
ಕೆ.ಆರ್.ನಗರ(ಜಿಟೆಕ್ ಶಂಕರ್): ದೇಶ ಕಟ್ಟುವ ಕೆಲಸದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದ್ದು ಅವರು ನಮ್ಮ ಬೆನ್ನೆಲುಬು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್.ಚಂದನ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ವತಿಯಿಂದ ನಡೆದ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ನಿಮ್ಮ ಹಕ್ಕುಗಳನ್ನು ಪಡೆಯಲು ಜಾಗೃತರಾಗಿರಿ ಎಂದರು.
ಸಮಾಜದ ಸರ್ವರೂ ಕಾರ್ಮಿಕರನ್ನು ಗೌರವಿಸಬೇಕು ಮತ್ತು ಇಲಾಖೆಯ ಅಧಿಕಾರಿಗಳು ಅನರ್ಹ ಕಾರ್ಮಿಕರನ್ನು ಹೊರತುಪಡಿಸಿ ಅರ್ಹರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ದೊರಕಿಸಿಕೊಡಬೇಕು ಎಂದು ಸಲಹೆ ನೀಡಿದರಲ್ಲದೆ, ಕಾರ್ಮಿಕರು ಸಹ ಕೆಲಸ ಮಾಡುವಾಗ ರಕ್ಷಣಾ ಪರಿಕರಗಳನ್ನು ಬಳಸಿಕೊಂಡು ಸುರಕ್ಷಿತವಾಗಿರಬೇಕು ಎಂದು ತಿಳಿಸಿದ ಅವರು ನೀವು ಆರೋಗ್ಯವಾಗಿದ್ದರೆ ಸುಭದ್ರ ಸಮಾಜ ಕಟ್ಟಬಹುದೆಂದರು.
ಹೆಚ್ಚುವರಿ ಸಿವಿಲ್ ನ್ಯಾಯಾದೀಶೆ ಅಸ್ರೀನಾ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಹಂಬಲಿಸುವ ದಿನಗಳಲ್ಲಿ ಕಾರ್ಮಿಕರು ಸಂಕಷ್ಠದಿಂದ ಕೆಲಸ ಮಾಡಿ ಇತರರಿಗೆ ಮಾದರಿಯಾಗಿದ್ದಾರೆಂದು ಸಂತಸ ವ್ಯಕ್ತಪಡಿಸಿದರು. ಕನಿಷ್ಠ ವೇತನ ಕಾಯಿದೆಯ ಜತೆಗೆ ಪ್ರತಿ ಕಾರ್ಮಿಕ ದಿನಂಪ್ರತಿ 8 ಗಂಟೆ ಕೆಲಸ ಮಾಡಬೇಕು ಅದಕ್ಕಿಂತ ಹೆಚ್ಚಾಗಿ ಕೆಲಸ ಮಾಡುವಂತಿಲ್ಲ ಹಾಗಾಗಿ ಈ ನಿಯಮ ಜಾರಿಯಾಗದಿದ್ದರೆ ಅದು ಶಿಕ್ಷಾರ್ಹ ಅಪರಾಧ ಎಂದರು.

ಮರಣ ಹೊಂದಿದ ಕಾರ್ಮಿಕರ ಕುಟುಂಬಕ್ಕೆ ಪರಿಹಾರ, 60 ವರ್ಷಗಳ ನಂತರ ನಿವೃತ್ತಿ ವೇತನ ಮತ್ತು ಗರ್ಬಿಣಿ ಕಾರ್ಮಿಕರಿಗೆ ಸವಲತ್ತು ಸೇರಿದಂತೆ ಇತರ ಅನುಕೂಲಗಳಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಮಾತನಾಡಿದರು. ಈ ಸಂದರ್ಭದಲ್ಲಿ ನ್ಯಾಯಾಧೀಶರುಗಳು ಮತ್ತು ಅಧಿಕಾರಿಗಳು ಕಿಟ್ ಗಳನ್ನು ವಿತರಿಸಿ ಕಾರ್ಮಿಕ ದಿನಾಚರಣೆಯ ಶುಭಾಶಯ ಕೋರಿದರು.
ಸಿಡಿಪಿಒ ಸಿ.ಎಂ.ಅಣ್ಣಯ್ಯ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕ ಶಂಕರಮೂರ್ತಿ, ಹಿರಿಯ ಕಾರ್ಮಿಕ ನಿರೀಕ್ಷಕ ಹೆಚ್.ಪಿ.ಜಯಣ್ಣ, ಕಾರ್ಮಿಕ ನಿರೀಕ್ಷಕ ಗೋವಿಂದರಾಜ್ ಯಾದವ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ನಿರ್ದೇಶಕ ಹೆಚ್.ಪಿ.ಮಲ್ಲಿಕಾರ್ಜುನ, ವಕೀಲೆ ಪ್ರಭಾವತಿ ಮತ್ತು ಕಾರ್ಮಿಕರ ನಿರೀಕ್ಷರ ಕಚೇರಿಯ ಸಿಬ್ಬಂದಿ ಇದ್ದರು








