LatestMysore

ಇನ್ನೆರಡು ತಿಂಗಳೊಳಗೆ ಹುಣಸೂರು ಹೈಟೆಕ್ ಆಸ್ಪತ್ರೆ ಉದ್ಘಾಟನೆ: ಸಚಿವ ಯು.ಟಿ.ಖಾದರ್

ಆಸ್ಪತ್ರೆಯಲ್ಲಿ ಬಾಕಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚನೆ

ಹುಣಸೂರು (ನಂಜಾಪುರ ಮನುಕುಮಾರ್): ಹುಣಸೂರು ನಗರದ ಜನರ ಬಹುದಿನಗಳ ನಿರೀಕ್ಷೆಯಾಗಿರುವ ₹41 ಕೋಟಿ ವೆಚ್ಚದ 100 ಹಾಸಿಗೆಗಳ ಸಾಮರ್ಥ್ಯದ ಸರ್ಕಾರಿ ಹೈಟೆಕ್ ಆಸ್ಪತ್ರೆಯನ್ನು ಅಗತ್ಯ ಕಾಮಗಾರಿ ಹಾಗೂ ವೈದ್ಯಕೀಯ ಉಪಕರಣಗಳ ಅಳವಡಿಕೆ ಪೂರ್ಣಗೊಳಿಸಿ, ಮುಂದಿನ ಎರಡು ತಿಂಗಳೊಳಗೆ ಉದ್ಘಾಟಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.

ನಗರದಲ್ಲಿ ನಿರ್ಮಾಣವಾಗಿರುವ ನೂತನ ಹೈಟೆಕ್ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿ, ಕಟ್ಟಡ ಹಾಗೂ ಲಭ್ಯವಿರುವ ಸೌಲಭ್ಯಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯ ಬಾಕಿ ಕಾಮಗಾರಿ ಮತ್ತು ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೆ ಬೇಕಾದ ₹94 ಲಕ್ಷ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ನಿಗದಿತ ಅವಧಿಯಲ್ಲಿ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿ, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ತಾಲೂಕು ಮಟ್ಟದ ಮಾದರಿ ಆಸ್ಪತ್ರೆಯನ್ನಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.

ಮೂರು ಹಂತಗಳಲ್ಲಿ ಸಾಕಾರಗೊಳ್ಳುತ್ತಿರುವ ಆಸ್ಪತ್ರೆ

ಹುಣಸೂರಿನಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ನಿರ್ಮಿಸುವ ಯೋಜನೆಗೆ ತಾವು ಈ ಹಿಂದೆ ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲೇ ಸಿದ್ಧತೆ ನಡೆದಿತ್ತು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತಾವಧಿಯಲ್ಲಿ ಅಂದಿನ ಆರೋಗ್ಯ ಸಚಿವ ರಮೇಶ್‌ಕುಮಾರ್ ಯೋಜನೆಗೆ ಚಾಲನೆ ನೀಡಿದ್ದರು. ನಂತರ ಆರೋಗ್ಯ ಸಚಿವರಾಗಿದ್ದ ದಿನೇಶ್ ಗುಂಡೂರಾವ್ ಅನುದಾನ ಒದಗಿಸಿದ್ದರಿಂದ ಆಸ್ಪತ್ರೆಯ ಕಾಮಗಾರಿ ಈ ಹಂತಕ್ಕೆ ತಲುಪಿದೆ ಎಂದು ತಿಳಿಸಿದರು.

