ArticlesLatest

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-7

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ   ಪುಸ್ತಕ ವಿಮರ್ಶೆ)ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು,  ವಿವಿಧ ಲೇಖಕರ ಸಂಪಾದಕತ್ವದ  ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.

31 ಕೃತಿ:ಅತ್ಯುನ್ನತಿಯೊಳ್ ಅಮರಸಿಂಧೂದ್ಭವಂ

ಸಂಪಾದಕ: ಬಿ.ಕೆ.ಹಿರೇಮಠ

ಆದಿಕವಿ ಪಂಪನು ರಚಿಸಿದ ಓಂಪ್ರಥಮ ಮಹಾಕಾವ್ಯ ಆಗಿರುವ “ಮಹಾಭಾರತ” ಎಂಬ ಮೂಲ ಕೃತಿ ಆಧಾರಿತದ ಒಂದು ಸಂಪಾದಿತ ಪುಸ್ತಕ ಇದು. ಇಲ್ಲಿ ಬರುವಂಥ ಪ್ರಮುಖನಾದ ಕುರುವಂಶ ಪಿತಾಮಹ ಭೀಷ್ಮನ ಪಾತ್ರದ ಸುತ್ತಲೂ ಹೆಣೆದ ಕಥಾ ಹಂದರ ಭಾಗಗಳನ್ನು ಆರಿಸಿ ಪೋಣಿಸಿದ ಒಂದು ಛಾಯಾ ಸಂಕಲನ ಕೃತಿ.

ಪದವಿ ತರಗತಿಯ ಪಠ್ಯ ಪುಸ್ತಕ ಆಗಿದ್ದರೂ ವಿದ್ಯಾರ್ಥಿ ಅಲ್ಲದ ಸಾಮಾನ್ಯ ಓದುಗರಿಗೆ ಸರಾಗವಾಗಿ ಓದಿಸಿಕೊಂಡು ಹೋಗುವ ಅಥವ ಸುಲಭದಲ್ಲಿ ಅರ್ಥ ಆಗುವ ಸರಳ ಭಾಷೆಯ ಕೊರತೆ ಇರುವುದರಿಂದ ಭಾಷಾ ಪ್ರೌಢತೆಯ ಸೊಗಡು ತುಸು ಕಠಿಣ ಎನಿಸಬಹುದು.

ಇಷ್ಟಿದ್ದರೂ ಮೂಲ ಕವಿ ಪಂಪನ ಆಶಯಕ್ಕೆ ಲೋಪ ಬಾರದಂತೆ ಪದ್ಯ ಗದ್ಯ ಭಾಗಗಳನ್ನು ಸಮಂಜಸವಾಗಿ ಜೋಡಿಸಲಾಗಿದೆ ಎಂಬುದು ತೃಪ್ತಿಕರ ಅಂಶ. ವಿದ್ಯಾಭ್ಯಾಸದ ಮತ್ತು ಮಾಹಿತಿ ಅಧ್ಯಯನದ ಅನುಕೂಲಕ್ಕಾಗಿ ವಿದ್ಯಾರ್ಥಿಗೆ ಅಗತ್ಯವಿರುವ ಶಬ್ಧಾರ್ಥ ಟಿಪ್ಪಣಿ ಪ್ರಸ್ತಾವನೆ ಮುಂತಾದವುಗಳಿಂದ ಕೂಡಿದ ಉಪಯುಕ್ತವಾದ ಒಂದು ಪಠ್ಯ-ಪುಸ್ತಕ.

(ಜೂನ್1979″ಗ್ರಂಥಲೋಕ” ಮಾಸಪತ್ರಿಕೆಯಲ್ಲಿ ಪ್ರಕಟಿತ)

