CinemaLatest

ಕರಾವಳಿಯ ಹುಡ್ಗಿ ಚಂದ್ರಕಲಾ  ಚಂದನವನದಲ್ಲಿ ಮಿಂಚಿ ಮರೆಯಾಗಿದ್ದು ಹೇಗೆ? ಇಲ್ಲಿದೆ ಲೈಫ್ ಸ್ಟೋರಿ!

ನಾಲ್ಕೈದು ದಶಕಗಳ ಹಿಂದಿನ ಸಿನಿಮಾ ನಟಿಯರ ನಡುವೆ ಒಬ್ಬರಾಗಿ ಮಿಂಚಿದವರು ಚಂದ್ರಕಲಾ… ಇವತ್ತಿನ ತಲೆಮಾರಿಗೆ ಅವರ ಬಗ್ಗೆ ಗೊತ್ತಿರಲಿಕ್ಕಿಲ್ಲವೇನೋ? ಆದರೆ ಹಳೆಯ ಸಿನಿಮಾ ನೋಡಿದವರಿಗೆ ಇವರ ಮುಖಪರಿಚಯವಿರುತ್ತದೆ. ಚಂದನವನದಲ್ಲಿ ಅದೆಷ್ಟೋ ತಾರೆಗಳು ಬಂದು ಹೋಗಿದ್ದಾರೆ. ಇವತ್ತು ನಾವೇನಾದರೂ ನೆನಪು ಮಾಡಿಕೊಳ್ಳುತ್ತೇವೆ ಎನ್ನುವುದಾದರೆ ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆಯೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂತಹ ನಟಿಯರ ಪೈಕಿ ಚಂದ್ರಕಲಾ ಒಬ್ಬರಾಗಿದ್ದಾರೆ. ಹಾಗಾದರೆ ಯಾರು ಈ ಚಂದ್ರಕಲಾ? ಎಂಬ ಪ್ರಶ್ನೆಗೆ ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರ ಪರಿಚಯವನ್ನು ಇಲ್ಲಿ ಮಾಡಿಕೊಟ್ಟಿದ್ದಾರೆ..

ಚಂದನವನ ಚಿತ್ರರಂಗದಲ್ಲಿ ಆಗಿನ ಕಾಲದ ಖ್ಯಾತ ನಟ, ನಿರ್ಮಾಪಕ ನಿರ್ದೇಶಕ ಎಂ.ಎಸ್.ನಾಯಕ್ ರವರ ಮೂವರು ಪುತ್ರಿಯರಲ್ಲಿ ಚಂದ್ರಕಲಾ ಕೂಡ ಒಬ್ಬರು. 1950ನೇ ಇಸವಿಯ ಆಸುಪಾಸಲ್ಲಿ ಉನ್ನತ ಮಧ್ಯಮ ವರ್ಗದ ಸುಸಂಸ್ಕೃತ ವಿದ್ಯಾವಂತ ಕುಟುಂಬದಲ್ಲಿ ಜನಿಸಿದ ಹುಡುಗಿಯು ಮಾಧ್ಯಮಿಕ ಶಾಲೆಯ ವಿದ್ಯಾರ್ಥಿನಿ ಇದ್ದಾಗಲೇ ಫ್ಯಾನ್ಸಿ ಡ್ರೆಸ್ ಏಕಪಾತ್ರಾಭಿನಯ ಮಕ್ಕಳನಾಟಕ ಮುಂತಾದ ಪಠ್ಯೆತರ ಚಟುವಟಿಕೆಯ ಸ್ಫರ್ಧೆಗಲಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿದ್ದ ಪ್ರತಿಭಾವಂತೆ.

