CinemaLatest

ಡಾ ರಾಜ್ ಕುಮಾರ್ ಮಗನ ಪಾತ್ರಕ್ಕೆ ಜೀವ ತುಂಬಿದ ಅಶೋಕ್… ಚಂದನವನದ ಹೆಮ್ಮೆಯ ನಟ

ಚಂದನವನದ ಇತಿಹಾಸದ ಪುಟಗಳನ್ನು ತೆರೆದುನೋಡಿದಾಗ ಇಲ್ಲಿ ಬದುಕು ಕಟ್ಟಿಕೊಂಡ ನಟ ನಟಿಯರ ಬದುಕಿನ ಹಿಂದೆ ರೋಚಕತೆ ಕಂಡು ಬರುತ್ತದೆ… ಅಷ್ಟೇ ಅಲ್ಲದೆ ಅವರ ಬಣ್ಣದ ಬದುಕಿನ ಹಿಂದಿನ ಕಥೆಗಳು ಹೊರಬರುತ್ತವೆ. ಇಂತಹ ಕಲಾವಿದರಲ್ಲಿ ಹಿರಿಯ ನಟ ಅಶೋಕ್ ಕೂಡ ಒಬ್ಬರು ಅವರ ಬಗೆಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಇಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ ಗುಬ್ಬಿವೀರಣ್ಣ

ಅಶೋಕ್… 1951 ಸೆಪ್ಟೆಂಬರ್ 12ರಂದು ಬೆಂಗಳೂರು ಆನೇಕಲ್ ನಿವಾಸಿ ಪೊಲೀಸ್ ಅಧಿಕಾರಿ ಲಕ್ಷ್ಮಿನರಸಿಂಹಯ್ಯ ಮತ್ತು ಪುಟ್ಟಮ್ಮನವರ ಮಗನಾಗಿ ಜನಿಸಿದರು. ಪದವೀಧರನಾದ ಕೂಡಲೇ ತನ್ನ ಬಹು ಕಾಲದ ಉತ್ಕಟೇಚ್ಛೆಯಂತೆ ಆದರೆ ಪೋಷಕರ ಇಚ್ಛೆಗೆ ವಿರುದ್ಧ ಹೇಳದೇ ಕೇಳದೇ ಬಣ್ಣಬಣ್ಣದ ತಾರೆಗಳಿರುವ ಮದ್ರಾಸಿನ ಫಿಲಂ ಇನ್ಸ್ಟಿಟ್ಯೂಟ್ ಸೇರಿದರು.

ಪರಿಶ್ರಮ ಅನುಕೂಲ ಅವಕಾಶ ಪ್ರತಿಭೆ ಎಲ್ಲವೂ ಕೂಡಿ ಬರಲಾಗಿ 1975ರಲ್ಲಿ ಬಿಡುಗಡೆಯಾದ “ಹೆಣ್ಣು ಸಂಸಾರದ ಕಣ್ಣು” ಕನ್ನಡ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆಗೈದ ಯುವಕ “ತಾಯಿಯ ಮಡಿಲಲ್ಲಿ” ಚಿತ್ರದ ಮೂಲಕ ಎಲ್ಲರ ಗಮನ ಸೆಳೆದರು. ಕಾಲಕ್ರಮೇಣ, ಚೆಲುವಿನ ಉದ್ದಮೂಗುಳ್ಳ ಸ್ಫುರದ್ರೂಪಿ ಆಗಿದ್ದುದರಿಂದ ಡಾ.ರಾಜ್ ರವರ ಮಗನೇ ಇರಬಹುದು ಎಂದು ಕೊಂಡಿದ್ದ ಚಲನಚಿತ್ರ ಪ್ರೇಕ್ಷಕರೂ ಇದ್ದರು.

ಇದನ್ನೂ ಓದಿ: ಡಾ.ಶಿವರಾಮಕಾರಂತರ ಸಿನಿಮಾ ಬದುಕು ಹೇಗಿತ್ತು? 

