ArticlesLatest

ಸಿದ್ಧಗಂಗೆಯ ದೇವಪುರುಷ ಶ್ರೀ ಶಿವಕುಮಾರ ಸ್ವಾಮೀಜಿ…. ಮಹಾಮಾನವತಾವಾದಿಯಾಗಿ ಜನಮನ ಗೆದ್ದವರು. 

ಸಾಮಾನ್ಯರಾಗಿ ಹುಟ್ಟಿ ಅಸಾಮಾನ್ಯರಾಗಿ ಬೆಳೆದು

ಮನುಷ್ಯತ್ವದಿಂದ ದೈವತ್ವಕ್ಕೇರಿದ

ದೇವಪುರಷರು ನೀವು ಅಕ್ಷರಶಃ ದೇವರೇ

ಶರಣು ನಿಮಗೆ ನಿತ್ಯಶರಣೆಂಬೆವು

ಅರವತ್ತು-ಎಪ್ಪತ್ತರ ದಶಕದ ಮಧ್ಯಭಾಗ ಅಂತ ಕಾಣುತ್ತದೆ. ನಿಜಲಿಂಗಪ್ಪ ನಾಡಿನ ಮುಖ್ಯಮಂತ್ರಿಗಳಾಗಿದ್ದ ಕಾಲವದು. ಆಗೊಮ್ಮೆ ಕರ್ನಾಟಕಕ್ಕೆ ಬರಗಾಲ ಬಂದಿರುತ್ತದೆ. ಬಡಜನತೆಗೆ ತುತ್ತು ಕೂಳಿಗೆ ಪರದಾಡುವಂತಹ ಕಷ್ಟದ ದಿನಗಳವು. ಹಸಿದ ಹೊಟ್ಟೆಗಳನ್ನೊತ್ತ ಬಡಜನರು ಅನ್ನಕ್ಕಾಗಿ ಬಾಯ್ಬಿಟ್ಟುಕೊಂಡು ತಂಡೋಪತಂಡವಾಗಿ ಮಠವೊಂದರ ಮುಂದೆ ಜಾತ್ರೆಯಂತೆ ಜಮಾಯಿಸಿರುತ್ತಾರೆ. ಆದರೆ ಇವರನ್ನು ಕಂಡು ಅಲ್ಲಿನ ಸ್ವಾಮೀಜಿ ಕಿಂಚಿತ್ತೂ ಬೇಸರಿಸಿಕೊಳ್ಳದೆ ಸ್ವತಃ ತಾವೇ ನಿಂತು ಊಟದ ಜೊತೆಗೆ ಆಶ್ರಯವನ್ನೂ ನೀಡಿ ಮಠದ ಮಕ್ಕಳೊಡನೆ ಆ ಬಡಜನತೆಯನ್ನು ಸಲಹತೊಡಗುತ್ತಾರೆ.

