ArticlesLatest

ಸ್ನೇಹದ ಕಡಲಲ್ಲಿ.. ನೆನಪಿನ ದೋಣಿಯಲ್ಲಿ… ತೇಲಿ ಬಂತು… ಬಾಲ್ಯದ ‘ಆ’ ದಿನಗಳು…

ಒಂದು  ಫೋಟೋ…  ನಾವು 7ನೇ ತರಗತಿಯಲ್ಲಿ ತೆಗೆಸಿಕೊಂಡಿದ್ದು. ಇನ್ನೊಂದು ಫೋಟೋ ನಾವು ಎಸ್ ಎಸ್ ಎಲ್ ಸಿ ಮುಗಿಸಿದ  1994 ರ ಸ್ನೇಹಿತರೆಲ್ಲ ಒಂದೆಡೆ ಸೇರಿ ಫೋಟೋ ತೆಗೆದುಕೊಂಡಿದ್ದು. ಈ ಎರಡು ಫೋಟೋಗಳು ನಿಜಕ್ಕೂ ತಾಳೆ ಮಾಡುವಂತೆ ಇವೆ.

ಏಳನೇ ತರಗತಿಯಲ್ಲಿ ಇದ್ದ ಅನೇಕ ಸ್ನೇಹಿತರು ನಮಗೆ ಸಿಗಲಿಲ್ಲ. ಅವರು ಅನಿವಾರ್ಯವಾಗಿ ವಿದ್ಯಾಭ್ಯಾಸದ ನಿಮಿತ್ತ….. ಅಥವಾ ಮದುವೆಯಾಗಿ ಬೇರೆ ಕಡೆಗೆ ಹೋಗಿದ್ದಾರೆ. ಆದರೂ ಕೂಡ ಕಡಿಮೆ ಅವಧಿಯಲ್ಲಿ ಎಲ್ಲರನ್ನ ಒಟ್ಟಿಗೆ ಸೇರಿಸುವ ಪ್ರಯತ್ನವನ್ನು ನಾವು ಮಾಡಿದೆವು ಅದು ಯಶಸ್ವಿಯಾಯಿತು.

ಆ ಒಂದು ಅಮೃತಘಳಿಗೆ ಬಂದೇ ಬಿಟ್ಟಿತು!. ಮೂರ್ನಾಲ್ಕು ವರ್ಷಗಳ ಹಿಂದೆ ನಾವು ಎಲ್ಲರೂ ಒಟ್ಟಿಗೆ ಸೇರಿದ್ದಿದ್ದೆವು. ಬೆಳಿಗ್ಗೆ ತಿಂಡಿ ತಿಂದೆವು. ಮಧ್ಯಾಹ್ನ ಊಟ ಮಾಡಿದೆವು. ಜೊತೆಗೆ ……ಹಲವರಿಗೆ ಇವರು ಯಾರು? ಯಾವ ಸ್ನೇಹಿತರು? ಇವರ ಹೆಸರು ಏನು? ಎಂದು ಗುರುತಿಸುವುದನ್ನು ಕೂಡ ನಾವು ಪರಸ್ಪರ ಮಾಡಿಕೊಂಡೆವು!!. ಹಲವರು ನಮ್ಮನ್ನ ಗುರುತಿಸಿದರು. ಕೆಲವರು ಗುರುತಿಸಲಾಗಲಿಲ್ಲ. ನಾನು ಕೂಡ!. ಆದರೆ ಅವರ ಬಾಲ್ಯದ ದಿನದ ಮುಖ ಮಾತ್ರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿತ್ತು. ಅವರ ಹೆಸರುಗಳನ್ನ ಮರೆತಿದ್ದೆವು ಅಷ್ಟೇ!.

