ಈಗ ನೀವೇನಾದರೂ ಗುಂಡ್ಲುಪೇಟೆಯಿಂದ ಬಂಡೀಪುರದ ಕಡೆಗೆ ಪ್ರಯಾಣ ಬೆಳೆಸಿದ್ದೇ ಆದರೆ ಕಪ್ಪಗಿನ ರಸ್ತೆಯ ಸುತ್ತಲೂ ಹಸಿರು ತುಂಬಿದ ನಿಸರ್ಗದ ನಡುವೆ ತಲೆ ಬಾಗಿ ಬಳುಕುತ್ತಾ ವೈಯ್ಯಾರದ ನೋಟ ಬೀರುವ ಹಳದಿ ಸುಂದರಿಯರು ನಿಮ್ಮನ್ನು ಸೆಳೆಯದಿರಲಾರರು.
ಹಾಗೆಂದು ಅವರ ಬಳಿ ಹೋಗಿ ಬೇಕಾಬಿಟ್ಟಿ ಸೆಲ್ಪಿ ತೆಗೆದುಕೊಳ್ಳುವುದಾಗಲೀ.. ಪರಿವಾರವೇ ನಿಂತು ಫೋಸ್ ಕೊಡುವುದಾಗಲೀ ಮಾಡುವಂತಿಲ್ಲ… ಇಲ್ಲಿ ಈಗ ಅವರ ಯಜಮಾನರು ಶುಲ್ಕ ಕೇಳ್ತಾರೆ… ಹಾಗೆಂದು ದುಬಾರಿ ಶುಲ್ಕವೇನಲ್ಲ ಬರೀ 20 ರೂಪಾಯಿ ಮಾತ್ರ…

ಮೊಬೈಲ್ ಜನರ ಕೈಗೆ ಬಂದ ನಂತರ ಅದರಲ್ಲೂ ರೀಲ್ಸ್, ಸೆಲ್ಪಿ ಖಯಾಲಿ ಹೆಚ್ಚಾದ ಬಳಿಕವಂತು ಎಲ್ಲಿಯೇ ಹೋಗಲಿ ಅಲ್ಲಿ ಮೊಬೈಲ್ ಹಿಡಿದು ಫೋಟೋ ತೆಗೆಯುವವರು, ತೆಗೆಸಿಕೊಳ್ಳುವವರು ಇದ್ದೇ ಇರುತ್ತಾರೆ.. ಹೀಗಿರುವಾಗ ಹಳದಿ ಬಣ್ಣದ ಸಿಂಗಾರದಿಂದ ಕಂಗೊಳಿಸುವ ಸೂರ್ಯಕಾಂತಿ ಹೂವಿನ ತೋಟವನ್ನು ಜನ ಬಿಡ್ತಾರಾ?
ಕೆಲವು ವರ್ಷಗಳ ಹಿಂದೆ ರಸ್ತೆಯಲ್ಲಿ ಹೋಗುವವರು ವಾಹನಗಳನ್ನು ನಿಲ್ಲಿಸಿ ಹೂವಿನ ಜೊತೆಗೆ ಫೋಟೋ ತೆಗೆದುಕೊಳ್ಳುವುದು, ತುಳಿಯುವುದು ಅವುಗಳನ್ನು ಮುಟ್ಟಿ ಗಿಡಗಳನ್ನು ಮುರಿದು ಹಾಕುವುದು ಹೀಗೆ ಉಪಟಳ ನೀಡುತ್ತಿದ್ದರು. ಇದೆಲ್ಲದರಿಂದ ಬೇಸತ್ತ ರೈತರು ತಮ್ಮ ಸೂರ್ಯಕಾಂತಿ ತೋಟದೊಳಗೆ ನುಗ್ಗಿ ಹೂಗಳ ಜತೆಯಲ್ಲಿ ಫೋಟೋ ತೆಗೆಸಿಕೊಳ್ಳುವ ಮುನ್ನ ಶುಲ್ಕ ಕೊಡಿ ಇಲ್ಲಾಂದ್ರೆ ನೋ ಎಂಟ್ರಿ ಎಂಬ ಬೋರ್ಡ್ ತಗುಲಿಸಿದರು.

