ಬಸವಣ್ಣನವರಿಗೆ ನೆರಳಾಗಿ ನಿಂತಿದ್ದ ಶಿವಶರಣ ಹಡಪದ ಅಪ್ಪಣ್ಣ… ಅನುಭವ ಮಂಟಪಕ್ಕೆ ಅರ್ಥ ನೀಡಿದ ಶಿವಶರಣ

ಬಸವಣ್ಣ ಇದ್ದಲ್ಲಿ ಅವರ ಅನುಭವ ಮಂಟಪದ ಅನುಯಾಯಿಗಳು ಇದ್ದೇ ಇರುತ್ತಾರೆ.. ಬಸವಣ್ಣರವರಿಂದ ಪ್ರಭಾವಿತರಾದವರು ಮತ್ತು ಬಸವಣ್ಣನವರ ಅನುಭವ ಮಂಟಪದಲ್ಲಿ ಸ್ಥಾನಪಡೆದ ಹಲವು ಶಿವಶರಣರು ಮತ್ತು ಶರಣೆಯರಲ್ಲಿ ಹಡಪದ ಅಪ್ಪಣ್ಣ ಕೂಡ ಒಬ್ಬರು.. ಅವರ ಬದುಕು ಮತ್ತು ಸಾಧನೆ ಕುರಿತಂತೆ ಲೇಖಕ ಮೈ.ನಾ. ಲೋಕೇಶ್ ಇಲ್ಲಿ ಬರೆದಿದ್ದಾರೆ.
ಹನ್ನೆರಡನೆಯ ಶತಮಾನದಲ್ಲಿ ಕಾಯಕ ವರ್ಗದ ಅಸ್ಮಿತೆಯ ಪ್ರತೀಕವಾಗಿ ಹುಟ್ಟಿಕೊಂಡಿದ್ದು ಶರಣ ಚಳುವಳಿ ಅಥವಾ ವಚನ ಚಳುವಳಿ. ಶತಶತಮಾನಗಳಿಂದ ಜಾತಿಯ ಹೆಸರಿನಲ್ಲಿ ಶೋಷಣೆ, ಅಪಮಾನಕ್ಕೊಳಗಾಗಿದ್ದ ಶ್ರಮಜೀವಿಗಳೆಲ್ಲರೂ ಒಂದಾಗಿ ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತರು. ಜಗಜ್ಯೋತಿ ಬಸವೇಶ್ವರರ ನೇತೃತ್ವದಲ್ಲಿ ಮಹಾಮನೆ ಅಥವಾ ಜಗತ್ತಿನ ಮೊಟ್ಟಮೊದಲ ಪ್ರಜಾಪ್ರಭುತ್ವ ಸಂಸತ್ತು ಅನುಭವ ಮಂಟಪದ ರಚನೆಯಾಗಿದ್ದು ಭಾರತೀಯರೆಲ್ಲರೂ ಇಂದಿಗೂ ಹೆಮ್ಮೆ ಪಡುವ ಸಂಗತಿ.

ಪ್ರತಿಯೊಂದು ಕಾಯಕ ವರ್ಗದ ಶ್ರಮಜೀವಿಗಳಿಗೂ ಈ ಅನುಭವ ಮಂಟಪದಲ್ಲಿ ಸ್ಥಾನ ನೀಡಲಾಯಿತು. ಶಿವಶರಣೆ ಅಕ್ಕಮಹಾದೇವಿಯಪರಿಗೆ ಸ್ಥಾನ ದೊಂದಿಗೆ ಸ್ತ್ರೀ ಸಮಾನತೆಯನ್ನು ಕೂಡ ಪ್ರತಿಪಾದಿಸಲಾಯಿತು ಅಲ್ಲಮಪ್ರಭು ,ಮಾಳಿಗೆ ಮೋರಯ್ಯ ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಮಾದರ ಚೆನ್ನಯ್ಯ, ಹೆಂಡದ ಮಾರಯ್ಯ ಡೋಹರ ಕಕ್ಕಯ್ಯ ಈ ಶರಣರೊಂದಿಗೆ ಮತ್ತೊಂದು ಪ್ರಮುಖವಾದ ಶಿವಶರಣರೆಂದರೆ ಹಡಪದ ಅಪ್ಪಣ್ಣನವರು
ಬಸವೇಶ್ವರರ ಬಾಲ್ಯದ ಒಡನಾಡಿಯೂ ಆಗಿದ್ದ ಅಪ್ಪಣ್ಣನವರಲ್ಲಿ ಬಸವೇಶ್ವರರಿಗೆ ಅಪರಿಮಿತವಾದ ವಿಶ್ವಾಸ, ನಂಬಿಕೆ . ಅಪ್ಪಣ್ಣನವರ ವೈಚಾರಿಕ ಚಿಂತನೆಗಳಿಂದ ಬಸವಣ್ಣನವರೂ ಸಾಕಷ್ಟು ಪ್ರಭಾವಿತರಾಗಿದ್ದರು ಹಾಗಾಗಿ ಅವರನ್ನು ಬಸವೇಶ್ವರರು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು, ತಮ್ಮ ಕಾರ್ಯಕ್ಷಮತೆ, ಅಧಮ್ಯ ಶ್ರದ್ದಾ ಭಕ್ತಿ ಯಿಂದ ಅನುಭವ ಮಂಟಪದ ಉಸ್ತುವಾರಿಯನ್ನು ಯಾವುದೇ ಲೋಪವಾಗದಂತೆ ನಿರ್ವಹಿಸಿದ ಹಿರಿಮೆ ಅಪ್ಪಣ್ಣ ನವರಿಗೆ ಸಲ್ಲುತ್ತದೆ.