ಆದರೆ ಆಶ್ಚರ್ಯಕರ ಸಂಗತಿ ಎಂದರೆ ನನ್ನ ಹೆಸರನ್ನ ಎಲ್ಲರೂ ಕೂಡ ನೆನಪಿನಲ್ಲಿ ಇಟ್ಟುಕೊಂಡಿದ್ದರು. ಏಕೆಂದರೆ ನಮ್ಮ ತಂದೆ 7ನೇ ತರಗತಿಯಲ್ಲಿ ಅವರಿಗೆ ಶಿಕ್ಷಕರಾಗಿದ್ದರು. ಆದುದರಿಂದ ನಾನು ಗುರುಗಳ ಮಗ ಎನ್ನುವುದು ಒಂದು ವಿಷಯವಾದರೆ…… ಮತ್ತೊಂದು ವಿಷಯ ನಾನು ಪತ್ರಿಕೆಗಳಿಗೆ ಲೇಖನಗಳನ್ನ ಜೊತೆಗೆ ಆಕಾಶವಾಣಿಯ ಕಾರ್ಯಕ್ರಮಗಳನ್ನ ಕೇಳುತ್ತಾ ಬಂದಿದ್ದರಿಂದ ನನ್ನ ಹೆಸರು ಒಂದಲ್ಲ ಒಂದು ರೀತಿಯಲ್ಲಿ ಅವರ ಮನದಲ್ಲಿ ಉಳಿದಿತ್ತು.

ಆ ದಿನಗಳಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದ್ದಾಗ ನಮ್ಮ ಸ್ನೇಹದ ಸಂಗಮ ಈ ದಿನವೂ ಹಸಿ ಹಸಿಯಾಗಿ ನೆನಪು ಮೂಡಿಸುತ್ತದೆ. ಕಳೆದ ವರ್ಷ ಎಲ್ಲರೂ ಒಟ್ಟಾಗಿ ಸೇರಿದ್ದೆವು. ಸ್ನೇಹದ ವಿನಿಮಯ ಮಾಡಿಕೊಂಡೆವು. ನಾವು ವಳಗೆರೆ ಹಳ್ಳಿ ಗ್ರಾಮದಿಂದ ಪ್ರೌಢಶಾಲೆಗೆ ಸ್ವಲ್ಪ ಊರಿನ ಹೊರಗೆ ಹೋಗುವಾಗ ನಾವು ರಸ್ತೆ ಯುದ್ದಕ್ಕೂ ಕೀಟಲೆ ಮಾಡಿಕೊಳ್ಳುತ್ತಾ….. ಪಕ್ಕದಲ್ಲಿ ಹರಿಯುತ್ತಿದ್ದ ಕಾಲುವೆಯಲ್ಲಿ….. ಜೊತೆಗೆ ಗದ್ದೆಗಳಲ್ಲಿ….  ಆಟವಾಡುತ್ತಾ ಹೋಗುತ್ತಿದ್ದೆವು.

ವಿಶಾಲವಾದ ಶಾಲೆಯ ಮೈದಾನದಲ್ಲಿ ಆಟವನ್ನು ಆಡುತ್ತಿದ್ದೆವು. ಅಲ್ಲೇ ಚಿಕ್ಕ ಚಿಕ್ಕ ಕಲ್ಯಾಣಿ ಗಳು ಇದ್ದವು. ದೇವಸ್ಥಾನವು ಇತ್ತು. ಶಾಲೆಯ ಬೆಲ್ ಹೊಡೆಯುವವರಿಗೆ ನಾವು ಆಡಿದ್ದೆ ಆಟವಾಗಿತ್ತು. ಆ ಶಾಲೆಗೆ ಈಗಲೂ ಕೂಡ ಸಮಯ ಸಿಕ್ಕಾಗಲೆಲ್ಲ ಹೋಗುತ್ತೇನೆ ನನ್ನ ಬಾಲ್ಯದ ಹೆಜ್ಜೆ ಗುರುತುಗಳನ್ನ ಕಂಡು ಹೆಮ್ಮೆ ಪಡುತ್ತೇನೆ. ಆ ಸಂದರ್ಭದಲ್ಲಿ ಅನೇಕ ಸ್ನೇಹಿತರು ಕೂಡ ಸಿಗುತ್ತಾರೆ ಎಲ್ಲರೂ ಅವರವರ ಮನೆಗೆ ಕರೆದುಕೊಂಡು ಹೋಗುತ್ತಾರೆ.