ಇದರ ಮುಂದುವರಿದ ಭಾಗದ  ಪರಿಣಾಮವೇ “ಕ್ರಾಂತಿಯೋಗಿ ಬಸವಣ್ಣ” ಚಿತ್ರದ ಹಗರಣ. ಖ್ಯಾತ “ಸುಧಾ” ವಾರಪತ್ರಿಕೆಯಲ್ಲಿ ಬರೆದಿದ್ದ ಗಂಗಾಧರ ಮೊದಲಿಯಾರ್ ಲೇಖನವು ಸಂಚಲನ ಸೃಷ್ಟಿಸಿತು. ಕಡೆಗೆ ಎಲ್ಲವೂ ಸುಖಾಂತ್ಯ ಕಂಡುದು ಮರೆಯಲಾರದ ಐತಿಹ್ಯ.

ಡಾ.ರಾಜ‌ಕುಮಾರ್‌ರವರೊಡನೆ ಗೋಕಾಕ್ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಕನ್ನಡ ಕುಲಕೋಟಿಯ ತನುಮನ ಗೆದ್ದರು. ಐದಾರು ಚಿತ್ರಗಳಲ್ಲಿ ರಾಜಣ್ಣನ ಮಗನ ಪಾತ್ರವನ್ನು ಒಪ್ಪವಾಗಿ ಅಭಿನಯಿಸಿದ್ದಕ್ಕಾಗಿ ಸ್ವಯಂ ಡಾ.ರಾಜ್ ಮುಕ್ತ ಕಂಠದಿಂದ ಪ್ರಶಂಸಿಸಿ ಪ್ರೋತ್ಸಾಹ ನೀಡಿದ್ದರು.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎಂ.ವಿ.ಸುಬ್ಬಯ್ಯನಾಯ್ಡು

ಇವರ ವರ್ಚಸ್ಸು ಹೋಲಿಕೆ ಎಷ್ಟಿತ್ತೆಂದರೆ ರಾಜ್ ಅಭಿಮಾನಿಗಳು ಸೇರಿದಂತೆ ಕೋಟ್ಯಂತರ ಚಲನಚಿತ್ರ ಪ್ರೇಕ್ಷಕರು ಸಹ ಅಣ್ಣಾವ್ರ ಮಗನ ಪಾತ್ರಕ್ಕೆ ಅಶೋಕ್ ಹೇಳಿಮಾಡಿಸಿದಂತೆ ಎಂದು ಹೊಗಳುತ್ತಿದ್ದರು. ಹೀಗೇ ನಟಸಾರ್ವಭೌಮನ ಮುಖಲಕ್ಷಣದ ಹೋಲಿಕೆಯೊಡನೆ ಸಲೀಸಾಗಿ ಸಾಗುತ್ತಿದ್ದ ಅದೃಷ್ಟವಂತ ಯುವನಟ ತನ್ನ ಅತಿಶೀಘ್ರ ಅಪರಿಮಿತ ಸ್ಫರ್ಧೆಯ ಓಟದಲ್ಲಿರುವಾಗಲೇ ಅನಿರೀಕ್ಷಿತವಾದ ಅಡೆತಡೆ ಕಂಡುಂಡರು.

ಡಾ.ರಾಜ್‌ಕುಮಾರ್ ನಟಿಸಿದ ಸಿನಿಮಾಗಳಲ್ಲಿ ಅವರ ಮಗನ ಪಾತ್ರಗಳಿಂದ ಕ್ಲಿಕ್ ಆದ ನಂತರ ಹೀರೋ, 2ನೇ ಹೀರೋ, ಹೀರೋನ ಅಣ್ತಮ್ಮ ಮುಂತಾದ ಹತ್ತು ಹಲವು ರೀತಿಯ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಯಶಸ್ವಿಯೂ ಆದರು. ಕಾಲಾಯತಸ್ಮೈ ನಮಃ ಎಂಬಂತೆ 2000ನೇ ಇಸವಿಯಿಂದ ಈ ತಹಕದ ವರೆಗೂ ಹೊಸದಾಗಿ ಎಂಟ್ರಿಕೊಟ್ಟ ಹೀರೋ, ಹೀರೋಯಿನ್ ಗಳಿಗೆ ತಂದೆಯಾಗಿ, ಮಾವನಾಗಿ ಕಡೆಗೆ ತಾತನಾಗಿಯೂ ಅನಿವಾರ್ಯ ಸಂದರ್ಭಗಳಲ್ಲಿ ನಟಿಸಿದ ಘನತೆವೆತ್ತ ಕಲಾವಿದ.

