LatestState

ತುಂಗಭದ್ರಾ ಜಲಾಶಯ ಭರ್ತಿಗೆ ಇನ್ನೂ 21 ಅಡಿ ಬಾಕಿ : ರೈತರಲ್ಲಿ ದೂರವಾದ ಆತಂಕ.

ಹೊಸಪೇಟೆ (ಆರ್ ಹೆಚ್ ) : ಕರ್ನಾಟಕದ ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತುಂಗಭದ್ರಾ ಜಲಾಶಯ ಪ್ರಮುಖ ಬಹುಪಯೋಗಿ ಅಣೆಕಟ್ಟೆಯಾಗಿದ್ದು, ಈ ಬಾರಿ ಮುಂಗಾರು ವೈಫಲ್ಯದಿಂದ ಆಗಸ್ಟ್ ಬಂದರು ಭರ್ತಿಯಾಗಿಲ್ಲ.

ತುಂಗಭದ್ರಾ ಜಲಾಶಯ ಸುಮಾರು 106 ಟಿಎಂಸಿ ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ಜೀವನಾಡಿಯಾಗಿದೆ. ಆದರೆ ಪ್ರಸಕ್ತ ವರ್ಷ ಜೂನ್ ಮತ್ತು ಜುಲೈ ಮುಗಿದರೂ ಅಣೆಕಟ್ಟೆ ತುಂಬಿಲ್ಲ.ವಾಡಿಕೆಯಂತೆ ಕಳೆದ ಎರಡು ತಿಂಗಳು ಸುರಿಯಬೇಕಿದ್ದ ಮಳೆ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ರೈತರು ಯಾವಾಗ ಜಲಾಶಯ ಭರ್ತಿಯಾಗುತ್ತದೆ ಎಂದು ಎದುರುನೋಡುತ್ತಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನಲ್ಲಿ ಸ್ವಲ್ಪ ಹೆಚ್ಚಳ ಕಂಡುಬಂದಿದೆ.ತುಂಗಭದ್ರಾ ಜಲಾಶಯದ ಗರಿಷ್ಠ ಮಟ್ಟ 1633 ಅಡಿಗಳಿದ್ದು, ಪ್ರಸ್ತುತ ನೀರಿನ ಮಟ್ಟ 1611.59 ಅಡಿ ತಲುಪಿದೆ. ಒಟ್ಟು 106 ಟಿಎಂಸಿ ಸಾಮರ್ಥ್ಯವಿರುವ ಡ್ಯಾಮ್‌ನಲ್ಲಿ ಸದ್ಯ 40.80 ಟಿಎಂಸಿ ನೀರು ಸಂಗ್ರಹವಿದ್ದು ಒಳಹರಿವು ಸುಮಾರು 25,811 ಕ್ಯೂಸೆಕ್‌ಗೆ ಏರಿಕೆಯಾಗಿದೆ.

ತುಂಗಭದ್ರಾ ಜಲಾಶಯವನ್ನೇ ಆಶ್ರಯಿಸಿರುವ ಮೂರು ರಾಜ್ಯಗಳ ಎಂಟು ಜಿಲ್ಲೆಗಳ ರೈತರಿಗೆ ಇದರಿಂದ ಕೊಂಚ ಸಮಾಧಾನ ತಂದಿದ್ದು, ಆತಂಕ ದೂರವಾಗಿದೆ. ಅಣೆಕಟ್ಟು ಸುಮಾರು 49.5 ಮೀಟರ್ ಎತ್ತರವಿದ್ದು, 33 ಕ್ರೆಸ್ಟ್ ಗೇಟ್‌ಗಳನ್ನು ಹೊಂದಿದೆ. ನೀರಾವರಿ, ವಿದ್ಯುತ್ ಉತ್ಪಾದನೆ ಮತ್ತು ಕುಡಿಯುವ ನೀರು ಪೂರೈಕೆ ಆದ್ಯತೆ ನೀಡಲಾಗುತ್ತಿದೆ.ಜಲಾಶಯಕ್ಕೆ 25 ಸಾವಿರ ಕ್ಯೂಸೆಕ್ ನಷ್ಟು ಒಳಹರಿವು ಇದ್ದು, ಗಾಜನೂರಿನ ತುಂಗಾ ಅಣೆಕಟ್ಟೆಯಿಂದ ಅಧಿಕ ನೀರು ಬಿಡುತ್ತಿರುವುದರಿಂದ ಒಂದೆರಡು ದಿನಗಳಲ್ಲಿ ಒಳಹರಿವು ಪ್ರಮಾಣ 50 ಸಾವಿರ ಕ್ಯೂಸೆಕ್ ದಾಟುವ ನಿರೀಕ್ಷೆ ಇದೆ.

ಈ ಮಧ್ಯೆ, ಹೂವಿನ ಹಡಗಲಿ ತಾಲ್ಲೂಕಿನ ಸಿಂಗಟಾಲೂರು ಬ್ಯಾರೇಜ್ ನಿಂದ ಅಧಿಕ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುವುದು ಆದ್ದರಿಂದ ನದಿ ದಂಡೆಯ ಜನರು ಸುರಕ್ಷತಾ ಸ್ಥಳಕ್ಕೆ ತೆರಳಬೇಕು.ಹಾಗೂ ಮೀನುಗಾರರು ನದಿಗೆ ಇಳಿಯಬಾರದು ಎಂದು ನೀರಾವರಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

admin
the authoradmin

Leave a Reply