ಕೆ.ಆರ್.ನಗರ(ಜಿಟೆಕ್ ಶಂಕರ್) : ರಾಜ್ಯದಲ್ಲಿ ಮಹಿಳಾ ಸಂಘಟನೆಗಳು ಮತ್ತು ಸಂಘ ಸಂಸ್ಥೆಗಳು ಅತ್ಯವಶ್ಯಕವಾಗಿದೆ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ಪಟ್ಟಣದ ಹೆಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ನಡೆದ ಒಕ್ಕಲಿಗರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಮಹಿಳೆಯರು ಸಂಘಟನೆಯ ಮೂಲಕ ಆರ್ಥಿಕ ಮತ್ತು ಸಂಕಷ್ಟದಲ್ಲಿರುವವರ ನೆರವಿಗೆ ದಾವಿಸಬೇಕು ಎಂದರು.

ಇತ್ತೀಚೆಗಿನ ದಿನಗಳಲ್ಲಿ 25 ವರ್ಷದ ಒಳಗಿನ ಹೆಣ್ಣು ಮಕ್ಕಳು ಸಣ್ಣಪುಟ್ಟ ವಿಚಾರಗಳಿಗೆ ಬೇಡದ ತೀರ್ಮಾನಗಳನ್ನು ತೆಗೆದುಕೊಂಡು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದು ಅಂತಹವರ ಬಳಿ ಸಂಘದ ಸದಸ್ಯರು ಸ್ವಯಂ ಪ್ರೇರಿತವಾಗಿ ಹೋಗಿ ಅವರಿಗೆ ತಿಳಿ ಹೇಳಿ ಅವರನ್ನು ಸರಿದಾರಿಗೆ ತಂದು ತಮ್ಮ ಜೀವನದ ಅರಿವನ್ನು ಅವರಿಗೆ ಮನವರಿಕೆ ಮಾಡುವ ಕೆಲಸ ಮಾಡಿ ಎಂದು ತಿಳಿಸಿದರು.
ಸಂಘದ ಮೂಲಕ ತಾವುಗಳು ಆರ್ಥಿಕವಾಗಿ ಸಬಲರಾಗುವುದರ ಜತೆಗೆ ಒಂದಷ್ಟು ಸಮಾಜ ಸೇವಾ ಕಾರ್ಯಗಳನ್ನು ಮಾಡುವಂತಾಗಬೇಕು ಎಂದು ಸಲಹೆ ನೀಡಿದ ಅವರು ಸಂಘಕ್ಕೆ ತಾವು ಸಹ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ನುಡಿದರು.
ತಾಲೂಕು ಒಕ್ಕಲಿಗರ ಸಂಘ ಮಹಿಳಾ ಸಂಘದ ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡುವಂತೆ ತಾಲೂಕು ಅಧ್ಯಕ್ಷ ಶಿವರಾಮ್ ಅವರ ಸೂಚಿಸಿದ ಸಾ.ರಾ.ಮಹೇಶ್ ಸಂಘಕ್ಕೆ 2.50 ಲಕ್ಷ ರೂ ವೈಯುಕ್ತಿಕವಾಗಿ ಭರಿಸುವುದರ ಜತೆಗೆ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡರ ಬಳಿಯೂ ಕೊಡಿಸುವುದಾಗಿ ಪ್ರಕಟಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮು, ಗೌರವಾಧ್ಯಕ್ಷ ಎಂ.ಟಿ.ಅಣ್ಣೇಗೌಡ, ಕಾರ್ಯದರ್ಶಿ ರಾಮಲಿಂಗು ಮುಖಂಡ ಎಸ್.ಪಿ.ತಮ್ಮಯ್ಯ, ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್ ಮಾತನಾಡಿದರು.
ಒಕ್ಕಲಿಗರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ರೂಪಮಂಜುನಾಥ್, ಉಪಾಧ್ಯಕ್ಷೆ ಶ್ವೇತಾಗೋಪಾಲ್, ಕಾರ್ಯದರ್ಶಿ ಶೀಲಾಚೇತನ್, ನಿರ್ದೇಶಕರಾದ ಭಾಗ್ಯಮ್ಮ, ಎಸ್.ಕೆ.ರಮ್ಯ, ರೂಪಶ್ರೀ, ಸುಮತಿ, ಮಮತಾ, ಪೂರ್ಣಿಮ, ಮೋಹನಾಂಭ, ನಂದಿನಿ ಸೇರಿದಂತೆ ಇನ್ನಿತರರು ಹಾಜರಿದ್ದರು.








