ಮೈಸೂರು : ಮನುಷ್ಯನ ಸ್ವಾರ್ಥದಿಂದ ಪರಿಸರದ ಮೇಲೆ ದೌರ್ಜನ್ಯ ನಡೆದಿದೆ. ಸಮತೋಲನ ವ್ಯವಸ್ಥೆ ಹದಗೆಟ್ಟಿದೆ. ತತ್ಪರಿಣಾಮವಾಗಿ ಹವಾಮಾನ ವೈಪರೀತ್ಯಗಳು ಸಂಭವಿಸುತ್ತಿವೆ. ಇದರಿಂದಾಗಿ ಒಂದೇ ದಿನದಲ್ಲಿ ಎಲ್ಲ ಋತುಗಳು ಘಟಿಸುತ್ತಿವೆ. ಇದು ಜೀವ ಸಂಕುಲಕ್ಕೆ ತುಂಬ ಅಪಾಯಕಾರಿ ಎಂದು ಸಾಹಿತಿ ಟಿ. ಸತೀಶ್ ಜವರೇಗೌಡ ಆತಂಕ ವ್ಯಕ್ತಪಡಿಸಿದರು.

ತಾಲ್ಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಕೋ ಕ್ಲಬ್ ವತಿಯಿಂದ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪರಿಸರ ನಾಶದಿಂದ ಮನುಷ್ಯ ಮಾತ್ರವಲ್ಲದೆ, ಇಡೀ ಜೀವ ವ್ಯವಸ್ಥೆಯೇ ವಿನಾಶದ ಹಾದಿಯಲ್ಲಿದೆ. ದಿನೇ ದಿನೆ ನೆಮ್ಮದಿ ದೂರವಾಗುತ್ತಿದೆ ಎಂದು ನುಡಿದರು.

ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಮಣ್ಣಿನ ಮಾಲಿನ್ಯ ಹೆಚ್ಚಿದೆ. ಮಳೆ ನೀರು ಭೂಮಿಯಲ್ಲಿ ಇಂಗುತ್ತಿಲ್ಲ. ಅಂತರ್ಜಲ ಮಟ್ಟ ಕ್ಷೀಣಿಸಿದೆ. ಯಾರೂ ಕೂಡ ನೀರಿನ ಮಿತಳಕೆಯ ಬಗ್ಗೆ ಗಮನ ವಹಿಸುತ್ತಿಲ್ಲ. ಮನುಷ್ಯ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದರೆ, ಮುಂದೆ ಪ್ರಕೃತಿಯೇ ತನ್ನ ವಿಕೋಪಗಳ ಮೂಲಕ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.
ವಿದ್ಯಾರ್ಥಿಗಳು ತಮ್ಮ ಶಾಲಾವರಣ, ಮನೆಯ ಸುತ್ತ ಮುತ್ತ, ಊರಿನ ರಸ್ತೆಯ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕು. ಅವುಗಳನ್ನು ದತ್ತು ಪಡೆದು ಪೋಷಿಸುವ ಮೂಲಕ ಪರಿಸರದ ರಕ್ಷಣೆಗೆ ಮುಂದಾಗಬೇಕು. ಆಗ ಮಾತ್ರ ಜೀವ ಜಗತ್ತು ನೆಮ್ಮದಿಯಿಂದ ಬದಕಲು ಸಾಧ್ಯ ಎಂದರು.

ಮುಖ್ಯ ಶಿಕ್ಷಕಿ ಪಿ.ಎನ್. ವೀಣಾ ಮಾತನಾಡಿ, ವಿದ್ಯಾರ್ಥಿಗಳು ಪರಿಸರವನ್ನು ಪ್ರೀತಿಸಬೇಕು. ಎಲ್ಲಾ ಕಡೆ ಗಿಡಗಳನ್ನು ನೆಟ್ಟು ಹಾರೈಕೆ ಮಾಡಬೇಕು. ಆಗ ಸುಂದರವಾದ ಪ್ರಕೃತಿ ನಗುತ್ತದೆ. ಉತ್ತಮ ವಾತಾವರಣ ನಿರ್ಮಾಣಗೊಳ್ಳುತ್ತದೆ. ಶಾಲೆಯ ಆವರಣದಲ್ಲಿ ಗಿಡಮರಗಳನ್ನು ಸಂರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಪಿ.ಎಲ್. ಭಾಗ್ಯ, ಕಲ್ಪನ, ಆರ್.ಹೆಚ್. ಶ್ರೀದೇವಿ, ಬಿ.ಎಂ. ಸರಸ್ವತಿ, ಸೌಜನ್ಯ, ಕೆ. ವಸಂತಲಕ್ಷ್ಮಿ, ಸುನೀಲ್ ಕುಮಾರ್, ರಂಗಸ್ವಾಮಿ, ಮಹಮ್ಮದ್ ಸುಹೇಲ್, ಕೀರ್ತಿ ಕುಮಾರ್ ಉಪಸ್ಥಿತರಿದ್ದರು. ಮಕ್ಕಳು ಮತ್ತು ಶಿಕ್ಷಕರು ಶಾಲಾವರಣದಲ್ಲಿ ಹೂ, ಹಣ್ಣು, ತರಕಾರಿ ಗಿಡಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.