ಈ ಒಂದು ಸ್ನೇಹದ ಮಾಧುರ್ಯದ ಆ ಕ್ಷಣಗಳನ್ನು ನಾನು ಎಂದೆಂದಿಗೂ ಮರೆಯುವುದಿಲ್ಲ ಅದು ಮುಗಿಯದ ಅಕ್ಷಯ ಪಾತ್ರೆಯಂತೆ ವರ್ಷದಿಂದ ವರ್ಷಕ್ಕೆ ಗಟ್ಟಿಯಾಗುತ್ತಾ ಹೋಗುತ್ತಿದೆ ಇದೊಂದು ವಿಷಯದಲ್ಲಿ ನಾನು ಪುಣ್ಯವಂತ. ಈ ಸಂದರ್ಭದಲ್ಲಿ ನಮ್ಮ ತಂದೆಯನ್ನು ಕೂಡ ನೆನಪಿಸಿಕೊಳ್ಳಬೇಕು. ನಮ್ಮ ತಂದೆ ದಿವಂಗತ ಕೆ ಎಂ ವೀರಭದ್ರಯ್ಯ ಕಾಳಿಹುಂಡಿ ಗ್ರಾಮದವರು. ಆದರೆ ಅವರು ಶಿಕ್ಷಕರಾಗಿದ್ದರಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾವಣೆಯಾದಾಗ ಅಲ್ಲಿ ನಮಗೆ ಹೊಸ ಹೊಸ ಸ್ನೇಹಿತರ ಸಂಗಮ ಸಿಗುತ್ತಿತ್ತು.

ಆದುದರಿಂದಾಗಿ ನನಗೆ ನನ್ನ ಹುಟ್ಟೂರು ಕಾಳಿಹುಂಡಿ ಅಲ್ಲದೆ ಪಕ್ಕದ ಚಕ್ಕೂರು ನಂತರದಲ್ಲಿ ವಳಗೆರೆಹಳ್ಳಿ ಗ್ರಾಮ ಅಲ್ಲಿ ನಾಲ್ಕು ವರ್ಷ ಕಳೆದ ನಂತರ ನಂಜನಗೂಡು ತಾಲೂಕು ಹುಲ್ಲಹಳ್ಳಿ ಗ್ರಾಮದಲ್ಲಿ ಎರಡು ವರ್ಷ ನಂತರ ಎಚ್ ಡಿ ಕೋಟೆ ತಾಲೂಕಿನ ಹಂಪಾಪುರ ಹೀಗೆ ನಮ್ಮ ಬಾಲ್ಯದ ದಿನಗಳು ಶಾಲೆಗಳಲ್ಲಿ ಸಿಕ್ಕವು.

ಅದರಲ್ಲೂ ಕಾಲೇಜಿನ ದಿನಗಳು ಕೂಡ ನೆನಪಿನಲ್ಲಿ ಉಳಿಯುವಂತದ್ದು. ಮರಿ ಮಲ್ಲಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಮೈಸೂರಿಗೆ ಸೇರಿಕೊಂಡಾಗ ಅನೇಕ ಮೈಸೂರಿನ ವಾತಾವರಣದ ಸ್ನೇಹಿತರು ಸಿಕ್ಕರು. ಹೀಗೆ ಸ್ನೇಹ ಬಾಲ್ಯದ ದಿನಗಳಲ್ಲಿ ನನಗೆ ವಿಶಿಷ್ಟ ರೀತಿಯ ಶಕ್ತಿಯನ್ನು, ಮುದವನ್ನ, ಮನರಂಜನೆಯನ್ನ, ವಿಶಾಲತೆಯನ್ನು, ಶ್ರೇಷ್ಠತೆಯನ್ನು ನೀಡಿತು. ಆ ಒಂದು ಸಂಸ್ಕಾರ ಗುಣದಿಂದ ನನಗೆ ಈ ದಿನ ನೂರಾರು ಸ್ನೇಹಿತರ ಸಂಗಮ ಸಿಗುತ್ತಿದೆ.