ಇಂತಹ ಅಪ್ರತಿಮ ಪೋರಿಯನ್ನು ಮನೆಯಲ್ಲಿ ಪೋಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಸಂಭಾಳಿಸುವುದೇ ತ್ರಾಸವಾಗಿತ್ತು. ಕರ್ನಾಟಕ ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮೂಲದ ಈ ಬಾಲಪ್ರತಿಭೆ ಓದಿನಲ್ಲೂ ಜಾಣೆಯಾಗಿದ್ದಳು. ಈ ಪರಿಯ ಕಲಾವಲ್ಲಭೆಯು ಮುಂದೊಂದಿನ ದೇಶದ ಮನೆ ಮಾತಾಗುವಳು, ದುರಂತ ಅಂತ್ಯ ಕಾಣುವಳು, ಎಂದು ಯಾರೂ ಊಹಿಸಿರಲಿಲ್ಲ. ಆಗಿನ ಭಾರತದ ಫಿಲಂ ಇಂಡಷ್ಟ್ರಿಯಲ್ಲಿ ದಿಗ್ಗಜರೆನಿಸಿದ್ದ ಎಂ.ಎಸ್.ನಾಯಕ್, ಚಂದ್ರಕಲಾಳ ನಿಜ ಜೀವನದ ಫಾದರ್ ಆಗಿದ್ದು ಸಹಜ.

ಆದರೆ ಮಗಳ ಚಿತ್ರರಂಗದ ವೃತ್ತಿಜೀವನದಲ್ಲೂ ಗಾಡ್ ಫಾದರ್‍ ಆಗಿ ಆಕೆಯ ಸಕಲ ಅಭಿವೃದ್ಧಿಗಾಗಿ ಬೆಂಬಲ ನೀಡಿ ತಮ್ಮ ಇಬ್ಬರು ಹೆಣ್ಣುಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪ್ರೋತ್ಸಾಹ ನೀಡಿದರು ಎಂಬುದೆ ಆಶ್ಚರ್ಯದ ಇತಿಹಾಸ. ಚಂದ್ರಕಲಾ ಸೋದರಿ ಅಮೃತಕಲಾ ದ.ಭಾರತದ ಚಿತ್ರಗಳಲ್ಲಿ ಮಾತ್ರವಲ್ಲದೇ ಕನ್ನಡ ಚಿತ್ರಗಳಲ್ಲೂ ಸಹ ನಟಿಸಿದರು.

1963ರಲ್ಲಿ ಜೀವನತರಂಗ ಕನ್ನಡ ಚಿತ್ರದ ಮೂಲಕ ಪಾದಾರ್ಪಣೆ. 13ನೇ ವಯಸ್ಸಿನಿಂದ 48ನೇ ವಯಸ್ಸಿನವರೆಗೆ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಸೊಗಸಾಗಿ ನಟಿಸಿ ಜಯಭೇರಿ ಬಾರಿಸಿದ್ದಲ್ಲದೇ ಇವರ ಮಾತೃಭಾಷೆಯಾದ ತುಳು ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡರು. ಮೂರು ದಶಕಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ದೇಶಾದ್ಯಂತ ಖ್ಯಾತರಾದರು.

ಕನ್ನಡ ಚಿತ್ರಗಳಿಗಿಂತ ಹೆಚ್ಚು ಸಂಖ್ಯೆ ತೆಲುಗು-ತಮಿಳು ಚಿತ್ರಗಳಲ್ಲಿ ನಟಿಸಿದ ಏಕೈಕ ಕನ್ನಡದ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಮೇರುನಟರಾದ ಡಾ.ರಾಜಕುಮಾರ್, ಕಲ್ಯಾಣಕುಮಾರ್, ಉದಯಕುಮಾರ್, ರಾಜಾಶಂಕರ್, ರಾಜೇಶ್, ರಮೇಶ್, ಕೆ.ಎಸ್.ಅಶ್ವಥ್, ಶಿವಾಜಿಗಣೇಶನ್, ಎಂ.ಜಿ.ರಾಮಚಂದ್ರನ್, ಎನ್.ಟಿ.ರಾಮರಾವ್, ಎ.ನಾಗೇಶ್ವರರಾವ್, ಶ್ರೀಕಾಂತ್, ಕೃಷ್ಣ, ಪ್ರೇಂನಜೀರ್, ಮುಮ್ಮುಟ್ಟಿ, ಮುಂತಾದ ಸೂಪರ್ ಸ್ಟಾರ್ ಗಳ ಜತೆ ನಟಿಸುವ ಮೂಲಕ ದೇಶದ ಮೇರು ನಟಿಯರ ಸಾಲಿಗೆ ಸೇರಿದರು. ವಿವಿಧ ಭಾಷೆಯ ಸಿನಿಮಾಗಳಲ್ಲಿ ನೀಡಿದ ಉತ್ತಮ ಅಭಿನಯಕ್ಕೆ ಎರಡು ಬಾರಿ ಶ್ರೇಷ್ಠ ನಟಿ, ರಾಷ್ಟ್ರ ಪ್ರಶಸ್ತಿ ಗಳಿಸಿದ್ದಲ್ಲದೇ ಏಳು ಬಾರಿ ವಿವಿಧ ರಾಜ್ಯಗಳ ಶ್ರೇಷ್ಠ ನಟಿ, ರಾಜ್ಯ ಪ್ರಶಸ್ತಿ ಗಳಿಸಿದರು.

