ಮೈಸೂರು: ನಗರದ ಸೆಂಟ್ ಜೋಸೆಫ್ ಕಾಲೇಜ್ ಆಫ್ ಎಜುಕೇಷನ್ ನಲ್ಲಿ STEM ಅಕಾಡೆಮಿ ಪಿ.ಕೆ.ಎಂ. ಕಾಲೇಜ್ ಆಫ್ ಎಜುಕೇಷನ್, ಕಣ್ಣೂರ್, ಕೇರಳ ಮತ್ತು ಸೃಷ್ಟಿ ರೊಬೊಟಿಕ್ಸ್ರವರ ಸಹಯೋಗದೊಂದಿಗೆ ಭವಿಷ್ಯದ ಶಿಕ್ಷಕರಿಗಾಗಿ STEM ಶಿಕ್ಷಣ – NEP 2020 ದೃಷ್ಟಿಕೋನಗಳು ಎಂಬ ವಿಷಯದಡಿ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಸೆಂಟ್ ಜೋಸೆಫ್ ಕಾಲೇಜ್ ಆಫ್ ಎಜುಕೇಷನ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಿಯಾ ಮ್ಯಾಥ್ಯೂ ಮಾತನಾಡಿ ವಿದ್ಯಾರ್ಥಿಗಳಿಗೆ ಹೊಸತನದ ಶಿಕ್ಷಣ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸಿದರು.
ಸಂಪನ್ಮೂಲ ವ್ಯಕ್ತಿ ಸೃಷ್ಟಿ ರೊಬೊಟಿಕ್ಸ್ ನ CEO ಸುನೀಲ್ ಪಾಲ್ ಮಾತನಾಡಿ ತರಗತಿಯಲ್ಲಿ STEM ವಿಧಾನಗಳನ್ನು ಅಳವಡಿಸುವ ಬಗ್ಗೆ ಉಪಯುಕ್ತ ಮಾಹಿತಿ ನೀಡಿ, ಇಂದಿನ ಡಿಜಿಟಲ್ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ವಿಷಯಗಳ ಸಂಯೋಜಿತ ಅಧ್ಯಯನವು ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಅವಶ್ಯಕವೆಂದು ತಿಳಿಸಿದರು.
ತರಗತಿಗಳಲ್ಲಿ STEM ವಿಧಾನಗಳನ್ನು ಅಳವಡಿಸುವುದರಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಸಮಸ್ಯೆ ಪರಿಹಾರ ಸಾಮರ್ಥ್ಯ ಹಾಗೂ ಸೃಜನಶೀಲತೆ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಯೋಗಿಕ ಚಟುವಟಿಕೆಗಳು ಮತ್ತು ವಿವಿಧ ಮಾದರಿಗಳ ಪ್ರದರ್ಶನಗಳ ಮೂಲಕ ಅನುಭವಾತ್ಮಕ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ವಿದ್ಯಾರ್ಥಿಗಳು ಸ್ವತಃ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಕಲಿಕೆಯ ಗುಣಮಟ್ಟ ಹೆಚ್ಚುತ್ತದೆ ಎಂಬುದನ್ನು ಅವರು ವಿವರಿಸಿದರು.
ಇದೇ ವೇಳೆ, ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ವಯ ಅನುಭವಾತ್ಮಕ ಕಲಿಕೆ, ಕೌಶಲ್ಯಾಧಾರಿತ ಶಿಕ್ಷಣ ಮತ್ತು ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು. ಶಿಕ್ಷಕರು ತಮ್ಮ ಪಾಠಗಳಲ್ಲಿ ನವೀನ ವಿಧಾನಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿ ಕೇಂದ್ರಿತ ಕಲಿಕೆಯನ್ನು ಉತ್ತೇಜಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸೃಷ್ಟಿ ರೊಬೊಟಿಕ್ಸ್ನ ಸಿಬ್ಬಂದಿಗಳಾದ ಮಹೇಶ್ವರ್ ಎಂ. ಮೇನನ್ ಮತ್ತು ಡಾನ್ ಕುರಿಯನ್ ಡೇವಿಸ್ ಉಪಸ್ಥಿತರಿದ್ದರು. ಸುಮಾರು 184 ಬಿ.ಎಡ್ ವಿದ್ಯಾರ್ಥಿಗಳು ಹಾಗೂ ಬೋಧಕರು ಭಾಗವಹಿಸಿದ್ದರು.
ಕಾರ್ಯಕ್ರಮವು ಶಿಕ್ಷಕ ತರಬೇತಿ ವಿದ್ಯಾರ್ಥಿಗಳ ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವ ಸಾಮರ್ಥ್ಯವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸಿತು ಎಂದು ಪ್ರಾಂಶುಪಾಲರಾದ ಡಾ. ಪ್ರಿಯಾ ಮ್ಯಾಥ್ಯೂ ತಿಳಿಸಿದ್ದಾರೆ.








