ಕೊಡಗಿನ ಹೃದಯ ಈಗ ನೋವಿನಿಂದ ಮಿಡಿಯುತ್ತಿದೆ. ನೆಲಜಿಯ ಮಲ್ಮಬೆಟ್ಟದ ಮಡಿಲಿನಿಂದ ಎದ್ದ ನೋವಿನ ಅಲೆ ಇಡೀ ಜಿಲ್ಲೆಯ ಆತ್ಮವನ್ನು ತಟ್ಟಿದೆ. ನೆಲಜಿ ಶ್ರೀ ಇಗ್ಗುತ್ತಪ್ಪನ ಸನ್ನಿಧಿಯಿಂದ ಮಲ್ಮ ಇಗ್ಗುತ್ತಪ್ಪನ ಪಾದದೆಡೆಗೆ ಸಾಗುವ ಪುರಾತನ ಪುಣ್ಯದ ಹಾದಿ. ನಮ್ಮ ಅಜ್ಜ-ಮುತ್ತಜ್ಜಂದಿರ ಕಾಲ್ಗುರುತು ಮೂಡಿದ ಭೂಮಿ. ನಮ್ಮ ಬಡವರ ಕಣ್ಣೀರನ್ನು ದೈವಗಳೇ ಒರೆಸಿದ ನೆಲೆ. ಅಲ್ಲಿ ಇಂದು ಸುಮಾರು 80 ಎಕರೆ ಮಣ್ಣು ನಮ್ಮ ಕೈತಪ್ಪಿ ಹೋಗಿದೆ ಎಂಬ ಸುದ್ದಿ ಕೇಳಿ ಇಡೀ ಕೊಡಗು ಸ್ತಬ್ಧವಾಗಿದೆ.
ಡ್ರೋನ್ ಕ್ಯಾಮೆರಾ ತೋರಿಸಿದ ದೃಶ್ಯ ಕರುಳು ಹಿಂಡುತ್ತದೆ. ಹಸಿರು ಕಾಡಿನ ಎದೆ ಸೀಳಿದ ಕೆಂಪು ರಸ್ತೆ. ಬಂಡೆ ಒಡೆದು ಮಾಡಿದ ವಿಶಾಲ ಕೆರೆ. ಕಾಮಗಾರಿಯ ಗುರುತುಗಳು. ಇದು ಕೇವಲ 80 ಎಕರೆಯ ಪ್ರಶ್ನೆಯಲ್ಲ. ಇದು ನಮ್ಮ ಅಸ್ಮಿತೆ, ನಮ್ಮ ಸಂಸ್ಕೃತಿ, ನಮ್ಮ ಮುಂದಿನ ಪೀಳಿಗೆಯ ಹಕ್ಕಿನ ಪ್ರಶ್ನೆ. ಇವತ್ತು ನೇಲಜಿ ಅಳುತ್ತಿದೆ. ನಾಳೆ ನಿನ್ನ ಊರಿನ ಸರದಿ. ಹೀಗೆ ಒಂದೊಂದೇ ತುಂಡು ಕೈಬಿಟ್ಟರೆ ಮುಂದೊಂದು ದಿನ ನಮ್ಮ ಮಕ್ಕಳು ತಮ್ಮದೇ ತಾಯ್ನೆಲದಲ್ಲಿ ಅನಾಥರಾಗುತ್ತಾರೆ.

