LatestMysore

ಹುಣಸೂರಲ್ಲಿ ಮಳೆಯ ಅಬ್ಬರಕ್ಕೆ ಜನ ಕಂಗಾಲು… ರೈತರಲ್ಲಿ ಕಣ್ಣೀರು ತರಿಸಿದ ಮಳೆ.. ಲಕ್ಷಾಂತರ ರೂ. ನಷ್ಟ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತಾಲೂಕಿನಲ್ಲಿ   ಬಿರುಗಾಳಿ ಮಳೆಯ ರೌದ್ರಾವತಾರಕ್ಕೆ ಹನಗೋಡು ಹಾಗೂ ಗಾವಡಗೆರೆ ಹೋಬಳಿಯ ಅನೇಕ ಗ್ರಾಮಗಳಲ್ಲಿ ಸಾಕಷ್ಟು ಅನಾಹುತ ಸೃಷ್ಟಿಸಿದ್ದರೆ, ಹೆದ್ದಾರಿಯಲ್ಲಿ ಮರ ಉರುಳಿ ಬಿದ್ದು ಮೂರು ಗಂಟೆಗಳ ಕಾಲ ಹೆದ್ದಾರಿ ಬಂದ್ ಆಗಿ ಸಂಚಾರ ಅಸ್ತವ್ಯಸ್ತವಾಗಿತ್ತು.

ಹುಣಸೂರು-ಮಡಿಕೇರಿ ಹೆದ್ದಾರಿಯ ಹಾಳಗೆರೆಯಲ್ಲಿ, ನಾಗನಹಳ್ಳಿ, ತಮ್ಮಡಹಳ್ಳಿ, ಸಣ್ಣೆನಹಳ್ಳಿ ರಸ್ತೆಗಳಲ್ಲಿ ಮರ ಉರುಳಿ ಬಿದ್ದು ರಸ್ತೆ ಬಂದ್ ಆಗಿತ್ತು. 20ಕ್ಕೂ ಹೆಚ್ಚು ಮನೆಗಳ ಮೇಲ್ಚಾವಣಿ ಹಾರಿ ಹೋಗಿದೆ. ನೂರಾರು ಮರಗಳು ಧರೆಗುರುಳಿವೆ, ಒಂದು ಟ್ರಾನ್ಸ್ ಫಾರ್ಮರ್ ಹಾಗೂ 29 ವಿದ್ಯುತ್ ಕಂಬಗಳು ಮುರಿದಿವೆ. ಹತ್ತಾರು ಎಕರೆ ಬಾಳೆ ಬೆಳೆ ಬಾಗಿ ಹೋಗಿವೆ.  ತಂಬಾಕು ಸಸಿಮಡಿ ಮುದುಡಿ ಹೋಗಿದೆ. ಇನ್ನೂ ಅನೇಕ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ನೀಡಲಾಗಿಲ್ಲ.

ಬಿರುಗಾಳಿ ಮಳೆಗೆ ಹನಗೋಡು ಹೋಬಳಿಯ ಹಾಳಗೆರೆ, ಕಲ್ಲಳ್ಳಿ, ನಿಲುವಾಗಿಲು, ತಮ್ಮಡಹಳ್ಳಿ, ಕೊತ್ತೆಗಾಲ, ನಾಗನಹಳ್ಳಿ, ಆಡಿಗನಹಳ್ಳಿ, ನಾಗಮಂಗಲ ಹಾಗೂ ಗಾವಡಗೆರೆ ಹೋಬಳಿಯ ಚಿಟ್ಟಿಕ್ಯಾತನಹಳ್ಳಿ, ಹರವೆ, ಮೋದೂರು, ಮೈಲಾಂಬೂರು, ಶಿರೇನಹಳ್ಳಿ ಮತ್ತಿತರ ಗ್ರಾಮಗಳಲ್ಲಿ ಹಾನಿ ಸಂಭವಿಸಿದೆ. ಬಿರುಗಾಳಿಗೆ ಚಿಟ್ಟಿಕ್ಯಾತನಹಳ್ಳಿಯಲ್ಲಿ ಹೆಚ್ಚು ಹಾನಿ; ಗಾವಡಗರೆ ಹೋಬಳಿಯ ಚಿಟ್ಟಿಕ್ಯಾತನಹಳ್ಳಿಯಲ್ಲಿ 12ಮನೆಗಳು,ಶಿರೇನಹಳ್ಳಿ01, ಹರವೆ, ಮೋದೂರು ಮತ್ತಿತರ ಗ್ರಾಮಗಳಲ್ಲಿ   ಹೆಂಚು, ಕಲ್ನಾರ್‌ ಶೀಟ್‌ಗಳ  ಮೇಲಾವ್ಚಣಿ ಹಾರಿ ಹೋಗಿದ್ದರೆ, ತಂಬಾಕಿಗೂ ಹಾನಿಯಾಗಿದೆ.