ಇದನ್ನೂ ಓದಿ: ನಟನೆಯಿಂದ ನಿಬ್ಬೆರಗಾಗಿಸಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ..

ಇತ್ತೀಚಿನ ವರ್ಷಗಳಲ್ಲಿ ತಾವೇ ಇಚ್ಚೆಪಟ್ಟು ಕೇವಲ ಪೋಷಕ ಪಾತ್ರದಲ್ಲಿ ನಟಿಸಲೊಪ್ಪಿ ಸೈಎನಿಸಿಕೊಂಡ ಗುಣವಂತ. ಪುಟ್ಟಣ್ಣಕಣಗಾಲ್ ಗರಡಿಯಲ್ಲಿ ಪಳಗಿ ಭೇಷ್ ಎನಿಸಿಕೊಂಡ ಕೆಲವೇ ನಟರ ಪಟ್ಟಿ ಸೇರಿದ ಪ್ರಮುಖರಲ್ಲಿ ಇವರೂ ಒಬ್ಬರು.

ರಂಗನಾಯಕಿ ಸಿನಿಮಾದಲ್ಲಿ ನಟಿ ಆರತಿ ಮತ್ತು ನಟ ರಾಮಕೃಷ್ಣ ಇವರಿಬ್ಬರ ವಯಸ್ಸಿನಷ್ಟೆ ಅಥವಾ ಹೆಚ್ಚುಕಮ್ಮಿ ಅವರಿಬ್ಬರ ಸಮವಯಸ್ಕರಾಗಿದ್ದ ಅಶೋಕ್ ಈ ಚಿತ್ರದಲ್ಲಿ ನಟ ರಾಮಕೃಷ್ಣನ ತಂದೆಯಾಗಿ, ಆರತಿಯವರ ಗಂಡನ ಪಾತ್ರದಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡರು.

ಇದನ್ನೂ ಓದಿ: ಸಕಲಕಲಾವಲ್ಲಭ ಅಚ್ಚಕನ್ನಡಿಗ ಹೊನ್ನಪ್ಪ ಭಾಗವತರ್
ನೂರಾರು ಚಿತ್ರದ ಹೀರೋ ಆಗಬೇಕಿದ್ದ ಇವರು ವಿಧಿವಿಲಾಸದಂತೆ ತಂದೆಯ ಮಾವನ ಅಣ್ಣತಮ್ಮನ ಪಾತ್ರಗಳಲ್ಲದೇ ರಾಜಕಾರಣಿ, ಪೊಲೀಸ್ ಅಧಿಕಾರಿ, ಜಡ್ಜ್, ವಿಲನ್ ಇತ್ಯಾದಿ ಯಾವುದೇ ಪಾತ್ರವನ್ನು ಸರಿಯಾಗಿ ನಿಭಾಯಿಸಿ ತಮಗಿದ್ದ ಇಮೇಜ್ ಅಥವಾ ಜನಪ್ರಿಯತೆಯನ್ನು ಕಾಪಾಡಿಕೊಂಡ ಓರ್ವ ಪ್ರಾಮಾಣಿಕ ನಟ. ಉದಾಹರಣೆ ನೀಡಬಹುದಾದ ನೂರಾರು ಉತ್ತಮ ಚಿತ್ರಗಳ ಪೈಕಿ ಸದಾ ನೆನಪಲ್ಲುಳಿವ ಕೆಲವಾರು ಪ್ರಬುದ್ಧ ಸಿನಿಮಾಗಳು ಇಲ್ಲಿವೆ.