ಅತ್ಯಂತ ಸೌಮ್ಯ ಪಾತ್ರಗಳಿಗೆ ಮೀಸಲಾಗಿದ್ದ ಚಂದ್ರಕಲಾ ಕೆಲವು ಚಿತ್ರಗಳಿಗೆ ನಿರ್ಮಾಪಕಿ ಆಗಿದ್ದರು. ಡಾ.ರಾಜಕುಮಾರ್ ಎದುರು ಹೀರೋಯಿನ್ ಪಾತ್ರದಲ್ಲಿ ಕಾಣಿಸಿದ್ದಕ್ಕಿಂತ ಹೆಚ್ಚಾಗಿ ತಂಗಿಯ ಪಾತ್ರವನ್ನೇ ನಿರ್ವಹಿಸುವ ಮೂಲಕ ನಾಡಿನಾದ್ಯಂತ ಕೀರ್ತಿಯ ಶಿಖರ ತಲುಪಿ ಜನಪ್ರಿಯರಾದರು. ಒಂದೇಬಳ್ಳಿಯಹೂಗಳು ಚಿತ್ರದ “ಅಣ್ಣಾ…ನಿನ್ನ… ಸೋದರಿಯನ್ನ… ಮರೆಯದಿರು… ಎಂದೆಂದು… ಓಅಣ್ಣಾ…” ಹಾಡಿನ ದೃಶ್ಯಕ್ಕೆ  ವಾತ್ಸಲ್ಯಮಯಿ ತಂಗಿಯಾಗಿ ಮನೋಜ್ಞ ಅಭಿನಯ ನೀಡುವ ಮೂಲಕ ಶೇ.100ರಷ್ಟು ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿದ್ದು ಭಾವನಾತ್ಮಕ ಇತಿಹಾಸ.

ಇದೇ ಚಿತ್ರಗೀತೆ 25 ವರ್ಷಕಾಲ ರಾಜ್ಯದ ಪ್ರತಿಯೊಂದು ಕಾರ್ಯಕ್ರಮದ ಆರ್ಕೆಷ್ಟ್ರಾ, ರೇಡಿಯೋ, ಮೈಕ್‍ಸಿಸ್ಟಂ ಮೂಲಕ ಧೂಳೆಬ್ಬಿಸಿ ಸಂಚಲನ ಉಂಟುಮಾಡಿದ್ದು ಹಾಗೂ ಈಗಲೂ ಸಹ ಇದನ್ನು ಕೇಳಲು, ನೋಡಲು ಆಪ್ಯಾಯಮಾನವಾಗಿದೆ. ಪಾರ್ವತಿಕಲ್ಯಾಣ, ರೌಡಿರಂಗಣ್ಣ, ಪುನರ್ಜನ್ಮ, ಮಾರ್ಗದರ್ಶಿ, ಜೇನುಗೂಡು, ಆನಂದಕಂದ, ಬೇಡಿಬಂದವಳು,  ಪುಣ್ಯಪುರುಷ, ಮನಶ್ಯಾಂತಿ, ಚದುರಂಗ, ಅಮರಭಾರತಿ,  ಮಗಮೊಮ್ಮಗ, ಮನೆಬೆಳಕು, ಒಂದೇರೂಪಎರಡುಗುಣ, ಶ್ರೀರಾಘವೇಂದ್ರವೈಭವ, ಮುಂತಾದ ಅನೇಕ ಸಿನಿಮಾಗಳಲ್ಲಿ ಇವರ ಅಭಿನಯ ಚಿರಸ್ಮರಣೀಯ. ವಿವಾಹದ ನಂತರ ರೇಷ್ಮಾ ಘಟಾಲ ಎಂಬ ಏಕೈಕ ಪುತ್ರಿಯೊಡನಿದ್ದು 1980ರಲ್ಲಿ ಚಿತ್ರರಂಗಕ್ಕೆ ವಿದಾಯ ಹೇಳಿ ನಿವೃತ್ತ ಜೀವನ ಸಾಗಿಸುತ್ತಿದ್ದರು.