ಒಂದು ಮಧ್ಯಾಹ್ನ ಉರಿಬಿಸಿಲನ್ನೂ ಲೆಕ್ಕಿಸದೆ ಬರಿಗಾಲಲ್ಲೇ ನಿಂತು ಸರದಿಯಲ್ಲಿದ್ದ ಆ ಬಡಜನರಿಗೆ ಊಟ ನೀಡುವ ಉಸ್ತುವಾರಿಯನ್ನು ಮಠದ ಸ್ವಾಮೀಜಿ ನಿರ್ವಹಿಸುತ್ತಿರುತ್ತಾರೆ. ಈ ಮಠ ಮತ್ತು ಅಲ್ಲಿನ ಸ್ವಾಮೀಜಿ ಬಗ್ಗೆ ಮಾಹಿತಿ ತರಿಸಿಕೊಂಡು ಅಲ್ಲಿಗೆ ಧಿಡೀರನೆ ಭೇಟಿ ನೀಡಿದ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರು ಅಲ್ಲಿನ ದೃಶ್ಯ ಕಂಡು ಬೆರಗಾಗಿ “ಅಬ್ಬಾ ಎಂಥಾ ದಾಸೋಹ!” ಎಂದು ಹೃದಯತುಂಬಿ ಉದ್ಘರಿಸುತ್ತಾರೆ. ತಕ್ಷಣವೇ ತಮ್ಮ ಬಳಿಯೇ ಇದ್ದ ಜಿಲ್ಲಾಧಿಕಾರಿಗಳಿಗೆ ಬರಪೀಡಿತರಿಗೆ ಸ್ವಯಂ ಸೇವೆ ಸಲ್ಲಿಸುತ್ತಿರುವ ಈ ಮಠಕ್ಕೆ ಯಾವುದೇ ರೀತಿಯ ತೊಂದರೆ ತಲೆದೋರದಂತೆ ಜಿಲ್ಲಾಡಳಿತ ಸಹಕರಿಸಬೇಕೆಂದು ಸೂಚಿಸುತ್ತಾರೆ. ಹಾಗೆಯೇ ಅಲ್ಲಿನ ಸ್ವಾಮೀಜಿಗಳ ಪಾದಕ್ಕೆ ಶರಣು ಎನ್ನತ್ತಾರೆ. ಆ ಸ್ವಾಮೀಜಿಯೇ ಅಣ್ಣ ಬಸವಣ್ಣನ ಪುನರಾವತಾರದಂತಿದ್ದ ಪುಣ್ಯ ಪುರುಷ ಡಾ. ಶಿವಕುಮಾರ ಸ್ವಾಮೀಜಿ! ದಾಸೋಹದ ಸ್ವರ್ಗವಾಗಿರುವ ಆ ಮಠವೇ ಸಿದ್ಧಗಂಗೆ ಪುಣ್ಯ ಕ್ಷೇತ್ರ!

ಕಳೆದ ಏಳೆಂಟು ದಶಕಗಳಿಂದಲೂ ಅನ್ನ, ಆಶ್ರಯ, ಅಕ್ಷರ ಈ ಮೂರನ್ನೂ ದೀನದಲಿತರಿಗೆ, ಬಡಬಗ್ಗರಿಗೆ, ಅಸಹಾಯಕರಿಗೆ ಧಾರೆಯೆರೆಯುತ್ತಾ ತ್ರಿವಿಧ ದಾಸೋಹದಲ್ಲಿ ಅವಿರತವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀ ಸಿದ್ಧಗಂಗಾ ಮಠಾಧೀಶರಾಗಿದ್ದ ಡಾ. ಶಿವಕುಮಾರ ಸ್ವಾಮೀಜಿ ಇಡೀ ರಾಷ್ಟ್ರವೇ ತಮ್ಮತ್ತ ಕಣ್ಣೆತ್ತಿ ನೋಡುವಂತೆ ಸೇವೆಯ ಹಿಮಾಲಯವಾಗಿ ಬೆಳೆದು ನಿಂತವರು. ತಮ್ಮ ಕೈಂಕರ್ಯದ ಬೆಳಕಿನಿಂದ ವಿಶ್ವವನ್ನೇ ಬೆರಗುಗೊಳಿಸಿದವರು. ಇತರೆ ಸ್ವಾಮೀಜಿಗಳಂತೆ ಇವರು ಯಾವುದೋ ಒಂದು ಜನಾಂಗಕ್ಕೆ, ಜಾತಿಗೆ ಮಾತ್ರ ಸೀಮಿತವಾಗದೆ ಜಾತಿ, ಮತ, ಪಂಥ, ಧರ್ಮಗಳ ಭೇದಭಾವವಿರದೆ “ಇವನಾರವ ಇವನಾರವನೆನ್ನದೆ ಇವ ನಮ್ಮವ ಇವ ನಮ್ಮವ” ನೆನ್ನುತ ಬಸವ ಬೆಳಕಿನಲ್ಲಿ ಸಮಾಜ ಸೇವೆಗೈದು ಮಹಾಮಾನವತಾವಾದಿಯಾಗಿ ಜನಮನಸ್ಸಗೆದ್ದವರು.

