LatestMysore

ಶಾಲಾ ಶಿಕ್ಷಕರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಏ.19ರಂದು ಚುನಾವಣೆ

 ಕೆ.ಆರ್.ನಗರ(ಜಿಟೆಕ್ ಶಂಕರ್) :  ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುಂದಿನ 5 ವರ್ಷಗಳ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಏ. 19 ರಂದು ಭಾನುವಾರ ಚುನಾವಣೆ ನಿಗದಿಯಾಗಿದೆ. ಅಂದು ಬೆಳಗ್ಗೆ 8.30 ರಿಂದ ಸಂಜೆ 4.30ರ ವರೆಗೆ ಪಟ್ಟಣದ ಬಿಆರ್ ಸಿ ಕೇಂದ್ರದಲ್ಲಿ ಮತದಾನ ಮಾಡಲು ಅವಕಾಶ ನೀಡಲಾಗಿದ್ದು ಆ ನಂತರ ಸಂಜೆ 6.30ರಿಂದ ಮತ ಏಣಿಕೆ ನಡೆಸಿ ಫಲಿತಾಂಶ ಪ್ರಕಟಿಸಲಾಗುತ್ತದೆ.

ಏ.12 ರಂದು ಭಾನುವಾರ ಸಂಜೆ 6 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು 13  ರಂದು ಸೋಮವಾರ ನಾಮಪತ್ರಗಳ ಪರಿಶೀಲನೆ ನಡೆಯಲ್ಲಿದ್ದು ನಾಮ ಪತ್ರ ವಾಪಸ್ಸ್ ಪಡೆಯಲು ಏ.14 ಮಂಗಳವಾರ ಕಡೆಯ ದಿನವಾಗಿದ್ದು ಸಂಜೆ 6 ಗಂಟೆಯ ನಂತರ ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುತ್ತದೆ.

ಮೂರು ಪುರುಷ ಮತ್ತು ಎರಡು ಮಹಿಳಾ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು 237 ಮಂದಿ ಶಿಕ್ಷಕರು ಮತದಾನದ ಹಕ್ಕು ಹೊಂದಿದ್ದು ಚುನಾವಣೆಗೆ ಸಕಲ ಸಿದ್ದತೆಗಳನ್ನು ಮಾಡಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಯಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಪತ್ರಾಂಕಿತ ವ್ಯವಸ್ಥಾಪಕ ಜಿ.ಎನ್.ಜಯಕುಮಾರ್ ತಿಳಿಸಿದ್ದಾರೆ.

ಕೆ.ಆರ್.ನಗರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರ ಆರೋಪವೇನು?

ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರ ಸ್ಥಾನದ ಚುನಾವಣೆ ನಡೆಸುವಾಗ ಬೈಲಾ ನಿಯಮ ಅನುಸರಿಸದೆ ತರಾತುರಿಯಲ್ಲಿ ಚುನಾವಣಾ ದಿನಾಂಕ ಪ್ರಕಟಿಸುವುದರ ಜತೆಗೆ ಉದ್ದೇಶ ಪೂರ್ವಕವಾಗಿ 3 ಶಿಕ್ಷಕರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಾಜಶೇಖರ ಗಂಭೀರ ಆರೋಪ ಮಾಡಿದರು.

ಪಟ್ಟಣದ ಸರ್ಕಾರಿ ನೌಕರರ ಭವನದ ಆಡಳಿತ ಕಛೇರಿ ಆವರಣದಲ್ಲಿ ನಡೆದ ಸಮಾನ ಮನಸ್ಕರ ಪ್ರಗತಿ‌ಪರ ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು ಚುನಾವಣೆ ನಡೆಯುವ 10 ದಿನಗಳ ಹಿಂದೆ ಕರಡು ಮತದಾರರ ಪಟ್ಟಿ ಪ್ರಕಟಿಸಿ ಆಕ್ಷೇಪಣೆಗೆ ಕಾಲಾವಕಾಶ ಕಲ್ಪಿಸಬೇಕು ಆದರೆ ಇದ್ಯಾವುದನ್ನು ಪರಿಗಣನೆಗೆ ತರಗೆದುಕೊಳ್ಳದೆ ರಾಜ್ಯ ಮತ್ತು ತಾಲೂಕು ಸಂಘದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿ ಸರ್ವಾಧಿಕಾರ ಧೋರಣೆ ತೋರಿದ್ದಾರೆಂದು ದೂರಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿರುವ ನಾನು ನೌಕರರ ಪರವಾಗಿ ಸಂಘವು ಮಾಡುವ ಉತ್ತಮ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುತ್ತೇನೆ ಎಂಬುದನ್ನು ನೆಪವಾಗಿಟ್ಟುಕೊಂಡು ನಾನು ಸೇರಿದಂತೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕೃಷ್ಣನಾಯಕ, ಶಿಕ್ಷಕ  ಟಿ.ಎಸ್ .ಮೋಹನ್ ಕುಮಾರ್ ಅವರ ಹೆಸರನ್ನು‌ ಕೈ ಬಿಡುವಲ್ಲಿ ಇವರ ಪಾತ್ರವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ, ರಾಜ್ಯ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನಡುವಿನ ವೈಮನಸ್ಯ ಕ್ಕೆ ಮೂರು ಶಿಕ್ಷಕರ ಮತದಾನದ ಹಕ್ಕನ್ನು ಕಸಿಯಲಾಗಿದೆ ಅಲ್ಲದೆ ಇಂತಹ ಕೆಲಸಕ್ಕೆ ಕುಮ್ಮಕ್ಕು ನೀಡಿರುವ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎನ್.ಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಎಸ್.ಕೆ.ಸುರೇಶ್ ಅವರ ಈ ನಡೆಯನ್ನು ಸಮಾನ ಮನಸ್ಕರ ಪ್ರಗತಿ ಪರ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದರು.