ಆಸ್ಪತ್ರೆಯ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವುದರ ಜತೆಗೆ, ರೋಗಿಗಳಿಗೆ ಅಗತ್ಯವಿರುವ ವೈದ್ಯಕೀಯ ಸೌಲಭ್ಯಗಳು, ಉಪಕರಣಗಳು ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುವುದಕ್ಕೆ ಆದ್ಯತೆ ನೀಡಲಾಗುವುದು. ಕೇವಲ ಸುಸಜ್ಜಿತ ಕಟ್ಟಡ ನಿರ್ಮಾಣವಾಗುವುದಷ್ಟೇ ಮುಖ್ಯವಲ್ಲ; ಜನರಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ದೊರೆಯುವಂತಾಗಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಪಿಎಚ್‌ಸಿಗಳ ಮೇಲ್ದರ್ಜೆಗೇರಿಸುವ ಬದಲು ಆಂಬುಲೆನ್ಸ್ ಸೇವೆಗೆ ಆದ್ಯತೆ ರಾಜ್ಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಬದಲು, ಅಲ್ಲಿಂದ ತಾಲೂಕು ಆಸ್ಪತ್ರೆಗಳಿಗೆ ರೋಗಿಗಳನ್ನು ತ್ವರಿತವಾಗಿ ಕರೆದೊಯ್ಯುವ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಉದ್ದೇಶಿಸಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ತಾಲೂಕು ಆಸ್ಪತ್ರೆಗೆ ಸುಮಾರು 20 ನಿಮಿಷಗಳಲ್ಲಿ ರೋಗಿಗಳನ್ನು ತಲುಪಿಸುವ ರೀತಿಯಲ್ಲಿ ಆಂಬುಲೆನ್ಸ್ ಸೇವೆಯನ್ನು ಸಮರ್ಪಕಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಪ್ರಸ್ತುತ ರಾಜ್ಯದಲ್ಲಿ 775 ಆಂಬುಲೆನ್ಸ್‌ಗಳ ಅಗತ್ಯಕ್ಕೆ ಹೋಲಿಸಿದರೆ 108 ಆರೋಗ್ಯ ಸೇವೆಯಡಿ ವಾಹನಗಳ ಕೊರತೆಯಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಈ ವ್ಯವಸ್ಥೆಯನ್ನು ಬಲಪಡಿಸಲು ಆರೋಗ್ಯ ಇಲಾಖೆಯಿಂದಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಂಬಿಬಿಎಸ್ ವೈದ್ಯರಿಗೆ ಅಲ್ಟ್ರಾಸೌಂಡ್ ತರಬೇತಿ

ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೂ ರೇಡಿಯಾಲಜಿಸ್ಟ್‌ಗಳನ್ನು ನೇಮಕ ಮಾಡುವುದು ಸವಾಲಿನ ಕೆಲಸವಾಗಿದೆ. ಹೀಗಾಗಿ ಎಂಬಿಬಿಎಸ್ ವೈದ್ಯರಿಗೆ ಆರು ತಿಂಗಳ ಅಲ್ಟ್ರಾಸೌಂಡ್ ತರಬೇತಿ ನೀಡಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆಗೆ ನಿಯೋಜಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಟೆಲಿ ಮೆಡಿಸಿನ್ ವ್ಯವಸ್ಥೆಯ ಮೂಲಕ ಸ್ಥಳೀಯ ಆಸ್ಪತ್ರೆಗಳಲ್ಲಿಯೇ ತಜ್ಞ ವೈದ್ಯರ ಸಲಹೆ ಮತ್ತು ಚಿಕಿತ್ಸೆ ದೊರೆಯುವಂತೆ ಮಾಡಲಾಗುತ್ತಿದೆ. ಆರೋಗ್ಯ ಇಲಾಖೆಯಲ್ಲಿ ವೈದ್ಯರ ಕೊರತೆ ನೀಗಿಸಲು ಈಗಾಗಲೇ 220 ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಲ್ಲದೆ, 2,000 ಸಿಬ್ಬಂದಿ ನೇಮಕಾತಿಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಆಹಾರ ಗುಣಮಟ್ಟ ಪರಿಶೀಲನೆ ತಾಲೂಕು ಮಟ್ಟಕ್ಕೂ ವಿಸ್ತರಣೆ ಹೋಟೆಲ್‌ಗಳು, ಬೇಕರಿಗಳು ಸೇರಿದಂತೆ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಸಂಸ್ಥೆಗಳಲ್ಲಿ ಗುಣಮಟ್ಟ ಪರಿಶೀಲನೆಯನ್ನು ತಾಲೂಕು ಮಟ್ಟಕ್ಕೂ ವಿಸ್ತರಿಸಲು ಸರ್ಕಾರ ಉದ್ದೇಶಿಸಿದೆ. ಸಿಬ್ಬಂದಿ ಕೊರತೆ ಇರುವುದರಿಂದ ನಿವೃತ್ತ ವೈದ್ಯರು, ಆರೋಗ್ಯ ಕಾರ್ಯಕರ್ತರು ಹಾಗೂ ಸಮಾಜಸೇವಕರನ್ನು ಒಳಗೊಂಡ ತಂಡಗಳನ್ನು ತಾಲೂಕು ಮಟ್ಟದಲ್ಲಿ ರಚಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದರು.