ಗ್ರಾಮದ ಹಿರಿಯರು, ತಾಯಂದಿರು ದಿಕ್ಕು ತೋಚದೆ ಜಿಲ್ಲಾಡಳಿತದ ಬಾಗಿಲು ಕಾಯುತ್ತಿದ್ದಾರೆ. “ದೇವರ ಮೂಲ ಸ್ಥಾನದ ಪಾವಿತ್ರ್ಯತೆ ಉಳಿಸಿ, ಮಲ್ಮಬೆಟ್ಟದಲ್ಲಿ ವಾಣಿಜ್ಯ ಬೇಡ” ಎಂಬುದು ಪ್ರತಿಯೊಬ್ಬರ ಕಳಕಳಿಯ ಕೂಗು. ಇದು ಅಭಿವೃದ್ಧಿಗೆ ಅಡ್ಡಗಾಲಲ್ಲ. ನಮ್ಮ ಬೇರುಗಳನ್ನು ಉಳಿಸಿಕೊಳ್ಳುವ ಹೋರಾಟ. ಒಂದು ಕುಟುಂಬ ಅನಿವಾರ್ಯಕ್ಕೆ ಭೂಮಿ ಮಾರಿದರೆ ಅದು ಆ ಮನೆಯೊಂದರ ದುರಂತವಲ್ಲ. ಅದು ಇಡೀ ಸಮುದಾಯದ ಬೇರು ಸಡಿಲವಾದಂತೆ. ಇವತ್ತು ಮಾರಿದವರು ನಾಳೆ ತಮ್ಮದೇ ಊರಿನಲ್ಲಿ ಬಾಡಿಗೆದಾರರಾಗುವ ಸ್ಥಿತಿ ಬರಬಾರದು.
ಮುಂದಿನ ಪರಿಹಾರದ ಸಂಪೂರ್ಣ ವಿವರಣೆ
ಈ ಕಣ್ಣೀರಿಗೆ ಉತ್ತರ ಕೋಪವಲ್ಲ, ಒಗ್ಗಟ್ಟಿನ ಕೆಲಸ. ಕೊಡಗಿನ ಮಣ್ಣು ಕೊಡಗಿನವರ ಮಡಿಲಲ್ಲೇ ಇರಬೇಕಾದರೆ ನಮ್ಮ ಸಮಾಜಗಳೇ ಈಗ ಎದ್ದು ನಿಲ್ಲಬೇಕು. ಚರ್ಚೆ ಮುಗಿದು, ಸಂಕಲ್ಪ ಶುರುವಾಗುವ ಕಾಲವಿದು. ಅಖಿಲ ಕೊಡವ ಸಮಾಜ ಹಾಗೂ ವಿವಿಧ ಕೊಡವ ಸಮಾಜಗಳು ಇದರ ಪ್ರಯುಕ್ತ ತಕ್ಷಣ ಸೂಕ್ತವಾದ ಸಭೆ ನಡೆಸಿ ಕೊಡಗಿನ ಮಣ್ಣನ್ನು ಉಳಿಸಲು ಸಮಾಜಗಳೇ ಭೂಮಿ ಖರೀದಿಸುವಂತಹ ಮಹತ್ತರ ನಿರ್ಧಾರವನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದೆ.
ಈ ಪವಿತ್ರ ಕಾರ್ಯಕ್ಕೆ ಜಿಲ್ಲೆಯ ಪ್ರತಿಯೊಬ್ಬ ಕೊಡಗಿನ ಪ್ರಜೆಯೂ ಹೆಗಲು ಕೊಡಬೇಕು. ಕನಿಷ್ಠ ನೂರು ರೂಪಾಯಿಯಿಂದ ಸಾವಿರಾರು ರೂಪಾಯಿಯ ತನಕ ಪ್ರತೀ ತಿಂಗಳು ತಮ್ಮ ಕೈಲಾದ ದೇಣಿಗೆಯನ್ನು ನೀಡುವ ವ್ಯವಸ್ಥೆಗೆ ಕೂಡಲೇ ಚಾಲನೆ ನೀಡಬೇಕಾಗಿದೆ. ಈ ನಿಧಿಯಿಂದ ಸಂಕಷ್ಟಕ್ಕೆ ಸಿಲುಕಿ ಭೂಮಿ ಮಾರುವ ಅನಿವಾರ್ಯತೆಗೆ ಬಂದ ನಮ್ಮವರ ಜಮೀನನ್ನು ಸಮಾಜವೇ ಅತ್ಯುತ್ತಮ ಬೆಲೆ ಕೊಟ್ಟು ಖರೀದಿಸಲಿ. ನಮ್ಮ ಮಣ್ಣು ಮತ್ತೆಂದೂ ಪರರ ಪಾಲಾಗದಂತೆ ಶಾಶ್ವತ ಕೋಟೆ ಕಟ್ಟಲಿ.

