LatestMysore

ಬೀದರ್ ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದವರ ವಿರುದ್ಧ ಕ್ರಮಕ್ಕೆ ಹುಣಸೂರಲ್ಲಿ ಮನವಿ ಸಲ್ಲಿಕೆ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಬೀದರ್ ಜಿಲ್ಲೆಯಲ್ಲಿ ದಲಿತ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ದುಷ್ಟರನ್ನು ಕೂಡಲೇ ಬಂಧಿಸಿ ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ  ವಿಧಿಸಬೇಕೆಂದು  ಹಾಗೂ ಶಿವಮೊಗ್ಗದಲ್ಲಿ ದಲಿತರಿಗೆ ರಸ್ತೆಗೆ ನಿರ್ಭಂಧಿಸಿ ದೌರ್ಜನ್ಯವೆಸಗಿರುವುದನ್ನು ಖಂಡಿಸಿ ದಲಿತ ಮಹಿಳಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯು ಸರ್ಕಾರಕ್ಕೆ ಒತ್ತಾಯಿಸಿ ಇಂದು ತಹಸೀಲ್ದಾರ್ ಮಂಜುನಾಥ್ ರವರಿಗೆ ಮನವಿ ಪತ್ರ ಸಲ್ಲಿಸಿದರು.

ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಮಹದೇವಮ್ಮ ಕಟ್ಟೆಮಳಲವಾಡಿದವರು ಮಾತನಾಡಿ  ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರೆಬೆಳಸಿ ಗ್ರಾಮದಲ್ಲಿ ಪರಿಶಿಷ್ಟ ಜನಾಂಗದ ಕಾಲೋನಿಯಲ್ಲಿ ವಾಸ ಮಾಡುತ್ತಿರುವ ದಲಿತ ಸಮುದಾಯದವರು ತಿರುಗಾಡುವ ರಸ್ತೆಯನ್ನು ಸವರ್ಣೀಯರು ಅಕ್ರಮವಾಗಿ ಒತ್ತುವರಿ  ಮಾಡಿಕೊಂಡು ರಸ್ತೆ ಸಂಪರ್ಕವನ್ನು ನಿರ್ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಸರ್ಕಾರ ದಲಿತರ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದರೂ ಸಹ ಸವರ್ಣೀಯರಿಂದ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯತ್ತಲೇ ಇದೆ.  ಇದನ್ನು ತೀವ್ರವಾಗಿ ಖಂಡಿಸುತ್ತೇನೆ.

ಬೀದರ್ ಜಿಲ್ಲೆಯ ಕಮಲ ನಗರ, ಔರಾದ  ತಾಲೂಕಿನಲ್ಲಿ ಪ್ರತಿಭಾವಂತ ಕಬಡ್ಡಿ ಆಟಗಾರ್ತಿ  ಶೋಭಾ ರಾಣಡೆ ಎಂಬ ದಲಿತ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ ಅತ್ಯಂತ ಭೀಕರವಾಗಿ, ಹೀನಾಯವಾಗಿ  ಕೊಲೆ ಮಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ.

ಬಾಲಕಿಯ ಮೇಲಿನ ಅತ್ಯಾಚಾರ ಕ್ರೂರ ದೌರ್ಜನ್ಯ ಮತ್ತು ಕೊಲೆ ಪ್ರಕರಣ ಇಡೀ ಮಾನವೀಯತೆಯನ್ನೇ ತಲೆತಗ್ಗಿಸುವಂತೆ ಮಾಡಿದೆ. ಒಬ್ಬ ಉದಯೋನ್ಮುಖ ಕ್ರೀಡಾಪಟುವಿನ ಕನಸು ಭವಿಷ್ಯ ಮತ್ತು ಜೀವನವನ್ನು ಇಷ್ಟು ಅಮಾನವೀಯವಾಗಿ ಹೊಸಕಿ ಹಾಕಿರುವುದು  ಮನಕಲಕುವಂತೆ ಮಾಡಿದೆ.

