ArticlesLatest

ಅಮ್ಮನ ಸೀರೆಯ ಸೆರಗು ಅಂದ್ರೆ ಸುಮ್ನೆನಾ? ಅದರ ಮಹತ್ವ ಒಂದೆರಡಲ್ಲ…!

 ಅಮ್ಮನ ಸೆರಗು ಅಂದ್ರೆ ಅದು ಬರಿ ಸೆರಗಲ್ಲ… ಅದೊಂದು ರೀತಿಯಲ್ಲಿ ಆಸರೆ… ಅದರಾಚೆಗೆ ಬೇಡಿದ್ದನ್ನು ನೀಡುವ ಕಾಮಧೇನು… ಹೀಗಾಗಿಯೇ ಅಮ್ಮನ ಸೆರಗಿಗೆ ತನ್ನದೇ ಆದ ಮಹತ್ವವಿದೆ. ಆ ಮಹತ್ವ ಏನು ಎಂಬುದನ್ನು ಅಮ್ಮಂದಿರ ದಿನದಂದು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಬರೆದಿದ್ದಾರೆ…

ಅನಾದಿ ಕಾಲದಿಂದಲೂ ಬಹೋಪಯೋಗಿ ಪಾವನವಸ್ತ್ರ. ಹೇಗೆ? ಎಂಬುದಕ್ಕೆ ಕೆಳಕಂಡ ಜ್ವಲಂತ ನಿದರ್ಶನಗಳು ಸತ್ಯಸಾಕ್ಷಿ ಆಗುತ್ತವೆ. ಇಂದಿನ ಮಕ್ಕಳಿಗೆ ಸೆರಗು ಎಂದರೇನಂತಲೇ ಗೊತ್ತಿಲ್ಲ. ಏಕೆಂದರೆ ಅಮ್ಮ ಸೀರೆ ಉಡುವುದೇ ಅಪರೂಪ. ಆದರೆ ಆಗಿನ ಕಾಲದಲ್ಲಿ ಮಗು ಅತ್ತರೆ ಕಂಬನಿ ಒರೆಸಲು ಅಮ್ಮನ ಸೀರೆಯ ಸೆರಗೇ ಕರವಸ್ತ್ರ. ಮಕ್ಕಳು ಆಟವಾಡಿ ಬೆವತು ಬಂದಾಗ ಬೆವರಿನ ಮೈಮುಖ ಒರೆಸಲು ಅಮ್ಮನ ಸೆರಗು ಕೈಚೌಕ, ಟವೆಲ್ ಎಲ್ಲವೂ ಆಗಿರುತ್ತಿತ್ತು.

ಮಗು ಅಮ್ಮನ ತೊಡೆಯ ಮೇಲೆ ಮಲಗಿ ನಿದ್ದೆಮಾಡಿದರೆ ಅವಳ ಸೆರಗೇ ಬೀಸಣಿಗೆ, ಛಳಿಯಾದರೆ ಬೆಚ್ಚನೆಯ ಹೊದಿಕೆ! ಯಾರಾದರೂ ಹೊಸಬರು ಮನೆಗೆ ಬಂದರೆ ನಾಚುವ ಮಗುವಿಗೆ ಅಮ್ಮನ ಸೆರಗೇ ಬಚ್ಚಿಟ್ಟುಕೊಳ್ಳಲು ಆಸರೆ, ಸೆರಗಿನ ಮರೆಯಿಂದಲೇ ಕದ್ದುಕದ್ದು ನೋಡಬಹುದು. ಅಮ್ಮನ ಸೆರಗು ಹಿಡಿದರೆ ಸಾಕು, ಅಮ್ಮನ ಹಿಂದೆ ನಡೆದುಕೊಂಡೇ ಜಗವನ್ನ ಸುತ್ತಿದ ಅನುಭವ ಆಗುತ್ತಿತ್ತು. ಮಳೆ ಬಂದಾಗ ತಾನು ನೆನೆಯುವ ಸ್ಥಿತಿ ಬಂದಾಗ, ತಾನು ನೆನೆದರೂ ಪರವಾಗಿಲ್ಲ, ತನ್ನ ಕಂದನು ನೆನೆದು ಒದ್ದೆ ಆಗಬಾರದೆಂಬ ಉದ್ದೇಶದಿಂದ ಸೆರಗಿನ ಆಸರೆ ನೀಡುವಳು… 

