LatestMysore

ಶಿಕ್ಷಕರನ್ನು ಇತರೆ ಕೆಲಸಗಳಿಂದ ಮುಕ್ತಗೊಳಿಸಿದರೆ ಶಿಕ್ಷಣದ ಗುಣಮಟ್ಟ ಹೆಚ್ಚಳ ಸಾಧ್ಯ

ಶಿಕ್ಷಕರನ್ನು ಇತರೆ ಕೆಲಸಗಳಿಂದ ಮುಕ್ತಗೊಳಿಸಿದರೆ ಶಿಕ್ಷಣದ ಗುಣಮಟ್ಟ ಹೆಚ್ಚಳ ಸಾಧ್ಯ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರ ಸೇವೆ ಶಾಲೆಗೆ ಸೀಮಿತಗೊಳಿಸಿ ಇತರೆ ಸರ್ಕಾರಿ ಕೆಲಸಗಳಿಗೆ ಪರ್ಯಾಯ ನೇಮಕಾತಿ ಮಾಡಿಕೊಳ್ಳುವುದ ರಿಂದ ಮಕ್ಕಳಲ್ಲಿ ಕಲಿಕಾ ಮಟ್ಟ ಉತ್ತಮವಾಗಲಿದ್ದು, ಈ ಬಗ್ಗೆ ಮುಂದಿನ ಸದನದಲ್ಲಿ ಮುಖ್ಯಮಂತ್ರಿ ಗಮನ ಸೆಳೆಯಲಾಗುವುದು ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಭರವಸೆ ನೀಡಿದರು.

ನಗರದ ಶಿಕ್ಷಕರ ಭವನದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಸ್ಮರಣಾರ್ಥ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ಸರ್ಕಾರಿ ಶಾಲಾ ಶಿಕ್ಷಕರು ಪಠ್ಯಕ್ಕಿಂತ ವಿವಿಧ ಸರ್ಕಾರಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಪ್ರಮಾಣ ಹೆಚ್ಚಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕುಸಿಯುತ್ತಿದೆ. ಸರ್ಕಾರಿ ಶಾಲೆಗಳಿಗೆ ದಾಖಲಾತಿ ಕ್ಷೀಣಿಸಿದೆ, ಈ ಸಮಸ್ಯೆ ರಾಜ್ಯದಾದ್ಯಂತ ಇದ್ದು, ಶಿಕ್ಷಣ ಸಚಿವರ ಗಮನಕ್ಕೆ ತಂದುಪರಿಹರಿಸುವ ಕ್ರಮಕ್ಕೆ ಒತ್ತಾಯಿಸುತ್ತೇನೆ ಎಂದರು. ಸಮರ್ಥ ಶಿಕ್ಷಕ ರಾಷ್ಟ್ರ ರಕ್ಷಕನಾಗಬಲ್ಲ, ಗುಣಮಟ್ಟದ ಶಿಕ್ಷಣ ಮತ್ತು ಮಾರ್ಗದರ್ಶನದಿಂದ ಯುವಕರು ದೇಶದ ಆಸ್ತಿಯಾಗಿ ಹೊರ ಹೊಮ್ಮಿ ರಾಷ್ಟ್ರ ನಿರ್ಮಾಣಕ್ಕೆ ತಮ್ಮದೇ ಕೊಡುಗೆ ನೀಡಬಲ್ಲರು ಎಂದರು.

