ಕನಕದಾಸ ಜಯಂತಿಯನ್ನು ಎಲ್ಲೆಡೆ ಆಚರಿಸುತ್ತಿರುವ ಸಂದರ್ಭದಲ್ಲಿ ಕನಕದಾಸರ ಕುರಿತಂತೆ ಲೇಖಕರಾದ ಆನಂದಕುಮಾರ್ ಅವರು ಇಲ್ಲಿ ಬರೆದಿದ್ದಾರೆ… ಕನಕದಾಸರು ಪ್ರಸ್ತುತ ಸಂದರ್ಭದಲ್ಲಿ ಮುಖ್ಯರಾಗುವುದಕ್ಕೆ ಕಾರಣ ಜನತೆಯನ್ನು ಇಂದಿಗೂ ದಿಕ್ಕು ತಪ್ಪಿಸುತ್ತಿರುವ ರೋಗಗ್ರಸ್ಥ ಸಾಮಾಜಿಕ ವ್ಯವಸ್ಥೆಯಿಂದ ಪಾರು ಮಾಡಲು ಅವರು ಸೂಚಿಸಿರುವ ಧನ್ವಂತರೀ ಚಿಕಿತ್ಸಾ ಕ್ರಮದಿಂದ. ಅವೈಜ್ಞಾನಿಕವಾದ ನಂಬಿಕೆಗಳನ್ನು ಖಂಡಿಸುತ್ತಾ ಜನರ ಮನಸ್ಸಿನಲ್ಲಿ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಿದ್ದಾರೆ. ನೈತಿಕ ನಿಯಮಗಳನ್ನು ದಿಗ್ಧರ್ಶಿಸಿದ್ದಾರೆ. ಮುಖ್ಯವಾಗಿ ವಾಸ್ತವ ನೆಲೆಗಟ್ಟಿನ ಮೇಲೆ ಆದರ್ಶದ ಸುಖೀ ಸಮಾಜದ ನಿರ್ಮಾಣವೇ ಕನಕದಾಸರ ಮೂಲ ಆಶಯವಾಗಿತ್ತು.
ಲೋಕರೂಡಿಯ ವಿಚಾರಗಳನ್ನು ವಿಶ್ವಮಾನವತೆಯ ಪ್ರಜ್ಞೆಯಿಂದ ವಿಶ್ಲೇಷಿಸುತ್ತಾ ಅದನ್ನು ಮನುಕುಲದ ಕಲ್ಯಾಣಕ್ಕಾಗಿ ಪರಿಭಾವಿಸುವುದು ಎಲ್ಲ ಮಹಾಪುರುಷರ ಲಕ್ಷಣವಾಗಿದೆ. ಕನಕದಾಸರು ಈ ಮಹಾಪುರುಷರ ಸಾಲಿಗೆ ಸೇರಿದವರು. ಮಾನವ ಸಮಾಜದ ಮೇಲೆ ಅವರ ವ್ಯಕ್ತಿತ್ವವು ಬೀರಿದ ಪ್ರಭಾವಗಳು ಮತ್ತು ಕಾಲ ಪುರುಷನನ್ನು ಮೀರಿದ ಅವರ ಚಿಂತನೆಗಳಿಂದಾಗಿ ನಮಗೆ ಅವರು ಮಾನ್ಯರಾಗುತ್ತಾರೆ. ಅವರು ನಡೆದದ್ದು, ಹಾಡಿದ್ದು, ಹೇಳಿದ್ದು ಎಲ್ಲವು ಮಾನವ ಸಮಾಜದ ಕಲ್ಯಾಣಕ್ಕಾಗಿ ಹಾಗೂ ಪುರುಷಾರ್ಥಗಳೆ ಪ್ರಯೋಜನವನ್ನು ಪಡೆಯಲಿಕ್ಕಾಗಿ.