ಜೊತೆಗೆ ಬೆಂಗಳೂರು, ಮೈಸೂರಿನಲ್ಲಿ ಸಣ್ಣಪುಟ್ಟ ದುಡಿಮೆಗಾಗಿ ಗುಳೆ ಹೋದ ನಮ್ಮ ಯುವ ಶಕ್ತಿಯನ್ನು ಮರಳಿ ತಾಯ್ನೆಲಕ್ಕೆ ಕರೆತರುವ ಮಹತ್ಕಾರ್ಯವೂ ಸಮಾಜಗಳದ್ದೇ. ಸಮಾಜಗಳು ಖರೀದಿಸಿದ ಭೂಮಿ, ತೋಟಗಳನ್ನು ನಮ್ಮದೇ ವಿದ್ಯಾವಂತ ಅಥವಾ ಬಡತನ ರೇಖೆಯಲ್ಲಿರುವ ಯುವಕರಿಗೆ ಲೀಸಿಗೆ ನೀಡಿ ಆಧುನಿಕ ಕೃಷಿಗೆ ದಾರಿ ಮಾಡಿಕೊಡಬೇಕು. ಸಾವಯವ ಕೃಷಿ, ಕಾಫಿ ಸಂಸ್ಕರಣೆ, ಹೋಂಸ್ಟೇ, ಪರಿಸರ ಸ್ನೇಹಿ ಪ್ರವಾಸೋದ್ಯಮದಂತಹ ಕ್ಷೇತ್ರಗಳಲ್ಲಿ ಹೊಸ ಮ್ಯಾನೇಜ್ಮೆಂಟ್ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಅವರೇ ಉದ್ಯಮಿಗಳಾಗುವಂತೆ ಮಾಡಬೇಕು.
ಹೀಗಾದರೆ ನಮ್ಮ ಭೂಮಿಯೂ ಉಳಿಯುತ್ತೆ, ನಮ್ಮ ಮಕ್ಕಳ ಭವಿಷ್ಯವೂ ಉಜ್ವಲವಾಗುತ್ತೆ. ತಾಯ್ನೆಲ ಬಿಟ್ಟು ದುಡಿಯುವ ಅನಿವಾರ್ಯತೆ ತಪ್ಪುತ್ತೆ. ನಮ್ಮ ಸಂಸ್ಕೃತಿ, ನಮ್ಮ ಕೃಷಿ ಪರಂಪರೆ, ನಮ್ಮ ಸ್ವಾಭಿಮಾನ ಮುಂದಿನ ನೂರು ತಲೆಮಾರಿಗೆ ದಾಟಿ ಹೋಗುತ್ತೆ.

ಜಿಲ್ಲಾಡಳಿತವೂ ಈ ಜನಾಂದೋಲನಕ್ಕೆ ಸಂಪೂರ್ಣ ಸಹಕಾರ ನೀಡಿ, ದೇವರ ಹಾದಿ, ಅರಣ್ಯ ಪ್ರದೇಶಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗೆ ಕಡಿವಾಣ ಹಾಕಬೇಕು. ಜನರ ಭಾವನೆಗೆ ಸ್ಪಂದಿಸಿ ಪಾರದರ್ಶಕ ಆಡಳಿತ ನೀಡಬೇಕು. ಸಾಮಾಜಿಕ ಕಳಕಳಿಯಿಂದ ನಮ್ಮ ಜನ್ಮ ಭೂಮಿಯ ಉಳಿವಿಗಾಗಿ ಕೊಡಗಿನ ಸಮಸ್ಯೆಗಳು ಹಾಗೂ ಪರಿಹಾರಗಳು ಗ್ರೂಪ್. ಕೊಡಗು ನಮ್ಮ ತಾಯಿ. ಅವಳ ಕಣ್ಣೀರು ಒರೆಸುವುದು ನಮ್ಮೆಲ್ಲರ ಕರ್ತವ್ಯ. ನೇಲಜಿಯಿಂದ ಎದ್ದ ಈ ಎಚ್ಚರಿಕೆಯ ಕೂಗು ಇಡೀ ಜಿಲ್ಲೆಯ ಪುನರುತ್ಥಾನದ ಮಂತ್ರವಾಗಲಿ. ಇನ್ನು ಒಂದು ಹಿಡಿ ಮಣ್ಣೂ ಕೈತಪ್ಪದಿರಲಿ.