75 ವರ್ಷಗಳ ಸ್ವಾತಂತ್ರ್ಯ ಭಾರತದಲ್ಲಿ ಈ ನೆಲದ ಮೂಲ ನಿವಾಸಿಗಳ ಬದುಕು ಮತ್ತು ಭಾವನೆಗಳು ಇಂದಿಗೂ ಶೋಚನೀಯ. ದಲಿತ ಸಮುದಾಯಗಳು ವಾಸಿಸುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಒಂದು ಕಡೆಯಾದರೆ ಸೌಲಭ್ಯಗಳನ್ನು ಉಪಯೋಗಿಸದಂತೆ ಮೇಲ್ದರ್ಜೆಯವರ ದೌರ್ಜನ್ಯ ಇವೆರಡರ ನಡುವೆ ದಲಿತ ಹೆಣ್ಣು ಮಕ್ಕಳ ಮೇಲಿನ ನಿರಂತರ ದೌರ್ಜನ್ಯ ಮತ್ತು ಅತ್ಯಾಚಾರ ಹಾಗೂ ಹತ್ಯೆಗಳು ಈ ದೇಶದ ಶೋಷಿತ ಸಮುದಾಯಗಳ ಮನಸ್ಸನ್ನು ಕಂಗಡಿಸಿದೆ.

ಇಂತಹ ಕ್ರೂರ ಕೃತ್ಯ ಎಸಗಿದ ರಾಕ್ಷಸರಿಗೆ ಕಾನೂನಿನ ಅಡಿಯಲ್ಲಿ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಇನ್ನು ಮುಂದೆ ಯಾರು ಇಂತಹ ಘೋರ ಅಪರಾಧ ಮಾಡಲು ಧೈರ್ಯ ಮಾಡದಂತೆ ಕಟ್ಟುನಿಟಿನ ಕ್ರಮ ಕೈಗೊಳ್ಳಬೇಕು. ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರು ಕಾನೂನಿನ ಮುಂದೆ ಎಲ್ಲರೂ ಒಂದೇ ಎಂಬ ನಿಟ್ಟಿನಲ್ಲಿ ಅವರಿಗೆ ಉಗ್ರ ಶಿಕ್ಷೆ ವಿಧಿಸಬೇಕು  ಹಾಗೂ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ಮಹಿಳೆಯರ ಹಾಗೂ ಹೆಣ್ಣು ಮಕ್ಕಳ ಸುರಕ್ಷತೆಗೆ ಸಮಾಜ ಮತ್ತು ಸರ್ಕಾರಗಳು ಇನ್ನಷ್ಟು ಕಠಿಣ ಹೆಜ್ಜೆಗಳನ್ನು ಇಡಬೇಕಾದ ಅನಿವಾರ್ಯತೆ ಇದೆ.

ಈ ನಿಟ್ಟಿನಲ್ಲಿ  ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಉಗ್ರ ಶಿಕ್ಷೆ ನೀಡಿ  ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕೆಂದು ತಹಸಿಲ್ದಾರ್ ಹುಣಸೂರು ರವರ ಮುಖಾಂತರ ಸರ್ಕಾರಕ್ಕೆ ದಸಂಸ ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಹದೇವಮ್ಮ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ, ಅಂಬೇಡ್ಕರ್ ವಾದ, ಜಿಲ್ಲಾ ಸಂಘಟನಾ ಸಂಚಾಲಕರಾದ  ಕೊಳಗಟ್ಟ ಕೃಷ್ಣ,  ಅಹಿಂದ  ಜಾಗೃತ ವೇದಿಕೆಯ ನಗರಾಧ್ಯಕ್ಷರಾದ ಸೋಮಣ್ಣ, ತಾಲೂಕು ಸಂಯೋಜಕರಾದ  ವೇಣು,  ಚಿಕ್ಕಹುಣಸೂರು  ರಾಜು ಹಿರಿಯ ಹೋರಾಟಗಾರರು ಜೆ ಮಾದೇವ್,  ಮಹಿಳಾ ಸಂಘಟನಾ ಸಂಚಾಲಕರಾದ ಗಿರಿಜಮ್ಮ,  ವೀಣಾ, ಪ್ರಭಾವತಿ  ಮತ್ತು ಇತರರು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want