ಬದುಕಿನಲ್ಲಿ ಒಪ್ಪವಾಗಿ ಬಾಳಲು ಬೇಕಾದ ತಾತ್ತ್ವಿಕ ನೆಲೆಗಟ್ಟನ್ನು ಕನಕದಾಸರು ಒದಗಿಸಿದ್ದಾರೆ. ಕುಲದ ಮೇಲಿಂದ ಮನುಷ್ಯನ ಉನ್ನತಿಕೆಯನ್ನು ಅಳೆಯುವುದು ತಪ್ಪು ಎಂದು ಸಾರಿದ್ದಾರೆ. ಗುಣ, ಸ್ವಭಾವ, ಅರಿವುಗಳಿಂದ ಮಾತ್ರ ಮನುಷ್ಯನಿಗೆ ಕೀರ್ತಿ ಪ್ರತಿಷ್ಠೆಗಳು ಅಂಟಿಕೊಳ್ಳುತ್ತವೆಯೇ ಹೊರತು ಹುಟ್ಟು, ಜಾತಿಯಿಂದಲ್ಲ ಎಂಬ ತತ್ತ್ವವನ್ನು ತಮ್ಮ ಕಾವ್ಯ ಮತ್ತು ಕೀರ್ತನೆಗಳಲ್ಲಿ ಅಭಿವ್ಯಕ್ತಿಸಿದ್ದಾರೆ.
ಕನಕದಾಸರು ಪ್ರಸ್ತುತ ಸಂದರ್ಭದಲ್ಲೂ ಮುಖ್ಯರಾಗುವುದಕ್ಕೆ ಕಾರಣ ಜನತೆಯನ್ನು ಇಂದಿಗೂ ದಿಕ್ಕು ತಪ್ಪಿಸುತ್ತಿರುವ ರೋಗಗ್ರಸ್ಥ ಸಾಮಾಜಿಕ ವ್ಯವಸ್ಥೆಯಿಂದ ಪಾರು ಮಾಡಲು ಅವರು ಸೂಚಿಸಿರುವ ಧನ್ವಂತರೀ ಚಿಕಿತ್ಸೆ ಕ್ರಮದಿಂದ, ಅವೈಜ್ಞಾನಿಕವಾದ ನಂಬಿಕೆಗಳನ್ನು ಖಂಡಿಸುತ್ತಾ ಜನರ ಮನಸ್ಸಿನಲ್ಲಿ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಿದ್ದಾರೆ. ನೈತಿಕ ನಿಯಮಗಳನ್ನು ದಿಗ್ಭರ್ಶಿಸಿದ್ದಾರೆ. ಮುಖ್ಯವಾಗಿ ವಾಸ್ತವ ನೆಲೆಗಟ್ಟಿನ ಮೇಲೆ ಆದರ್ಶದ ಸುಖೀ ಸಮಾಜದ ನಿರ್ಮಾಣವೇ ಕನಕದಾಸರ ಮೂಲ ಆಶಯವಾಗಿತ್ತು.

ಕನಕದಾಸರು ಬಹುಮುಖೀ ವ್ಯಕ್ತಿತ್ವದವರು. ಪಂಪನಂತೆ ಕಲಿಯೂ ಹೌದು, ಕವಿಯೂ ಹೌದು. ದಾಸಸಾಹಿತ್ಯದ ಅಶ್ವಿನೀ ದೇವತೆಗಳಲ್ಲಿ ಒಬ್ಬರೆಂದು ಖ್ಯಾತಿಗೊಂಡಿದ್ದಾರೆ. ಕಲಿಯಾಗಿಯೂ, ಕವಿಯಾಗಿಯೂ, ಅನುಭಾವಿಯಾಗಿಯೂ ಹಾಗೂ ಹರಿದಾಸರಾಗಿಯೂ ಔನ್ನತ್ಯವನ್ನು ಪಡೆದವರು. ಕತ್ತೀವರಸೆ, ಕುಸ್ತಿ, ಅಶ್ವ ವಿದ್ಯೆಗಳಲ್ಲಿ ಯೋಗ್ಯ ತರಭೇತಿಯನ್ನು ಪಡೆದಿದ್ದ ತಿಮ್ಮಪ್ಪ ಯುದ್ಧಕಲೆ ಮತ್ತು ಆಡಳಿತದಲ್ಲಿ ಪ್ರಾವೀಣ್ಯತೆಯನ್ನು ಸಾಧಿಸಿದ್ದರು. ಯುದ್ಧವೆಂದರೆ ತಿಮ್ಮಪ್ಪನ ರೋಮ ನಿಮಿರುತ್ತಿತ್ತು. ಯುದ್ಧಭೂಮಿಗೆ ತಿಮ್ಮಪ್ಪ ಹೊಕ್ಕನೆಂದರೆ ಎದುರಾಳಿಗಳು ಚೆಲ್ಲಾಪಿಲ್ಲಿಯಾಗುತ್ತಿದ್ದರು. ಕನಕದಾಸರೇ ತಮ್ಮ ಕೀರ್ತನೆಯೊಂದರಲ್ಲಿ ಈ ಪ್ರಸಂಗವನ್ನು ಹೀಗೆ ಉಲ್ಲೇಖಿಸಿದ್ದಾರೆ-