ಮಹಾಜ್ಞಾನಿಗಳೂ, ಮಹಾಯೋಗಿಗಳೂ ಆಗಿದ್ದ ಇವರು ಕ್ರಿಸ್ತ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ, ಪೈಗಂಬರ್, ಪ್ಲೇಟೋ, ಅರಿಸ್ಟಾಟಲ್, ರಾಮಕೃಷ್ಣ ಪರಮಹಂಸ, ವಿವೇಕಾನಂದ, ಮಹಾವೀರ ಮುಂತಾದ ವಿಶ್ವದ ನೂರಾರು ಚಿಂತಕರ ವಿಛಾರಧಾರೆಯನ್ನು ಅರೆದು ಕುಡಿದವರಂತೆ  ಜ್ಞಾನದ ಮಹಾಪರ್ವವಾಗಿದ್ದರು. ಹಾಗೆಯೇ ತಮ್ಮ ಬಳಿಗೆ ಬಂದವರಿಗೆಲ್ಲಾ ನೆರಳು ನೀಡುವ ಮಹಾವೃಕ್ಷವಾಗಿದ್ದರು. ಶ್ರೀ ಸಿದ್ಧಗಂಗಾ ಮಠವನ್ನು ಮಾನವಕುಲದ ಮಹಾಮನೆಯನ್ನಾಗಿಸಿದ ಮಹಾಕೀರ್ತಿ ಈ ತ್ರಿವಿಧ ದಾಸೋಹ ಮೂರ್ತಿಗೆ ಸಲ್ಲುತ್ತದೆ.

ಇಂದಿಗೂ ಅನ್ನಕ್ಕಾಗಿ ಸಿದ್ಧಗಂಗೆಯಲ್ಲಿ ಇವರು ಹಚ್ಚಿದ ಒಲೆ ಉರಿಯುತ್ತಲೇ ಇದೆ. ಆಶ್ರಯಕ್ಕಾಗಿ ಇವರು ಅಡಿಗಲ್ಲಿಟ್ಟ ತಾಣ ಸೇವಾಸೌಧವಾಗಿ ಬೆಳೆಯುತ್ತಲೇ ಇದೆ. ಇವರು ಹೊತ್ತಿಸಿದ ಅಕ್ಷರ ಜ್ಯೋತಿ ಆರದ ನಂದಾದೀಪವಾಗಿ ಬೆಳಗುತ್ತಲೇ ಇದೆ. ಪ್ರತಿನಿತ್ಯ ಇಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಊಟ ಮಾಡುತ್ತಾರೆಂದರೆ, ಸಹಸ್ರಾರು ಮಂದಿ ಆಶ್ರಿತರಾಗಿದ್ದಾರೆಂದರೆ, ಸಂಸ್ಥೆಗಳಲ್ಲಿ ಸುಮಾರು ಅರ್ಧಲಕ್ಷ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಂದರೆ ಯಾರು ಬೇಕಾದರೂ ಊಹಿಸಬಹುದು.

ಶಿವಕುಮಾರ ಸ್ವಾಮೀಜಿಯ ಮಹಾಕರ್ತೃತ್ವ ಶಕ್ತಿಯನ್ನು, ಕಾಯಕದ ಮಹಾಮಹಿಮೆಯನ್ನು. ಇವರನ್ನು ನಡೆದಾಡುವ ದೇವರು, ಮಹಾಮಹಿಮರು, ಅವತಾರ ಪುರುಷರು, ಕರ್ಮಯೋಗಿಗಳು, ಇಪ್ಪತ್ತೊಂದನೆ ಶತಮಾನದ ಬಸವಣ್ಣನವರು, ಹೀಗೆ ಹಲವಾರು ಪದಪುಂಜಗಳಿಂದ, ಬಿರುದು ಬಾವಲಿಗಳಿಂದ ಕರೆದು ಆನಂದಿಸುವ ಭಕ್ತಜನ ಸಮೂಹವೇ ಇದೆ. ಇವರಲ್ಲಿ ಹೆಚ್ಚಿನವರು ಸಿದ್ದಗಂಗೆಯ ಸ್ವಾಮೀಜಿಯ ಸದ್ಬೆಳಕಿನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡವರೇ ಆಗಿದ್ದಾರೆ. ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಂತಹ ಅನೇಕ ಮಂದಿ ಮಹಾಪ್ರತಿಭೆಗಳು ಇಲ್ಲಿ ಅರಳಿವೆ. ಇಲ್ಲಿನ ಸೇವೆಯ ಸಿರಿಫಸಲನ್ನು ಅನುಭವಿಸಿರುವ ಡಾ. ಜಿ.ಎಸ್. ಶಿವರುದ್ರಪ್ಪನವರು ಹೇಳುತ್ತಾರೆ  –

ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ

ಎಲ್ಲಾ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ…”

ಇಂಥ ಮಹಾಮಾನವತಾವಾದಿ ಡಾ. ಶಿವಕುಮಾರ ಸ್ವಾಮೀಜಿ ಅವತರಿಸಿದ್ದು ಸಾವಿರದ ಒಂಬೈನೂರ ಎಂಟರ ಏಪ್ರಿಲ್ ಒಂದರಂದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಲೂರು ಹೋಬಳಿಯ ವೀರಾಪುರ ಇವರಿಗೆ ಜನ್ಮ ನೀಡಿದ ಪುಣ್ಯ ಸ್ಥಳ. ಸುಸಂಸ್ಕೃತ ಮನೆತನದ ಹೊನ್ನೇಗೌಡ ಮತ್ತು ಗಂಗಮ್ಮ ದಂಪತಿಗಳೇ ಇವರನ್ನು ಹೆತ್ತ ಪುಣ್ಯವಂತರು. ಹದಿಮೂರು ಮಂದಿ ಮಕ್ಕಳಲ್ಲಿ ಇವರೇ ಕಿರಿಯವರು. ಶಿವಣ್ಣ ಎಂಬುದು ಇವರ ಪೂರ್ವಾಶ್ರಮದ ಹೆಸರು. ಇವರು ತುಮಕೂರಿನಲ್ಲಿ ಹೈಸ್ಕೂಲ್ ವ್ಯಾಸಂಗ ಮಾಡುತ್ತಿದ್ದಾಗ ತುಮಕೂರಿನಲ್ಲಿ ಭಯಂಕರ ಪ್ಲೇಗ್‌ರೋಗ ಬಂದು ಜನರು ಜೀವಭಯದಿಂದ ತತ್ತರಿಸುವಂತೆ ಮಾಡಿತ್ತು.

ಇಂತಹ ಸಂದರ್ಭದಲ್ಲಿ ಓದುವುದಾದರೂ ಹೇಗೆಂಬ ಆತಂಕ ಇವರನ್ನು ಕಾಡತೊಡಗಿತು. ಆದರೆ ಓದಿನಲ್ಲಿ ವಿಪರೀತ ಆಸಕ್ತಿ ಇದ್ದ ಇವರು ಹೇಗಾದರೂ ಮಾಡಿ ಓದನ್ನು ಮುಂದುವರಿಸುವ ಮಹದಾಸೆ ಇಟ್ಟುಕೊಂಡು ಇದಕ್ಕಾಗಿ ಮಾರ್ಗ ಹುಡುಕತೊಡಗಿದರು. ಆಗ ಕಾರ್ಗತ್ತಲಲ್ಲಿ ಇಣುಕುವ ಬೆಳಕಿನ ಹನಿಯಂತೆ ಗೋಚರಿಸಿದ್ದೇ ಶ್ರೀ ಸಿದ್ಧಗಂಗ ಮಠ. ಆ ಸಂದರ್ಭದಲ್ಲಿ ಅಲ್ಲಿಗೆ ಪ್ರವೇಶ ಮಾಡಿದ ಇವರು ಆಗ ಅಲ್ಲಿ ಮಠಾಧೀಶರಾಗಿದ್ದ ಶ್ರೀ ಉದ್ಧಾನ ಶಿವಯೋಗಿಗಳಲ್ಲಿ ಆಶ್ರಯ ಬೇಡಿದರು. ಅಪಾರ ವಿದ್ಯಾದಾಹದಿಂದ ಬಂದಿದ್ದ ಇವರು ಆಶ್ಚರ್ಯಕರ ರೀತಿಯಲ್ಲಿ ಪ್ರಥಮ ಭೇಟಿಯಲ್ಲೇ ಉದ್ಧಾನ ಶಿವಯೋಗಿಗಳ ಮನಸ್ಸನ್ನು ಆಕರ್ಷಿಸಿಬಿಟ್ಟರು.