ಕೂಡಲೇ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರು ಈ ಬಗ್ಗೆ ಗಮನ ಹರಿಸಿ ಚುನಾವಣೆಯನ್ನು‌ ಮುಂದೂಡಿ ಬೈಲಾ ನಿಯಮದ ಪ್ರಕಾರ ನಮ್ಮ ಸಂಘದ ಚುನಾವಣೆ ನಡೆಸುವುದರ ಜತೆಗೆ ಮತದಾರರ ಪಟ್ಟಿಯಿಂದ ಕೈ ಬಿಟ್ಟಿರುವ ನಮ್ಮಗಳ ಹೆಸರನ್ನು ಮರು ಸೇರ್ಪಡೆ ಮಾಡಬೇಕು ಎಂದು ಆಗ್ರಹ ವ್ಯಕ್ತಪಡಿಸಿದರು.

ತರಾತುರಿಯಲ್ಲಿ ಚುನಾವಣೆ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಷ್ಡೊಂದು ತರಾತುರಿಯಲ್ಲಿ ಚುನಾವಣೆ ನಡೆಸುತ್ತಿದ್ದು ಏ.11 ಮತ್ತು 12 ರಂದು ನಾಮಪತ್ರ‌ ಸಲ್ಲಿಕೆಗೆ ಅವಕಾಶ ನೀಡಿ ಏ.10  ರಂದು ರಾತ್ರಿ ಚುನಾವಣೆ ನಡೆಸುವಂತೆ ಸೂಚನೆ‌ ನೀಡಿದ್ದು ಶನಿವಾರ ಸಂಜೆ 4 ಗಂಟೆಯ ನಂತರ ಕರಡು ಮತದಾರರ ಪಟ್ಟಿಯನ್ನು ನೀಡಿದ್ದು ಇದರ ಹಿಂದೆ ಯಾರ ಕೈವಾಡವಿದೆ ಎಂದು ಪ್ರಶ್ನಿಸಿದರು.

ಕಳೆದ 20 ವರ್ಷಗಳಿಂದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯನಾಗಿ‌ ಶುಲ್ಕ ಪಾವತಿಸಿಕೊಂಡು ಪದಾಧಿಕಾರಿಯಾಗಿ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ನನಗೆ ಮತ್ತು ನನ್ನಿಬ್ಬರು ಶಿಕ್ಷಕ ಸ್ನೇಹಿತರ ಮತದಾನ ಹಕ್ಕನ್ನು ಕಸಿದಿರುವುದು ಮತ್ತು ತರಾತುರಿಯಲ್ಲಿ ಚುನಾವಣೆ ನಡೆಸುತ್ತಿರುವ ಬಗ್ಗೆ‌ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸಮಾನ ಮನಸ್ಕರ ಪ್ರಗತಿ ಪರ ವೇದಿಕೆಯ ಶಿಕ್ಷಕರಾದ ಒಂಟಿಮನೆ ನಾಗರಾಜು, ಸೈಯದ್ ರಿಜ್ವಾನ್, ನಾರಾಯಣಶೆಟ್ಟಿ, ಮಂಜುರಾಜ್, ಭಾಸ್ಕರ್, ಮುಕುಂದ, ಶಿವಮೂರ್ತಿ, ಕೆ.ಎಸ್.ಕೃಷ್ಣ, ಕಲಾವಿಮಹದೇವ್, ರಾಮಪ್ರಸಾದ್, ಲಕ್ಷ್ಮೀಶ್, ಸಿ.ಎನ್.ಪ್ರಭು, ಜಿ.ಬಿ.ಸ್ವಾಮಿ, ಪುಟ್ಟಯ್ಯ, ನಾಗರಾಜು, ಬಿ.ಎಲ್.ಮಹದೇವ್, ನಾಗರತ್ನ, ಮಂಜು, ನಾಗರಾಜು, ಮಾದೇಗೌಡ, ರವಿಕುಮಾರ್.ಪಿ ಸೇರಿದಂತೆ ಇನ್ನಿತರರು ಹಾಜರಿದ್ದರು.

admin
the authoradmin

Leave a Reply

Translate to any language you want