ಕೇಂದ್ರ ಸರ್ಕಾರ ಗ್ರಾಮೀಣ ಜನರ ಜೀವನೋಪಾಯದ ಹಕ್ಕನ್ನು ಕಸಿಯುತ್ತಿದೆ… ಡಿ.ರವಿಶಂಕರ್ ಆಕ್ರೋಶ
ಮನರೇಗಾ ಬಚಾವ್- ವಿಬಿಜಿ ರಾಮ್ ಜೀ ಹಠಾವ್

ಕೆ.ಆರ್.ನಗರ(ಜಿಟೆಕ್ ಶಂಕರ್): ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮಾಂತರ ಪ್ರದೇಶದ ಜನರಿಗೆ ದೊರೆಯುತ್ತಿದ್ದ ಜೀವನೋಪಾಯದ ಹಕ್ಕನ್ನು ಕಸಿಯುವ ಕೆಲಸ ಮಾಡುತ್ತಿರುವ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಖಂಡನೀಯ ಎಂದು ಶಾಸಕ ಡಿ.ರವಿಶಂಕರ್ ಆಕ್ರೋಶ ವ್ಯಕ್ತಪಡಿಸಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ಕಾಂಗ್ರೆಸ್ ವತಿಯಿಂದ ಪಟ್ಟಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮನರೇಗಾ ಬಚಾವ್-ವಿಬಿಜಿ ರಾಮ್ ಜೀ ಹಠಾವ್ ಪ್ರತಿಭಟನಾ ರಾಲಿಯ ನಂತರ ತಾಲೂಕು ಕಚೇರಿಯ ಆವರಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಕೇಂದ್ರದ ಇಂತಹ ಅಭಿವೃದ್ದಿ ವಿರೋಧಿ ನಿಯಮ ಮತ್ತು ದುರುದ್ದೇಶದ ಯೋಚನೆಯಿಂದ ಸ್ಥಳೀಯ ಗ್ರಾ.ಪಂ.ಗಳ ಅಧಿಕಾರವನ್ನು ಸಂಪೂರ್ಣವಾಗಿ ಕಸಿದುಕೊಳ್ಳುವ ಹುನ್ನಾರ ಅಡಗಿದ್ದು ಇದಕ್ಕೆ ಕಾಂಗ್ರೆಸ್ ಪಕ್ಷ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ವಿಬಿಜಿ ರಾಮ್‌ಜೀ ಯೋಜನೆಯನ್ನು ಕೂಡಲೇ ರದ್ದುಪಡಿಸಿ ಈ ಹಿಂದಿನಂತೆಯೆ ಮಹಾತ್ಮ ಗಾಂದಿ ರಾಷ್ಠ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಅದರ ಮೂಲ ಸ್ವರೂಪದಲ್ಲಿಯೆ ಜಾರಿಗೆ ತರಬೇಕೆಂದು ಒತ್ತಾಯಿಸಿದ ಶಾಸಕರು ಅಲ್ಲಿಯವರೆಗೆ ನಿರಂತರವಾಗಿ ಹೋರಾಟ ಮಾಡಲಾಗುತ್ತದೆ ಎಂದರು.
ಮಹಾತ್ಮ ಗಾಂದಿಯವರ ತತ್ವ ಮತ್ತು ಸಿದ್ದಾಂತಕ್ಕೆ ತೀಲಾಂಜಲಿ ನೀಡಿರುವ ಕೇಂದ್ರ ಸರ್ಕಾರ ಅವರ ಹೆಸರನ್ನು ಶಾಶ್ವತವಾಗಿ ಅಳಿಸುವ ಕೆಟ್ಟ ಪರಂಪರೆಗೆ ನಾಂದಿ ಹಾಡುತ್ತಿದ್ದು ಇದಕ್ಕೆ ದೇಶದ ಜನತೆ ಮುಂಬರುವ ದಿನಗಲ್ಲಿ ಕೇಂದ್ರ ಸರ್ಕಾರ ಮತ್ತು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಶೀಘ್ರದಲ್ಲಿಯೇ ಜಿ.ಪಂ. ಮತ್ತು ತಾ.ಪಂ.ಚುನಾವಣೆ ಸೇರಿದಂತೆ ಇತರೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಬರಲಿದ್ದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರುಗಳು ಸಂಘಟನೆ ಮಾಡುವ ಮೂಲಕ ಹೆಚ್ಚು ಸ್ಥಾನಗಳಲ್ಲಿ ಜಯಬೇರಿ ಬಾರಿಸುವಂತೆ ಕಾರ್ಯ ಯೋಜನೆ ರೂಪಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ ದೇಶದ ಜನರ ಆರ್ಥಿಕ ಸಬಲೀಕರಣಕ್ಕಾಗಿ ಈ ಹಿಂದೆ ಕಾಂಗ್ರೆಸ್ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಜಾರಿಗೆ ತಂದಿತ್ತು ಆದರೆ ಬಿಜೆಪಿ ಇಂತಹ ಬಡವರ ಹಾಗೂ ಜನ ಪರವಾದ ಯೋಜನೆಗಳನ್ನು ರದ್ದು ಮಾಡುವ ಮೂಲಕ ದೇಶ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.