32 ಕೃತಿ: ತಲ್ಲಣಿಸದಿರು

ಕರ್ತೃ: ಸೇವ ನಮಿರಾಜಮಲ್ಲ

ಕನ್ನಡ ಸಾಹಿತ್ಯ ಸಾಗರದಲ್ಲಿ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಅಲ್ಲೊಂದು ಇಲ್ಲೊಂದು ಕಥೆ ಕಾದಂಬರಿ ಲೇಖನ-ಸಂಶೋಧನ ಲೇಖನ ಪ್ರಕಟವಾಗುತ್ತದೆ. ಪಠ್ಯ ಪುಸ್ತಕ ಹೊರತು ಪಡಿಸಿ ಉಪಯುಕ್ತವಾದ ವೈಜ್ಞಾನಿಕ ಕತೆ ಕಾದಂಬರಿ ಬರೆದವರಂತೂ ಬೆರಳೆಣಿಕೆಯಷ್ಟು ಮಾತ್ರ. ಇಂಥವರಲ್ಲಿ ಅಗ್ರಸ್ಥಾನ ಪಡೆದವರು ಡಾ.ಶಿವರಾಮಕಾರಂತ, ಪ್ರೊ.ಪೂರ್ಣಚಂದ್ರತೇಜಸ್ವಿ, ಪ್ರೊ.ಜಿ.ಟಿ. ನಾರಾಯಣರಾವ್, ಡಾ.ಭೂಸನೂರಮಠ, ಮುಂತಾದವರು.

ಭೂವಿಜ್ಞಾನ ಲೇಖಕರಾದ ಪ್ರೊಫೆಸರ್ ಎಸ್.ಸತ್ಯನಾರಾಯಣ, ಡಾ.ಸ.ರ.ಸುದರ್ಶನ, ಶ್ರೀಧರ್ ಮುಂತಾದ ವಿಜ್ಞಾನ ಸಾಹಿತಿಗಳ ಗುಂಪಿಗೆ ಲೇಖಕರಾದ ಸೇವ ನಮಿರಾಜಮಲ್ಲರೂ ಸೇರುತ್ತಾರೆ. ಈಗಾಗಲೇ ಹಲವಾರು ಜನಪ್ರಿಯ ಕೃತಿಗಳನ್ನು ಬರೆದು ಕನ್ನಡ ನಾಡಿನ ಓದುಗರಿಗೆ ಮತ್ತು ವಿದಾರ್ಥಿಗಳಿಗೆ ಚಿರ ಪರಿಚಿತರಾದ ಇವರು ಭೂವಿಜ್ಞಾನದ ಬಗ್ಗೆ ತಲ್ಲಣಿಸದಿರು ಎಂಬ ವೈಜ್ಞಾನಿಕ ಕಾದಂಬರಿ ಬರೆಯುವ ಮೂಲಕ ಮತ್ತೊಂದು ಮಾಹಿತಿಪೂರ್ಣ ಕೃತಿಯನ್ನು ಲೋಕಾರ್ಪಣೆ ಮಾಡಿದ್ದಾರೆ. ಇದು ಮೆಚ್ಚುವಂತದ್ದು.

ಶ್ರೀಸಾಮಾನ್ಯ ಆದಿಯಾಗಿ ಪ್ರತಿಯೊಬ್ಬರೂ ದಿಗಿಲುಗೊಳ್ಳುವ ಪ್ರಕೃತಿ ವಿಕೋಪದ ಭೂಕಂಪನ ಬಗ್ಗೆ ಆಕರ್ಷಕ-ಪ್ರಯೋಜನ ಕಾರಿಯಾದ ತಲ್ಲಣಿಸದಿರು ಕಾದಂಬರಿಯ ಬರವಣಿಗೆ ಶೈಲಿ ಮತ್ತು ಸಚಿತ್ರ ವಿವರಣೆ ಈ ಪುಸ್ತಕವನ್ನು ಕೊಂಡು ಓದಿದವರಿಗೆ ಮಾತ್ರವಲ್ಲದೆ ಈಬಗ್ಗೆ ಕೇಳಿತಿಳಿದು ಮನವರಿಕೆ ಮಾಡಿಕೊಂಡ ಪ್ರತಿಯೊಬ್ಬರಿಗು ಭೂಕಂಪದ ಆಗುಹೋಗುಗಳ ಬಗ್ಗೆ ಒಂದು ಸ್ಪಷ್ಟವಾದ ಅರಿವು ಮೂಡಿಸುವ ಧೈರ್ಯ ವಿಶ್ವಾಸದ ಧೃಡ ನಿಲುವು ತಾಳುವ ಸಂಕಲ್ಪ ಫಲಿಸುತ್ತದೆ. ಹೀಗಾಗಿ ಈ ಲೇಖಕರ ಪ್ರಾಮಾಣಿಕ ಪ್ರಯತ್ನವು ಶ್ಲಾಘನೀಯ ಎನಿಸುತ್ತದೆ.