ಇದನ್ನೂ ಓದಿ….ಅಮ್ಮ…. ಮಾತೃತ್ವದ ಅಮರಗಾಥೆ..  ಸಂಸ್ಕೃತಿಯ ಜೀವಶಕ್ತಿ…

ಮಳೆಯಲ್ಲಿ ನೆಂದ ಒದ್ದೆತಲೆ ಒರೆಸಲು ಅಮ್ಮನ ಸೆರಗು ಸದಾಸಿದ್ದ. ಬಚ್ಚಿಟ್ಟ ತಿಂಡಿಗಳನ್ನ ಮುಚ್ಚಿಟ್ಟು ಕೊಡಲು ಅಮ್ಮನ ಸೆರಗು ಮಕ್ಕಳಿಗೆ ಯೋಗ್ಯವಾದ ಸುರಕ್ಷಿತ ಜಾಗ.    ತರಕಾರಿ ತರಲು ಚೀಲ ಮರೆತಾಗ ಸೆರಗೇ ಚೀಲ. ಗಿಡದಿಂದ ಬಿಡಿಸುವ ಹೂವುಗಳಿಗೆ ಅಥವಾ ಹೊಲಗದ್ದೆ ತೋಟದಲ್ಲಿ ಕೀಳುವ ಹಸೀಕಾಳು, ತಾಜಾಸೊಪ್ಪಿಗೆ ಸೆರಗೇ ಹೂವಿನ ಬುಟ್ಟಿ, ಹಿಡಿಇಲ್ಲದ ಬ್ಯಾಗ್, ಯಾರಾದರೂ ಮನೆಗೆ ಒಮ್ಮೆಲೇ ಬಂದು ಕುಳಿತುಕೊಳ್ಳುವ ಆಸನ, ಕುರ್ಚಿ, ಟೇಬಲ್ಲು, ಮಣೆ, ಒರೆಸಲು ಸೆರಗೇ ಸಾಧನ.

ಅಡುಗೆಮನೆಯಲ್ಲಿ ತಕ್ಷಣ ಮಸಿಬಟ್ಟೆ, ಅರಿವೆ ಸಿಗದಿದ್ದರೆ ಒಲೆಮೇಲೆ ಉಕ್ಕುವ ಹಾಲಿನ ಬಿಸಿಪಾತ್ರೆ ಇಳಿಸಲಿಕ್ಕು ಅಮ್ಮನ ಸೆರಗೇ ಬೇಕು. ಅಪ್ಪನ ಬದಲಿಗೆ ಅಥವಾ ಅಪ್ಪನು ಇಲ್ಲದಿರುವಾಗ ತನ್ನ ತಲೆಯ ಮೇಲೆ ಕಟ್ಟಿಗೆಯ, ಹುಲ್ಲಿನ ಹೊರೆ ಹೊರಲು, ಬಾವಿ ಕೆರೆ ನದಿಯಿಂದ ಕುಡಿಯುವ ನೀರು ತರುತ್ತಿದ್ದ ಮಡಕೆ, ಬಿಂದಿಗೆ, ಚೌರ್ಗೆ ಹೊತ್ತುಬರಲು ನೆತ್ತಿ ಉರಿಯದಂತೆ ತಲೆಸಿಂಬಿಗೂ ಸೆರಗನ್ನೇ ಬಳಸುತ್ತಿದ್ದಳು. ಮಂಗಳ ಕಾರ್ಯಗಳಲ್ಲಿ ಸುಮಂಗಲಿಯಾಗಿ ಮಡಿಲಕ್ಕಿ-ಬಾಗೀನ ಸ್ವೀಕರಿಸಲು ಅಥವಾ ತಾನು ಮುತ್ತೈದೆಯರಿಗೆ ನೀಡಲು ಅಮ್ಮನ ಸೆರಗು ಅನಿವಾರ್ಯದ ಸಂಪ್ರದಾಯ ಹೌದು.