ಸಿದ್ಧಗಂಗಾ ಮಠದಲ್ಲಿದ್ದುಕೊಂಡೇ ಹೈಸ್ಕೂಲ್ ವ್ಯಾಸಂಗ ಮುಗಿಸಿದ ಶಿವಕುಮಾರ ಸ್ವಾಮೀಜಿ ಅವರು ಆಗಲೇ ಆದ್ಯಾತ್ಮ ಹಾಗೂ ಸಮಾಜಸೇವೆಯ ಬಗ್ಗೆ ವಿಶೇಷ ಆಸಕ್ತಿ ಬೆಳೆಸಿಕೊಂಡಿದ್ದರು. ಇವರಲ್ಲಿನ ಈ ಆದರ್ಶಗುಣ ಉದ್ಧಾನಶಿವಯೋಗಿಗಳಲ್ಲಿ ಇವರ ಬಗ್ಗೆ ಮತ್ತಷ್ಟು ಹೆಚ್ಚಿನ ಪ್ರೀತಿ ಮೂಡಲು ಕಾರಣವಾಗಿತ್ತು. ಈ ಅಭಿಮಾನದ ಪ್ರೀತಿಯಿಂದಲೇ ಶಿವಕುಮಾರ ಸ್ವಾಮೀಜಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. ಆನರ್ಸ್ ಪದವಿ ಪಡೆಯುತ್ತಿದ್ದಂತೆಯೇ 1930 ರ ಮಾರ್ಚ್ 3 ರಂದು ಉದ್ಧಾನ ಶ್ರೀಗಳು ಇವರನ್ನು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳನ್ನಾಗಿ ನೇಮಿಸಿದರು.

ನಂತರದ ದಿನಗಳಲ್ಲಿ ಉದ್ದಾನ ಶಿವಯೋಗಿಗಳು ಕಾಲವಾದ ನಂತರ 1941 ರಲ್ಲಿ ಶಿವಕುಮಾರ ಸ್ವಾಮೀಜಿ ಸಿದ್ಧಗಂಗಾ ಮಠದ ಪೀಠವನ್ನೇರಿದರು. ಅಲ್ಲಿಂದೀಚೆಗೆ ಬಹುಮುಖ್ಯವಾದ ಜವಾಬ್ದಾರಿಯನ್ನು ತಲೆಮೇಲೆ ಹೊತ್ತುಕೊಂಡು ಶ್ರೀ ಮಠದ ಅಭಿವೃದ್ಧಿಗಾಗಿ ಕಾಲಿಗೆ ಚಕ್ರ ಕಟ್ಟಕೊಂಡವರಂತೆ ಊರೂರು ಅಲೆದು ನಿಜದ ಅರ್ಥದಿ ಜಂಗಮರೇ ಆಗಿ ಸಾತ್ವಿಕ ಮನಸ್ಸಿನಿಂದ ಬೊಗಸೆಯೊಡ್ಡಿ ಬೇಡಿ ಮಠವನ್ನು ಭುವಿಯಿಂದ ಗಗನದೆತ್ತರ ಬೆಳೆಸಿದರು. ತನ್ಮೂಲಕ ಸಮಾಜ ಸೇವೆಯನ್ನು ತಮ್ಮ ಬದುಕಿನ ಧ್ಯೇಯವಾಕ್ಯ ಮಾಡಿಕೊಂಡು ನಾಡು ಕೊಂಡಾಡುವಂತೆ ತ್ರಿವಿಧ ದಾಸೋಹದ ಹೊಸ ಇತಿಹಾಸವನ್ನೇ ಸೃಷ್ಠಿಸಿದರು.

