ದೀಪದಂತೆ ಬೆಳಗಿ, ಜನಮನಗಳಲ್ಲಿ ಅಮರರಾದವರು ಶರಣೆ ನೀಲಮ್ಮ:ವಚನ ಕುಮಾರಸ್ವಾಮಿ
ಶರಣೆ ನೀಲಮ್ಮನವರ ಪಾರಮಾರ್ಥಿಕ ಸದ್ಗತಿ ಅರ್ಪಣಾ ಕಾರ್ಯಕ್ರಮ

ಮೈಸೂರು: ದೀಪದಂತೆ ಬೆಳಗಿ, ಜನಮನಗಳಲ್ಲಿ ಅಮರರಾದವರು ಶರಣೆ ನೀಲಮ್ಮ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅವರು ಹೇಳಿದರು.
ನಂಜನಗೂಡು ತಾಲೂಕು ಕಲ್ಮಹಳ್ಳಿಯಲ್ಲಿ ಶರಣೆ ನೀಲಮ್ಮನವರ ಜೀವನ ಸಾಧನೆ, ಸೇವಾ ಮನೋಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಸ್ಮರಿಸಿ ನುಡಿನಮನ ಸಲ್ಲಿಸಿದ ಅವರು ಅಂಗನವಾಡಿ ಸಹಾಯಕಿಯಾಗಿ ಸೇವೆ ಸಲ್ಲಿಸಿದ್ದ ನೀಲಮ್ಮನವರು ತಮ್ಮ ಬದುಕನ್ನು ಮಕ್ಕಳ ಲಾಲನೆ-ಪಾಲನೆ, ಶಿಕ್ಷಣ ಹಾಗೂ ಸಮಾಜಸೇವೆಗೆ ಮುಡಿಪಾಗಿಟ್ಟಿದ್ದರು. ವಿವಾಹವಾಗದಿದ್ದರೂ ನೂರಾರು ಮಕ್ಕಳಿಗೆ ತಾಯಿಯ ಮಮತೆಯನ್ನು ಹಂಚಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.

ನೀಲಮ್ಮ ಅವರು ದೀಪದಂತೆ ಬೆಳಕು ನೀಡಿದರು. ಮೇಘದಂತೆ ಕರುಣೆ ಸುರಿಸಿದರು. ಶಿಶುವಿನಂತೆ ನಿರ್ಮಲವಾಗಿ ಬದುಕಿದರು. ಅಂಗನವಾಡಿಯ ಪುಟ್ಟ ಮಕ್ಕಳ ಬದುಕಿನಲ್ಲಿ ಮಮತೆಯ ತಾಯಿಯಾಗಿ ನೆಲೆಸಿದರು. ಅವರ ಸೇವೆಯ ಸುವಾಸನೆ ಬಾವನ್ನದ ವೃಕ್ಷದ ಪರಿಮಳದಂತೆ ಇಂದಿಗೂ ಜನರ ಹೃದಯಗಳಲ್ಲಿ ಹರಡುತ್ತಿದೆ. ಅವರು ಸತ್ತು ಬದುಕಿದವರ ಸಾಲಿಗೆ ಸೇರಿದ ಅಪರೂಪದ ವ್ಯಕ್ತಿತ್ವ.
ಕೆಲವರು ಸತ್ತು ಸತ್ತವರಾಗುತ್ತಾರೆ, ಕೆಲವರು ಬದುಕಿ ಸತ್ತವರಾಗುತ್ತಾರೆ, ಆದರೆ ಕೆಲವರು ಮಾತ್ರ ಸತ್ತು ಬದುಕಿದವರಾಗುತ್ತಾರೆ. ಶರಣೆ ನೀಲಮ್ಮ ಅವರು ತಮ್ಮ ಸೇವೆ, ಪ್ರೀತಿ ಮತ್ತು ಮಾನವೀಯತೆಯ ಮೂಲಕ ಸತ್ತು ಬದುಕಿದವರಾಗಿ ಜನಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಅಂಗನವಾಡಿಯ ಪುಟ್ಟ ಮಕ್ಕಳ ನಗುವಿನಲ್ಲಿ ಬದುಕಿದ ನೀಲಮ್ಮ ಅವರು ಕಾಲವನ್ನು ಕಳೆಯಲಿಲ್ಲ. ಕಾಲವನ್ನೇ ಕಾಯಕವನ್ನಾಗಿಸಿದರು. ಆದ್ದರಿಂದ ಅವರ ಮರಣವು ಅಂತ್ಯವಲ್ಲ, ಸಾರ್ಥಕ ಬದುಕಿನ ಮಹಾನವಮಿಯಾಗಿದೆ ಎಂದರು.