ಕನಕದಳದಲಿ ಕಲೆತನೆಂದರೆ ಫೌಜು
ಕನಕುಮನಕಾಗುವುದು ಹರಿಯೆ
ಕನಕದಾಸರು ಕಾವ್ಯ, ಕೀರ್ತನೆ ಹಾಗೂ ಮುಂಡಿಗೆಗಳಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಬಸವಣ್ಣನ ಸಮಕಾಲೀನರಾದ ಅನೇಕ ವಚನಕಾರರು ಹೇಗೆ ಸಮಾಜದ ತಳವರ್ಗದಿಂದ ಬಂದರೋ ಹಾಗೆಯೇ ಕನಕದಾಸರು ಸಮಾಜದ ತಳವರ್ಗದಿಂದ ಬಂದವರು. ತನ್ನ ಕಾಲದ ಸಾಮಾಜಿಕ ಅವ್ಯವಸ್ಥೆಯನ್ನು ತಿದ್ದಲು ಪ್ರಯತ್ನಿಸಿದ ಸಮಾಜ ಸುಧಾರಕ ಮತ್ತು ಮೌನ ಕ್ರಾಂತಿಕಾರಿ. ವ್ಯಾಸರಾಯರ (1447–1539) ಎರಡು ಶಿಷ್ಯ ನಕ್ಷತ್ರಗಳಲ್ಲಿ ಒಬ್ಬರು ಪುರಂದರದಾಸರಾದರೆ ಮತ್ತೊಬ್ಬರು ಕನಕದಾಸರು. ಪುರಂದರದಾಸರು ಅಂದಿನ ಸಮಾಜದ ಸ್ಪಷ್ಟ ಚಿತ್ರಣವನ್ನು ಕೊಡುತ್ತಾ ತಮ್ಮ ಗುರುವಾದ ವ್ಯಾಸರಾಯರು ಅಂದಿನ ಪಟ್ಟಭದ್ರ ಹಿತಾಸಕ್ತಿಗಳ ವಿರೋಧವನ್ನು ಎದುರಿಸಿದ ಪ್ರಸಂಗವೊಂದನ್ನು ಉಲ್ಲೇಖಿಸಿದ್ದಾರೆ. ವ್ಯಾಸರಾಯರು ತೀರ್ಥವನ್ನು ಕೊಡುವಾಗ ಮೊದಲಿಗೆ ಕನಕದಾಸರನ್ನೇ ಕರೆದಾಗ ಅಲ್ಲಿನ ಸನ್ನಿವೇಶ ಚಿತ್ರಣವನ್ನು ಪುರಂದರರು ಹೀಗೆ ಕೊಡುತ್ತಾರೆ-

ತೀರ್ಥವನ್ನು ಕೊಡುವಾಗ ಕನಕನ್ನ ಕರೆಯಲು
ಧೂರ್ತರಾಗಿದ್ದ ವಿದ್ವಾಂಸರೆಲ್ಲ ಸಾರ್ಥಕವಾಯಿತು
ಇವನ ಸಂನ್ಯಾಸಿತನವೆಲ್ಲಾ ಪೂರ್ತಿಯಾಯಿತು
ಎನಲು ಯತಿಯು ನಗುತಿಹನು
ಕನಕದಾಸರ ಮೇಲೆ ದಯಮಾಡಲು ವ್ಯಾಸಮುನಿ ಮಠದ ಜನರೆಲ್ಲ ದೂರಿಕೊಂಬುವರು ಇದೆಲ್ಲವನ್ನೂ ಅನುಭವಿಸಿದ ಕನಕದಾಸರು ತಮ್ಮ ಕೀರ್ತನೆಗಳಲ್ಲಿ ವರ್ಣ ವ್ಯವಸ್ಥೆಯ ಕರಾಳತೆಯನ್ನು ಕಟುವಾಗಿ ಖಂಡಿಸುತ್ತಾರೆ.
’ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ
ಜನ್ಮ ಸಾರ್ಥಕವಿಲ್ಲದವರೆಲ್ಲ ಭಾಗವತರೆ’
ಕುಲಮಧ ಹಿಡಿದವರನ್ನು ಖಂಡಿಸುತ್ತಾ-
’ಕುಲಕುಲವೆನ್ನುತಿಹರು
ಕುಲವಾವುದು ಸತ್ಯ ಸುಜನರಿಗೆ?’ ಎನ್ನುತ್ತಾರೆ.

ತಾವರೆ ಹೂವಿನ ಹುಟ್ಟನ್ನು ಹೆಸರಿಸಿ, ಪರಾಶರ, ವಶಿಷ್ಟ, ನಾರದರ ಕುಲವನ್ನು ತಿಳಿಸಿ ಜಾತಿಯು ಹುಟ್ಟಿನಿಂದ ಬರುವಂಥದ್ದಲ್ಲ ಎಂದು ಸಾರುತ್ತಾರೆ.
ಬದುಕಿನಲ್ಲಿ ಆಶಾವಾದವನ್ನು ಮೂಡಿಸುವ ಪ್ರಸಿದ್ದ ಕೀರ್ತನೆಯೊಂದು ಹೀಗಿದೆ:-
’ತಲ್ಲಣಿಸದಿರು ಕಂಡ್ಯ ತಾಳುಮನವೇ
ಎಲ್ಲರೆನು ಸಲಹುವನು ಇದಕೆ ಸಂಶಯವಿಲ್ಲ’
ಎಂದು ಭಗವಂತನ ಬಗ್ಗೆ ಭರವಸೆಯನ್ನು ಮೂಡಿಸಲು ಪ್ರಯತ್ನಿಸಿದ್ದಾರೆ.
’ದಾಸರಲ್ಲಿ ಕವಿ’ ಎಂದು ಖ್ಯಾತಿ ಪಡೆದ ಇವರು ಪುರಂದರದಾಸರ ಸಮಕಾಲೀನರೇ ಆಗಿದ್ದಾರೆ. ಇವರ ಕೃತಿಗಳು ಪುರಂದರದಾಸರ ಕೃತಿಗಳಷ್ಟೇ ಮಹತ್ತ್ವವನ್ನು ಪಡೆದಿವೆ. ’ಮೋಹನ ತರಂಗಿಣಿ’, ’ಪರಿಭಕ್ತಿಸಾರ’, ’ರಾಮಧಾನ್ಯ ಚರಿತೆ’, ’ನಳಚರಿತೆ’ ಎಂಬ ಕೃತಿಗಳು ದಾಸಸಾಹಿತ್ಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿವೆ.
ತಮ್ಮ ಸಮಕಾಲೀನ ಸಮಾಜದಲ್ಲಿ ತಾಂಡವವಾಡುತ್ತಿದ್ದ ಜಾತಿ ವೈಷಮ್ಯದ ಸೂಕ್ಷ್ಮ ಎಳೆಗಳನ್ನು ’ರಾಮಧಾನ್ಯ ಚರಿತೆ’ ಯಲ್ಲಿ ಬಹು ಸೂಚ್ಯವಾಗಿ ಬಿಡಿಸಿದ್ದಾರೆ. ಈ ಕೃತಿಯಲ್ಲಿ ರಾಮನ ಕಥೆಯ ಜೊತೆಗೆ ರಾಮಧಾನ್ಯದ ಕಥೆಯೂ ಒಟ್ಟೊಟ್ಟಾಗಿ ಸಾಗುತ್ತದೆ. ಇದರ ಕಥೆಯು ರಾವಣನ ವಧೆಯ ನಂತರ ರಾಮನು ಸೀತೆ, ಲಕ್ಷ್ಮಣ ಹಾಗೂ ತನ್ನ ಸಹಚರರೊಂದಿಗೆ ಅಯೋಧ್ಯೆಗೆ ಮರಳುವ ಮಾರ್ಗಮಧ್ಯದಲ್ಲಿ ಶುರುವಾಗುತ್ತದೆ. ಇಲ್ಲಿ ವ್ರೀಹಿ (ಅಕ್ಕಿ) ಮತ್ತು ನರೆದಲೆಗ (ರಾಗಿ) ಧಾನ್ಯಗಳು ಈ ಲೋಕದಲ್ಲಿ ತಾನೇ ಶ್ರೇಷ್ಠ, ತಾನೇ ಶ್ರೇಷ್ಠ ಎಂಬ ವಾಗ್ವಾದಕ್ಕೆ ಇಳಿಯುತ್ತವೆ. ಅಕ್ಕಿಯು ರಾಗಿಯನ್ನು ಜರಿಯುತ್ತಾ-
