ಮೈಸೂರು: ಕೇರಳ ಸರ್ಕಾರಕ್ಕೆ ಸೇರಿದ ಕೆಎಸ್ ಆರ್ ಟಿಸಿ ಬಸ್ ಹೊತ್ತಿ ಉರಿದ ಘಟನೆ ನಂಜನಗೂಡಿನ ಹೊಸಹಳ್ಳಿ ಗೇಟ್ ಬಳಿ ಗುರುವಾರ ಮಧ್ಯೆರಾತ್ರಿ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಬಸ್ ನಲ್ಲಿದ್ದ 40 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೇರಳ ಸರ್ಕಾರಕ್ಕೆ ಸೇರಿದ KL15 A 2444 ನೊಂದಣಿ ಸಂಖ್ಯೆ ಹೊಂದಿದ್ದ ಕೆಎಸ್ ಆರ್ ಟಿಸಿ ಬಸ್ ಮೈಸೂರಿನಿಂದ ಕೇರಳದ ಕಡೆಗೆ ಗುರುವಾರ ಮಧ್ಯೆರಾತ್ರಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮಧ್ಯೆ ರಾತ್ರಿಯಾಗಿದ್ದರಿಂದ ಬಸ್ ನಲ್ಲಿದ್ದ ಸುಮಾರು 40 ಪ್ರಯಾಣಿಕರ ಪೈಕಿ ಕೆಲವರು ನಿದ್ದೆಗೆ ಜಾರಿದ್ದರು. ಬಸ್ ಮೈಸೂರಿನಿಂದ ಹೊರಟು ನಂಜನಗೂಡು ಹೊಸಳ್ಳಿ ಗೇಟ್ ಬಳಿ ಚಲಿಸುತ್ತಿದ್ದಾಗ ಬಸ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ.
ತಕ್ಷಣವೇ ಚಾಲಕನ ಗಮನಕ್ಕೆ ಬಂದಿದ್ದು, ಎಚ್ಚೆತ್ತ ಚಾಲಕ ಬಸ್ ನ್ನು ನಿಲ್ಲಿಸಿ ತಕ್ಷಣವೇ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಎಬ್ಬಿಸಿ ಬಸ್ ನಿಂದ ಕೆಳಗಿಳಿಸಿದ್ದಾನೆ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ವೇಳೆ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಯಿತಾದರೂ ಅಷ್ಟರಲ್ಲೇ ಬೆಂಕಿ ಬಸ್ ನ್ನು ಆವರಿಸಿದ್ದು ದಿಗ್ಗನೆ ಹೊತ್ತಿ ಉರಿಯಲಾರಂಭಿಸಿತು. ಆ ನಂತರ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದರಾದರೂ ಅಷ್ಟರಲ್ಲೇ ಬಸ್ ಶೇ.70ರಷ್ಟು ಭಾಗ ಸುಟ್ಟು ಕರಕಲಾಗಿತ್ತು.

ನಂಜನಗೂಡು ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಕೇರಳಕ್ಕೆ ತೆರಳಬೇಕಿದ್ದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿ ಕಳುಹಿಸಿ ಕೊಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸದಿರುವುದೇ ಸಮಾಧಾನಪಡುವ ಸಂಗತಿಯಾಗಿದೆ. ಮಧ್ಯೆರಾತ್ರಿಯಲ್ಲಿ ಸಂಚರಿಸುವ ಬಸ್ ಗಳಲ್ಲಿ ಆಗಾಗ್ಗೆ ಬೆಂಕಿ ಕಾಣಿಸಿಕೊಂಡು ದುರ್ಘಟನೆ ಸಂಭವಿಸಿಸುವುದು ಮಾಮೂಲಿ ಎಂಬಂತಾಗಿದ್ದು, ರಾತ್ರಿ ವೇಳೆ ಪ್ರಯಾಣಿಸಲು ಪ್ರಯಾಣಿಕರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಮುಂದೆಯಾದರೂ ಇಂತಹ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಅಗತ್ಯವಾಗಿದೆ. ಅಲ್ಲದೆ ಈ ಸಂಬಂಧ ಕ್ರಮ ಕೈಗೊಳ್ಳುವುದು ಬಹುಮುಖ್ಯವಾಗಿದೆ. ಈಗಾಗಲೇ ಹಲವು ಪ್ರಕರಣಗಳಲ್ಲಿ ಪ್ರಯಾಣಿಕರು ಪ್ರಾಣ ಕಳೆದುಕೊಂಡಿರುವುದು ನಮ್ಮ ಕಣ್ಣ ಮುಂದೆಯೇ ಇದೆ ಹೀಗಾಗಿ ಎಚ್ಚೆತ್ತುಕೊಳ್ಳಲೇ ಬೇಕಾಗಿದೆ.