ಅಚ್ಚ ಕನ್ನಡತಿ ಮುದ್ದುಮುಖದ ಚಂದ್ರಕಲಾ ಅಮೋಘವಾಗಿ ನಟಿಸಿದ ತಮಿಳು, ತೆಲುಗು ಸಿನಿಮಾಗಳು ಸಿಲ್ವರ್  ಜ್ಯುಬ್ಲಿಲಿ ಪ್ರದರ್ಶನ ಕಂಡು ಹೊಸ ದಾಖಲೆ ನಿರ್ಮಿಸಿದವು. ಕಾಲಾಯ ತಸ್ಮೈನಮಃ ಎಂಬಂತೆ ಮುಗ್ಧ ಚೆಲುವೆ ಅದ್ಭುತ ಪ್ರತಿಭೆ ಚಂದ್ರಕಲಾ ತನ್ನ ದುರದೃಷ್ಟದಿಂದಲೋ ಅಥವಾ ವಿಧಿಯ ಕ್ರೂರದೃಷ್ಟಿಯಿಂದಲೋ ಅನ್ಯಾಯವಾಗಿ ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿ ದಿನಾಂಕ 21.6.1999ರಂದು ಕೇವಲ 48ನೇ ವಯಸ್ಸಿಗೆ ಮೃತಪಟ್ಟರು.

ಇನ್ನಷ್ಟು ಕಾಲ ಬದುಕಿದ್ದರೆ ಅಂತಾರಾಷ್ಟ್ರ ಮಟ್ಟದಲ್ಲಿ ಗುರ್ತಿಸಿಕೊಂಡು ಕನ್ನಡದ ಕೀರ್ತಿಯನ್ನು ಜಗಜ್ಜಾಹೀರಾಗಿಸಿ ಚಂದನವನ ಬೆಳಗಿಸುತ್ತಿದ್ದರು ಎಂಬುದರಲ್ಲಿ ಸಂಶಯವೇಇಲ್ಲ. ಬಹುಶ: ದಕ್ಷಿಣ ಭಾರತ ಚಿತ್ರರಂಗದಲ್ಲಿ ಭಯಂಕರ ಕ್ಯಾನ್ಸರ್ ಖಾಯಿಲೆಗೆ ಬಲಿಯಾದ ಮೊಟ್ಟಮೊದಲ ಹೀರೋಯಿನ್ ಹಾಗೂ ಭಾರತ ಸಿನಿಲೋಕದ ಮೂರನೇ ಅಭಿನೇತ್ರಿ ಎಂಬ ನೂತನ ಇತಿಹಾಸ ಸೃಷ್ಟಿಸಿ ಮರಳಿ ಬಾರದ ಲೋಕಕ್ಕೆ ತೆರಳಿದರು? ಇಷ್ಟಾದರೂ ಸ್ಯಾಂಡಲ್ ವುಡ್ ಲೋಕದ ಧ್ರುವತಾರೆ ಚಂದ್ರಕಲಾ ಇಂದಿಗೂ ಅಜರಾಮರ!