7ನೇ ತರಗತಿ ಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಳಗೆ ಹಳ್ಳಿಯಲ್ಲಿ ಓದಿದ್ದೆವು. ನಂತರ 8 ರಿಂದ 10ನೇ ತರಗತಿವರೆಗೆ ಶ್ರೀಮತಿ ಪ್ರಮೀಳ ವೀರಪ್ಪ ಪ್ರೌಢಶಾಲೆಯಲ್ಲಿ ಓದಿದೆವು. ಆ ಬಾಲ್ಯದ ಸ್ನೇಹಿತರನ್ನು ನಾವು ಮರೆಯಲು ಸಾಧ್ಯವೇ ಇಲ್ಲ. ಆ ಒಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಆ ಸ್ನೇಹಿತರ ತಂಡ ಈಗಲೂ ಕೂಡ ಆಗಿಂದಾಗೆ  ಸಿಗುತ್ತಾರೆ. ಪರಸ್ಪರ ಹಳೆಯ ದಿನಗಳ ನೆನಪನ್ನು ಮಾಡಿಕೊಳ್ಳುತ್ತೇವೆ. ನಿಜಕ್ಕೂ ಅಮೂಲ್ಯ ಸ್ನೇಹವನ್ನು ನಾವು ನಾಲ್ಕು ವರ್ಷಗಳಲ್ಲಿ ಸಂಪಾದಿಸಿಕೊಂಡಿರುವ ಎನ್ನುವುದು ಈ ದಿನಕ್ಕೂ ಕೂಡ ವಿಶಿಷ್ಟ ವಿಷಯ ಎಂತಾಗಿದೆ.

ಈಗಲೂ ಕೂಡ ನಮ್ಮ ಸ್ನೇಹಿತರು ಫೋನ್ ಮಾಡಿ, ಸಂದೇಶ ನೀಡಿ ಅನೇಕ ಕಾರ್ಯಕ್ರಮಗಳಿಗೆ ಕರೆಯುತ್ತಾರೆ. ನಾನು ಬಿಡುವು ಮಾಡಿಕೊಂಡು ಹೋಗಿ ಬರುತ್ತೇನೆ.  ಈಗಲೂ ಕೂಡ ಆ ಸ್ನೇಹ ವಿಶಿಷ್ಟವಾಗಿ ನಮಗೆ ಮುದ ನೀಡುತ್ತದೆ.

ಏಕೆಂದರೆ ಆ ದಿನದಲ್ಲಿ ನಮಗೆ ಯಾವುದೇ ರೀತಿಯ ಸವಲತ್ತುಗಳು ಇರಲಿಲ್ಲ. ಆದರೆ ನಮ್ಮ ಸ್ನೇಹಕ್ಕೆ ಮಾತ್ರ ಎಲ್ಲೆ ಇರಲಿಲ್ಲ. ಒಬ್ಬರು ಮತ್ತೊಬ್ಬರನ್ನು ಬಿಟ್ಟಿರುತ್ತಿರಲಿಲ್ಲ. ಅನೇಕ ಕಷ್ಟದ ಕಾಲದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಹಾಯದ ಹಸ್ತವನ್ನು ಚಾಚುತ್ತಿದ್ದೆವು. ಪರಸ್ಪರ ಸಮಸ್ಯೆಗಳನ್ನ ಹಂಚಿಕೊಂಡು ಬಗೆಹರಿಸುತ್ತಿದ್ದೆವು.  ಆ ಸುಮಧುರ ಕ್ಷಣಗಳು ಇವತ್ತಿಗೂ ಕೂಡ ನಮ್ಮನ್ನ ರೋಮಾಂಚನವನ್ನುಂಟು ಮಾಡುತ್ತವೆ.

ನಮ್ಮ ಸ್ನೇಹದ ಜೊತೆಗೆ ನಮ್ಮ ಗುರುಗಳು ಕೂಡ ಈಗಲೂ ಸಿಗುತ್ತಾರೆ. ಕೆಲವು ಸ್ನೇಹಿತರು ನಮ್ಮನ್ನಗಲಿದ್ದಾರೆ. ಅವರಿಗೆ ನಾವು ಗೌರವ ಶ್ರದ್ಧಾಂಜಲಿಯನ್ನ ಸಲ್ಲಿಸುವೆವು. ಆದರೆ ನಮ್ಮ ಸ್ನೇಹ ಎಂದೆಂದಿಗೂ ಅಮರ ಮಧುರ ನೆನಪುಗಳ ಸಂಗಮ ಮೂಡಿಸುತ್ತದೆ. ಆ ಕಾಲಕ್ಕೆ ಈ ಫೋಟೋ ವರ್ಣರಂಜಿತವಾಗಿದೆ. ಅದು ನೆನಪುಗಳನ್ನ ಮನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಮೂಡಿಸುತ್ತದೆ. ಆ ದಿನದ ಶಿಕ್ಷಕರು ವಳಗೆರೆಹಳ್ಳಿಯ ಜನರು ಎಲ್ಲರೂ ಕೂಡ ಈ ದಿನ ನೆನಪಾಗುತ್ತಾರೆ.