ಶತಮಾನಗಳಿಂದಲೂ ಸಮಾಜದಲ್ಲಿ ಅತ್ಯಂತ ನಿಕೃಷ್ಟವಾಗಿ, ಸಮಾಜದ ಅನಾದರಕ್ಕೆ ಒಳಗಾದ ಸಮುದಾಯವೆಂದರೆ ಅದು ಕ್ಷೌರಿಕ ಸಮಾಜ. ಈ ಸಮುದಾಯದವರನ್ನು ಬೆಳಿಗ್ಗೆ ಎದ್ದ ಕೂಡಲೇ ನೋಡಿದರೆ ಅಪಶುಕುನ ವೆಂಬ ಮೌಢ್ಯವನ್ನು ತೊಲಗಿಸಲು ಬಸವೇಶ್ವರರು ಅಪ್ಪಣ್ಣನವರನ್ನು, ತನ್ನನ್ನು ಕಾಣಲು ಬರುವ ಪ್ರತಿಯೊಬ್ಬರು ಮೊದಲು ಅಪ್ಪಣ್ಣನವರನ್ನು ಕಾಣಬೇಕೆಂದು ಸೂಚನೆ ನೀಡಿದ್ದರು.( ಕ್ಷೌರಿಕರು ತಮ್ಮ ಕುಲಕಸುವಾದ ಕ್ಷೌರಿಕ ವೃತ್ತಿಗೆ ಬಳಸುವ ಸಾಮಾಗ್ರಿ ಗಳನ್ನು ಇಡುವ ಚೀಲವನ್ನು ಹಡಪ ಎಂದು ಕರೆಯಲಾಗುತ್ತಿತ್ತು.)ಅಪ್ಪಣ್ಣ ನವರು ಬಸವಣ್ಣನವರಿಗೆ ಬಲು ಪ್ರೀತಿಯಿಂದ ತಾಂಬೂಲ ಸೇವೆಯನ್ನೂ ಮಾಡುತ್ತಿದ್ದರು ಎಂಬ ಮಾಹಿತಿಗಳೂ ದೊರಕಿವೆ.

ಕನಿಷ್ಠ ದಲ್ಲಿ ಹುಟ್ಟಿದೆ ಉತ್ತಮರಲ್ಲಿ ಬೆಳೆದೆ/ಸತ್ಯ ಶರಣರ ಪಾದವಿಡೆದೆ, ಆ ಶರಣರ ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ ಜಂಗಮವ ಕಂಡೆ. ಇಂತಿವರ ಕಂಡೆನ್ನ ಕಂಗಳ ಮುಂದಣ ಕತ್ತಲೆ ಹರಿಯಲೊಡನೆ, ಮಂಗಳದ ಮಹಾ ಬೆಳಕಿನೊಳು ಒಲಾಡಿ ಸುಖಿಯಾದೆನಯ್ಯ. ಬಸವಪ್ರಿಯ ಕೂಡಲ ಚೆನ್ನ ಬಸವಣ್ಣ.. ವಿಜಯನಗರ ಜಿಲ್ಲೆಯ,, ತಂಗಡಗಿಯ ಮಸಬಿನಹಾಳ ಗ್ರಾಮ ಅಪ್ಪಣ್ಣನವರ ಜನ್ಮಸ್ಥಳ ತಂದೆ ಚೆನ್ನವೀರಪ್ಪ ತಾಯಿ ದೇವಕಮ್ಮ .