ಹೊಲದಲ್ಲಿಯೇ ಕುಳಿತು ಶುಲ್ಕ ಪಡೆಯಲಾರಂಭಿಸಿದರು. ಸಾವಿರಾರು ರೂಪಾಯಿ ಖರ್ಚು ಮಾಡಿ ಪ್ರವಾಸ ಹೋಗುವ ಪ್ರವಾಸಿಗರು 20 ರೂಪಾಯಿ ಕೊಡಲು ಹಿಂದೇಟು ಹಾಕಲಿಲ್ಲ. ಹೀಗಾಗಿ ಇದು ಕೂಡ ರೈತನ ಪಾಲಿಗೆ ವರದಾನವಾಯಿತು. ಈಗ ಈ ವ್ಯಾಪ್ತಿಯಲ್ಲಿ ಸೂರ್ಯಕಾಂತಿ, ಚೆಂಡುಹೂ ಬೆಳೆಯುವ ರೈತರೆಲ್ಲರೂ ಇದನ್ನೇ ಪಾಲಿಸುತ್ತಿದ್ದಾರೆ.. ಒಂದಿಷ್ಟು ಆದಾಯವನ್ನು ಪಡೆಯುತ್ತಿದ್ದಾರೆ. ಬಹಳಷ್ಟು ಪ್ರವಾಸಿಗರು ಶುಲ್ಕದ ಬಗ್ಗೆ ತಲೆಕೆಡಿಸಿಕೊಳ್ಳದೆ ರೈತರು ಕೇಳಿದಷ್ಟು ಹಣ ನೀಡಿ ಫೋಟೋ ಕ್ಲಿಕ್ಕಿಸಿಕೊಂಡು ಹೋಗುತ್ತಿದ್ದಾರೆ.
ಗುಂಡ್ಲುಪೇಟೆಯಿಂದ ಬಂಡೀಪುರಕ್ಕೆ ಹೋಗುವ ರಸ್ತೆಯ ಅಕ್ಕಪಕ್ಕದಲ್ಲಿ ಹಾಗೂ ಗುಂಡ್ಲುಪೇಟೆಯಿಂದ ಕೇರಳ ಹೋಗುವ ರಸ್ತೆಗಳಲ್ಲಿ ರೈತರು ಸೂರ್ಯಕಾಂತಿ ಬೆಳೆದಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಚೆಂಡು ಹೂ ಬೆಳೆಯುತ್ತಿದ್ದು ಇದೆರಡು ಹೂಗಳು ನೋಡುಗರನ್ನು ಮೋಡಿ ಮಾಡುತ್ತವೆ. ಹೀಗಾಗಿ ಇದರ ಬಳಿ ನಿಂತು ಫೋಟೋ ತೆಗೆಸಿಕೊಳ್ಳಲು ಪ್ರವಾಸಿಗರು ಹಾತೊರೆಯುತ್ತಾರೆ. ಅದರಲ್ಲೂ ರೀಲ್ಸ್ ಮಾಡುವವರು ಮುಗಿ ಬೀಳುತ್ತಾರೆ.

ಸದ್ಯ ರೈತರು ಶುಲ್ಕ ವಿಧಿಸಿರುವುದರಿಂದ ಆದಾಯದ ಮೂಲವೂ ಹೆಚ್ಚುತ್ತಿದೆ. ಆದರೆ ಈ ಬಾರಿ ಬರ ವಿರುವ ಕಾರಣದಿಂದಾಗ ಜನ ತತ್ತರಿಸಿದ್ದು, ಸಂಕಷ್ಟ ಅನುಭವಿಸುವಂತಾಗಿದೆ. ಇಂತಹ ಸಂದರ್ಭಗಳಲ್ಲಿ ಪ್ರವಾಸಿಗರು ಶುಲ್ಕ ನೀಡಿ ಫೋಟೋ ತೆಗೆದುಕೊಳ್ಳುವುದರಿಂದ ಅಲ್ಪ ಸ್ವಲ್ಪ ಹಣ ಬರುತ್ತಿದ್ದು, ರೈತರಿಗೆ ಅನುಕೂಲವಾಗುತ್ತಿದೆ.