ಅಪರೂಪದ ತಲ್ಲಣಿಸದಿರು ವೈಜ್ಞಾನಿಕ ಕಾದಂಬರಿಯ ಕೇಂದ್ರ ಬಿಂದು ಒಂದು ಭೂಕಂಪ. ಇಂಥದ್ದೊಂದು ನೈಸರ್ಗಿಕ ಘಟನೆಯ ಹಿನ್ನೆಲೆಯಲ್ಲಿ ಬರುವ ಹಲವು ವಿಚಿತ್ರ ಸ್ವಭಾವದ ಪಾತ್ರಗಳಾದ ಅಣ್ಣಪ್ಪ,  ತಾರಾ, ಜೋಶಿ, ಶೇಷಾದ್ರಿ, ಸೇಠ್ ಆತ್ಮಾರಾಂ, ಗ್ರೇಸಿ, ಜೇಕಬ್ ಮತ್ತು ಆತನ ಮಡದಿ-ಮಕ್ಕಳು ಎಲ್ಲರೂ ವಿಭಿನ್ನರು.

ಭೂಕಂಪದ ಒಂದೇ ಘಟನೆಯನ್ನು ಇವರೆಲ್ಲರೂ ತಮ್ಮದೇ ಆದ ಬಗೆಬಗೆಯ ರೀತಿಯಲ್ಲಿ ಕಂಡು ತತ್ತರಿಸಿ ಹೋಗುವುದು. ಪ್ರತಿ ಯೊಬ್ಬರೂ ತರಾವರಿ ತರಾತುರಿ ಭಯ ಭಕ್ತಿಯಿಂದ ತಂತಮ್ಮ ನಂಬಿಕೆಯಂತೆ ಚಿತ್ರ ವಿಚಿತ್ರವಾಗಿ ವರ್ತಿಸುವುದು. ಅವರವರ ಧರ್ಮ-ಮನೋಧರ್ಮದ ವ್ಯಾಕುಲತೆಗಳ ವೈವಿಧ್ಯತೆಯನ್ನು ವಿಭಿನ್ನವಾಗಿ ಪ್ರದರ್ಶಿಸುವುದು ಮುಂತಾದ ಸಾಮಾಜಿಕ ಚಿತ್ರಣ ವನ್ನು ಪಕ್ಷಪಾತವಿಲ್ಲದಂತೆ ಪ್ರತಿಯೊಬ್ಬ ಸ್ತ್ರೀ-ಪುರುಷ-ಮಕ್ಕಳ ಪಾತ್ರಗಳನ್ನು ಚೆನ್ನಾಗಿಯೇ ಚಿತ್ರಿಸಿದ್ದಾರೆ. ಅಲ್ಲದೇ ಅವರೆಲ್ಲರ ಅನುಭವದ ದೈಹಿಕ ಮಾನಸಿಕ ಚಟುವಟಿಕೆಗಳನ್ನೂ ಗಣನೆಗೆ ತೆಗೆದುಕೊಂಡಿದ್ದಾರೆ.ಅವರವರ ವೈಯಕ್ತಿಕ ಅಭಿಪ್ರಾಯ ನಿರ್ಧಾರ ಪರಿಹಾರ ಪಶ್ಚಾತ್ತಾಪ ಮುಂತಾದವುಗಳನ್ನೂ  ಓದುಗರಿಗೆ ಅರ್ಥವಾಗುವಂತೆ ಲೇಖಕರು ಅಚ್ಚುಕಟ್ಟಾಗಿ ವರ್ಣಿಸಿದ್ದಾರೆ.

