ಕೆ.ಆರ್.ನಗರ(ಜಿಟೆಕ್ ಶಂಕರ್): ವಚನಗಳ ಮೂಲಕವೇ ಸಮಾಜದ ಉದ್ದಾರಕ್ಕಾಗಿ ದುಡಿದ ಮಹಾನ್ ಶ್ರೇಷ್ಟ ಕವಿ ಸರ್ವಜ್ಞರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡಾಗ ಮಾತ್ರ ಜಯಂತಿಗಳಿಗೆ ಅರ್ಥ ಬರಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಪಟ್ಟಣದ ಕಾಳೇನಹಳ್ಳಿ ರಸ್ತೆಯಲ್ಲಿರುವ ತಾಲೂಕು ಕುಂಬಾರರ ಸಮುದಾಯ ಭವನದಲ್ಲಿ ನಡೆದ 506ನೇ ಸರ್ವಜ್ಞ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ವಜ್ಞರು ತ್ರಿಪದಿ ವಚನಗಳನ್ನು ರಚಿಸುವ ಮೂಲಕ ಅಂದಿನ ಕಾಲದಲ್ಲೇ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದರು ಎಂದರು.
ಯಾವುದೇ ಸೂಕ್ಷ್ಮತೀ ಸೂಕ್ಷ್ಮ ಸಮಾಜಗಳು ಜನಸಂಖ್ಯೆಯಲ್ಲಿ ಕಡಿಮೆ ಇದೇವೆ ಎಂದು ಸುಮ್ಮನಿರದೆ ಸಮಾಜದ ಸಂಘಟನೆ ಮಾಡುವುದರ ಜತೆಗೆ ದೊಡ್ಡ ಮಟ್ಟದಲ್ಲಿ ಹೋರಾಟಗಳ ಮಾಡಿ ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳಬೇಕು ಎಂದ ಶಾಸಕರು ಸಮಾಜದ ಪ್ರತಿಯೊಬ್ಬರೂ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಸಲಹೆ ನೀಡಿದರು.
ಕುಂಬಾರ ಸಮಾಜದವರು ತಮ್ಮ ಕುಲ ಕಸುಬನ್ನು ಉಳಿಸಿ ಮುಂದಿನ ಪೀಳಿಗೆಗೆ ಅದನ್ನು ಪರಿಚಯಿಸುವುದರ ಜತೆಗೆ ತಮ್ಮ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣ ಕೊಡಿಸಿ ಅವರನ್ನು ಐಎಎಸ್ ಮತ್ತು ಐಪಿಎಸ್ ನಂತಹ ಸ್ಪರ್ದಾತ್ಮಕ ಪರೀಕ್ಷೆಗಳನ್ನು ಕೊಡಿಸಿ ಉತ್ತಮ ಅಧಿಕಾರಿಗಳನ್ನಾಗಿ ಮಾಡಬೇಕು ಎಂದರು.

ಪಟ್ಟಣದಲ್ಲಿ ಅರ್ಧಕ್ಕೆ ನಿಂತಿರುವ ಕುಂಬಾರರ ಸಮುದಾಯ ಭವನಕ್ಕೆ ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಾವು ಅಧಿಕಾರದಲ್ಲಿ ಇಲ್ಲದಿದ್ದರೂ 25 ಲಕ್ಷ ರೂಗಳ ಅನುದಾನ ಕೊಡಿಸಿರುವುದರ ಜತೆಗೆ ವೈಯಕ್ತಿಕ ವಾಗಿ 1 ಲಕ್ಷ ರೂಗಳನ್ನು ನೀಡಿದ್ದೇವು ಮತ್ತು ಅರ್ಕನಾಥ ರಸ್ತೆಯಲ್ಲಿರುವ ಶ್ರೀರಾಮ ಮಂದಿರಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವುದಲ್ಲದೆ ತಾಲೂಕಿನ ತಿಪ್ಪೂರು ಮತ್ತು ನಾಡಪ್ಪನಹಳ್ಳಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ತಲಾ 5 ಲಕ್ಷ ಅನುದಾನ ನೀಡಿದ್ದೇವೆ ಎಂದು ತಿಳಿಸಿದರು.
ಸೂಕ್ಷ್ಮಾತೀ ಸೂಕ್ಷ್ಮ ಸಮಾಜದವರಿಗೇ ರಾಜಕೀಯ ಸ್ಥಾನಮಾನ ನೀಡಬೇಕು ಎಂಬ ದೃಷ್ಟಿಯಿಂದ ಕುಂಬಾರ ಸಮಾಜದ ಕೆ.ಎಲ್.ರಾಜೇಶ್ ಅವರನ್ನು ಈ ಹಿಂದೆ ಪುರಸಭೆಗೆ ನಾಮನಿರ್ದೇಶನ ಮಾಡಿರುವುದಲ್ಲದೆ ಪ್ರಸ್ತುತ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಅವರು ಸಾಲಿಗ್ರಾಮ ಪದವಿ ಕಾಲೇಜಿಗೂ ಸಮಾಜದವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿಸಲಾಗಿದೆ ಎಂದರು.
ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ, ತಾಲೂಕು ಕುಂಬಾರರ ಸಂಘದ ಗೌರವಾಧ್ಯಕ್ಷ ತಿಮ್ಮಶೆಟ್ಟಿ, ಅಧ್ಯಕ್ಷ ವೀರಭದ್ರಶೆಟ್ಟಿ, ಸದಸ್ಯ ದಾಸಶೆಟ್ಟಿಶ್ರೀನಿವಾಸ್, ನಾರಾಯಣಶೆಟ್ಟಿ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದವನ್ನು ಸನ್ಮಾನಿಸಿ ಗೌರವಿಸಲಾಯಿತು.
ತಾ.ಪಂ.ಇಒ ವಿ.ಪಿ.ಕುಲದೀಪ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್ ಜಾಬೀರ್, ಸಮಾಜದ ಮುಖಂಡರಾದ ಜಯಶಂಕರ್ ವಿಷ್ಣುವರ್ಧನ್, ಪ್ರಸನ್ನ, ದೇವರಾಜು, ಲಕ್ಷ್ಮಣ, ಶೇಷಾದ್ರಿ, ಎಲೆಕ್ಟ್ರಿಕ್ ಮಹದೇವ್, ಬಸವರಾಜು, ಮುಕ್ಕೋಟಿ, ಶ್ರೀನಿವಾಸ್, ಕೋಳಿಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.








