ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಬಡತನದಿಂದ ಯಾವ ವಿದ್ಯಾರ್ಥಿಯು ಶಿಕ್ಷಣ ವಂಚಿತರಾಗಬಾರದು, ಶಿಕ್ಷಣ ವ್ಯಕ್ತಿಯ ಬದುಕನ್ನು ರೂಪಿಸುವುದಲ್ಲದೆ, ದೇಶದ ಸಮಗ್ರ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದೆ ಎಂದು ಮುಳ್ಳೂರು ಕ್ಲಸ್ಟರ್ ನ ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಎಸ್.ವಸಂತಕುಮಾರ್ ಹೇಳಿದರು.
ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಮಾಚಬಾಯನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಾಚಬಾಯನಹಳ್ಳಿ ಗ್ರಾಮದ ನಿವೃತ್ತ ಹಿರಿಯ ಅಧಿಕಾರಿಗಳಾದ ಈರಪ್ಪನಾಯಕ ಮತ್ತು ಶ್ರೀಮತಿ ಜಲಜಾಕ್ಷಿ ಕುಟುಂಬದ ಸುಪುತ್ರ ರಾದ ದಿವಂಗತ ಶ್ರೀ ಪ್ರಮೋದ್ ರವರ 40 ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಶಾಲೆಯ ಎಲ್ಲಾ ಮಕ್ಕಳಿಗೆ ಸರಿಸುಮಾರು 10 ಸಾವಿರ ಮೊತ್ತದ “ಉಚಿತ ನೋಟ್ ಬುಕ್ -ಕಲಿಕಾ ಸಾಮಾಗ್ರಿಗಳು ಮತ್ತು ಸಿಹಿ ವಿತರಣಾ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಸಮಾಜದಲ್ಲಿ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣ ದೊರೆಯಬೇಕು, ಆ ಮೂಲಕ ಜ್ಞಾನ, ಕೌಶಲ್ಯ, ಉತ್ತಮ ಸಂಸ್ಕಾರ ಬೆಳೆಯುವುದರಿಂದ ಸಮಾಜದಲ್ಲಿ ಸಮಾನತೆ, ಶಾಂತಿ, ಮತ್ತು ಅಭಿವೃದ್ಧಿ ಸಾಧ್ಯವಾಗುತ್ತದೆ. ಅದಕ್ಕಾಗಿ ಸಮುದಾಯದ ಸಹಕಾರ ಅತ್ಯಗತ್ಯವಾಗಿದೆ ಎಂದು ತಿಳಿಸುತ್ತಾ, ನಿವೃತ್ತ ನೌಕರರಾದ ಶ್ರೀ ಈರಪ್ಪನಾಯಕ ಮತ್ತು ಶ್ರೀಮತಿ ಜಲಜಾಕ್ಷಿ ಕುಟುಂಬದ ಸಾಮಾಜಿಕ ಕಳಕಳಿ ಮತ್ತು ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಲಾಯಿತು.
ಶಾಲೆಯ ಎಲ್ಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಉಚಿತ ನೋಟ್ ಬುಕ್, ಕಲಿಕಾ ಉಪಕರಣಗಳು, ಮತ್ತು ಸಿಹಿಯನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗೇಶ, ಹರವೆರಾಮೇನಹಳ್ಳಿ ರಾಜು, ಜಾಬಗೆರೆ ಆನಂದ, ಮುಖ್ಯ ಶಿಕ್ಷಕ ಸ್ವಾಮಿ, ಸಹ ಶಿಕ್ಷಕಿ ಕಮಲಾಕ್ಷಿ, ಗ್ರಾಮಸ್ಥರು, ಅಡುಗೆ ಸಿಬ್ಬಂದಿ, ಶಾಲಾ ಮಕ್ಕಳು ಉಪಸ್ಥಿತರಿದ್ದರು.