ಬಸವತತ್ವ ಚಿಂತಕ ಚೌಹಳ್ಳಿ ಲಿಂಗರಾಜಪ್ಪ ನುಡಿನಮನ ಸಲ್ಲಿಸಿ ಬಸವಾದಿ ಪ್ರಮಥರ ವಚನಗಳಲ್ಲಿ ಅಡಕವಾಗಿರುವ ಮಾನವೀಯ ಮೌಲ್ಯಗಳು, ಕಾಯಕ, ದಾಸೋಹ ಮತ್ತು ಸಮಾನತೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹೋಮ, ಹವನ, ಶಾಸ್ತ್ರ ಮತ್ತು ಆಡಂಬರದ ಆಚರಣೆಗಳ ಹೆಸರಿನಲ್ಲಿ ಹಣ ಹಾಗೂ ಸಮಯವನ್ನು ವ್ಯರ್ಥ ಮಾಡಿಕೊಳ್ಳದೆ, ವಚನಗಳಲ್ಲಿರುವ ಜೀವನ ಸಂದೇಶವನ್ನು ಅರ್ಥಮಾಡಿಕೊಂಡು ಬದುಕಬೇಕು ಎಂದು ಸಲಹೆ ನೀಡಿದರು.
ನೀಲಮ್ಮ ಅವರ ಸಹೋದರರಾದ ಕಲ್ಮಹಳ್ಳಿ ನಟರಾಜು ಅವರು ಭಾವಪೂರ್ಣ ನುಡಿನಮನ ಸಲ್ಲಿಸಿ ಈ ಜಗತ್ತಿನ ಸಂಬಂಧಗಳು ರಕ್ತ ಸಂಬಂಧಕ್ಕಿಂತಲೂ ಆತ್ಮೀಯತೆ, ಪ್ರೀತಿ ಮತ್ತು ಕರುಣೆಯ ನೆಲೆಯಲ್ಲಿ ಬೆಳೆಯುತ್ತವೆ. ನನ್ನ ಸಹೋದರಿ ನೀಲಮ್ಮ ಅವರು ಕೇವಲ ನಮ್ಮ ಕುಟುಂಬದ ಸದಸ್ಯೆಯಾಗಿರಲಿಲ್ಲ; ಊರಿನ ನೂರಾರು ಮಕ್ಕಳಿಗೆ ತಾಯಿಯಾಗಿ, ಅನೇಕ ಕುಟುಂಬಗಳಿಗೆ ಆತ್ಮೀಯ ಬಂಧುವಾಗಿ ಬದುಕಿದ್ದರು. ಅದಕ್ಕಾಗಿಯೇ ಅವರ ಅಗಲಿಕೆಯ ನೋವು ಇಡೀ ಗ್ರಾಮವನ್ನು ಕಾಡುತ್ತಿದೆ.

ಸಾವು ಎಂಬುದು ಯಾರಿಗೂ ತಪ್ಪದ ಸತ್ಯ. ದೇವರು, ದಾನವರು, ಮಹಾಪುರುಷರು ಸೇರಿದಂತೆ ಎಲ್ಲರಿಗೂ ಸಾವುಂಟು. ಆದರೆ ಸಮಾಜದ ಒಳಿತಿಗಾಗಿ ಬದುಕಿದವರು ತಮ್ಮ ಕಾರ್ಯಗಳ ಮೂಲಕ ಚಿರಂಜೀವಿಗಳಾಗುತ್ತಾರೆ. ನೀಲಮ್ಮ ಅವರ ಜೀವನವೂ ಅಂತಹದೇ ಆಗಿತ್ತು ಎಂದು ನುಡಿದರು.
ವಚನ ಚೂಡಾಮಣಿ ಅವರು ಶರಣರ ವಚನಗಳನ್ನು ಸುಶ್ರಾವ್ಯವಾಗಿ ಗಾಯನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಭಕ್ತಿಭಾವದ ಕಳೆ ತಂದರು. ಅವರ ಮನಮುಟ್ಟುವ ವಚನಗಾಯನವು ನೆರೆದಿದ್ದ ಶರಣಾಭಿಮಾನಿಗಳನ್ನು ಭಾವಲೋಕಕ್ಕೆ ಕರೆದೊಯ್ದು ಕಾರ್ಯಕ್ರಮದ ಘನತೆಯನ್ನು ಮತ್ತಷ್ಟು ಹೆಚ್ಚಿಸಿತು. ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಬಿ.ಆರ್. ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಶರಣ ಚಿಂತಕ ದೇವನೂರು ಪ್ರಶಾಂತ್, ಪ್ರಭುಸ್ವಾಮಿ, ಬಾನಹಳ್ಳಿ ಸಂತೋಷ್, ಗಜೇಂದ್ರ ಪ್ರಭುಸ್ವಾಮಿ, ಪಟೇಲ್ ಬಾಬು, ಶರಣು ವಿಶ್ವವಚನ ಫೌಂಡೇಷನ್ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.







