಿದೆ? ಎಂಬ ಪ್ರಶ್ನೆ ಉದ್ಭವಿಸದೆ ಇರಲಾರದು. ಅದಕ್ಕೆ ಉತ್ತರ ಸಿಗಬೇಕಾದರೆ ಜನವಲಯದಲ್ಲಿರುವ ಆ ಕತೆಯನ್ನು ಓದಬೇಕಾಗುತ್ತದೆ. ಅದು ಏನೆಂದರೆ ಈಗಿರುವ ಹೊನ್ನಮ್ಮನ ಕೆರೆಯಿರುವ ಪ್ರದೇಶವಾದ ದೊಡ್ಡಮಳ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ಏಳುಸಾವಿರ ಸೀಮೆ ಎಂದು ಕರೆಯಲಾಗುತ್ತಿತ್ತಂತೆ. ಕ್ರಿ.ಶ.1034 ರಿಂದ 1297ರವರೆಗೆ ಈ ಸೀಮೆಯನ್ನು ಚಂಗಲವಾಸ್ ಎಂಬ ರಾಜಮನೆತನ ಆಳುತ್ತಿತ್ತಂತೆ.
1106ರಲ್ಲಿ ಆಗಿನ ಏಳುಸಾವಿರ ಸೀಮೆಗೆ ಒಳಪಟ್ಟಿದ್ದ ದೊಡ್ಡಮಳ್ತೆಯಲ್ಲಿ ವ್ಯಾಪಾರಿ ಕಲ್ಲನಕೇರಿ ಮಲ್ಲೇಗೌಡ ಎಂಬಾತ ವಾಸಿಸುತ್ತಿದ್ದನಂತೆ. ಈತ ಊರಿನ ಮುಖಂಡನಾಗಿದ್ದು, ಪರೋಪಕಾರಿಯೂ, ಮಹಾನ್ ದೈವಭಕ್ತನಾಗಿದ್ದನಂತೆ. ಒಮ್ಮೆ ಗ್ರಾಮದಲ್ಲಿ ಬರಗಾಲ ಕಾಣಿಸಿಕೊಂಡಿತಂತೆ ಆಗ ಕುಡಿಯುವ ನೀರಿಗೆ ಗ್ರಾಮದಲ್ಲಿ ಹಾಹಾಕಾರ ಉಂಟಾಯಿತಂತೆ. ಪ್ರಾಣಿಪಕ್ಷಿಗಳು, ಜಾನುವಾರುಗಳು ನೀರಿಲ್ಲದೆ ಸಾಯತೊಡಗಿದವಂತೆ.

ಈ ಸಂದರ್ಭ ಮಲ್ಲೇಗೌಡನಿಗೆ ಕೆರೆಯೊಂದನ್ನು ತೋಡಿ ಗ್ರಾಮದ ಜನರಿಗೆ ಉಂಟಾಗಿರುವ ನೀರಿನ ಬವಣೆಯನ್ನು ತಪ್ಪಿಸಬಹುದು ಎಂಬ ಆಲೋಚನೆ ಬಂತಂತೆ. ಕೂಡಲೇ ಆತ ಕೂಲಿಕಾರರನ್ನು ಕರೆಯಿಸಿ ಕೆರೆಯನ್ನು ತೋಡುವುದಕ್ಕೆ ಮುಂದಾದನು. ಜನರ ಶ್ರಮದಿಂದ ವಿಶಾಲ ಕೆರೆಯೇನೋ ನಿರ್ಮಾಣವಾಯಿತಾದರೂ ನೀರು ಸಿಗಲಿಲ್ಲ. ಶಕ್ತಿಮೀರಿ ಭೂಮಿಯ ಆಳಕ್ಕೆ ತೋಡಿದರೂ ನೀರು ಮಾತ್ರ ಮೇಲೆ ಬರಲೇ ಇಲ್ಲ. ಇದರಿಂದ ಮಲ್ಲೇಗೌಡ ಮುಂದೇನು ಮಾಡುವುದು ಎಂದು ಚಿಂತಾಕ್ರಾಂತನಾದನು. ಹೀಗಿರಬೇಕಾದರೆ ಆತನಿಗೆ ಅಶರೀರವಾಣಿಯೊಂದು ಹೆಣ್ಣುಮಗಳನ್ನು ಕೆರೆಗೆ ಹಾರ ನೀಡಿದರೆ ನಿನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಿದಂತೆ ಭಾಸವಾಯಿತು.
ಈ ಅಶರೀರವಾಣಿ ಕೇಳಿ ಬಂದ ಬಳಿಕ ಸಮಸ್ಯೆಗೆ ಪರಿಹಾರ ಸಿಕ್ಕಿತಾದರೂ ಮತ್ತೊಂದು ಸಮಸ್ಯೆ ಎದುರಾಯಿತು. ಕೆರೆಗೆ ಹಾರ ಕೊಡುವುದಾದರೂ ಯಾರನ್ನು ಎಂಬ ಚಿಂತೆ ಮಲ್ಲೇಗೌಡನನ್ನು ಕಾಡತೊಡಗಿತು.