ತಮ್ಮ ಅಪಾರ ಜ್ಞಾನ ಹಾಗೂ ವೈಚಾರಿಕ ಚಿಂತನೆಗಳಿಂದ ಬಸವೇಶ್ವರರ ಅಚ್ಚುಮೆಚ್ಚಿನ ಒಡನಾಡಿಯಾಗಿದ್ದು ಬಸವಣ್ಣನವರೊಂದಿಗೆ ಅವರ ನೆರಳಾಗಿ ,ಅವರ ಕೊನೆಯ ದಿನಗಳವರೆಗೂ ನೆಡೆದವರು ಹಡಪದ ಅಪ್ಪಣ್ಣನವರು ಬಸವಪ್ರಿಯ ಚೆನ್ನಬಸವಣ್ಣ ಎಂಬ ಅಂಕಿತನಾಮದಿಂದ 250ಕ್ಕೂ ಹೆಚ್ಚು ಮಹತ್ವದ ವಚನಗಳನ್ನು ಹಡಪದ ಅಪ್ಪಣ್ಣನವರು ರಚಿಸಿ ಸಮಾಜದ ಓರೆ ಕೋರೆಗಳನ್ನು ತಿದ್ದಿದವರು. ಅಪ್ಪಣ್ಣನವರ ಧರ್ಮಪತ್ನಿ ಲಿಂಗಮ್ಮ ಸಹ ಮಹಾನ್ ವಚನಕಾರ್ತಿಯಾಗಿದ್ದು ಅವರು ಸಹ 200ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವುದು ಉಲ್ಲೇಖಾರ್ಹ.
ಬಸವೇಶ್ವರರ ಆಪ್ತ ಕಾರ್ಯದರ್ಶಿಯಾಗಿ, ಆತ್ಮಬಂಧುವಾಗಿ ಅಪ್ಪಣ್ಣ ಎಷ್ಟು ಪ್ರಭಾವ ಬೀರಿದ್ದರು ಎಂಬುದು ಕಲ್ಯಾಣ ಕ್ರಾಂತಿಯ ದಿನಗಳ ಕೆಲವು ಘಟನೆಗಳನ್ನು ಅವಲೋಕಿಸಿದರೆ ತಿಳಿದು ಬರುತ್ತದೆ. ಆ ಸಮಯದಲ್ಲಿ ಕಲ್ಯಾಣದಲ್ಲಿ ಅಶಾಂತಿ ಹಿಂಸೆ ,ಹಾಹಾಕಾರ ತಾಂಡವವಾಡುತ್ತಿದ್ದ ಸಂದರ್ಭದಲ್ಲಿ.. ಶರಣರ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತದೆ .ಸಂಗಮದ ಬಳಿ ಇದ್ದ ಬಸವಣ್ಣನವರು ತಮ್ಮ ಧರ್ಮಪತ್ನಿ ನೀಲಾಂಬಿಕೆಯನ್ನು ಕರೆತರಲು ಅಪ್ಪಣ್ಣನವರಿಗೆ ಸೂಚಿಸಿದರೂ ಸಹ ಸಂಗಮವನ್ನು ತಲುಪುವಷ್ಟರಲ್ಲಿ ಬಸವಣ್ಣನವರು ಲಿಂಗೈಕ್ಯರಾದ ಸುದ್ದಿ ಅಪ್ಪಣ್ಣನವರಿಗೆ ತಲುಪುತ್ತದೆ.