ಶ್ರೀಗಳ ದೂರದೃಷ್ಟಿಯ ಫಲವಾಗಿ ಶಿಕ್ಷಣಕಾಸಿಯಾಗಿ ಹಾಗು ತ್ರಿವಿಧ ದಾಸೋಹದ ಮಹಾಸೌಧವಾಗಿ ರೂಪುಗೊಂಡಿರುವ ಸಿದ್ಧಗಂಗಾ ಮಠದಲ್ಲಿ ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ನೂರ ಇಪ್ಪತ್ತೈದಕ್ಕೂ ಹೆಚ್ಚು ವಿವಿಧ ಶಿಕ್ಷಣ ಸಂಸ್ಥೆಗಳನ್ನು ಈಗಲೂ ಯಶಸ್ವಿಯಾಗಿ ನಡೆಯುತ್ತಿವೆ. ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಲ್ಲಿ ಶೇಕಡ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನಾಥರು. ಆದರೆ ಅನಾಥರೆಂಬ ಭಾವ ಬಾರದಂತೆ. ಶ್ರೀಗಳ ಆಶಯದಂತೆ ಅವರಿಗೆ ಮಠವೇ ತಾಯಿಯೂ ಆಗಿ, ತಂದೆಯೂ ಆಗಿ, ಕರುಣಾಸಿಂಧುವಾಗಿ ಅವರೆಲ್ಲರನ್ನು ಸ್ವಂತ ಮಕ್ಕಳಂತೆ ಸಲಹುವ ಮಹಾ ಬೆಳಕಾಗಿದೆ.

ಶ್ರೀಗಳು ಬದುಕಿದ್ದಾಗ ಇವರ ಬಳಿಗೆ ಬರುವ ಯಾರಿಗೂ ಜಾತಿ-ಮತಗಳ ತಾರತಮ್ಯವಿರಲಿಲ್ಲ. ಎಲ್ಲಾ ಭಾಷಿಕರ, ಎಲ್ಲಾ ಧರ್ಮೀಯರ, ಎಲ್ಲಾ ಜಾತಿಗಳ ಜನ ಇವರ ನೆರಳಿನಲ್ಲಿದ್ದರು. ಇವರೊಂದು ಸರ್ವಧರ್ಮಗಳ ಮಹಾಸಂಗಮವಾಗಿದ್ದರು. ಬುದ್ಧನ ಕರುಣೆ, ವಿವೇಕರ ಕೆಚ್ಚು, ಗಾಂಧಿಯ ಸಾಮಾಜಿಕ ಕಳಕಳಿ, ಅಂಬೇಡ್ಕರರ ಇಚ್ಛಾಶಕ್ತಿ, ಮದರ್ ತೆರೆಸಾರ ತಾಯ್ತನ….. ಹೀಗೆ ಎಲ್ಲಾ ಮಹನೀಯರ ತತ್ವಾದರ್ಶಗಳ ಸಾತ್ವಿಕ ಸತ್ಪುರುಷರಿವರು.

“ಕಾಯಕವೇ ಕೈಲಾಸ” ಎಂಬುದಕ್ಕೆ ಅನ್ವರ್ಥವಾಗಿ ಸಂತನಂತೆ ಬದುಕಿ ತಮ್ಮ ನಿರಾಡಂಬರ, ನಿಸ್ವಾರ್ಥ, ನಿರ್ಮಲ, ನಿರ್ವಂಚನೆಯ ಪ್ರಾಮಾಣಿಕತೆಯೊಂದಿಗೆ ಭಕ್ತಿ, eನ, ಕರ್ಮಯೋಗಗಳ ಸತ್ಪಥದಲ್ಲಿ ಊಹೆಗೂ ನಿಲುಕದ ರೀತಿಯಲ್ಲಿ ಸಾಧನೆಗಳ ಸರಮಾಲೆಯನ್ನೇ ಇವರು ಧರಿಸಿದ್ದರು. ಸಿದ್ಧಗಂಗೆಯ ಈ ಸಿದ್ಧಿ ಪುರುಷ ಶತಾಯುಷಿಯಾದ ಶುಭಸಂದರ್ಭದಲ್ಲಿ ನಾಡಿನ ಸಮಸ್ತ ಜನತೆಯ ಪರವಾಗಿ ಉಘೇ ಉಘೇ ಅನ್ನುವ ರೀತಿಯಲ್ಲಿ ಕರ್ನಾಟಕ ಸರ್ಕಾರ ಇವರಿಗೆ “ಕರ್ನಾಟಕರತ್ನ” ಬಿರುದಿನ ಪ್ರಶಸ್ತಿ ನೀಡಿ 2007 ರ ಏಪ್ರಿಲ್ ಒಂದರಂದು ಸನ್ಮಾನಿಸಿದೆ. ಆ ಘನ ಸಂದರ್ಭದಲ್ಲೂ ಇವರ ಹೃನ್ಮನಕಂಗಳಲ್ಲಿ ಮಿಂಚಿದ್ದು “ಸೇವಾರತ್ನ”ವೇ!.

