CrimeLatest

ಬಂಡೀಪುರದಲ್ಲಿ  ಕಾಡುಮೊಲದ ಬೇಟೆಯಾಡುತ್ತಿದ್ದ ಬೇಟೆಗಾರರ ಬಂಧನ: ಜೀವಂತ ಮೊಲಗಳು ವಶಕ್ಕೆ

ಎಸ್‌ಟಿಪಿಎಫ್ ಜಂಟಿ ಕಾರ್ಯಾಚರಣೆ ವೇಳೆ ಮೂವರು ಪರಾರಿ, ನಾಡಬಂದೂಕು ವಶ

ಗುಂಡ್ಲುಪೇಟೆ:  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮವಾಗಿ ಬೇಟೆಯಾಡುತ್ತಿದ್ದ ಬೇಟೆಗಾರರ ಮೇಲೆ  ಅರಣ್ಯ ಇಲಾಖೆಯ ವಿಶೇಷ ಹುಲಿ ಸಂರಕ್ಷಣಾ ದಳ (STPF)  ದಾಳಿ ನಡೆಸಿದ್ದು, ಇಬ್ಬರು ಬೇಟೆಗಾರರನ್ನು ಬಂಧಿಸಿ ಅವರಿಂದ ನಾಡಬಂದೂಕು, ಬೈಕ್  ಹಾಗೂ ಎರಡು ಜೀವಂತ ಮೊಲಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಮೂವರು ಪರಾರಿಯಾಗಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ.

ಬನ್ನಿತಾಳಪುರ ಗ್ರಾಮದ ನಿವಾಸಿ ಬಸವಶೆಟ್ಟಿ ಅವರ ಪುತ್ರ ಶಿವಕುಮಾರ್ ಮತ್ತು ಮನೋಜ್ ಕುಮಾರ್ ಬಂಧಿತರು. ಇವರ ಸಹಿತ ಐದು ಮಂದಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ವಡ್ಡರಹಳ್ಳಿ ಬಳಿ  ಗುರುವಾರ(ಜೂ.11) ಬೆಳಗ್ಗಿನ ಜಾವ 2 ಗಂಟೆಯ ನಿಶ್ಯಬ್ದ ಸಮಯದಲ್ಲಿ, ಎಸ್‌ಟಿಪಿಎಫ್ (STPF) ಪ್ಲಟೂನ್-1ನೇ ತುಕಡಿಯ ಸಿಬ್ಬಂದಿಗಳು ತಾಲೂಕಿನ ವಡ್ಡರಹಳ್ಳಿ ಗ್ರಾಮದ ಅರಣ್ಯ ಗಡಿ ಭಾಗದ ಬಳಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಸಂಶಯಾಸ್ಪದವಾಗಿ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಸಾಗಿಸುತ್ತಿದ್ದ ಇಬ್ಬರು ಕಂಡು ಬಂದಿದ್ದು ಕೂಡಲೇ ಅವರ ಮೇಲೆ ದಾಳಿ ಮಾಡಿ  ವಶಕ್ಕೆ ಪಡೆಯಲಾಗಿದೆ.

ಈ ವೇಳೆ ಅರಣ್ಯ ಸಿಬ್ಬಂದಿಗಳನ್ನು ನೋಡುತ್ತಿದ್ದಂತೆಯೇ ಕೃತ್ಯದಲ್ಲಿ ಭಾಗಿಯಾಗಿದ್ದ ಇತರೆ ಮೂವರು ಆರೋಪಿಗಳು ಕತ್ತಲಲ್ಲಿ ತಲೆಮರೆಸಿಕೊಂಡಿದ್ದಾರೆ. ಬಂಧಿತರನ್ನು ಹಾಗೂ ಜಪ್ತಿ ಮಾಡಲಾದ ಬೃಹತ್ ಮುದ್ದೇ ಮಾಲುಗಳನ್ನು ಮುಂದಿನ ಕಠಿಣ ಕಾನೂನು ಕ್ರಮಕ್ಕಾಗಿ ಗುಂಡ್ಲುಪೇಟೆ ಬಫರ್ ವಲಯದ ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಬಂಧಿತರಿಂದ ಒಂಟಿ ನಳಿಕೆಯ ಘಾತಕ ನಾಡಬಂದೂಕು – 1, ಅರಣ್ಯದೊಳಗಿನಿಂದ ಬೇಟೆಯಾಡಿದ್ದ ಜೀವಂತ ಕಾಡು ಮೊಲಗಳು – 2, ಸಾಗಾಟಕ್ಕೆ ಬಳಸಿದ್ದ TVS XL100 ಮೊಪೆಡ್ (ನೋಂದಣಿ ಸಂಖ್ಯೆ: KA-10 EJ-4148) – 1, ರಾತ್ರಿ ವೇಳೆ ಬಳಸುತ್ತಿದ್ದ ಹೈ-ಪವರ್ ಹೆಡ್ ಟಾರ್ಚ್ (Head Torch) – 1 ನ್ನು ವಶಪಡಿಸಿಕೊಳ್ಳಲಾಗಿದೆ.

ಬಂಡೀಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕರಾದ ನಂದೀಶ್ ರವರ ನೇರ ನಿರ್ದೇಶನದಂತೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (STPF) ಮಂಜುನಾಥ್ ರವರ ಕಟ್ಟುನಿಟ್ಟಿನ ಉಸ್ತುವಾರಿಯಲ್ಲಿ ಹಾಗೂ ವಲಯ ಅರಣ್ಯಾಧಿಕಾರಿ (RFO) ಶ್ರೀ ವೆಂಕಟೇಶ್ ರವರ ನೇತೃತ್ವದಲ್ಲಿ ಈ ಯಶಸ್ವಿ ದಾಳಿ ನಡೆದಿದೆ.

ವಿಶೇಷ ಹುಲಿ ಸಂರಕ್ಷಣಾ ದಳದ (STPF) ಮೇಲುಕಾಮನಹಳ್ಳಿ ಪ್ಲಟೂನ್-1 ರ ಉಪ ವಲಯ ಅರಣ್ಯಾಧಿಕಾರಿಗಳಾದ ಜ್ಞಾನಶೇಖರ್ ಎಂ, ಕಾರ್ತಿಕ್ ಯಾದವ್ ಹಾಗೂ ಸಿಬ್ಬಂದಿ ಅಮರ್, ಆನಂದ್, ರವಿಕುಮಾರ್, ವಿನಯ್, ಚಂದ್ರಶೇಖರ್, ಯಾಸೀನ್ ಮತ್ತು ನಾರಾಯಣ್ ಅವರು ಜೀವದ ಹಂಗು ತೊರೆದು ಕಾಡಿನ ಗಡಿಯಲ್ಲಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಇತರೆ ಮೂವರಿಗಾಗಿ ಹುಡುಕಾಟ ಮುಂದುವರೆದಿದೆ.

admin
the authoradmin

Leave a Reply

Translate to any language you want