ಸಾಲಿಗ್ರಾಮ(ಸಂಘಟನೆ ಮಂಜುನಾಥ್): ತಾಲೂಕಿನ ಮಿರ್ಲೆ, ನರಚನಹಳ್ಳಿ, ಗಂಧನಹಳ್ಳಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ 50 ಕೋಟಿ ರೂ ಬಿಡುಗಡೆಯಾಗಿದೆ ಎಂದು ಶಾಸಕ ಡಿ ರವಿಶಂಕರ್ ಹೇಳಿದರು.
ತಾಲೂಕಿನ ಮಿರ್ಲೆ ಗ್ರಾಮದಲ್ಲಿ ಒಂದು ಕೋಟಿ ರೂ ವೆಚ್ಚದ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಹಣವು ಬಿಡುಗಡೆಯಾಗಿದ್ದು ಟೆಂಡರ್ ಕೂಡ ಆಗಿದೆ. ತಾಂತ್ರಿಕ ದೋಷಗಳಿಂದ ಅದು ಸ್ಥಗಿತಗೊಂಡಿದೆ. ಅದನ್ನು ಶೀಘ್ರದಲ್ಲಿ ಪರಿಹರಿಸಿ ಕಾಮಗಾರಿಗೆ ಚಾಲನೆ ನೀಡುವ ಮೂಲಕ ಈ ಭಾಗದ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಮಿರ್ಲೆ ಗ್ರಾಮದಲ್ಲಿ ಉಪ ನೊಂದಣಾಧಿಕಾರಿಗಳ ಕಚೇರಿಯ ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಮನವಿ ಮಾಡಲಾಗಿದ್ದು. ಅನುದಾನವನ್ನು ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ ಅನುದಾನವನ್ನು ತಂದು ಆ ಕೆಲಸವನ್ನು ಮಾಡಲಾಗುವುದು ಎಂದರು.
ಮಿರ್ಲೆ ಗ್ರಾಮಕ್ಕೆ ಒಂದು ತಿಂಗಳಿಗೆ ಅಂಬುಲೆನ್ಸ್ ನ್ನು ನೀಡಲಾಗುವುದು. ಗ್ರಾಮದಲ್ಲಿರುವ ಆಸ್ಪತ್ರೆ ಕಾಲೇಜ್ ಶಾಲೆ ರಸ್ತೆಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು. ಗ್ರಾಮದೊಳಗಿನ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿ ಮಾಡಲು ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು ಈಗಾಗಲೇ ಹುಣಸಮ್ಮ ತಾಯಿ ದೇವಾಲಯದ ಸುತ್ತ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.

ನಾಲೆಗಳನ್ನು ಅಭಿವೃದ್ಧಿಪಡಿಸುವುದು, ಹೂಳೆತ್ತುವುದು, ಸಂಪರ್ಕ ರಸ್ತೆ ನೀರು ಕಾಲುವೆಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಯುಗಾದಿ ಹಬ್ಬಕ್ಕೆ ಯಾವುದೇ ರೀತಿಯ ತೊಂದರೆ ಆಗದಂತೆ ಈ ಭಾಗದ ನಾಲೆಗಳಿಗೆ ನೀರನ್ನು ಹರಿಸಲು ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮಿರ್ಲೆ ಮಾರ್ಗವಾಗಿ ಚುಂಚನಕಟ್ಟೆ ಮತ್ತು ಭೇರ್ಯ ಸಂಪರ್ಕಿಸಲು ಸಾರಿಗೆ ಬಸ್ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಲಾಗುವುದು ಎಂದರು.
ಚುಂಚನಕಟ್ಟೆಯಲ್ಲಿರುವ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಲು ಈಗಾಗಲೇ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರುಗಳೊಂದಿಗೆ ಕಾರ್ಖಾನೆ ಪುನರಾರಂಭಿಸುವ ಸಂಬಂಧ ಚರ್ಚಿಸಿದ್ದು ಸದ್ಯದಲ್ಲೇ ಒಂದು ಸಭೆಯು ಉನ್ನತ ಮಟ್ಟದಲ್ಲಿ ನಡೆಯಲಿದೆ. ಅಲ್ಲಿ ಇದರ ಬಗ್ಗೆ ತೀರ್ಮಾನವನ್ನು ಕೈಗೊಂಡು ಕಾರ್ಖಾನೆಯನ್ನು ಪುನಾರಂಬಿಸಿ ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಕಾಂಗ್ರೆಸ್ ಮುಖಂಡ ಮಿರ್ಲೆ ನಂದೀಶ್ ಮಾತನಾಡಿ. ತಾಲೂಕಿನ ಮಿರ್ಲೆ ಗ್ರಾಮವು ಬಹು ದೊಡ್ಡ ಗ್ರಾಮವಾಗಿದ್ದು ಇಲ್ಲಿ ಹಲವಾರು ಸಮಸ್ಯೆಗಳಿವೆ ಅವುಗಳನ್ನು ಪರಿಹರಿಸಿ ಗ್ರಾಮವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬೇಕೆಂದು ಶಾಸಕ ಡಿ. ರವಿಶಂಕರ್ ಅವರಲ್ಲಿ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಎಸ್ ಮಹದೇವ್, ಉದಯ್ ಶಂಕರ್, ಅರೋಗ್ಯ ರಕ್ಷಾ ಸಮಿತಿಯ ಅಧ್ಯಕ್ಷ ಹೆಬ್ಬಾಳ್ ನಾಗೇಂದ್ರ, ನಗರಾಧ್ಯಕ್ಷರಾದ ಪ್ರಭಾಕರ್, ರಮೇಶ್, ವಕ್ತಾರ ಜಾಬಿರ್, ಬಿಇಓ ಕೃಷ್ಣಪ್ಪ, ಎಇಇ ಆನಂದ್, ಉಪ ತಹಸಿಲ್ದಾರ್ ಆರ್ ಎ ಮಹೇಶ್, ಗ್ರಾಪಂ ಸದಸ್ಯ ಹರೀಶ್, ಮುಖಂಡರುಗಳಾದ ಶಕುಂತಲಾ, ಚೈತ್ರ ದಿನೇಶ್, ದೀಪಕ್, ಕಿಸ್ತೂರ್ ಗೇಟ್ ಮಹದೇವ್, ಸಣ್ಣ ರಾಮೇಗೌಡ ಇತರರೂ ಹಾಜರಿದ್ದರು