ಹಾಗೆಯೇ ಭಾರತ ಸರ್ಕಾರದ ?ಪದ್ಮಭೂಷಣ ಪ್ರಶಸ್ತಿ? ಇವರ ಮುಡಿಗೇರಿದಾಗಲೂ ಭೂಮಿಗೆ ಭಗವಂತನಂತಿದ್ದ ಈ ಭೂಲೋಕದ ದೇವರ ಮುಖದಲ್ಲಿ ಹೊಳೆದದ್ದು ನಿಸ್ವಾರ್ಥದ ಹೊಂಬೆಳಕೇ!. ಅಂತೆಯೇ ಇಡೀ ಕರ್ನಾಟಕ ಸರ್ಕಾರವೇ ತುಮಕೂರಿನ ಸಿದ್ಧಗಂಗಾ ಮಠಕ್ಕೆ ತೆರಳಿ ಈ ಅಭಿನವ ಬಸವಣ್ಣನಿಗೆ ಅವರ 103ನೇ ಹುಟ್ಟಹಬ್ಬದ ಸಂದರ್ಭದಲ್ಲಿ 50ಕ್ಕೂ ಹೆಚ್ಚು ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ 2010 ಏಪ್ರಿಲ್ 1 ರಂದು ?ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ? ನೀಡಿ ಗೌರವಿಸಿದಾಗಲೂ ಇವರ ಇಡೀ ಶರೀರದ ತುಂಬಾ ಪ್ರಜ್ವಲಿಸಿದ್ದು ತ್ರಿವಿಧ ದಾಸೋಹದ ದಿವ್ಯ ಬೆಳಕೇ!.  ಇವೆಲ್ಲಕ್ಕೂ ಕಳಶವಿಟ್ಟಂತೆ ಕೇಂದ್ರ ಸರ್ಕಾರದ 2015ನೇ ಸಾಲಿನ ಪದ್ಮಭೂಷಣ ಪ್ರಶಸ್ತಿಗೆ ಇವರು ಭಾಜನರಾಗಿ. ಇಂತಹ ಪ್ರಶಸ್ತಿಗಳಿಗೆಲ್ಲ ಮಹಾ ಮೌಲ್ಯವನ್ನು ತಂದುಕೊಟ್ಟಿದ್ದ ಈ ಶರಣ ಚೇತನ, ಕರ್ನಾಟಕ ರತ್ನ, ನಿಜ ಅರ್ಥದ್ದಿ ಭಾರತ ರತ್ನವೇ ಆಗಿದ್ದಾರೆ!.

ಸಾಮಾನ್ಯ ಮನುಷ್ಯನಾಗಿ ಹುಟ್ಟಿ ತಮ್ಮ ಮಾನವೀಯ ಕಾಳಜಿಯ ಆಸಾಮಾನ್ಯ ವ್ಯಕ್ತಿತ್ವದಿಂದ ದೈವತ್ತ್ವಕ್ಕೇರಿ ನಡೆದಾಡುವ ದೇವರೆಂದೆ ಹೆಸರಾಗಿದ್ದ ಡಾ. ಶಿವಕುಮಾರಸ್ವಾಮೀಜಿಗಳು ನೂರ ಹನ್ನೊಂದು ವರ್ಷಗಳ ಸಾರ್ಥಕವಾದ ತುಂಬು ಜೀವನ ನಡೆಸಿ ೨೦೧೯ರ ಜನವರಿ ೨೧ರಂದು ಶಿವೈಕ್ಯರಾದರೂ ಶ್ರೀಗಳು ಎಂದೆಂದೂ ಅಜರಾಮರರು. ಈ ಅಮರ ಚೇತನದ ದಾಖಲಾರ್ಹ ಸೇವಾ ಕೈಂಕರ್ಯವನ್ನು ಜಗತ್ತು ಯಾವತ್ತೂ ಮರೆಯದು.

admin
the authoradmin

Leave a Reply

Translate to any language you want