ಹರವೆಯಲ್ಲಿ ವೀರಭದ್ರಪ್ಪ, ಎಸ್.ಬಿ.ಮೂರ್ತಿಯವರ ಬಾಳೆ ಬೆಳೆ ನೆಕ್ಕುರುಳಿದೆ. ಕೊತ್ತೆಗಾಲ, ತಮ್ಮಡಹಳ್ಳಿಗಳಲ್ಲಿ ಹತ್ತಾರು ಮಂದಿಯ ತಂಬಾಕು ಬೆಳೆಯಲ್ಲಿ ನೀರು ತುಂಬಿಕೊಂಡು ಗಿಡಗಳು ಜೋತು ಬಿದ್ದಿದೆ. ಹರವೆಯ ಸಂತೋಶ್ ನ ಮೇಲ್ಚಾವಣಿ ಸಂಪೂರ್ಣ ಹೊತ್ತೊಯ್ದಿದೆ. ಹನಗೋಡು ಹೋಬಳಿಯ ನಿಲುವಾಗಿಲು, ಕಲ್ಲಳ್ಳಿ, ತಮ್ಮಡಹಳ್ಳಿಗಳಲ್ಲಿ ಮನೆಗಳಿಗೆ ಹಾನಿಯಾಗಿದೆ.

ಹೆದ್ದಾರಿ ಬಂದ್ ಆಗಿತ್ತು; ಹುಣಸೂರು-ಮಡಿಕೇರಿ ಹೆದ್ದಾರಿಯ ಹಾಳಗೆರೆಯಲ್ಲಿ ಮರವೊಂದು ವಿದ್ಯುತ್‌ಲೈನ್ ಮೇಲೆ ಬಿದ್ದು, ಹತ್ತಾರು ಕಂಬಗಳು ಮುರಿದು ಬಿದ್ದು, ಮೂರು ಗಂಟೆ ಕಾಲ ಹೆದ್ದಾರಿ ಬಂದ್ ಆಗಿತ್ತು. ಅಗ್ನಿಶ್ಯಾಮಕ ದಳ, ಅರಣ್ಯ ಸಿಬ್ಬಂದಿ ತಕ್ಷಣಕ್ಕೆ ಸ್ಥಳಕ್ಕಾಗಮಿಸಿ ತೆರವುಗೊಳಿಸಿದರು.