ಇದೆಲ್ಲ ನಮ್ಮ ಬಾಲ್ಯದ ಸ್ನೇಹದ ದಿನಗಳಾದರೆ ಇನ್ನು ನಂತರದಲ್ಲಿ ನಮ್ಮ ಕಾಲೇಜಿನ ದಿನಗಳು ಕೂಡ ಮುಖ್ಯವಾಗುತ್ತವೆ. ಆ ಒಂದು ಎರಡು ವರ್ಷದಲ್ಲಿ ಅನೇಕ ಸ್ನೇಹಿತರು ಸಿಕ್ಕರು. ನಂತರ ನಾನು ಪದವಿ ತರಗತಿಗೆ ಅನಿವಾರ್ಯವಾಗಿ ಹೋಗಲು ಆಗಲಿಲ್ಲ. ಆನಂತರದಲ್ಲಿ ನಮ್ಮ ತಂದೆಯ ಕೆಲಸ ಸಿಕ್ಕಿದ್ದರಿಂದ ಸರ್ಕಾರಿ ನೌಕರನಾಗಿ ಕೆಲಸಕ್ಕೆ ಸೇರಿಕೊಂಡೆ. ನಂತರ ನಮಗೆ ಕಚೇರಿಯಲ್ಲಿ ಅನೇಕ ಸ್ನೇಹದ ಸಹಪಾಠಿಗಳು ಸಿಕ್ಕರು. ಅವರಲ್ಲಿ ದೊಡ್ಡವರು ಚಿಕ್ಕವರು ಎನ್ನದೆ ಎಲ್ಲರೂ ಒಟ್ಟಾಗಿ ಬೆರೆತವು. ಒಟ್ಟಾಗಿ ಎಲ್ಲಾ ಕೆಲಸಗಳನ್ನು ಮಾಡುತ್ತಾ ಸಾಗಿದೆವು.

ಇವತ್ತಿನ ದಿನಗಳಲ್ಲೂ ಕೂಡ ನಾವು ಅನೇಕ ಸಾಹಿತಿಗಳ ಒಡನಾಟದ ಸ್ನೇಹವೂ ಇದೆ. ಜೊತೆಗೆ ಅನೇಕ ಸಾಹಿತ್ಯ ಕಾರ್ಯಕ್ರಮಗಳಲ್ಲೂ ಕೂಡ ಒಂದು ಕಾರ್ಯಕ್ರಮದಿಂದ ಮತ್ತೊಂದು ಕಾರ್ಯಕ್ರಮಕ್ಕೆ ಅನೇಕ ಹಿರಿಯ ಸ್ನೇಹಿತರು ಕೂಡ ಸಿಕ್ಕರು. ಜೊತೆಗೆ ಅನೇಕ ವಯಸ್ಕ ಸಾಹಿತಿಗಳು ನಮ್ಮನ್ನ ಅವರ ಸಮನಂತೆ ಕಂಡು, ಅವರ ವ್ಯಕ್ತಿತ್ವವನ್ನು ನಮಗೆಲ್ಲ ಧಾರೆ ಎರೆದರು.