ದೇಶದ ಉದ್ದಗಲಕ್ಕೂ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಂಚಾರ ಮಾಡಿ ರಾಹುಲ್‌ಗಾಂಧಿಯವರು ದೇಶದ ಪ್ರಧಾನ ಮಂತ್ರಿಗಳಾಗುವಂತೆ ಪಣ ತೊಟ್ಟು ಕೆಲಸ ಮಾಡುತ್ತೇವೆಂದ ಅವರು ನಮ್ಮ ಪಕ್ಷ ಎಂದಿಗೂ ಬಿಜೆಪಿ ಮುಂದೆ ಮಂಡಿಯೂರಲ್ಲ ಎಂದು ಘೋಷಿಸಿದರು.
ನಾವೂ ಹೋರಾಟದ ಮೂಲಕವೇ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ತತ್ವ ಮತ್ತು ಸಿದ್ದಾಂತಗಳ ಉಳಿವಿಗೆ ಕೆಲಸ ಮಾಡಲಿದ್ದು ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂದು ಹೇಳಿದರು.
ಜಿ.ಪಂ.ಮತ್ತು ತಾ.ಪಂ.ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರುಗಳು ಕೂಡಲೇ ಸಿದ್ದತೆ ಆರಂಬಿಸಬೇಕೆಂದು ಸೂಚಿಸಿದ ಜಿಲ್ಲಾಧ್ಯಕ್ಷರು ಸ್ಪರ್ಧಾಕಾಂಕ್ಷಿಗಳು ಸಿದ್ಧರಾಗಬೇಕೆಂದು ಸಲಹೆ ನೀಡಿದರು.
ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷದ ನೂರಾರು ಮುಖಂಡರು ಮತ್ತು ಕಾಯಕರ್ತರುಗಳು ಹಾಸನ ಮೈಸೂರು ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯ ಬಳಿಯಿಂದ ತಾಲೂಕು ಕಚೇರಿಯ ವರೆಗೆ ಪ್ರತಿಭಟನಾ ರ್‍ಯಾಲಿ ನಡೆಸಿ ಪ್ರಧಾನ ಮಂತ್ರಿ ಮತ್ತು ಕೇಂದ್ರ ಸರ್ಕಾರದ ವಿರುದ್ದ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.
ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ಸಿ.ಪಿ.ರಮೇಶ್‌ಕುಮಾರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಕೆ.ಆರ್.ನಗರ ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಉದಯಶಂಕರ್, ನಗರಾಧ್ಯಕ್ಷ ಎಂ.ಜೆ.ರಮೇಶ್, ಯುವ ಘಟಕದ ಅಧ್ಯಕ್ಷರಾದ ಮಂಜುಕೆಂಚಿ, ಒಬಿಸಿ ಘಟಕದ ಅಧ್ಯಕ್ಷ ದೆಗ್ಗನಹಳ್ಳಿಆನಂದ್, ತಾಲೂಕು ಕಾಂಗ್ರೆಸ್ ವಕ್ತಾರ ಸೈಯದ್‌ಜಾಬೀರ್, ಪುರಸಭೆ ಮಾಜಿ ಸದಸ್ಯರಾದ ನಟರಾಜು, ಶಂಕರಸ್ವಾಮಿ, ಸೈಯದ್ ಅಸ್ಲಾಂ, ಕೆ.ಎಲ್.ಕುಮಾರ್, ಕೆ.ವಿನಯ್, ಹಂಪಾಪುರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಪಿ.ಪ್ರಶಾಂತ್, ಜಿ.ಪಂ.ಮಾಜಿ ಸದಸ್ಯ ಮಾರ್ಚಹಳ್ಳಿಶಿವರಾಂ, ಕಾಂಗ್ರೆಸ್ ಮುಖಂಡರಾದ ಹೊಸೂರುಕಲ್ಲಹಳ್ಳಿ ಶ್ರೀನಿವಾಸ್, ಜೆ.ಶಿವಣ್ಣ, ದಿಡ್ಡಹಳ್ಳಿಬಸವರಾಜು, ಕೆ.ಹೆಚ್.ಬುಡೀಗೌಡ, ಚೀರ್ ನಹಳ್ಳಿಶಿವರಾಜು, ಎಂ.ಎಸ್.ಅನಂತ್, ದೇವರಾಜು, ಎಸ್.ಸಿದ್ದೇಗೌಡ, ವೆಂಕಟೇಶ್, ಹಂಪಾಪುರ ಸುಖೇಂದ್ರ, ಮಂಚನಹಳ್ಳಿಧನು, ಚಂದ್ರು. ಮೋಹನ್, ಬಲರಾಮು, ಶಾಂತಿರಾಜ್, ಸರಿತಾಜವರಪ್ಪ, ಲತಾರವೀಶ್, ಸತ್ಯಭಾಮ, ವಂದನಾ, ಉಷಾ, ಸುಮಾ ಮತ್ತಿತರರು ಇದ್ದರು.