ಬಯಲುದಾರಿ, ಭಾಗ್ಯವಂತರು, ಸನಾದಿ ಅಪ್ಪಣ್ಣ, ಸುಳಿ, ಮಲ್ಲಿಗೆ, ಸಾಂಗ್ಲಿಯಾನ, ಕುಂಕುಮ ರಕ್ಷೆ, ಮಧುರ ಸಂಗಮ, ವರದಕ್ಷಿಣೆ, ರಾಮಲಕ್ಷ್ಮಣ, ಗಣೇಶನ ಮಹಿಮೆ, ಬಂಗಾರದಮನೆ, ದೀಪ, ಚೆಲ್ಲಿದರಕ್ತ, ಪಾವನಗಂಗ, ಅವಳ ಅಂತರಂಗ, ಚಾಲೆಂಜ್, ತಾಯಿಯ ಹೊಣೆ, ಕಪ್ಪುಕೊಳ, ಕಣ್ಣುತೆರೆಸಿದ ಹೆಣ್ಣು, ಅರ್ಚನಾ, ಕದನ, ಜನುಮದ ಜೋಡಿ, ಪ್ರಜಾಶಕ್ತಿ, ದುರ್ಗಾಷ್ಟಮಿ, ಶಪಥ, ಶೃಂಗಾರರಾಜ, ತುಂಬಿದ ಮನೆ, ಮುತ್ತಿನಂಥ ಹೆಂಡ್ತಿ, ಜನನಿ, ಕೆಂಪೇಗೌಡ, ಗೋವ, ಗಜಕೇಸರಿ, ರಣವಿಕ್ರಮ, ಮಾಣಿಕ್ಯ, ಶಿವಲಿಂಗ, ಕುರುಕ್ಷೇತ್ರ, ಮುಕುಂದಮುರಾರಿ, ಮಿ.ಐರಾವತ, ರಾಬರ್ಟ್ ಮುಂತಾದವು ಚಿರಸ್ಮರಣೀಯ.

ಇದನ್ನೂ ಓದಿ: ಭಾರತದ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು ಬಿ.ಆರ್.ಪಂತುಲು..
ಇವತ್ತಿಗೂ ಚಿತ್ರೋದ್ಯಮದ ಒಳಗೆ ಮತ್ತು ಹೊರಗೆ ಎಲ್ಲರೊಡನೆ ಸ್ನೇಹ ವಿಶ್ವಾಸದಿಂದ ಕಲೆತು ಬೆರೆತು ಸಹಕರಿಸುವ ವಿಶಾಲ ಮನೋಭಾವದ ಒಳ್ಳೆಮನುಷ್ಯ. ಅನ್ಯರಂತೆ ಸಣ್ಣಪುಟ್ಟ ವಿಷಯಕ್ಕಾಗಿ ಕಿರಿಕ್ ಮಾಡಲೆಂದೇ ಇರುವಂಥವರಲ್ಲ. ಬದಲಿಗೆ ಯಾವುದೇ ಗುಂಪುಗಾರಿಕೆ ಅಥವ ರಾಜಕೀಯ ಮಾಡದೆ ಸೈಲೆಂಟಾಗಿರುವ ನಾನ್- ಕಾಂಟ್ರವರ್ಸಿಯಲ್ ಸ್ಕ್ಯಾಮ್‌ ಲೆಸ್ ಸೆಲೆಬ್ರಿಟಿ?! ಬೆಳ್ಳಿತೆರೆ ಮತ್ತು ಕಿರುತೆರೆ ಎರಡೂ ವಿಭಾಗಗಳಲ್ಲಿ ಅಚ್ಚುಕಟ್ಟಾಗಿ ಅಭಿನಯಿಸುತ್ತ ಬಂದಿರುವ ಸರಳ ಸಜ್ಜನಿಕೆಯ ಕಲಾಸೇವಕ.

ಘನತೆ ಸ್ವಾಭಿಮಾನ ಕಾಪಾಡಿಕೊಂಡು ಸುಖದುಃಖ ಕಷ್ಟನಷ್ಟ ಎಲ್ಲವನ್ನು ಸಮಚಿತ್ತ ಸ್ವಭಾವದಿಂದ ಎದುರಿಸುವ ಪ್ರೌಢನಟ. ತಮ್ಮ 50 ವರ್ಷದ ಚಂದನವನ ಚರಿತ್ರೆ ಜೀವನದಲ್ಲಿ 200ಕ್ಕು ಅಧಿಕ ಸಂಖ್ಯೆಯ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಹಲವಾರು ಪ್ರಶಸ್ತಿ ಬಹುಮಾನ ಸನ್ಮಾನ ಪಡೆದ ಶ್ರೇಷ್ಠ ಕಲಾವಿದ. ಪ್ರಸ್ತುತ ಬೆಂಗಳೂರಿನಲ್ಲಿ ತಮ್ಮ ಕುಟುಂಬದೊಡನೆ ಸುಖ ಸಂಸಾರ ನಡೆಸುತ್ತಿದ್ದಾರೆ.

admin
the authoradmin

Leave a Reply