ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಕಾಫಿ ಸಿಪ್ಪೆ, ಮರದ ಹೊಟ್ಟು ನಡುವೆ ಬೀಟೆ ಮರವನ್ನು ಕೊಡಗಿನಿಂದ ಕೇರಳಕ್ಕೆ ಸಾಗಿಸುತ್ತಿದ್ದ ಲಾರಿ ಮೇಲೆ ದಾಳಿ ನಡೆಸಿರುವ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಹಾದಂಧೆಯನ್ನು ಬಯಲಿಗೆ ಎಳೆದಿದ್ದು ಚಾಲಕನನ್ನು ಬಂಧಿಸಿ 30ಲಕ್ಷ ಮೌಲ್ಯದ ಬೀಟೆ ಮರದ ಸಹಿತ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಇದೇ ರೀತಿ ಅದೆಷ್ಟು ಬಾರಿ ಬೀಟೆ ಮರವನ್ನು ಕೊಡಗು ಹುಣಸೂರು ಹೆಚ್.ಡಿ.ಕೋಟೆ ಮೂಲಕ ಕೇರಳಕ್ಕೆ ಸಾಗಾಟ ಮಾಡಿದ್ದಾರೋ ಗೊತ್ತಿಲ್ಲ. ಆದರೀಗ ಅರಣ್ಯಾಧಿಕಾರಿಗಳಿಗೆ ಸಿಕ್ಕಿ ಬೀಳುವ ಮೂಲಕ ರಹಸ್ಯವಾಗಿ ಕೇರಳಕ್ಕೆ ಬೀಟೆ ಮರ ಸಾಗಿಸುತ್ತಿದ್ದ ಪ್ರಕರಣ ಬಯಲಾಗಿದೆ.
ದಾಳಿ ವೇಳೆ ಮೂಲತಃ ಕೇರಳಂ ರಾಜ್ಯದ ಮಲಪುರಂನ ಲಾರಿ ಮಾಲೀಕ ಕಂ ಚಾಲಕ ಅಬ್ದುಲ್ ಶುಕೂರ್ ಎಂಬಾತನನ್ನು ಬಂಧಿಸಲಾಗಿದ್ದು, ಲಾರಿಯಲ್ಲಿದ್ದ ಸುಮಾರು 30ಲಕ್ಷರೂ ಬೆಲೆ ಬಾಳುವ 45ಬೀಟೆ ಮರದ ದಿಮ್ಮಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಕೊಡಗಿನಿಂದ ಲಾರಿಯಲ್ಲಿ ಕಾಫಿ ಹಾಗೂ ಮರದ ಹೊಟ್ಟು ತುಂಬಿದ ಮೂಟೆಗಳ ನಡುವೆ ಬೀಟೆ ಮರದ ದಿಮ್ಮಿಗಳನ್ನಿಟ್ಟು ಸಾಗಿಸುತ್ತಿದ್ದನು.

ಈ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಕಿರುಬನಂತನ್, ಎಸಿಎಫ್ ಮಹದೇವಯ್ಯರ ಮಾರ್ಗದರ್ಶನದಲ್ಲಿ ಹುಣಸೂರು ಆರ್‌ಎಫ್‌ಓ ಸಂತೋಷ್ ಎಂ.ಹೂಗಾರ್ ನೇತೃತ್ವದ ತಂಡ ಹುಣಸೂರು-ಎಚ್.ಡಿ.ಕೋಟೆ ಮುಖ್ಯರಸ್ತೆಯ ಆಜಾದ್ ನಗರದ ಪೆಟ್ರೋಲ್ ಬಂಕ್ ಬಳಿ ಹೊಂಚುಹಾಕಿ ಲಾರಿಯನ್ನು ಅಡ್ಡಗಟ್ಟಿ ಪರಿಶೀಲಿಸಿದ ವೇಳೆ ಮರದ ದಿಮ್ಮಿಗಳಿರುವುದು ಪತ್ತೆಯಾಗಿದೆ. ಲಾರಿಯನ್ನು ಜಪ್ತಿಮಾಡಿ, ಮರದ ತುಂಡುಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಸಹಿತ ಆರೋಪಿ ಅಬ್ದುಲ್ ಶುಕೂರ್‌ನನ್ನು ವಶಕ್ಕೆ ಪಡೆದಿದ್ದಾರೆ.