(ಮಾನಸಗಂಗೋತ್ರಿ, ಮೈಸೂರು, 15.6.1979)

33 ಕೃತಿ: ಶ್ರುತಿ

ಕರ್ತೃ: ಎಸ್.ಸುಂದರೇಶನ್

ಕನ್ನಡ ಕಾವ್ಯಪ್ರಪಂಚಕ್ಕೆ ಕೆಲವು ವರ್ಷದಿಂದ ಈಚೆಗೆ ಕಾಲಿಡುತ್ತಿರುವ ಹೊಸ ಪ್ರತಿಭೆಗಳಲ್ಲಿ ಮತ್ತು ಇತ್ತೀಚಿನ ಕಾಲದ ನವ್ಯ ಕವಿಗಳಲ್ಲಿ ತುಸು ಗುರುತಿಸುವಷ್ಟರ ಮಟ್ಟಿಗೆ ಬೆಳೆಯ ಬಹುದಾದ ಭರವಸೆಯ ಕವಿ ಎಸ್.ಸುಂದರೇಶನ್ ಬರೆದ ಕವನ ಸಂಕಲನದ ಹೆಸರೇ ‘ಶ್ರುತಿ’. ಕನ್ನಡದ ಸಾಹಿತ್ಯ ಸಾಧನೆಯತ್ತ ಚಿತ್ತ ಹರಿಸಿ ತಮ್ಮ ಕೈಲಾದಮಟ್ಟಿಗೆ ಉತ್ತಮವಾದ ಕೊಡುಗೆ ನೀಡಲು ನಿರ್ಧರಿಸಿರುವ ಓರ್ವ ಪ್ರಾಮಾಣಿಕ ಸಾಹಿತಿ ಇವರು ಎನ್ನಬಹುದು. ಶೃತಿ ಎಂಬ ಕೃತಿಯ ಮೂಲಕ ಇದರ ಕರ್ತೃವು ತಮ್ಮದೇ ಶೈಲಿಯಲ್ಲಿ ಕಾವ್ಯ ನಿರ್ಮಿತಿಯನ್ನು ಆರಂಭಿಸಿರುವುದು ಆಶ್ಚರ್ಯವೇ ಆದರೂ ಸ್ವಾಗತಾರ್ಹ.

೩೬ ಪುಟಗಳುಳ್ಳ ಈ ಪುಸ್ತಕದಲ್ಲಿ ಅಡಕವಾಗಿರುವ ಒಟ್ಟು ೩೨ ಕವಿತೆ ಅಥವಾ ಕವನ ಎಂಬ ಪದ್ಯಗಳನ್ನು ಓದುವಂಥ ಪದ್ಯಪ್ರಿಯ ಓದುಗರಿಗೆ ದೊರಕುವ ಅಂತಿಮ ಫಲಿತಾಂಶವು ಒಂದೊಳ್ಳೆಯ ಕಲಸು ಮೇಲೋಗರ ಎಂದಷ್ಟೇ ಹೇಳಬಹುದು. ಇಲ್ಲಿದೆ ಓದಿ ಪುಸ್ತಕದ ಗುಣಮಟ್ಟ:-

“ನಲುಮೆಯ ನಿಲುಮೆ

ಚಿಮ್ಮಿದ ಚಿಲುಮೆ

ಹೊಮ್ಮಿದ ನವೀನತೆ ಪಡೆದಿಹಳೆನ್ನಾರನ್ನೇ”

…………………………

ಗಾನಕ್ಕೆ ಬೆಲೆಯೆಷ್ಟು

ಅರಿತವರು ಅವರಷ್ಟು

ಭೂಮ್ಯಾಅಂತರಿಕ್ಷಕ್ಕೇ ಬೆಲೆಯಿಹುದೇ?”

…………………….

“ಸೊಗಸಿನ ಭಾಷೆಯಿದು,,,,,

ಭಾಷೆಯಿದು,,,,,,ಭಾಷೆಯಿದು,,,,,”