ಮಕ್ಕಳಿಗೆ ತರಗತಿಯಲ್ಲಿ ಸಂಸ್ಕಾರ, ಸಂಸ್ಕೃತಿ ಮತ್ತು ಇತಿಹಾಸ ತಿಳಿಸುವ ಕೆಲಸ ಆಗಬೇಕಿದೆ, ಸಮಾಜದಲ್ಲಿ ಹೇಗೆ ಬದುಕು ಕಟ್ಟಿಕೊಳ್ಳಬೇಕು ಎಂಬುದು ತಿಳಿಯದಿದ್ದರೆ ಆತನ ಭವಿಷ್ಯ ಶೂನ್ಯ-ವಾಗಲಿದ್ದು, ಮಕ್ಕಳಿಗೆ ಸಾಮಾನ್ಯ ಜ್ಞಾನ ತಿಳಿಸುವ ಕೆಲಸ ಶಿಕ್ಷಕರಿಂದಾಗಬೇಕು ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ಮಾಹಿತಿ ಮತ್ತು ತಂತ್ರಜ್ಞಾನ ಶಿಕ್ಷಣ ಕ್ಷೇತ್ರವನ್ನು ಪ್ರವೇಶಿಸಿದ್ದರೂ ತರಗತಿಯಲ್ಲಿ ಶಿಕ್ಷಕರು ಮಕ್ಕಳಿಗೆ ಅಕ್ಷರ ಜ್ಞಾನ ಪರಿಚಯಿಸದ ಹೊರತು ಯಾವುದೇ ತಂತ್ರಜ್ಞಾನ ಬಳಕೆಗೆ ಬರುವುದಿಲ್ಲ. ಹೀಗಾಗಿ ಶಿಕ್ಷಕರ ಪಾತ್ರ ಈ ಸಮಾಜಕ್ಕೆ ಹೆಚ್ಚಿದೆ ಎಂದು ಹೇಳಿದರು.

ಶಿಕ್ಷಕರ ಸಂಘದ ಅಧ್ಯಕ್ಷ ಶಶಿಕುಮಾರ್ ಮಾತನಾಡಿ, ಶಿಕ್ಷಕರ ವೈದ್ಯಕೀಯ ವೆಚ್ಚದ ಕಂತು ಪ್ರತಿ ತಿಂಗಳು ವೇತನದಲ್ಲಿ ಕಡಿತವಾಗುತ್ತಿದ್ದರೂ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಸೇವೆ ಸಿಗುತ್ತಿಲ್ಲ. ಈ ಬಗ್ಗೆ ಶಾಸಕರು ಗಮನಿಸಬೇಕು. ಕಳೆದ ಎರಡು ವರ್ಷದಿಂದ ಶಿಕ್ಷಕರಿಗೆ ಸಂದಾಯವಾಗಬೇಕಿದ್ದ ಆಸ್ಪತ್ರೆ ವೆಚ್ಚದ ಬಿಲ್ ₹ 2 ಕೋಟಿ ಶಾಸಕರ ಸಹಕಾರದಿಂದ ಶಿಕ್ಷಕರ ಖಾತೆಗೆ ಜಮಾವಾಗಿದ್ದು ಶಿಕ್ಷಕರ ಪರವಾಗಿ ಧನ್ಯವಾದ ಅರ್ಪಿಸುವೆ ಎಂದರು.

ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿದ ಅಣ್ಣಯ್ಯ ನಾಯಕ, ಅನುಪಮಾ, ಬಸವಣ್ಣ ಹಾಗೂ ನಿವೃತ್ತಿಹೊಂದಿದ 54 ಶಿಕ್ಷಕರು ಮತ್ತು ಮರಣೋತ್ತರ ನಾಲ್ವರು ಶಿಕ್ಷಕರ ಕುಟುಂ-ಬದವರನ್ನು ಗೌರವಿಸಲಾಯಿತು. ಜಾನಪದ ಕಾರ್ಯಕ್ರಮದಲ್ಲಿ ತಜ್ಞ ಪ್ರೊ.ಪಿ.ಕೆ.ರಾಜಶೇಖರ್ ಪ್ರಧಾನ ಭಾಷಣ ಮಾಡಿದರು.ಎಚ್.ಪಿ.ಗಿರೀಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ಬಿಇಒ ಕಾಳನಾಯಕ ಸ್ವಾಗತಿಸಿದರು.

ವೇದಿಕೆಯಲ್ಲಿ ತಹಶೀಲ್ದಾ‌ರ್ ಮಂಜುನಾಥ್, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಕಸಾಪ ಅಧ್ಯಕ್ಷ ಎಚ್.ಕೆ.ಮಹದೇವ್, ಗ್ಯಾರಂಟಿ ತಾಲ್ಲೂಕು ಘಟಕದ ಅಧ್ಯಕ್ಷ ರಾಘು ಸೇರಿದಂತೆ ವಿವಿಧ ಸಹಕಾರಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿದ್ದರು

admin
the authoradmin

ನಿಮ್ಮದೊಂದು ಉತ್ತರ