ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಪಟ್ಟಣದ ಖಾಸಗಿ ಕ್ಲಿನಿಕ್‌ಗೆ ಚಿಕಿತ್ಸೆಗೆಂದು ಬಂದಿದ್ದ ವ್ಯಕ್ತಿಯೋರ್ವ ವೈದ್ಯರು ನೀಡಿದ ಚುಚ್ಚುಮದ್ದಿನಿಂದ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತರ ಸಂಬಂಧಿಕರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿ ಗಳು ಕ್ಲಿನಿಕ್ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಪಟ್ಟಣದ ಸಿಎಂ.ರಸ್ತೆಯಲ್ಲಿ ರುವ ರಾಘವೇಂದ್ರ ಕ್ಲಿನಿಕ್‌ನಲ್ಲಿ ಈ ಘಟನೆ ನಡೆದಿದ್ದು, ವೈದ್ಯ ಡಾ.ಹೆಚ್.ಜಿ.ಶಂಕರ್ ಅವರು ನೀಡಿದ ಚುಚ್ಚುಮದ್ದಿನಿಂದ ರಾಮಯ್ಯ(65) ಮೃತಪಟ್ಟಿ ದ್ದಾರೆ ಎಂದು ಆರೋಪಿಸಲಾಗಿದೆ.
ರಾಮಯ್ಯ ಪಟ್ಟಣದ ಸಮೀಪವಿರುವ ಕಾಳೇನಹಳ್ಳಿ ಗ್ರಾಮದ ಪೌರಕಾರ್ಮಿಕರ ಕಾಲೋನಿಯ ನಿವಾಸಿಯಾಗಿದ್ದು, ರಾಮಯ್ಯನ ಪತ್ನಿ ಪಾಪಮ್ಮ ಗುರುವಾರ ಬೆಳಿಗ್ಗೆ ಸುಮಾರು 10 ಗಂಟೆಯ ಸಮಯ ದಲ್ಲಿ ಕ್ಲಿನಿಕ್‌ಗೆ ಬಂದು ನನ್ನ ಪತಿಗೆ ತುಂಬಾ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ ಚಿಕಿತ್ಸೆ ನೀಡಬೇಕೆಂದು ಕೋರಿದ್ದಾರೆ.
ರಾಮಯ್ಯಗೆ ಮೊದಲೇ ಪಾರ್ಶ್ವವಾಯು ಇದೆ ಎಂದು ಹೇಳಿ ಈ ಹಿಂದೆ ಪಡೆದಿದ್ದ ಚಿಕಿತ್ಸೆಯ ಔಷಧಿ ಚೀಟಿ ಮತ್ತು ಮಾತ್ರಗಳನ್ನು ಪರಿಶೀಲಿಸಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿರುವುದಾಗಿ ಹೇಳಿದ್ದರೂ ವೈದ್ಯರು ಯಾವುದನ್ನೂ ಪರಿಶೀಲಿಸದೆ ಏಕಾಏಕಿ ಚುಚ್ಚುಮದ್ದು ನೀಡಿದ್ದರಿಂದ ಸಾವನ್ನಪ್ಪಿದ್ದಾರೆಂದು ರಾಮಯ್ಯನ ಸಂಬಂಧಿಕರು ಮತ್ತು ಅವರ ಪುತ್ರ, ಪುತ್ರಿ ಆರೋಪಿಸಿದ್ದಾರೆ. ನಂತರ ರಾಮಯ್ಯನ ಸಂಬಂಧಿಕರು ಮತ್ತು ಅವರ ಪುತ್ರ, ಪುತ್ರಿ, ಗ್ರಾಮಸ್ಥರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿ, ವೈದ್ಯರ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಆದಿಜಾಂಬವ ಸಂಘದ ಅಧ್ಯಕ್ಷ ಎಂ.ಲೋಕೇಶ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ಪುರಸಭೆ ಮಾಜಿ ಅಧ್ಯಕ್ಷ ಡಿ.ಕಾಂತರಾಜು, ದಲಿತ ಮುಖಂಡರಾದ ಸಿ.ಶಂಕರ್, ಸುರೇಶ್, ರಮೇಶ್, ಮುರುಗೇಶ್, ಕುಮಾರ್, ವಿವಿಧ ಮಂಜುನಾಥ್, ಸಿದ್ದಯ್ಯ, ವಜೇಶ್, ನಂಜಯ್ಯ ಸಂಘಟನೆಯವರು ಕ್ಲಿನಿಕ್ ಎದುರು ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ರ ಇಟ್ಟು ಪ್ರತಿಭಟನೆ ನಡೆಸಿದರು.
ಕೆ.ಆರ್.ನಗರ ಪಟ್ಟಣದಲ್ಲಿ ಪರವಾನಗಿ ಇಲ್ಲದೆ ನಾಯಿ ಕೊಡೆಗಳಂತೆ ಕ್ಲಿನಿಕ್ ಗಳು ತಲೆಎತ್ತಿವೆ. ಇಲ್ಲಿ ಆಯುರ್ವೇದ ವೈದ್ಯರು ಎಂಬಿಬಿಎಸ್ ವೈದ್ಯರಂತೆ ಅಲೋಪತಿ ಚಿಕಿತ್ಸೆ ನೀಡುತ್ತಿದ್ದಾರೆ. ಬಡವರು ಚಿಕಿತ್ಸೆ ಪಡೆಯುವುದೇ ಕಷ್ಟವಾಗಿದೆ. ಹಾಗಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು, ಮೃತಪಟ್ಟಿ ವ್ಯಕ್ತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಚುಚ್ಚುಮದ್ದು ನೀಡಿದ ಆಯುರ್ವೇದ ವೈದ್ಯರನ್ನು ಕೂಡಲೇ ಬಂಧಿಸಬೇಕು ಎಂದು ತಾಲೂಕು ಆದಿಜಾಂಬವ ಸಂಘದ ಅಧ್ಯಕ್ಷ-ಎಂ. ಲೋಕೇಶ್ ಆಗ್ರಹಿಸಿದ್ದಾರೆ.








