LatestMysore

ದುಬಾರಿ ದುನಿಯಾದಲ್ಲಿ ನವದಂಪತಿಗೆ ಹಾಲು, ಮೊಸರು ಉಡುಗೊರೆ… ಪ್ರಜ್ಞಾವಂತ ನಾಗರಿಕ ವೇದಿಕೆ ಜಾಗೃತಿ

ಮೈಸೂರು: ರಾಜ್ಯದಲ್ಲಿ ಹಾಲು ಹಾಗೂ ಮೊಸರಿನ ದರ ಏರಿಕೆಯಿಂದ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಗಮನ ಸೆಳೆಯುವ ಉದ್ದೇಶದಿಂದ ಪ್ರಜ್ಞಾವಂತ ನಾಗರಿಕ ವೇದಿಕೆಯ ಅಧ್ಯಕ್ಷ ಕಡಕೋಳ ಜಗದೀಶ್ ಅವರು ನೂತನ ವಧು-ವರರಿಗೆ ಹಾಲು ಮತ್ತು ಮೊಸರನ್ನು ಉಡುಗೊರೆಯಾಗಿ ನೀಡಿ ಶುಭಾಶಯ ಕೋರಿದರು.

ಕಡಕೋಳದ ಶ್ರೀ ಕಾಳಿಬೀರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಕಡಕೋಳ ನಿವಾಸಿ ಮಂಜು ಹಾಗೂ ಅನನ್ಯ ಅವರ ವಿವಾಹ ಸಮಾರಂಭದಲ್ಲಿ ಈ ವಿನೂತನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮದುವೆಯ ಸಂಭ್ರಮದ ಸಂದರ್ಭದಲ್ಲಿ ಹಾಲು ಮತ್ತು ಮೊಸರನ್ನು ಉಡುಗೊರೆಯಾಗಿ ನೀಡುವ ಮೂಲಕ, ಇವು ಪ್ರತಿಯೊಂದು ಕುಟುಂಬದ ನಿತ್ಯದ ಅಗತ್ಯ ವಸ್ತುಗಳಾಗಿದ್ದು, ಅವುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಜೀವನ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂಬ ಸಂದೇಶವನ್ನು ವಿಭಿನ್ನವಾಗಿ ಸಾರಿದರು.

ಹಾಲು ಮತ್ತು ಮೊಸರು ಕೇವಲ ಆಹಾರ ಪದಾರ್ಥಗಳಲ್ಲ; ಬಡವರು ಹಾಗೂ ಮಧ್ಯಮ ವರ್ಗದ ಕುಟುಂಬಗಳ ದೈನಂದಿನ ಬದುಕಿನ ಅವಿಭಾಜ್ಯ ಅಂಗಗಳಾಗಿವೆ. ಬೆಲೆ ಏರಿಕೆಯಿಂದ ಜನಸಾಮಾನ್ಯರ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಜನಸಾಮಾನ್ಯರಿಗೆ ಹೊರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕಡಕೋಳ ಜಗದೀಶ್ ಒತ್ತಾಯಿಸಿದರು.

ನವದಂಪತಿಗಳಾದ ಮಂಜು ಮತ್ತು ಅನನ್ಯ ಅವರಿಗೆ ಶುಭಹಾರೈಸುವುದರ ಜೊತೆಗೆ ಹಾಲು ಮತ್ತು ಮೊಸರಿನ ದರ ಏರಿಕೆಯ ಪರಿಣಾಮಗಳ ಕುರಿತು ಜನಜಾಗೃತಿ ಮೂಡಿಸಿದ ಈ ವಿನೂತನ ಪ್ರಯತ್ನ ಸಾರ್ವಜನಿಕರ ಗಮನ ಸೆಳೆಯಿತು.

ಇದೇ ಸಂದರ್ಭದಲ್ಲಿ ಯುವ ಮುಖಂಡ ಜೋಗಿ ಮಂಜು, ಮಾಜಿ ನಗರಪಾಲಿಕೆ ಸದಸ್ಯ ಜಗದೀಶ್, ದೂರ ರಾಜಣ್ಣ ಸೇರಿದಂತೆ ಹಲವು ಸ್ನೇಹಿತರು ಉಪಸ್ಥಿತರಿದ್ದು ನವದಂಪತಿಗಳಿಗೆ ಶುಭಕೋರಿದರು.

admin
the authoradmin

ನಿಮ್ಮದೊಂದು ಉತ್ತರ