ದೇವಸ್ಥಾನಗಳಲ್ಲಿ ಪ್ರಸಾದ ಸ್ವೀಕರಿಸಲು ಅಮ್ಮನು ತನ್ನ ಸೆರಗು ಬಳಸುತ್ತಿದ್ದಳು. ಗರ್ಭಿಣಿಯರ ಸೀಮಂತಕ್ಕೆ, ಗೌರಿ ಹಬ್ಬದ ಮೊರದ ಬಾಗೀನಕ್ಕೆ, ಸಂಕ್ರಾಂತಿ ಹಬ್ಬದಲ್ಲಿ ಎಳ್ಳುಬೀರುವಾಗ ತನ್ನಸೀರೆಯು ಹೊಸಾದು ಎಂಬುದನ್ನ ಲೆಕ್ಕಿಸದೇ ಸೆರಗಿನ ಸದುಪಯೋಗ ಮಾಡುವ ತಾಯಿಯು ಸರ್ವ ಶ್ರೇಷ್ಠಳು.

ಸಿಟ್ಟು ಬಂದರೆ ಏನಾದರೂ ಮಾಡಲೇ ಬೇಕೆನ್ನುವ ಛಲ ಬಂತೋ ಅಮ್ಮ ಸೆರಗು ಎಳೆದು ಸೊಂಟಕ್ಕೆ ಕಟ್ಟಿದಳೆಂದರೆ ಕಥೆ ಮುಗೀತು ಕಷ್ಟದ ಕೆಲಸವೂ ಆದಂತೇ. ಹೊಲ ಗದ್ದೆ ತೋಟ ಇತ್ಯಾದಿ ಶ್ರಮದಾಯಕ ಕೆಲಸ ಕಾರ್ಯಕ್ಕೂ ಸಿದ್ಧವಾಗಲು ಸೆರಗು ಕಟ್ಟಿದಳೆಂದರೆ ಅಪ್ಪನೂ ಒಮ್ಮೊಮ್ಮೆ ಹೆದರುತ್ತಿದ್ದ. ಹಬ್ಬ ಹರಿದಿನಗಳಲ್ಲಿ ಸೊಂಟಕ್ಕೆ ಸೆರಗುಕಟ್ಟಿ ಇಡೀಮನೆಯನ್ನು ಸ್ವಚ್ಛ ಗೊಳಿಸಲಾರಂಭಿಸಿ ಎಲ್ಲವನ್ನು ಮುಗಿಸಿದಾಗ್ಲೇ ಸೆರಗಿಗೆ ಮುಕ್ತಿ.

ಇದನ್ನೂ ಓದಿ…  ಮಕ್ಕಳನ್ನು ಸಾಕಿ ಬೆಳೆಸುವಳು ತಾಯಿ.  ಮಮತೆಯ ಕಡಲು….

ತನ್ನ ಕೂಸಿಗೆ ನೆಗಡಿಯಾಗಿ ಮೂಗಿನಲ್ಲಿ ಸಿಂಬಳ ಸೋರಲು ಶುರು ಆದಾಗಲೆಲ್ಲ ಅಮ್ಮನ ಸೆರಗೇ ಕರವಸ್ತ್ರ. ಅಪರೂಪಕ್ಕೆ ಸೆರಗೊಡ್ಡಿ ಬೇಡಿದಳೆಂದರೆ ಎಂತಹ ಕಲ್ಲು ಮನಸ್ಸಿನವ(ಜಿಪುಣ)ರೂ ಕರಗಿಬಿಡುತ್ತಾರೆ, ಏನನ್ನಾದರೂ ಕೊಟ್ಟೇ ಕೊಡುತ್ತಾರೆ?!