ಎಂಬಿತ್ಯಾದಿ ಪದಪುಂಜಗಳು ಸಮರ್ಥ ಅರ್ಥದ ಕೊಂಡಿ ಕಳಚಿಕೊಳ್ಳುತ್ತವೆ. ಕೇವಲ ಅಸಮರ್ಥ ಅನರ್ಥದ ಪ್ರಾಸಗಳನ್ನು ಬಾಚಿಕೊಳ್ಳುತ್ತವೆ. ಈ ಕಾರಣಕ್ಕೆ ಇಂಥವುಗಳನ್ನು ಯಾರಾದರೂ ಸರಿ, ಕಾವ್ಯ ಎಂದು ಪರಿಗಣಿಸ ಬೇಕಾದರೆ ಒಂದು ದೌರ್ಭಾಗ್ಯವೇ ಹೌದು?! ಆದರೆ ಬೆಳೆಯುತ್ತಿರುವ ಕವಿಯು ತನ್ನ ಭವಿಷ್ಯದಲ್ಲಿ ಕನ್ನಡ ಕಾವ್ಯ ಮೀಮಾಂಸೆ ಬಗ್ಗೆ ಗಂಭೀರ ಅಧ್ಯಯನ ನಡೆಸಿ ಗಹನವಾಗಿ ಪರಿಗಣಿಸಿ ಎಚ್ಚರ ವಹಿಸಿದಾಗ ಮಾತ್ರ ಇದಕ್ಕಿಂತ ಉತ್ತಮವಾಗಿ ಕವಿತೆಗಳನ್ನು ಬರೆಯಬಹುದು? ಎಂಬ ಉದಾತ್ತ ಮನೋಭಾವದಿಂದ ಲೇಖಕರನ್ನೂ, ಪುಸ್ತಕವನ್ನೂ ಪ್ರೋತ್ಸಾಹಿಸುವ ಕೆಲಸ ಮಾಡಬಹುದು!

(ಮಾನಸಗಂಗೋತ್ರಿ, ಮೈಸೂರು,1.9.1979)

34 ಕೃತಿ: ನಡೆದಾಡುವ ಗುಲಾಬಿಗಳು (ಕವನ ಸಂಕಲನ)

ಕರ್ತೃ: ಪುರದಹಳ್ಳಿ ಜಯಣ್ಣ

ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ.ಕನ್ನಡ ವಿದ್ಯಾರ್ಥಿ ಆಗಿದ್ದಾಗ ಪಿ.ಜಯಣ್ಣ ಬರೆದ ಕವನ “ನಡೆದಾಡುವ ಗುಲಾಬಿಗಳು”. ಇದು ಜನಪ್ರಿಯ ಪ್ರಜಾವಾಣಿ ದಿನಪತ್ರಿಕೆಯ ಭಾನುವಾರದ ಸಾಪ್ತಾಹಿಕ ಪುರವಣಿ ಸಂಚಿಕೆಯಲ್ಲಿ ಪ್ರಕಟಗೊಂಡಿತು. ಇದರಿಂದ ಸ್ಫೂರ್ತಿಗೊಂಡು ಹಲವಾರು ಕವನಗಳನ್ನು ಬರೆದ ಪರಿಣಾಮವೆ 21 ಕವಿತೆಗಳ ಈ ಚೊಚ್ಚಲ ಕವನ ಸಂಕಲನ. ಪ್ರಜಾವಾಣಿ ಪ್ರಕಟಿತ ತಮ್ಮದೇ ಕವನ ನಡೆದಾಡುವ ಗುಲಾಬಿಗಳು ಎಂಬುದನ್ನೆ ಈ ಪುಸ್ತಕದ ಶೀರ್ಷಿಕೆಯನ್ನಾಗಿಸಿ ಲೋಕಾರ್ಪಣೆ ಮಾಡಿರುವುದು ಸಮಂಜಸ.

ಕನ್ನಡ ಸಾಹಿತ್ಯ ಪ್ರಪಂಚದ ದಿಗ್ಗಜ, ಕನ್ನಡ ಸಂಸ್ಕೃತ ಇಂಗ್ಲಿಷ್ ತ್ರಿಭಾಷಾ ಪಂಡಿತರೂ, ನೂರಾರು ಪುಸ್ತಕಗಳ ವಿಮರ್ಶಕರೂ, ನೂರಾರು ಕೃತಿಗಳನ್ನು ಬರೆದವರೂ ಹಾಗೂ ವಿವಿಧ ಸಾಹಿತ್ಯ ಪ್ರಾಕಾರಗಳ ಪಂಡಿತರೂ ಆಗಿರುವ ಸಿ.ಪಿ.ಕೃಷ್ಣಕುಮಾರ್, ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸ್ನಾತಕೋತ್ತರ ವಿಭಾಗದ ಪ್ರಾಧ್ಯಾಪಕರು. ಇಂಥ ಖ್ಯಾತ ಸಾಹಿತಿಯಾದ ಡಾ.ಸಿ.ಪಿ.ಕೆ.ರವರು ನಡೆದಾಡುವ ಗುಲಾಬಿಗಳು ಕವನ ಸಂಕಲನ ಪುಸ್ತಕಕ್ಕೆ ದೀರ್ಘ ಮುನ್ನುಡಿ ಬರೆದಿರುವುದು ಇಂಬು ಕೊಡುತ್ತದೆ.