’ಆತೆವಾಳರು ಬುಧರು ಜರೆದು ನಿರಾಕರಿಸಿ
ಬಿಡಲಂತು ನೀ ಶೂದ್ರಾನ್ನವಾದೆ’
ಎನ್ನುವ ಮಾತು ಮೇಲ್ವರ್ಗದವರು ಸಾಮಾಜಿಕವಾಗಿ ಕೆಳಸ್ತರದಲ್ಲಿದ್ದ ಸಮುದಾಯದವರನ್ನು ನೋಡುವ ದೃಷ್ಟಿಕೋನವನ್ನು ಸಂಕೇತಿಸುತ್ತದೆ. ರಾಗಿಯೂ ಕುಡ ಅಕ್ಕಿಯ ಹೀಯಾಳಿಕೆಗೆ ಪ್ರತಿಕ್ರಿಯೆಯನ್ನು ನೀಡುತ್ತಾ ’ಹೆಣದ ಬಾಯಿಗೆ ತುತ್ತು ನೀನಹೆ’ ಎಂದು ತನ್ನ ಪ್ರತಿಭಟನಾತ್ಮಕ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳುತ್ತದೆ. ಕ್ಷಾಮ ತಲೆದೋರಿದಾಗ ಮನುಕುಲ ತಾನೇ ಬೇಕಾಗುತ್ತದೆ ಎಂಬ ಮನೋವಾಂಛೆಗೆ ಇಲ್ಲಿ ಅಭಿವ್ಯಕ್ತಿ ದೊರಕಿದೆ.

ಇವರಿಬ್ಬರ ವಾಗ್ವಾದವನ್ನು ಗಮನಿಸಿದ ರಾಮನು ಈ ವ್ಯಾಜ್ಯವನ್ನು ಬಗೆಹರಿಸಲಿಕ್ಕಾಗಿ ಅವರಿಬ್ಬರಿಗೆ ಸೆರೆಯೊಳಗಾರು ತಿಂಗಳು ಶಿಕ್ಷೆ ವಿಧಿಸಿ, ಅವಧಿಯ ಬಳಿಕ ಅವರ ಪೈಕಿ ಯಾರು ಶ್ರೇಷ್ಠರು ಎಂಬುದನ್ನು ಗುರುತಿಸೋಣ ಎಂದು ತಿಳಿಸಿ ಅಯೋಧ್ಯೆಗೆ ತೆರಳುತ್ತಾನೆ. ಅಯೋಧ್ಯೆಯಲ್ಲಿ ಪಟ್ಟಾಭಿಷಿಕ್ತನಾದ ರಾಮನು ಆರು ತಿಂಗಳ ಬಳಿಕ ಸೆರೆಯಲ್ಲಿದ್ದ ನರೆದಲೆಗ (ರಾಗಿ) ಹಾಗೂ ವ್ರೀಹಿ (ಅಕ್ಕಿ)ಗನನ್ನು ತನ್ನ ಆಸ್ಥಾನಕ್ಕೆ ಕರೆಯಿಸಿಕೊಳ್ಳುತ್ತಾನೆ. ಅಂದಿನ ನ್ಯಾಯ ತೀರ್ಮಾನ ಸಭೆಯಲ್ಲಿ ಇಂದ್ರ, ನಾರದ ಮೊದಲಾದವರೂ ನೆರೆದಿರುತ್ತಾರೆ. ಸೆರೆಮನೆಯ ವಾಸದಿಂದ ಬಂದ ಆ ಇಬ್ಬರನ್ನೂ ಪರೀಕ್ಷಿಸಿದ ಸಭೆಯು ಅವರ ಗುಣದ, ಗುಣಮಟ್ಟದ ಆಧಾರದ ಮೇಲೆ ತೀರ್ಪು ನೀಡುತ್ತದೆ.