ಈಗ ಹೊಲಗಳಲ್ಲಿ ಸೂರ್ಯಕಾಂತಿ ಅರಳಿರುವುದರಿಂದ ಹೆದ್ದಾರಿಯಲ್ಲಿ ಸಾಗುವವರು ವಾಹನಗಳನ್ನು ನಿಲ್ಲಿಸಿ ಫೋಟೋ ತೆಗೆದುಕೊಳ್ಳುವುದರ ಜೊತೆಗೆ ಎಳನೀರು, ಸೌತೆಕಾಯಿ ಇನ್ನಿತರ ತಿನಿಸುಗಳನ್ನು ಸೇವಿಸುವುದರಿಂದ ವ್ಯಾಪಾರ ವಹಿವಾಟುಗಳು ನಡೆಯುತ್ತಿವೆ. ಸೂರ್ಯಕಾಂತಿ ಹೂ ಅರಳಿ ಒಣಗುತ್ತಿದ್ದಂತೆಯೇ ಚೆಂಡುಹೂ ಶುರುವಾಗುವುದರಿಂದ ಪ್ರವಾಸಿಗರು ಅತ್ತ ಮುಖ ಮಾಡುತ್ತಾರೆ. ಸದ್ಯ ಸೂರ್ಯಕಾಂತಿ ಮತ್ತು ಚೆಂಡುಹೂ ಬೆಳೆದ ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನ ರೈತರು ತಮ್ಮ ಹೊಲದತ್ತ ಬರುವ ಪ್ರವಾಸಿಗರನ್ನು ಸ್ವಾಗತಿಸಲು ಕಾಯುತ್ತಿರುವುದಂತು ನಿಜ.

ಇನ್ನು ಇಲ್ಲಿನ ಹೆದ್ದಾರಿ ಕೇರಳದ ಸುಲ್ತಾನ್ ಬತ್ತೇರಿಗೆ ಸಂಪರ್ಕ ಕಲ್ಪಿಸುವುದರಿಂದ ನಿತ್ಯವೂ ಸಾವಿರಾರು ಪ್ರವಾಸಿಗರು ವಾಹನಗಳಲ್ಲಿ ಸಂಚರಿಸುತ್ತಾರೆ. ಅದರಲ್ಲೂ ದೂರದಿಂದ ಟ್ರಿಪ್ ಬರುವ ಯುವಕ, ಯುವತಿಯರಂತು ಜಮೀನು ತುಂಬಾ ಓಡಾಡಿ ತಮಗೆ ಬೇಕಾದ ಸ್ಥಳದಲ್ಲಿ ತಮಗೆ ಹೇಗೆ ಬೇಕೋ ಹಾಗೆ ವಿವಿಧ ಭಂಗಿಗಳಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಾರೆ.
ಸದ್ಯ ಈ ರಸ್ತೆಗಳಲ್ಲಿ ಓಡಾಡುತ್ತಿದ್ದರೆ ಇಲ್ಲಿ ಕಂಡು ಬರುವ ದೃಶ್ಯಗಳು ಥೇಟ್ ಭೂತಾಯಿಯ ಹಸಿರ ಸೀರೆಗೆ ಹಳದಿ ಲೋಹದ ಝರಿಯಿಟ್ಟಂತೆ ಗೋಚರಿಸುತ್ತದೆ. ಅದರಾಚೆಗೆ ವಿವಿಧ ಭಂಗಿಗಳಲ್ಲಿ ನಿಂತು ಫೋಟೋ ಕ್ಲಿಕ್ಕಿಸುವ, ಕ್ಲಿಕ್ಕಿಸಿಕೊಳ್ಳುವ, ವೀಡಿಯೋ ಮಾಡುವ ಯುವಕ, ಯುವತಿಯರು, ಕುಟುಂಬದ ಸದಸ್ಯರು, ಮಕ್ಕಳು ಹೀಗೆ ಹತ್ತಾರು ದೃಶ್ಯಗಳು ನಿತ್ಯವೂ ಇಲ್ಲಿ ಸೃಷ್ಟಿಯಾಗುತ್ತವೆ…
B M Lavakumar
ಡಾ. ಸರ್ತಾಜ್ ಪಿ.ಹೆಚ್…. ಸಾಧನೆಯ ಶಿಖರದ ಕಡೆಗೆ ನಿರಂತರ ಚಾರಣ… ಇಲ್ಲಿವೆ ದಾಖಲೆಯ ಹೆಜ್ಜೆಗುರುತುಗಳು!
ಡಾ. ಸರ್ತಾಜ್ ಪಿ.ಹೆಚ್…. ಸಾಧನೆಯ ಶಿಖರದ ಕಡೆಗೆ ಚಾರಣ… ಇಲ್ಲಿವೆ ದಾಖಲೆಯ ಹೆಜ್ಜೆಗುರುತುಗಳು!