ಯಾವಾಗಲೂ ತನ್ನ ಹೆಂಡತಿಯ ಸೆರಗು ಹಿಡಿದು ಹಿಂದೆ ಓಡಾಡುತ್ತಿದ್ದ ಅಂದಿನ ಕಾಲದಲ್ಲಿದ್ದ “ಅಮ್ಮಾವ್ರಗಂಡ” ಗಂಡಸರೂ ಇದ್ದರು. ಆದರೆ ಈಗೀಗ ಇಂಥವರು ಕಾಣಿಸುತ್ತಿಲ್ಲ, ಏಕೆಂದರೆ ಅಲ್ಟ್ರ್ರ ಟೆಕ್ ಮಡದಿಗೆ ಸೀರೆಯೇ ಇಲ್ಲ ಎಂದ ಮೇಲೆ ಇನ್ನು ಸೆರಗಿನ ಪ್ರಶ್ನೆಯೇ ಇರಲ್ಲ?! ಅಮ್ಮ ಮತ್ತು ಅವಳ ಸೀರೆಯ ಸೆರಗಿನ ಮಹತ್ವ, ಉಪಯೋಗ ಹಾಗೂ ಸೊಬಗನ್ನು ಎಷ್ಟು ವರ್ಣಿ‌ಸಿದರೂ ಸಾಲದು. ಇಂತಹ ಮಹಿಮೆ ಉಳ್ಳ ಸೆರಗು ಈಗ ಎಲ್ಲಿಗೆ ಹೋಯಿತೋ, ಹೇಗೆ ಮಾಯವಾಯಿತೊ…?! ಬಲ್ಲವರಿದ್ದರೆ ಮುಂದಕ್ಕೆ ಬನ್ನಿರಿ.

ಯಾರ ತರ್ಕ ಏನೇ ಆಗಿರಲಿ ಒಂದಂತೂ ಸತ್ಯ, ಈಗೀಗ ಸೀರೆ ಉಡುವವರು ಕಡಿಮೆಯಾಗಿ ಸೆರಗೇ ಇಲ್ಲದಿದ್ದ ಮೇಲೆ ಇನ್ನು ಅದನ್ನು ಹಿಡಿದು  ಸಂಭ್ರಮಿಸುವ (ಹೆಣ್ಣಿನ)ತಾಯಿಯ ಮಗುವೆಲ್ಲಿ.? ಅಥವ ಸೆರಗು ಹಿಡಿದೇ ಹಿಂಬಾಲಕ ಆಗಿರುವ ಅಮ್ಮಾವ್ರ ಗಂಡನೆಲ್ಲಿ?!

admin
the authoradmin

17 ಪ್ರತಿಕ್ರಿಯೆಗಳು

  • ಯಾವಾಗಲೂ ಕುಮಾರಕವಿಯವರ ಬರವಣಿಗೆಯಲ್ಲಿ ಏನಾದ್ರೂ ವಿಶೇಷವಾದ ಅಂಶ ಇರುತ್ತದೆ ಮಾತ್ರವಲ್ಲ ಎಲ್ಲಿಯೂ ಓದಿರದ ಅಸಾಮಾನ್ಯ ಟಾಪಿಕ್ ಇದ್ದು ಹೊಸದನ್ನು ನೀಡುತ್ತದೆ. ಈ ಕಾರಣಕ್ಕೆ ಇವರ ಲೇಖನಗಳನ್ನು ಒಂದೂ ಬಿಡದೇ ಓದುತ್ತೇನೆ ಹಾಗೂ ಗೆಳೆಯರ ಬಳಗಕ್ಕೂ ಶೇರ್ ಮಾಡುತ್ತೇನೆ. ಧನ್ಯವಾದಗಳು.
    ಸತ್ಯನಾರಾಯಣ, ಮೈವಿವಿ ನಿವೃತ್ತ ಅಧೀಕ್ಷಕ, ಸರಸ್ವತಿಪುರಂ ಮೈಸೂರು

  • ಅಮ್ಮನ ಸೀರೆಯ ಸೆರಗಿನ ಮಹತ್ವ ಎಂಬ ಅದ್ಬುತ ಲೇಖನ ಬರೆದ ಪುಣ್ಯಾತ್ಮ ನಟರಾಜ ಕವಿಗಳಿಗೆ ಸಹಸ್ರ ಸಹಸ್ರ ವಂದನೆಗಳು. ಇಂತಹ ವಿಶಿಷ್ಟವಾದ ಅಸಾಧಾರಣ ಚಿಂತನೆಗಳು ನಾನೂ ಸೇರಿದಂತೆ ಬೇರೆ ಯಾರಿಗೂ ಏಕೆ ಹೊಳೆಯುವುದಿಲ್ಲ ಎಂಬುದೇ ಯಕ್ಷಪ್ರಶ್ನೆ …..???!!!. ರೇವತಿ ನಾರಾಯಣ್ ಸಾಗರ, ಶಿವಮೊಗ್ಗ ಜಿಲ್ಲೆ.