ಚಂದ್ರಕಲಾ ನಟಿಸಿದ ಕನ್ನಡ ಚಿತ್ರಗಳು ಯಾವುವು ಎಂದರೆ.. ಶ್ರೀರಾಮಾಂಜನೇಯ ಯುಧ್ಧ, ಜೀವನತರಂಗ, ಜೇನುಗೂಡು, ಸುಬ್ಬಾಶಾಸ್ತ್ರಿ, ನವಕೋಟಿ ನಾರಾಯಣ, ಪಾರ್ವತಿಕಲ್ಯಾಣ, ಒಂದೇ ಬಳ್ಳಿಯ ಹೂಗಳು, ಬೇಡಿಬಂದವಳು, ರೌಡಿರಂಗಣ್ಣ, ಆನಂದಕಂದ, ಪುಣ್ಯಪುರುಷ, ಪುನರ್ಜನ್ಮ, ಮಾರ್ಗದರ್ಶಿ, ಮನಶ್ಯಾಂತಿ, ಚದುರಂಗ, ಅಮರಭಾರತಿ, ಸಂಕಲ್ಪ, ಮಗಮೊಮ್ಮಗ, ಮನೆಬೆಳಕು, ಒಂದೇ ರೂಪ ಎರಡು ಗುಣ, ಸುಳಿ, ಶ್ರೀರಾಘವೇಂದ್ರ ವೈಭವ (1981-ಅಂತಿಮ ಚಿತ್ರ)

ಸಿನಿಮಾಸುದ್ದಿ ಮತ್ತು ಹೆಚ್ಚಿನ ಮಾಹಿತಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ

admin
the authoradmin

12 Comments

  • ಸೌಮ್ಯ ನಟಿ ಚಂದ್ರಕಲಾ ರವರ ಲೇಖನವನ್ನು ಹಿರಿಯ ಬರಹಗಾರರಾದ ಕುಮಾರಕವಿಯವರು ವಿಚಾರಪೂರ್ಣ ವಿಷಯದೊಡನೆ ತುಂಬ ಅಚ್ಚುಕಟ್ಟಾಗಿ ಬರೆದಿದ್ದಾರೆ, ಧನ್ಯವಾದಗಳು. ಪ್ರೇಮಲತ, ಹಾಸನ

  • ಸೌಮ್ಯ ನಟಿ ಚಂದ್ರಕಲಾ ರವರ ಲೇಖನವನ್ನು ಹಿರಿಯ ಬರಹಗಾರರಾದ ಕುಮಾರಕವಿಯವರು ವಿಚಾರಪೂರ್ಣ ವಿಷಯದೊಡನೆ ತುಂಬ ಅಚ್ಚುಕಟ್ಟಾಗಿ ಬರೆದಿದ್ದಾರೆ, ಧನ್ಯವಾದಗಳು ಸರ್. ಪ್ರೇಮಲತಾ, ಹಾಸನ

  • ನಾನು ಮಿಡಲ್ ಸ್ಕೂಲ್ ಓದುವಾಗ ನೋಡಿದ ನೆನಪು ರಾಜ್ ಕುಮಾರ್ ನಟಿಸಿದ ಮಾರ್ಗದರ್ಶಿ ಸಿನಿಮಾದಲ್ಲಿ ಚಂದ್ರಕಲಾ ಚೆನ್ನಾಗಿ ನಟಿಸಿದ್ದರು.
    ಇಂದ್ರಮ್ಮ, ನೆಹರೂ ನಗರ, ಮಂಡ್ಯ

  • 1970ರ ದಶಕದಲ್ಲಿ ಮೈಸೂರಿನ ಪ್ರತಿಯೊಂದು ಗಣೇಶೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ “ಅಣ್ಣ-ತಂಗಿ” ಆರ್ಕೇಷ್ಟ್ರಾ ತಂಡದವರು ತಪ್ಪದೇ ಹಾಡುತ್ತಿದ್ದರು. ಇವರು ಮರೆತರೂ ಸಾರ್ವಜನಿಕರು ಒತ್ತಾಯದಿಂದ ಹಾಡಿಸುತ್ತಿದ ಚಿತ್ರಗೀತೆ “ಅಣ್ಣಾ..ನಿನ್ನ ಸೋದರಿಯನ್ನ …” ಈ ವಿಷಯ ಈಗ ಚಂದ್ರಕಲ ಲೇಖನ ಓದುವಾಗ ಜ್ಞಾಪಕಕ್ಕೆಬಂತು. ಸತ್ಯನಾರಾಯಣ, ಮೈಸೂರು.