ನವಯುವಕ ಪುರದಹಳ್ಳಿ ಜಯಣ್ಣನವರ ಪ್ರಥಮ ಪ್ರಯತ್ನದ ಕೃತಿ ರಚನೆ ಬಹುತೇಕ ಯಶಸ್ಸು ಕಂಡಿದೆ ಎನ್ನಬಹುದು. ಓದುವ ಪ್ರತಿಯೊಬ್ಬ ಕಾವ್ಯಪ್ರಿಯನು ಹೆಮ್ಮೆ ಪಡುವಂಥ ಕವಿತೆಗಳನ್ನು ಒಳಗೊಂಡಿದೆ! ಏಕೆಂದರೆ ಇತ್ತೀಚೆಗೆ ಉದಯೋನ್ಮುಖ ಯುವ ಕವಿಗಳಲ್ಲಿ ತಳವೂರಿ ನಿಲ್ಲುವಂಥ ಕೆಲವೇ ಪ್ರತಿಭಾವಂತರಿದ್ದು ಇವರ ಪೈಕಿ ಜಯಣ್ಣ ಕೂಡ ಒಬ್ಬನಾಗಿ ಮುಂಚೂಣಿಯಲ್ಲಿ ಇರಬಹುದು ಎಂಬ ಭರವಸೆ ಮೂಡಿಸುವಂತಿದೆ. ಪುಸ್ತಕದಲ್ಲಿ ಜಳ್ಳು ವಿರಳ ಇದ್ದು ಗಟ್ಟಿಭಟ್ಟಿ ಹೆಚ್ಚಾಗಿ ಇದೆ. ಇದಕ್ಕೆ ಮುಖ್ಯ ಕಾರಣ ಜಯಣ್ಣನವರ ಅಧ್ಯಯನದ ಶ್ರದ್ಧೆ, ವಿದ್ಯಾರ್ಜನೆ ಆಳ, ಮನನದ ಅರಿವು, ಅನುಭವದ ಸಾಧನೆ, ಮುಂತಾದ ತಪಸ್ಸು ಎಂದು ಧಾರಾಳವಾಗಿ ಹೇಳಬಹುದು. ಇದರಲ್ಲಿನ 18 ಕವನ ಗಳಂತೂ ಓದುಗರ ಮನ ಮುಟ್ಟುತ್ತವೆ ತನು ತಟ್ಟುತ್ತವೆ.

