LatestMysore

ರೈತರ ನೆರವಿಗೆ ಬಾರದ ಸರ್ಕಾರಗಳು ಹೆಚ್ಚು ದಿನ ಉಳಿಯುವುದಿಲ್ಲ… ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೀಗೆ ಹೇಳಿದ್ದೇಕೆ?

ಕೆ.ಆರ್.ನಗರ(ಜಿಟೆಕ್ ಶಂಕರ್): ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶ ಮತ್ತು ಜನರ ಹಿತ ಮರೆತು ಜಾತಿ ಆಧಾರಿತವಾಗಿ ಕೆಲಸ ಮಾಡುತ್ತಿದ್ದು ರೈತರನ್ನು ಕಡೆಗಾಣಿಸುವ ಪ್ರವೃತ್ತಿ ಬೆಳೆಸಿಕೊಳ್ಳುತ್ತಿರುವುದು ಆತಂಕಕಾರಿ ವಿಚಾರ ಎಂದು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು

ಪಟ್ಟಣದ ಶ್ರೀರಾಮ ಬಡಾವಣೆಯ ಹೆಚ್.ಡಿ.ದೇವೇಗೌಡ ಸಮುದಾಯ ಭವನದಲ್ಲಿ ತಾಲೂಕು ಯುವ ರೈತ  ವೇದಿಕೆ ವತಿಯಿಂದ ಗುರುವಾರ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ತಾಲೂಕು ಮಟ್ಟದ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರೈತ ಬೆಳೆದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನೀಡಿ ಅವರ ನೆರವಿಗೆ ಬಾರದ ಸರ್ಕಾರಗಳು ಹೆಚ್ಚು ದಿನ ಉಳಿಯುವುದಿಲ್ಲ ಎಂದರು.

ರೈತರ ಹೆಸರೇಳಿಕೊಂಡು ಅವರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿ ಅಧಿಕಾರದ ಗದ್ದುಗೆ ಏರುವ ಸರ್ಕಾರಗಳು ರೈತ ದಿನಾಚರಣೆ ಆಚರಿಸುವ ಗೋಜಿಗೂ ಹೋಗುವುದಿಲ್ಲ ಇದನ್ನು ನಾವೆಲ್ಲ ಒಕ್ಕೊರಲಿನಿಂದ ಖಂಡಿಸಬೇಕು ಎಂದ ಅವರು ಎಂ.ಎಸ್.ಸ್ವಾಮಿನಾಥ್  ವರದಿಯನ್ನು ಯಥಾವತ್ತಾಗಿ ಜಾರಿ ಮಾಡಿ ಎಂದು ಹಲವು ವರ್ಷಗಳಿಂದ ರೈತರು ಹೋರಾಟ ಮಾಡಿಕೊಂಡು ಬರುತ್ತಿದ್ದರೂ ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಳುವ ಸರ್ಕಾರಗಳು ಹಣದ ಆಸೆಯಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ರಹದಾರಿ ನೀಡುತ್ತಿದ್ದು ಮುಂದೆ  ಇದನ್ನು ಬಿಟ್ಟು ಪ್ರತಿ ಪಂಚಾಯತಿಯಲ್ಲಿ ಕೃಷಿ ಕೇಂದ್ರಗಳನ್ನು ತೆರೆದು ರೈತರಿಗೆ ಆ ಮೂಲಕ ಸಲಹೆ ಸೂಚನೆ ಮತ್ತು ಮಾರ್ಗದರ್ಶನ ಕೊಡಿಸಬೇಕು ಎಂದು ಆಗ್ರಹಿಸಿದರು.

ಮೈಸೂರು  ಜಿಲ್ಲಾ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ಟಿ.ರವಿಕುಮಾರ್ ಮಾತನಾಡಿ ರಾಸಯನಿಕ ಗೊಬ್ಬರಗಳನ್ನು ಬಳಸದೆ ಸಾವಯವ ಮತ್ತು ದೇಶಿ ಪದ್ದತಿ ಕೃಷಿಯನ್ನು ಮಾಡುವ ಮೂಲಕ ಭಾರತ ಸಂಸ್ಕೃತಿಯನ್ನು ಕಾಪಾಡಿ ಸತ್ವಯುತ ಆಹಾರ ಉತ್ಪಾದಿಸಲು ಹೆಚ್ಚು ಗಮನಹರಿಸಬೇಕು.  ವರ್ಷವಿಡೀ ಸಂಕಷ್ಟದಲ್ಲಿ ಕೆಲಸ ಮಾಡಿ ಆಹಾರ ಉತ್ಪಾದನೆ ಮಾಡುವ ರೈತರಿಗೆ ಸೂಕ್ತ ಬೆಲೆ ದೊರೆಯದ ಹಿನ್ನಲೆಯಲ್ಲಿ ಅವರು ಸಂಕಷ್ಟಕ್ಕೀಡಾಗುತ್ತಿರುವುದರ ಜತೆಗೆ ಯುವ ರೈತರು ಕೃಷಿ ಕೇಂದ್ರ ವಿಮುಖರಾಗುತ್ತಿದ್ದು ಈ ವಿಚಾರಗಳನ್ನು ಸರ್ಕಾರ ಗಂಬೀರವಾಗಿ ಪರಿಗಣಿಸಬೇಕೆಂದರು.

ಪ್ರಗತಿ ಪರ ರೈತರನ್ನು ಸನ್ಮಾನಿಸಿ  ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಅವರು  ವಿಧಾನ ಸಭೆ ಅಧಿವೇಶನದಲ್ಲಿ  ರೈತರ ಸಮಸ್ಯೆಗಳನ್ನು ಚರ್ಚಿಸಿ ಅವುಗಳ ಪರಿಹಾರಕ್ಕೆ ಪ್ರಾಮಾಣಿಕ ವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರಲ್ಲದೆ ಪ್ರಗತಿಪರ ರೈತರನ್ನು ಸನ್ಮಾನಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಇಂಗಲುಕುಪ್ಪೆ ಕೃಷ್ಣೇಗೌಡ, ತಾಲೂಕು ಯುವ ರೈತ ವೇದಿಕೆ ಅಧ್ಯಕ್ಷ ರಾಂಪ್ರಸಾದ್, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಶಿವರಾಮು ಮಾತನಾಡಿದರು.  ಹಿರಿಯ ರೈತ ಮುಖಂಡ ಗರುಡಗಂಭಸ್ವಾಮಿ, ತಾಲೂಕು ರೈತ ಯುವ ವೇದಿಕೆಯ ಕನುಗನಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಜಿತೇಂದ್ರ, ಪ್ರಗತಿಪರ ರೈತ‌ ಕನುಗನಹಳ್ಳಿ ಕೆ.ಎಂ.ಅರುಣ್, ರೈತ ಮುಖಂಡರಾದ ಎಂ.ಜೆ.ಕುಮಾರ್, ರವಿಂದ್ರ, ವಿಶ್ವನಾಥ್, ಶ್ರೀನಿವಾಸ್, ಚಂದ್ರಶೇಖರ್ ಮತ್ತಿತರರು ಇದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want