ಇಂತಹ ದಾರುಣ ಪರಿಸ್ಥಿತಿಯಲ್ಲಿ ನೀಲಾಂಬಿಕೆ ನಿಮ್ಮ ಘನವ ಕಾಂಬ ಕಣ್ಣು ಕ್ರಮಗೆಟ್ಟಿತ್ತು ಭಕ್ತಿ ಬಯಲಾಯುತ್ತೇ ಬಸವಾ.. ಎತ್ತಲಡಗಿದೆಯಯ್ಯಾ ಸಂಗಯ್ಯನ ಗುರುಬಸವ.. ಅಡವಿಯಲ್ಲಿ ಕಣ್ಣುಗೆಟ್ಟು ಪಶುವಿನಂತೆ ನಾನು ಪ್ರಳಾಪಪಿಸುತ್ತಿದ್ದ್ರನಯ್ಯಾ… .ಎಂದು ಶೋಕದಲ್ಲಿ ಇಹಲೋಕ ತ್ಯಜಿಸುತ್ತಾಳೆ. ಬಸವಣ್ಣನವರ ಹಾಗೂ ಶಿವಶರಣೆ ನೀಲಾಂಬಿಕೆಯ ಅಗಲಿಕೆಯ ದಾರುಣ ಸನ್ನಿವೇಶದಲ್ಲಿ ಅಪ್ಪಣ್ಣ ಅನಾಥ ಮಗುವಿನಂತೆ ರೋದಿಸುತ್ತಾ.. ಎನ್ನ ತನು ನಿಮ್ಮ ಸೇವೆಯಲ್ಲಿ ಸವೆದು …ಎನ್ನ ಮನ ನಿಮ್ಮ ನೆನಹಿನಲ್ಲಿ ಸವೆದು. ಎನ್ನ ಅರಿವು ನಿಮ್ಮ ಘನದೊಳಗೆ ಸವೆದು ನಿಶ್ಚಲ ನಿಜ್ಯೆಕ್ಯವಾಗಿ ಬಸವಪ್ರಿಯ ನೀನಾನೆಂಬುದು ಏನಾಯಿತ್ತೆಂದರಿಯೆ… ಎಂದು ತಾನೂ ಸಹ ಉಸಿರು ಚೆಲ್ಲುವುದು ಅಪ್ಪಣ್ಣನಿಗೆ ಬಸವಣ್ಣನವರ ಛಾಯೆಯಂತಿದ್ದ, ಆ ಶರಣ ದಂಪತಿಗಳ ಮೇಲಿದ್ದ. ನಿಷ್ಕಲ್ಮಶ, ನಿಸ್ವಾರ್ಥ ಪ್ರೀತಿ, ಭಕ್ತಿಗೆ ದ್ಯೋತಕವಾಗಿದೆ
ಸ್ವತಃ ಬಸವೇಶ್ವರರಿಂದ ವೈಚಾರಿಕ ಶರಣನೆಂದು,ಶಿವ ಶರಣರಿಂದ ನಿಜ ಸುಖಿ ಎಂದು ಮೆಚ್ಚುಗೆ ಪಡೆದ ಅಪ್ಪಣ್ಣನವರ. ಬದುಕು ಆದರ್ಶಪ್ರಾಯವಾದುದ್ದು.. ವೈಚಾರಿಕ ಪ್ರಜ್ಞೆಯ ಅಪ್ಪಣ್ಣನವರ ವಚನಗಳು ಸಮಾಜಕ್ಕೆ ಬೆಳಕಾಗಿ ,ದಮನಿ ತರ ದನಿಯಾಗಿ ,ದಾರಿ ತಪ್ಪಿದ ಸಮಾಜವನ್ನು ಬಂಡಾಯದ ಧ್ವನಿಯ ಮೂಲಕ ಸರಿದಾರಿಗೆ ತರುವಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಿವೆ. ಶರಣು, ಶರಣಾರ್ಥಿಗಳು. ಅಪ್ಪಣ್ಣನಂತಹ ಮಹಾಪುರುಷನ ಸಮಾಜ ಮೊದಲು ತನ್ನಲ್ಲಿರುವ ಕೀಳರಿಮೆಯಿಂದ ಹೊರಬರಬೇಕು, ಕಾಯಕ ಸಮುದಾಯಗಳಿಗೆ ನ್ಯಾಯಯುತವಾಗಿ ದೊರೆಯಬೇಕಾದ ಸವಲತ್ತುಗಳು ದೊರೆಯುವಂತಾಗಬೇಕು. ಶೋಷಿತ, ತಳಸಮುದಾಯಗಳ ಹೋರಾಟಕ್ಕೆ, ಜಾಗೃತಿಗೆ, ಶಿವಶರಣ ಹಡಪದ ಅಪ್ಪಣ್ಣ ಸದಾ ಸ್ಪೂರ್ತಿಯ ಸೆಲೆ ಎಂಬುದು ನಿರ್ವಿವಾದ ಸಂಗತಿ.