ಈ ರೀತಿಯ ಒಡನಾಟದಿಂದ ನಮ್ಮ ಸ್ನೇಹ ಈಗ ವಿಶಾಲವಾದ ಆಲದ ಮರದಂತೆ ಎಲ್ಲೆಡೆ ಟಿಸಿಲೊಡೆದು ಅದು ವರ್ಷದಿಂದ ವರ್ಷಕ್ಕೆ ಒಂದಲ್ಲ ಒಂದು ರೀತಿಯಲ್ಲಿ ಫಲ ನೀಡುತ್ತಿದೆ. ನಾವು ಇಲ್ಲಿ ಕರ್ತವ್ಯ ಮಾಡು ಫಲ ನಿರೀಕ್ಷಿಸದಿರು ಎನ್ನುವ ಗೀತಸಾರದಂತೆ ನಮ್ಮ ನಮ್ಮ ಕೆಲಸಗಳನ್ನ ಮಾಡುತ್ತ ಸಾಗುತ್ತಿದ್ದೇವೆ. ಇವುಗಳೆಲ್ಲರ ಜೊತೆಗೆ ನನಗೆ ಪತ್ರಿಕೆಗಳಲ್ಲಿ ಆಕಾಶವಾಣಿಯಲ್ಲಿ ಕಚೇರಿ ಕೆಲಸಗಳಲ್ಲಿ ಅನೇಕ ವಿಶಿಷ್ಟ ಬಗೆಯ ಸ್ನೇಹಿತರು ಸಿಕ್ಕರು. ಅದರಲ್ಲೂ ಹೊಸಹಳ್ಳಿ ದಾಳೇಗೌಡರ ಪತ್ರ ಮಿತ್ರ ಸ್ನೇಹಿತರು ಕೂಡ ಈ ದಿನದಲ್ಲಿ ನೆನಪಾಗುತ್ತಾರೆ.

ಹೀಗೆ ಈ ಸ್ನೇಹ ಒಂದು ರೀತಿಯಲ್ಲಿ ಅಮರ ಮಧುರವಾದದ್ದು. ಅದನ್ನು ಅನುಭವಿಸಿದವರಿಗೆ ಅದರ ಬಗ್ಗೆ ಗೊತ್ತು. ಒಟ್ಟಿನಲ್ಲಿ ಆ ಬಾಲ್ಯದ ಸ್ನೇಹದ ನೈಜ ದಿನಗಳು ಈ ಕ್ಷಣಕ್ಕೆ ನೆನಪಾಗುತ್ತದೆ.  ಇತ್ತೀಚೆಗೆ ನಾವು ಎಸ್ ಎಸ್ ಎಲ್ ಸಿ 1994ರ ಸ್ನೇಹಿತರೆಲ್ಲ ಒಟ್ಟಾಗಿ ಒಂದು ಕಡೆ ಸೇರಿ ಕೇಕ್ ಕಟ್ ಮಾಡಿ ಪರಸ್ಪರ ಸ್ನೇಹದ ವಿನಿಮಯ ಮಾಡಿಕೊಂಡೆವು .ಜೊತೆಗೆ ಎಲ್ಲರನ್ನೂ ಒಂದೆಡೆ ಭೇಟಿ ಮಾಡಿದ ಸಂಭ್ರಮ ಸಡಗರ ನಮ್ಮನ್ನು ಮನೆ ಮಾಡಿತ್ತು. ಎಲ್ಲರೂ ಮದುವೆಯಾಗಿದ್ದರು. ಕೆಲವರು ಅನಿವಾರ್ಯ ಕಾರಣಗಳಿಂದ ಬಂದಿರಲಿಲ್ಲ.

ಎಲ್ಲರ ಫೋನ್ ನಂಬರ್ ಗಳನ್ನ ವಿನಿಮಯ ಮಾಡಿಕೊಂಡೆವು. ಈಗಲೂ ಕೂಡ ಸಮಯ ಸಿಕ್ಕಾಗ ಮಾತನಾಡುತ್ತೇವೆ. ಜೊತೆಗೆ ಅವರ ಕುಟುಂಬ, ಸಂಸಾರ, ಮಕ್ಕಳು ಮನೆ ಇತ್ಯಾದಿ ವಿಷಯಗಳ ಬಗ್ಗೆ ಚರ್ಚೆ ಮಾಡಿದೆವು. ಒಂದೆಡೆ ಕುಳಿತು ಊಟ ಮಾಡಿದೆವು. ಕಾಫಿ ಕುಡಿದೆವು. ಇಂತಹ ಸ್ನೇಹ ಎಲ್ಲರಿಗೂ ಸಿಗುವುದಿಲ್ಲ ಅದನ್ನು ಜೋಪಾನವಾಗಿ ಕಾಪಿಟ್ಟುಕೊಳ್ಳಬೇಕು ಎನ್ನುವುದು ನನ್ನ ಹೃದಯ ಅಂತರಾಳದ ಅನಿಸಿಕೆ.

admin
the authoradmin

Leave a Reply