ಹೀಗಿರುವಾಗ ಮಾವನನ್ನು ಆವರಿಸಿದ ಚಿಂತೆಯನ್ನು ಅರಿತ ಕಿರಿಸೊಸೆ ಹೊನ್ನಮ್ಮ ಊರಿನ ಜನರ ಒಳಿತಿಗಾಗಿ ಕೆರೆಗೆ ಹಾರಿ ತನ್ನ ಪ್ರಾಣವನ್ನು ಅರ್ಪಿಸುತ್ತಾಳೆ. ಆಕೆ ಮಾಡಿದ ತ್ಯಾಗಬಲಿದಾನದ ಫಲದಿಂದ ಕೂಡಲೇ ಕೆರೆಯಲ್ಲಿ ನೀರು ತುಂಬಿ ಬರುತ್ತದೆ. ಪ್ರಾಣಿ ಪಕ್ಷಿಗಳು, ಜನ ಜಾನುವಾರುಗಳು ಕೆರೆಯ ನೀರು ಕುಡಿದು ಸಂತೋಷಪಡುತ್ತಿರುವಾಗಲೇ ಹೊನ್ನಮ್ಮನ ದಂಡಿಗೆ ಹೋಗಿದ್ದ ಪತಿ ಶಾಂತರಾಜುಗೆ ಮಡದಿ ಹೊನ್ನಮ್ಮ ಕೆರೆಗೆ ಹಾರವಾಗಿರುವ ವಿಷಯ ತಿಳಿಯುತ್ತದೆ. ಮಡದಿಯ ಅಗಲಿಕೆಯ ನೋವನ್ನು ತಾಳಲಾರದೆ ಆತನೂ ಕೂಡ ಅದೇ ಕೆರೆಗೆ ಹಾರಿ ಪ್ರಾಣಬಿಡುತ್ತಾನೆ.

ತನ್ನ ಸೊಸೆಯ ತ್ಯಾಗಬಲಿದಾನದ ನೆನಪಿಗಾಗಿ ಮಲ್ಲೇಗೌಡ ಕೆರೆಯ ಏರಿಯಲ್ಲೊಂದು ದೇವಾಲಯವನ್ನು ಕಟ್ಟಿಸಿ ಅಲ್ಲಿ ಬಸವೇಶ್ವರ, ಗಣಪತಿ, ಹಾಗೂ ಹೊನ್ನಮ್ಮನ ವಿಗ್ರಹವನ್ನು ಪ್ರತಿಷ್ಠಾಪಿಸಿದನು ಎಂದು ಹೇಳಲಾಗಿದೆ. ನಾಡಿನ ಒಳಿತಿಗಾಗಿ ಹೊನ್ನಮ್ಮ ಮಾಡಿದ ತ್ಯಾಗ ಬಲಿದಾನದ ನೆನಪಿಗಾಗಿ ವರ್ಷಂಪ್ರತಿ ಗೌರಿಹಬ್ಬದ ದಿನದಂದು ಕೆರೆಗೆ ನವ ವಧುವರರು ಹಾಗೂ ಮುತ್ತೈದೆಯರು ಬಾಗಿನ ಅರ್ಪಿಸಿ ತಾಯಿ ಹೊನ್ನಮ್ಮನಿಗೆ ಪೂಜೆ ಸಲ್ಲಿಸುತ್ತಾರೆ. ಹೀಗಾಗಿ ಗೌರಿಹಬ್ಬದಂದು ಮಹಿಳೆಯರು ನವದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುವುದು ಕಂಡು ಬರುತ್ತದೆ.
B M Lavakumar







