CrimeLatest

ಕಂಜನ್ ದಾಳಿಗೆ ಸಿಲುಕಿದ್ದ ಮಾರ್ತಾಂಡ ಸಾವು… ಮೃತ ಮಹಿಳೆ ಕುಟುಂಬಕ್ಕೆ ಪರಿಹಾರ ಘೋಷಣೆ.. ನೇತ್ರದಾನ..

ದುಬಾರೆ: ಕಂಜನ್ ಆನೆಯ ದಾಳಿಗೆ ಗಂಭೀರ ಗಾಯಗೊಂಡಿದ್ದ ಮಾರ್ತಾಂಡ ಸಾಕಾನೆ ಮಂಗಳವಾರ ಮೃತಪಟ್ಟಿದೆ. ಇನ್ನೊಂದೆಡೆ ಸಾಕಾನೆಗಳ ಕಾದಾಟದ ವೇಳೆ ಸಿಲುಕಿ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ 20ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದೆ. ಮೃತ ಮಹಿಳೆಯ ನೇತ್ರವನ್ನು ದಾನ ಮಾಡುವ ಮೂಲಕ ಸಾವಿನಲ್ಲಿಯೂ ಮಾನವೀಯತೆ ಮೆರೆಯಲಾಗಿದೆ.

ಬಹುಶಃ ಇದೇ ಮೊದಲ ಬಾರಿಗೆ ಇಂತಹದೊಂದು ದುರಂತ ದುಬಾರೆ ಆನೆ ಶಿಬಿರದಲ್ಲಿ ನಡೆದಿದ್ದು, ಶೋಕದ ವಾತಾವರಣ ನಿರ್ಮಾಣವಾಗಿದೆ. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಆನೆ ಶಿಬಿರ ಬಿಕೋ ಎನ್ನುತ್ತಿದೆ. ಸೋಮವಾರ ನಡೆದ ಘಟನೆಯ ಬಳಿಕ ಎರಡು ದಿನಗಳ ಕಾಲ ಇಲ್ಲಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಕಂಜನ್ ಆನೆ ತುಂಟನಾಗಿದ್ದು, ಬೇರೆ ಆನೆಗಳ ಮೇಲೆ ದಾಳಿ ಮಾಡುವುದು ಹೊಸದೇನಲ್ಲ. ಆದರೆ ಇದ್ದಕ್ಕಿದ್ದಂತೆ ಸೋಮವಾರ ಮಾರ್ತಾಂಡ ಆನೆಯ ಮೇಲೆ ದಾಳಿ ಮಾಡಿ ಕೋರೆಯಿಂದ ಬಲವಾಗಿ ಚುಚ್ಚಿದ್ದರಿಂದ ಗಂಭೀರ ಗಾಯವಾಗಿತ್ತು ಅಲ್ಲದೆ ನದಿಗೆ ಬಿದ್ದರೂ ಬಿಡದೆ ಅಟ್ಟಾಡಿಸಿಕೊಂಡು ತಿವಿದಿತ್ತು. ಮಾರ್ತಾಂಡ ಆನೆಗೆ ಗಂಭೀರ ಗಾಯವಾಗಿದ್ದರೂ ಅದು ಜೀವ ಭಯದಿಂದ ನೀರಿನಿಂದ ಮೇಲೆದ್ದು ಓಡಿತ್ತು. ಈ ವೇಳೆ ಅಟ್ಟಾಡಿಸಿ ತಿವಿದಿತ್ತು.

ಘಟನೆಯ ನಂತರ ಗಾಯಗೊಂಡಿದ್ದ ಮಾರ್ತಾಂಡ ಆನೆಗೆ ವನ್ಯಜೀವಿ ತಜ್ಞ ಮುಜೀಬ್ ಅವರ ಮೂಲಕ ಚಿಕಿತ್ಸೆ ನೀಡಲಾಗಿತ್ತು. ಆದರೆ ಬಲವಾದ ಗಾಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಇದೀಗ ಎರಡು ದಿನಗಳ ಕಾಲ ದುಬಾರೆ ಆನೆ ಶಿಬಿರವನ್ನು ಮುಚ್ಚಲಾಗಿದೆ ಎಂದು ಡಿಸಿಎಫ್ ಅಭಿಷೇಕ್ ತಿಳಿಸಿದ್ದಾರೆ.

ಇದೆಲ್ಲದರ ನಡುವೆ ಸಾಕಾನೆಗಳ ಕಾದಾಟ ವೇಳೆ ಮೃತಪಟ್ಟ ತಮಿಳುನಾಡು ಮೂಲದ ಮಹಿಳೆ ಜೋನ್ಸಿ ಅವರ ನೇತ್ರವನ್ನು ದಾನ ಮಾಡುವ ಮೂಲಕ ಅವರ ಪತಿ ಜೋಯಲ್ ಅವರು ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ.  ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಎಸ್ ಬೋಸರಾಜು ಅವರು ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಲ್ಲದೆ, ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 20ಲಕ್ಷ ರೂಪಾಯಿಯ ಪರಿಹಾರವನ್ನು ಘೋಷಣೆ ಮಾಡಿದ್ದಾರೆ.

ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಸಾಕಾನೆಗಳ ಕಾದಾಟದ ವೇಳೆ ಪ್ರವಾಸಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಅತ್ಯಂತ ದುರದೃಷ್ಟಕರ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ದುಬಾರೆ ಶಿಬಿರದಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿ ಪಾಲಿಸುವಂತೆ ಕೊಡಗು ಜಿಲ್ಲಾಡಳಿತಕ್ಕೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸೂಚನೆ ನೀಡಿದ್ದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ…. ದುಬಾರೆಯಲ್ಲಿ ಸಾಕಾನೆಗಳ ಕಾಳಗಕ್ಕೆ ಪ್ರವಾಸಿ ಮಹಿಳೆ ಬಲಿ…

admin
the authoradmin

Leave a Reply

Translate to any language you want