ಆಹಾರ ಪದಾರ್ಥಗಳ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಸಾರ್ವಜನಿಕರು ಸುಲಭವಾಗಿ ದೂರು ಸಲ್ಲಿಸಲು ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಆಹಾರ ಸುರಕ್ಷತೆ ಮತ್ತು ಆರೋಗ್ಯ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುವುದು ಎಂದು ಹೇಳಿದರು.

ಕ್ಯಾನ್ಸರ್ ಔಷಧಗಳ ಬೆಲೆ ನಿಯಂತ್ರಣಕ್ಕೆ ಕ್ರಮ

ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಗಳ ಬೆಲೆ ನಿಯಂತ್ರಣದ ಅಗತ್ಯವಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಸೂಕ್ತ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಂಡಿತ್ತು. ನಂತರ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದ ಬಳಿಕ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲಾಯಿತು ಎಂದು ಸಚಿವರು ತಿಳಿಸಿದರು.

 ಬಳಸಿದ ಅಡುಗೆ ಎಣ್ಣೆ ಮರುಮಾರಾಟ ತಡೆಗೆ ಆ್ಯಪ್

ಹೋಟೆಲ್‌ಗಳು ಸೇರಿದಂತೆ ಆಹಾರ ತಯಾರಿಕಾ ಘಟಕಗಳಲ್ಲಿ ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಮರುಮಾರಾಟ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇಂತಹ ಅಕ್ರಮಗಳನ್ನು ನಿಯಂತ್ರಿಸಲು ಆ್ಯಪ್ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶವಿದ್ದು, ಎಣ್ಣೆ ಖರೀದಿ ಹಾಗೂ ವಿಲೇವಾರಿ ವಿವರಗಳನ್ನು ದಾಖಲಿಸುವ ಮೂಲಕ ಪಾರದರ್ಶಕತೆ ತರಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಚಿವರು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿ, ಆಸ್ಪತ್ರೆಯ ಪ್ರಗತಿ ಮತ್ತು ಆರೋಗ್ಯ ಸೇವೆಗಳ ಕುರಿತು ಚರ್ಚಿಸಿದರು.

ಸಚಿವರೊಂದಿಗೆ ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ವಿಭಾಗೀಯ ಉಪನಿರ್ದೇಶಕಿ ಡಾ.ಬಿ.ಮಲ್ಲಿಕಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಆರ್.ಮೋಹನ್, ಆರ್‌ಸಿಎಚ್ ಅಧಿಕಾರಿ ಸಿರಾಜ್ ಅಹಮದ್, ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಶಿವಶಂಕರ್, ತಾಲೂಕು ಆರೋಗ್ಯಾಧಿಕಾರಿ ಡಾ.ಗಿರಿದಾಸ್, ಹುಡಾ ಅಧ್ಯಕ್ಷ ಎಚ್.ಪಿ.ಅಮರ್‌ನಾಥ್, ಪೌರಾಯುಕ್ತೆ ಎಂ.ಮಾನಸ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಟ್ ಅಂಡ್ ರನ್ ಗೆ ಮಹತ್ವ ಕೊಡುವ ಅಗತ್ಯವಿಲ್ಲ

ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಯು.ಟಿ.ಖಾದರ್, ಇದೊಂದು ಹಿಟ್‌ ಅಂಡ್‌ ರನ್‌ ಪ್ರಕರಣವಾಗಿದ್ದು, ಇದಕ್ಕೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು ಹೇಳಿದರು. ದೂರು ನೀಡುವವರೇ ತನಿಖೆಗೆ ಒತ್ತಾಯಿಸುತ್ತಾರೆ. ಆದರೆ ತನಿಖೆಯ ವೇಳೆ ಪ್ರತಿಪಕ್ಷದವರ ಹೆಸರುಗಳು ಕೇಳಿಬಂದಾಗ ಪೊಲೀಸ್ ಕಮಿಷನರ್ ಕಚೇರಿ ಎದುರು ಧರಣಿ ನಡೆಸುವವರೂ ಅವರೇ. ಒಳ್ಳೆಯವರ ಹೆಸರಿಗೆ ಕಳಂಕ ತರುವ ಪ್ರಯತ್ನ ನಡೆಯುತ್ತಿದೆ ಎಂದು ಅವರು ಟೀಕಿಸಿದರು.

admin
the authoradmin

ನಿಮ್ಮದೊಂದು ಉತ್ತರ