  • Chandanavanada chitranati Chandrakala bagge nanage hechige gottiralilla. KUMARA KAVI NATARAJ avarinda eega istu vivaravada mahiti tilidu santosha ayitu. Janamana kannada patrikege dhanyavadagalu, Smt.PremaPrabhakar.

  • ಕನ್ನಡ ಚಿತ್ರರಂಗದ ಆಗಿನ ಕಾಲದ ಅಪರೂಪದ ನಟಿ ಚಂದ್ರಕಲಾ ರವರ ಲೇಖನ ಓದಿ ತುಂಬ ಖುಷಿ ಆಯ್ತು. ನನ್ನ ಗೆಳತಿಯರಿಗೂ ಶೇರ್ ಮಾಡಿದ್ದೀನಿ.
    ಯಶೋಧಮ್ಮ, ಉಲ್ಲಾಳ, ಬೆಂಗಳೂರು

  • Wonderful article on actress CHANDRAKALA 👏 😀 Really nice writing by NATRAJ sir 👏 👍

  • ಹೈಸ್ಕೂಲ್ ವಿದ್ಯಾರ್ಥಿಿಯಾಗಿದ್ದಾಗ ಚಂದ್ರಕಲಾ ಕಲ್ಯಾಣಕುಮಾರ್ ಜತೆ ನಟಿಸಿದ್ದ ಬೇಡಿಬಂದವಳು ಸಿನಿಮ ಪ್ರಭಾ ಟಾಕೀಸಿನಲ್ಲಿ ನೋಡಿ ಆನಂದಿಸಿದ್ದೆ. ಈ ಚಿತ್ರದ ಹಾಡು “ನೀರಿನಲ್ಲಿ ಅಲೆಯ ಉಂಗುರ…..” ಈಗಲೂ ಸೂಪರ್.
    ಈಗ ಕುಮಾರಕವಿ ನಟರಾಜರವರ ಲೇಖನ ಓದಿದ ನಾನು ಫ್ಲಾಶ್ ಬ್ಯಾಕ್ ಗೆ ಹೋಗಿ ಆನಂದಪಟ್ಟೆ. ಅನೇಕಾನೇಕ ಧನ್ಯವಾದ ನಮಸ್ಕಾರ. ಗಮಕ ವಿದ್ವಾನ್ ರಾ.ರಾಮಕೃಷ್ಣ, ಸರ್ದಾರ್ ಪಟೇಲ್ ನಗರ, ಮೈಸೂರು.

  • ಆಗಿನ ಕಾಲದ ಕನ್ನಡ ತೆಲುಗು ಸಿನಿಮಾದ ಜನಪ್ರಿಯ ನಟಿ ಚಂದ್ರಕಲಾ ಕುರಿತು ನಟರಾಜ ಕವಿಯವರು ಬರೆದಿರುವ ಈ ಲೇಖನ ಅಮೋಘ ಅಧ್ಬುತ. ಧನ್ಯವಾದ. ಮಲ್ಲಿಕಾರ್ಜುನ ಹಿರೇಮಠ, ಬೆಂಗಳೂರು

  • ಜನಮನ ಕನ್ನಡ ಪತ್ರಿಕೆಯಲ್ಲಿ ದಿವಂಗತ ಶ್ರೇಷ್ಠ ನಟಿ ಚಂದ್ರಕಲಾರವರ ಬಗ್ಗೆ ಕುಮಾರಕವಿಯವರ ಸಿನಿಮಾ ಲೇಖನ ಓದಿದೆ. ಸೊಗಸಾಗಿದೆ, ನಮಸ್ಕಾರ. ನಾರಾಯಣಸ್ವಾಮಿ, ಮಾರುತಿನಗರ, ಬೆಂಗಳೂರು

  • Very good article about old films actress late Chandrakala. 👌 Thanksgiving article written by NATRAJ sir 👏 👍 🙏 Mrs.Preethu Dr.N.Vinay, Mysuru

  • About GREAT ACTRESS LATE CHANDRAKALA, one of the
    beautifully narrated articles 👏 👌 💖 💙. My appreciation to the author and publisher.
    *Manasakumari N.
    Bhyraveshwara nagara,
    Bengaluru

Leave a Reply

Translate to any language you want