ಕುಶಾಲನಗರ(ರಘು ಹೆಬ್ಬಾಲೆ): ತಾಲ್ಲೂಕು ಕೇಂದ್ರ ಕುಶಾಲನಗರ ಪಟ್ಟಣ ಸೇರಿದಂತೆ ಗಡಿಗ್ರಾಮಗಳಾದ ಹೆಬ್ಬಾಲೆ, ತೊರೆನೂರು ಶಿರಂಗಾಲ ಭಾಗದಲ್ಲಿ ಸೋಮವಾರ ಸಂಜೆ ಸುರಿದ ವರ್ಷಧಾರೆ ಅಪಾರ ಹಾನಿಯನ್ನುಂಟು ಮಾಡಿದೆ.
ಮಳೆಗಾಗಿ ಜನರು ಮುಗಿಲಕಡೆಗೆ ದೃಷ್ಟಿ ನೆಟ್ಟಿದ್ದರು. ಆದರೆ ಸುರಿದ ಮಳೆಯಿಂದ ತಂಪಾದರೂ ಅಪಾರ ಹಾನಿ ಸಂಭವಿಸಿದೆ. ಶಿರಂಗಾಲ ಪಂಚಾಯಿತಿ ವ್ಯಾಪ್ತಿಯ ಚಿಕ್ಕನಾಯಕನ ಹೊಸಹಳ್ಳಿ ನಿವಾಸಿ ಎಸ್.ಎಚ್.ಸುಂದರ ಎಂಬುವರ ಮನೆಯ ಮೇಲ್ಛಾವಣಿಗಳು ಗಾಳಿ ಮಳೆಗೆ ಸಂಪೂರ್ಣ ಹಾನಿಯಾಗಿದ್ದು, ಜೋರಾಗಿ ಸುರಿದ ಮಳೆಯಿಂದ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು ನಲ್ವತ್ತು ಚೀಲ ಭತ್ತ ಹಾಗೂ ರಾಗಿ ಮನೆಯ ಸಾಮಾಗ್ರಿಗಳು ಮಳೆ ನೀರಿಗೆ ಸಿಲುಕಿ ಹಾನಿಯಾಗಿದೆ.

ಮನೆ ತುಂಬೆಲ್ಲ ನೀರು ನಿಂತ ಪರಿಣಾಮ ಧಾನ್ಯಗಳ ಚೀಲ ನೀರಿನಿಂದ ಅವರಿಸಿ ಹಾನಿಯಾಗಿದೆ. ಅಲ್ಲದೆ ದನದ ಕೊಟ್ಟಿಗೆಗೂ ಹಾನಿಯಾಗಿದೆ. ಅದೇ ರೀತಿ ಗ್ರಾಮದ ಹರೀಶ್ ಹಾಗೂ ಪಾಲ್ಗುಣಿ ಎಂಬುವವರ ಮನೆ ಮೇಲೆ ತೆಂಗಿನ ಮುರಿದು ಬಿದ್ದ ಹಿನ್ನೆಲೆ ಮನೆಗೆ ಅಪಾರ ಹಾನಿ ಉಂಟಾಗಿದೆ. ಹೊಗೆಸೊಪ್ಪು ಮನೆ ಹಾಗೂ ಕೊಟ್ಟಿಗೆಗೂ ಹಾನಿ ಉಂಟಾಗಿದೆ. ಮರಬಿದ್ದ ಪರಿಣಾಮ ಮನೆ ಮುಂದೆ ನಿಲ್ಲಿಸಿದ್ದ ಹೊಸ ಟ್ರಾಕ್ಟರ್ ಗೂ ಹಾನಿಯಾಗಿದೆ. ಮನೆ ಮೇಲೆ ಬಿದ್ದ ಮರವನ್ನು ಅರಣ್ಯ ಸಿಬ್ಬಂದಿಗಳು ತೆರವುಗೊಳಿಸಿದರು.

ಮನೆಯಲ್ಲಿ ಕುಟುಂಬಸ್ಥರು ಅಪಾಯದಿಂದ ಪಾರಾಗಿದ್ದಾರೆ. ಮನೆ ಬಳಿ ಇದ್ದ ವಿದ್ಯುತ್ ಕಂಬ ಕೂಡ ಮುರಿದು ಬಿದ್ದಿದೆ. ಕುಶಾಲನಗರ ಪಟ್ಟಣದಲ್ಲಿ ಹಾಗೂ ಹೆಬ್ಬಾಲೆ, ತೊರೆನೂರು, ಗುಡ್ಡೆಹೊಸೂರು ಹಾಗೂ ಚಿಕ್ಕ ಅಳುವಾರ ಗ್ರಾಮಗಳಲ್ಲಿ ಸಂಜೆ ದಿಢೀರನೆ ಜೋರಾಗಿ ಸುರಿಯಿತು. ಗುಡ್ಡೆಹೊಸೂರು, ಅಳುವಾರ ಹಾಗೂ ತೊರೆನೂರು ಭಾಗದಲ್ಲಿ ಆಲಿಕಲ್ಲು ಸಹಿತ ಮಳೆ ಬಂದಿತು.
ಜೋರಾಗಿ ಬಂದ ಮಳೆಯಿಂದ ಚರಂಡಿಗಳಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿಯಿತು. ಬೆಳಿಗ್ಗೆ ಯಿಂದ ತೀವ್ರವಾಗಿದ್ದ ಬಿಸಿಲಿನ ಧಗೆ ಮಧ್ಯಾಹ್ನ ನಂತರ ಮೋಡಕವಿದ ವಾತಾವರಣ ಇತ್ತು. ಸಂಜೆ ವೇಳೆ ಬಂದ ಮಳೆಯಿಂದ ವಾತಾವರಣ ತಂಪಾಗಿಸಿತು. ಜೋರು ಗಾಳಿಯೊಂದಿಗೆ ಸುರಿದ ಆಲಿಕಲ್ಲು ರೈತರ ಕೃಷಿ ಚಟುವಟಿಕೆಗೆ ಹಾಗೂ ಶುಂಠಿ ಕೃಷಿಕರಿಗೂ ಸಂತಸ ತಂದಿದೆ.

ಸ್ಥಳಕ್ಕೆ ಕಂದಾಯ ನಿರೀಕ್ಷಕ ಸಂತೋಷ, ಗ್ರಾಮ ಲೆಕ್ಕಿಗ ಗುರುದರ್ಶನ್ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಿ.ಆರ್.ಹೇಮಲತಾ, ಕಾರ್ಯದರ್ಶಿ ಮನ್ಸೂರ್ ಖಾನ್ ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.