ನಗರ ಠಾಣೆ ಇನ್ಸ್ ಪೆಕ್ಟರ್ ಶಿವಮಾದಯ್ಯ ಹಾಗೂ ಸಿಬ್ಬಂದಿ ಪರ‍್ಯಾಯ ಮಾರ್ಗದಲ್ಲಿ ವಾಹನಗಳನ್ನು ಹರಸಾಹಸ ಪಟ್ಟು ಕಳುಹಿಸಿದರಾದರೂ ಅಲ್ಲೂ ಸಹ ನಾಗನಹಳ್ಳಿ-ತಮ್ಮಡಹಳ್ಳಿ-ಸಣ್ಣೆನಹಳ್ಳಿ ರಸ್ತೆಗಳ ಮೇಲೆ ಮರ ಉರುಳಿ ಬಿದ್ದು ರಸ್ತೆ ಬಂದ್ ಆಗಿತ್ತು. ತಡ ರಾತ್ರಿ ಮರ ತೆರವುಗೊಳಿಸಲಾಯಿತು. ಹೊಲಗಳಲ್ಲಿ ಮರಗಳು ಮುರಿದು ಬಿದ್ದಿದ್ದವು. ಒಟ್ಟಾರೆ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಸರಕಾರ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಹಾನಿಗೀಡಾದ ಸ್ಥಳಗಳಿಗೆ ಗಾವಡಗೆರೆ ಹೋಬಳಿಯ ಉಪ ತಹಶೀಲ್ದಾರ್ ಅರುಣ್‌ಕುಮಾರ್, ರಾಜಸ್ವ ನಿರೀಕ್ಷಕರಾದ ನಂದೀಶ್, ಹೇಮಂತ್ ಕುಮಮಾರ್, ಗ್ರಾಮ ಆಡಳಿತಾಧಿಕಾರಿ ಚೈತ್ರಾ,  ಗ್ರಾಮ ಆಡಳಿತಾಧಿಕಾರಿ ಕಾವ್ಯ ಭೇಟಿ ಇತ್ತು ಪರಿಶೀಲಿಸಿ ಮಹಜರ್ ನಡೆಸಿದ್ದಾರೆ.

ಮಳೆ ಹಾನಿಯಿಂದ ಸಂಕಷ್ಟದಲ್ಲಿರುವ ಬಡಕುಟುಂಬ

ಬಾರಿ ಬಿರುಗಾಳಿಗೆ ಮನೆಯ ಸಿಮೆಂಟ್ ಶೀಟ್ ಗಳು ಹಾರಿ ಹೋಗಿರುವ ಘಟನೆ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಶಿರೇನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಗ್ರಾಮದ ಸುಶೀಲ ರಾಜು ಎಂಬುವವರಿಗೆ ಸೇರಿದ ಮನೆಯ ಸಿಮೆಂಟ್ ಶೀಟುಗಳು ಹಾರಿಹೋಗಿವೆ

ಮನೆಯಲ್ಲಿ ಸುಶೀಲಮ್ಮ ರಾಜು ದಂಪತಿಗಳು ಜೊತೆ  ತಮ್ಮ ಮಗಳು ಮಗುವಿನೊಂದಿಗೆ ಮಲಗಿದ ಸಮಯದಲ್ಲಿ ಏಕಏಕಿ ಬಿರುಗಾಳಿ ಬೀಸಿದ್ದರಿಂದ ಸೀಟುಗಳು ಹಾರಿ ಹೋಗುವುದರಲ್ಲಿ ಮನೆಯೊಳಗೆ ಬಿದ್ದ ಪರಿಣಾಮ ಅದೃಷ್ಟ ವಸತಿ ಯಾವುದೇ ಮಕ್ಕಳಿಗೆ ಹಾನಿಯಾಗಿಲ್ಲ. ಪ್ರಾಣಪಾಯದಿಂದ ಪಾರು:- ಇನ್ನು ತಮ್ಮ ಮಗಳು ಬಾಳಂತಿ ಮಗುವಿನೂಂದಿಗೆ ಮಲಗಿದ ಸಂದರ್ಭದಲ್ಲೇ ಏಕಾಏಕಿ ಶೀಟುಗಳು ಹಾರಿ ಹೋಗಿ ಜೊತೆಗೆ ಮನೆ ಒಳಗೆ ಬಿದ್ದ ಪರಿಣಾಮ ಪ್ರಾಣಾಪಯದಿಂದ  ತಮ್ಮ ಇನ್ನಿಬ್ಬರು ಮಕ್ಕಳು ಪಾರಾಗಿದ್ದಾರೆ

ಗ್ರಾಮ ಆಡಳಿತಾಧಿಕಾರಿ ಪಲ್ಲವಿ ಭೇಟಿ ನೀಡಿ ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ನೀಡುವಂತೆ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

admin
the authoradmin

Leave a Reply

Translate to any language you want