ಜ್ಞಾನದೇಗುಲದ ಸುತ್ತಮುತ್ತ ಇರುವ ಪ್ರಶಾಂತ ವಾತಾವರಣ, ಅಮೋಘ ಗ್ರಂಥಾಲಯ, ಅತ್ಯುತ್ತಮ ಅಧ್ಯಾಪಕವೃಂದ, ನಿಸರ್ಗ ಸ್ವರ್ಗ, ಮುಂತಾದ ಎಲ್ಲ ಬಗೆಯ ಶ್ರೇಷ್ಠ ಪರಿಸರದ ಸಮ್ಮಿಲನವೇ ಮಾನಸಗಂಗೋತ್ರಿ. ಇಂತಹ ಅದ್ಭುತ ಅಪರೂಪ ಅಮೋಘ ತಾಣದ ಮರಗಳ ಅಡಿಯಲ್ಲಿ ಹುಲ್ಲುಹಾಸಿನ ಮೇಲೆ ಆಗಾಗ್ಗೆ ಅಂಡೂರಿ ಅಲ್ಲಲ್ಲೆ ಎಲ್ಲವನ್ನ ಪರಸ್ಪರ ಹಂಚಿಕೊಳ್ಳುವ ಸ್ನಾತಕೋತ್ತರ, ಸ್ನಾತಕಪೂರ್ವ, ಎಂಜಿನಿಯರಿಂಗ್ ಕಾಲೇಜಿನ ಸಾಮಾನ್ಯ ಲವ್ ಬರ್ಡ್ಸ್ ವಿದ್ಯಾರ್ಥಿ-ನೀ ಜೋಡಿಗಳನ್ನು ಕಂಡು ಅವರ ಚಟುವಟಿಕೆಯಿಂದ ಸ್ಫೂರ್ತಿಗೊಂಡು ಅಥವ ಇಂತಹ ದೃಶ್ಯಕಾವ್ಯಗಳಿಗೆ ಕವನಾಕ್ಷರ ಲೇಪಿಸಿದ ಒಂದು ಲೀಡ್ ಕವನವೇ ‘ನಡೆದಾಡುವ ಗುಲಾಬಿಗಳು’. ಇದರ ಹೊರತಾಗಿ ಇನ್ನುಳಿದ ಕವನಗಳು ಸಹ ಯುವ ಪ್ರೇಮಿಗಳ ತುಂಟಾಟ ಕಿತ್ತಾಟ ಕಚ್ಚಾಟ ಸಹಕಾರ ಸಹಾಯ ಹೊಂದಾಣಿಕೆ ಮುಂತಾದ ವಯೋಸಹಜ ನಡೆ ನುಡಿಗಳನ್ನು ಪ್ರತಿಬಿಂಬಿಸುತ್ತವೆ.

ಒಟ್ಟಾರೆ ಬಹುತೇಕ ಎಲ್ಲ ಪದ್ಯಗಳು ಈಗಷ್ಟೇ ಬೆಳಕಿಗೆ ಬರುತ್ತಿರುವ ಚಿತ್ರಕಾವ್ಯಗಳ ನಡುವೆ ಅರಳಿರುವಂತೆ ಕಾಣಿಸುತ್ತವೆ. ಹೊಸ ಭರವಸೆ ಮೂಡಿಸುವ ಹೊಸ ಪ್ರಯತ್ನದ ಚಿಗುರು ಎನಿಸುತ್ತವೆ. ಈ ಉದಯೋನ್ಮುಖ ಯುವಕವಿಯನ್ನು ಮತ್ತು ಇವರ ಕವಿತೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವಲ್ಲಿ ಖ್ಯಾತಕವಿ ಡಾ.ಸಿ.ಪಿ.ಕೆ.ರವರ ಮುನ್ನುಡಿಯು ಸಹ ತುಸು ಹೆಚ್ಚು ನೆರವಾಗುತ್ತದೆ ಎಂದಷ್ಟೇ ಹೇಳಿ ವಿರಮಿಸುತ್ತೇನೆ.

(ಮಾನಸಗಂಗೋತ್ರಿ, ಮೈಸೂರು, 1.6.1979)

35 ಕೃತಿ: ಮಹಾಪುರಾಣಗಳು

ಕರ್ತೃ: ಪಿ.ಕೆ.ಆರ್.

ಭೂಮಿ ಸೃಷ್ಟಿಯಾದ ಬಳಿಕ ರಚನೆಯಾದ ಮೊಟ್ಟಮೊದಲ ಪುರಾಣವೇ ಶಿವ ಪುರಾಣ. ಈ ಆದಿ ಪುರಾಣದ ನಂತರ ವಿಷ್ಣು ಪುರಾಣ ಬ್ರಹ್ಮ ಪುರಾಣ ನಾರದ ಪುರಾಣ ಗರುಡ ಪುರಾಣ ಮುಂತಾದ ೧೮ ಪುರಾಣಗಳನ್ನು ಮತ್ತು ೪ ವೇದಗಳನ್ನು ರಚಿಸಿದವರು ವೇದವ್ಯಾಸ ಮಹರ್ಷಿ. ಆದರೆ ಇದೀಗ ಇಲ್ಲಿ ಪಿ.ಕೆ.ಆರ್.ರವರು ಬರೆದಿರುವ ಪ್ರಸ್ತುತ ‘ಮಹಾ ಪುರಾಣಗಳು’ ಪುಸ್ತಕವು (1)ಪೀಠಿಕೆ (2)ಮಹಾಪುರಾಣಗಳು (೩)ಪುರಾಣದೇವತೆಗಳು ಎಂಬ ಮೂರು ವಿಭಾಗ ಒಳಗೊಂಡಿದೆ.

