ಚಾಮರಾಜನಗರ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಸೆಗಣಿ ಬಳಿಯುತ್ತಿದ್ದಾಗಲೇ ಸಿಕ್ಕಿ ಬಿದ್ದ ಪರಿಣಾಮ ಗ್ರಾಮಸ್ಥರು ವಿದ್ಯುತ್ ಕಂಬಕ್ಕೆ ಕಟ್ಟಿ ಸಕತ್ ಗೂಸಾ ನೀಡಿದ ಘಟನೆ ಚಾಮರಾಜನಗರ ಜಿಲ್ಲೆಯ ಮಸಣಾಪುರ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಗ್ರಾಮದಲ್ಲಿ ಉದ್ವಿಘ್ನತೆ ಉಂಟಾಗಿರುವ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಗ್ರಾಮದ ನಿವಾಸಿ ಚಂದ್ರು ಎಂಬಾತನೇ ಅಂಬೇಡ್ಕರ್ ಭಾವಚಿತ್ರಕ್ಕೆ ಸೆಗಣಿ ಬಳಿದು ಧರ್ಮದೇಟು ತಿಂದವನು. ಈತ ಮಸಣಾಪುರ ಗ್ರಾಮದಲ್ಲಿ ಭಾನುವಾರ ಮುಂಜಾನೆ ಮುಂಜಾನೆ 4.30ರ ವೇಳೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸೆಗಣಿ ಬಳಿಯುತ್ತಿದ್ದನು. ಇದನ್ನು ನೋಡಿದ ಸಾರ್ವಜನಿಕರು ಆತನನ್ನು ಹಿಡಿದು ಅಲ್ಲಿದ್ದ ವಿದ್ಯುತ್ ಕಂಬಕ್ಕೆ ಕಟ್ಟಿ, ಚಪ್ಪಲಿ ಹಾರ ಹಾಕಿ ಥಳಿಸಿದ್ದಾರೆ.

ಸಾರ್ವಜನಿಕರು ಕೃತ್ಯವನ್ನು ಖಂಡಿಸಿದ್ದಲ್ಲದೆ, ಇಂತಹ ಹೇಯ ಕೃತ್ಯ ಎಲ್ಲೂ ನಡೆಯದಂತೆ ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದ್ದಾರೆ. ಮಸಣಾಪುರ ಗ್ರಾಮವು ಪ್ರಸ್ತುತ ಉದ್ವಿಗ್ನವಾಗಿದ್ದು, ಗ್ರಾಮಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿ ಪಡಿಸುವಲ್ಲಿ ಮುಂದಾಗಿದ್ದಾರೆ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಶಿಧರ್ ರವರು ಭೇಟಿ ನೀಡಿ, ಘಟನೆ ಬಗ್ಗೆ ಸಮಗ್ರವಾದ ಮಾಹಿತಿ ಪಡೆಯುತ್ತಿದ್ದಾರೆ.
ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಬಳಿದ ಘಟನೆಯ ಬಗ್ಗೆ ಗ್ರಾಮದಲ್ಲಿ ದಲಿತ ಸಮುದಾಯದ ಯುವಕರು ಮತ್ತು ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಜನ ನೋಡದೆ ಆರೋಪಿ ಸಿಕ್ಕಿಬೀಳದೆ ಹೋಗಿದ್ದರೆ ಇನ್ನಷ್ಟು ಸಮಸ್ಯೆಗೆ ಕಾರಣವಾಗುತ್ತಿತ್ತು. ಇನ್ನಾದರೂ ಇಂತಹ ವಿಕೃತ ಕೃತ್ಯಗಳನ್ನು ಮಾಡುವುದನ್ನು ಬಿಟ್ಟು ನೆಮ್ಮದಿಯಾಗಿ ಬದುಕುವುದನ್ನು ರೂಢಿಸಿಕೊಂಡರೆ ಸಮಾಜಕ್ಕೆ ಒಳ್ಳೆಯದಾಗುತ್ತದೆ.