ಸೆರೆಯಲ್ಲಿದ್ದ ಆರು ತಿಂಗಳ ಕಾಲದಲ್ಲಿ ನರೆದಲೆಗ ಏನೂ ಕುಂದಾಗದೆ ಮೊದಲಿದ್ದ ಹಾಗೆಯೇ ಉಳಿದಿದ್ದರಿಂದ ’ನವಧಾನ್ಯಗಳಲ್ಲಿ ನರೆದಲೆಗನೇ ಸಮರ್ಥನು’ ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತವಾಗುತ್ತದೆ. ಅದೇ ಆರು ತಿಂಗಳಲ್ಲಿ ಸೆರೆಯಲ್ಲಿದ್ದ ವ್ರೀಹಿಯು ಕರಗಿ ಕುಂದಾಗಿರುತ್ತದೆ. ಹೀಗಾಗಿ ವ್ರೀಹಿಯು ನವಧಾನ್ಯಗಳಲ್ಲಿ ಅಸಮರ್ಥನು ಎಂಬ ತೀರ್ಮಾನಕ್ಕೆ ಬರಲಾಗುತ್ತದೆ. ಆ ಬಳಿಕ ರಾಮನು ’ನರೆದಲಗ’ನನ್ನು ಬಳಿಗೆ ಕರೆದು ಅದಕ್ಕೆ ’ರಾಘವ’ ನೆಂದು ನಾಮಕರಣ ಮಾಡುತ್ತಾನೆ. ಹಾಗಾಗಿ ರಾಘವನೇ ’ರಾಗಿ’ ಎನಿಸಿಕೊಂಡಿತು. ಆ ಸಭೆಯಲ್ಲಿ ಅಪಮಾನಕ್ಕೆ ಒಳಗಾದ ವ್ರೀಹಿಯನ್ನು ರಾಮನು ಹತ್ತಿರಕ್ಕೆ ಕರೆದು ಹೀಗೆ ಸಮಾಧಾನ ಪಡಿಸುತ್ತಾನೆ.

ದೀನರಲಿ ದಾರಿದ್ರ್ಯ ಜನದಲಿ
ನೀನು ನಿರ್ದಯವೆಂದೆವಲ್ಲದೆ
ಹೀನಗಳೆದವರಲ್ಲ ನಿನ್ನನು
ನಾವು ಈ ಸಭೆಯೊಳಗೆ
ನಂತರ ರಾಮನು ವ್ರೀಹಿಯ ಹಲವು ಸುಗುಣಗಳನ್ನು ಹೊಗಳಿ ಅಕ್ಕಿ ಮತ್ತು ರಾಗಿ ಇಬ್ಬರಲ್ಲೂ ಪರಸ್ಪರ ಗೆಳೆತನವನ್ನು ಮೂಡಿಸಿ ಅವರನ್ನು ಬೀಳ್ಕೊಡುತ್ತಾನೆ.
ಜಗತ್ತಿನಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ, ಮೇಲ್ವರ್ಗ, ಕೆಳವರ್ಗ ಎಂಬ ತಾರತಮ್ಯ ತೊಲಗಿದರೆ ಮಾತ್ರ ಸುಖೀ ಬಾಳ್ವೆ ಸಾಧ್ಯ. ಉತ್ತಮ ಸಮಾಜಕ್ಕೆ ಈ ಇಬ್ಬರ ಸಹಕಾರ, ಸಾಮರಸ್ಯಗಳು ಬಹಳ ಮುಖ್ಯ ಎಂಬ ಉನ್ನತ ಧ್ಯೇಯವನ್ನು ಕನಕದಾಸರು ಮನುಕುಲಕ್ಕೆ ಈ ರೀತಿ ತೋರಿಸಿದ್ದಾರೆ. ಕನಕದಾಸರ ಮಹೋನ್ನತ ಆಶಯವನ್ನು ಅರಿತುಕೊಂಡು ಪಾಲಿಸಿದರೆ ಮಾನವೀಯ ನೆಲೆಗಟ್ಟಿನ ಸಮಾಜವನ್ನು ಕಾಣಲು ಸಾಧ್ಯವಾಗುತ್ತದೆ.