ಬ್ರಹ್ಮ ಪುರಾಣದಿಂದ ಮೊದಲ್ಗೊಂಡು ಬ್ರಹ್ಮಾಂಡ ಪುರಾಣದ ತನಕ ಒಟ್ಟು ಹದಿನೆಂಟು ಪುರಾಣಗಳ ಬಗ್ಗೆ ಮಿತಿ ಮಾಹಿತಿ ಇದೆ. ಸನಾತನ ಸಂಸ್ಕೃತಿ ಸಾಹಿತ್ಯದ ಓಲೆಗರಿಗಳಲ್ಲಿ: ವೇದವೇ ಸೂರ್ಯಮಂಡಲವೆಂದೂ, ಪುರಾಣಗಳೇ ಗ್ರಹ-ನಕ್ಷತ್ರ ಗಳೆಂದೂ ತಿಳಿಸಲಾಗಿದೆ. ಮಾನವನ ಜೀವನವನ್ನು ನಿಯಂತ್ರಿಸುತ್ತಿರುವ ‘ಭಗವಂತ’ ಎನ್ನುವ ಪರಮಶಕ್ತಿ ಎಂಬುದು ಒಂದಿದೆ ಎನ್ನುವ ತಿಳುವಳಿಕೆ ಅಥವ ನಿತ್ಯಸತ್ಯದ ಅರಿವು ಮೂಡಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದೆ. ಭಾರತೀಯರ ಧಾರ್ಮಿಕ ಸಾಂಸ್ಕೃತಿಕ ಹಾಗೂ ಸಾಂಪ್ರದಾಯಿಕ ವಿಚಾರಗಳನ್ನು ಬಿಡಿಬಿಡಿಯಾಗಿ ಹರಡಿ ಬರೆಯಲಾಗಿದೆ. ಇಂಥ ಅನೇಕ ಅದ್ಬುತ ಅಗೋಚರ ಆಧ್ಯಾತ್ಮಿಕ ವಿಚಾರಗಳನ್ನು ಸಂಕ್ಷಿಪ್ತವಾಗಿ ಈ ಪುಸ್ತಕದಲ್ಲಿ ದಾಖಲಿಸಲಾಗಿದೆ.

ಸಾಮಾನ್ಯವಾಗಿ ಇಂತಹ ಕೃತಿಗಳು ಎಲ್ಲಾ ವರ್ಗದ ಓದುಗರಿಗೆ ಇಷ್ಟವಾಗದೇ ಪಥ್ಯೆ ಅಥವಾ ಅಲರ್ಜಿ ಎನಿಸಿದರೆ; ಆಧ್ಯಾತ್ಮಿಕ ಸತ್ಸಂಗ ಸಾಂಪ್ರದಾಯಕ ವರ್ಗದ ಓದುಗರಿಗೆ ಐಚ್ಚಿಕವಲ್ಲದ ಇಚ್ಛಾಪೂರ್ಣ ಮಾಹಿತಿ ಕೃತಿ ಎನಿಸಬಹುದು! ಅದೇನೇ ಇರಲಿ ಮಹಾಪುರಾಣಗಳು ಪುಸ್ತಕವನ್ನು ಕೊಂಡು ಓದುವ ಇಚ್ಛೆ-ಆಯ್ಕೆ ಅವರವರ ಭಾವಕ್ಕೆ ಅವರವರ ಭಕುತಿಗೆ ಬಿಟ್ಟಿದೆ…….?

(ಮೈ.ವಿ.ವಿ.ಮಾನಸಗಂಗೋತ್ರಿ, ಮೈಸೂರು 1.6.1979)

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-6

 

admin
the authoradmin

Leave a Reply

Translate to any language you want