  • ಅಮ್ಮನ ಸೀರೆಯ ಸೆರಗಿನ ಮಹತ್ವ ಎಂಬ ಹೆಸರಿಂದ ಲೇಖನ ಬರೆದು ವಿಶ್ವದ ಅಮ್ಮನ ದಿನಾಚರಣೆಯನ್ನು ಅರ್ಥಪೂರ್ಣ ಮಾಡಿದ್ದಾರೆ. ಭವ್ಯವಾದ ಕನ್ನಡ ನುಡಿಮುತ್ತುಗಳು ಕುಮಾರಕವಿಯವರ ಲೇಖನದ ಅದ್ಭುತ ಶೈಲಿ, ನಮಸ್ಕಾರ
    ಯಶೋಧಮ್ಮ, ನಿವೃತ್ತ ಹೆಡ್ ಮೇಡಂ, ಭೈರವೇಶ್ವರ ನಗರ ಬೆಂಗಳೂರು

  • Bahala varshada nantara nanna kannalli anandabashpa tarisida article “ammana seere seragina mahatwa”, intaha amogha lekana publish madida janamana kannada patrike mattu barediruva kumarakavi nataraja ravarige ananta dhanyavadagalu. Amrutavalli, Hassan

  • ವಿಶ್ವ ಅಮ್ಮನ ದಿನಾಚರಣೆಯ ಅಂಗವಾಗಿ ಕುಮಾರಕವಿಯವರ ಜಾಣ್ಮೆಯ ಲೇಖನ ಅಮ್ಮನ ಸೀರೆಯ ಸೆರಗಿನ ಮಹತ್ವ ಎಂಬ ಹೆಸರಿಂದ ಎಲ್ಲರ ತನುಮನ ಗೆಲ್ಲುವಂತೆ ಇದೆ. ಧನ್ಯವಾದ ನಮಸ್ಕಾರ, ಪ್ರೇಮಲತ, ಹಾಸನ.

  • ಅಮ್ಮನ ಸೀರೆಯ ಸೆರಗಿನ ಮಹತ್ವ ಎಂಬ ಅಮ್ಮನ ದಿನಾಚರಣೆ ಲೇಖನ ಏಕ್ದಂ ಸೂಪರ್ ಆಗಿದೆ, ಧನ್ಯವಾದಗಳು ಸರ್, ಪ್ರೇಮ ಬಿನ್ ತಿಮ್ಮೇಗೌಡ, ಮಂಡ್ಯ.

  • “ಅಮ್ಮನ ಸೀರೆಯ ಸೆರಗಿನ ಮಹತ್ವ” ಎಂಬ ಅಮ್ಮನ ದಿನಾಚರಣೆಯ ಲೇಖನ ಏಕ್ದಂ ಸೂಪರ್ ಆಗಿದೆ, ಧನ್ಯವಾದಗಳು ಸರ್, ಪ್ರೇಮ ಬಿನ್ ತಿಮ್ಮೇಗೌಡ, ನೆಹರೂ ನಗರ, ಮಂಡ್ಯ.

  • ಜನಮನ ಕನ್ನಡ ಪತ್ರಿಕೆಯ ಅಭಿಮಾನಿಯಾದ ನಾನು ಇತ್ತೀಚಿನ ಲೇಖನಗಳ ಪೈಕಿ ಪ್ರಪಂಚದ ತಾಯಿಯ ದಿನಾಚರಣೆಯ ಬಗ್ಗೆ ನಟರಾಜ ಕವಿಗಳ ಲೇಖನ ಅಮ್ಮನ ಸೀರೆಯ ಸೆರಗಿನ ಮಹತ್ವ ಎಂಬುವ ಬರವಣಿಗೆ ಬಹಳ ಚೆನ್ನಾಗಿದೆ. ಧನ್ಯವಾದ ಎಲ್ಲರಿಗೂ ಒಳ್ಳೆಯದಾಗಲಿ. ವಸಂತಮ್ಮನಾಗಲಿಂಗೇಗೌಡ, ನಿವೃತ್ತ ಸೂಪರಿಂಟೆಂಡೆಂಟ್, ಆರೋಗ್ಯ ಇಲಾಖೆ, ಮಳವಳ್ಳಿ

ನಿಮ್ಮದೊಂದು ಉತ್ತರ