ಕಿಂಗ್ ಪಿನ್ ಪತ್ತೆಗೆ ಕ್ರಮ..
ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದ್ದು ಕೊಡಗಿನ ವಿವಿಧ ಭಾಗಗಳಿಂದ ಮರದ ದಿಮ್ಮಿಗಳನ್ನು ಖರೀದಿಸಿ ಸಾಗಿಸಲಾಗಿದೆ ಎಂದು ತಿಳಿಸಿದ್ದು, ಈ ಪ್ರಕರಣದಲ್ಲಿ ಹಲವಾರು ಮಂದಿ ಭಾಗಿಯಾಗಿರುವ ಬಗ್ಗೆ ಶಂಕೆ ಇದ್ದು, ಪ್ರಕರಣದ ಕಿಂಗ್‌ಪಿನ್ ಹಾಗೂ ಇತರೆ ಆರೋಪಿಗಳ ಪತ್ತೆಗಾಗಿ ಕ್ರಮವಹಿಸಲಾಗಿದೆ. ಆರೋಪಿಗಳ ವಿರುದ್ದ ಅರಣ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಎಫ್ ಆರ್.ಟಿ.ಕಿರುಬನಂತನ್ ತಿಳಿಸಿದ್ದು, ಪ್ರಕರಣವನ್ನು ಭೇದಿಸಿರುವ ತಂಡವನ್ನು ಪ್ರಶಂಸಿಸಿದ್ದಾರೆ.

ಎರಡು ತಿಂಗಳ ಹಿಂದೆಯಷ್ಟೆ ಲಾರಿ ಖರೀದಿ
ಅಬ್ದುಲ್ ಶುಕೂರ್ ಕೇರಳ ನೋಂದಣಿಯ ಲಾರಿಯನ್ನು ಎಲ್ಲಡೆ ತಪಾಸಣೆ ನಡೆಸುವ ಭೀತಿಯಿಂದ ಈತ ಕೃತ್ಯಕ್ಕಾಗಿಯೇ ಕರ್ನಾಟಕ ನೋಂದಣಿಯ ಸೆಕೆಂಡ್ ಹ್ಯಾಂಡ್ ಲಾರಿಯನ್ನು ಎರಡು ತಿಂಗಳ ಹಿಂದೆ ಖರೀದಿಸಿದ್ದ, ಆದರೆ ಈ ಪ್ಲಾನ್ ತಲೆಕೆಳಗಾಗಿ ಸಿಕ್ಕಿಬಿದ್ದಿದ್ದಾನೆ.
ಈ ದಂಧೆಯಲ್ಲಿ ದೊಡ್ಡ ಜಾಲವೇ ಇದ್ದು, ಕೊಡಗಿನಲ್ಲಿ ಮರದ ದಿಮ್ಮಿಗಳು ಲೋಡ್ ಆದ ನಂತರ ತೆರಳುವ ಲಾರಿ ಹೆಚ್ ಡಿ.ಕೋಟೆ ಬಳಿಯ ಹೋಟೆಲ್‌ಗಳಲ್ಲಿ ನಿಲ್ಲುತ್ತದೆ, ಅಲ್ಲಿಂದ ಬೇರೆ ಚಾಲಕ ಕೇರಳ, ಬೆಂಗಳೂರು ಮತ್ತಿತರ ಕಡೆಗೆ ಲಾರಿ ಕೊಂಡೊಯ್ಯುವ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಎಲ್ಲ ಆರೋಪಿಗಳನ್ನು ಶೀಘ್ರವೇ ಭೇಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಓ ಮಂಜುನಾಥ ಟಿ.ಎನ್, ಗಸ್ತು ಅರಣ್ಯ ಪಾಲಕರಾದ ಶಿವಪ್ಪಗಡ್ಡದವರ್, ಮಂಜುನಾಥ, ದಿವಾಕರ, ಸಿದ್ದಪ್ಪಹೊಸಮನಿ, ವಾಹನ ಚಾಲಕ ಮನೋಹರ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.








