LatestNews

ಕೊಡಗಿನಲ್ಲಿ ಅಬ್ಬರಿಸಿದ ಪುಷ್ಯ ಮಳೆಗೆ ಉಕ್ಕೇರಿದ ಕಾವೇರಿ… ಹಾರಂಗಿಯಿಂದ 20ಸಾವಿರ ಕ್ಯುಸೆಕ್ ನೀರು ನದಿಗೆ

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಆರಂಭವಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಉತ್ತಮ  ಮಳೆಯಾಗುತ್ತಿದ್ದು, ಕೃಷಿಕರಲ್ಲಿ ಹಾಗೂ ಕಾವೇರಿ ಕಣಿವೆಯ ಎಲ್ಲಾ ನಾಗರಿಕರಲ್ಲಿ ಸಂತಸ ತಂದಿದೆ. ಈ ಬಾರಿ ಎಲ್ -ನಿನೋ ಪರಿಣಾಮದಿಂದ ವಾಡಿಕೆಗಿಂದ ಕಡಿಮೆ ಮಳೆ ಆಗಲಿದೆ ಎಂದು ಹೇಳಲಾಗಿತ್ತು. ಅದರಂತೆ ಜೂನ್ ಮತ್ತು ಜುಲೈ ಮೂರನೇ ವಾರದವರೆಗೂ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. ಸದ್ಯ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಎಲ್ಲರಲ್ಲಿ ಆಶಾಭಾವನೆ ಮೂಡಿಸಿದೆ.

ಕಳೆದ 2019 ರಿಂದ 2026 ರವರೆಗೆ ತಿಂಗಳವಾರು ಸರಾಸರಿ ವಾಡಿಕೆ ಮಳೆ ಪ್ರಮಾಣವನ್ನು ಗಮನಿಸಿದಾಗ ಈ ಬಾರಿ ಕಡಿಮೆ ಮಳೆಯಾಗಿರುವುದು ಕಂಡು ಬರುತ್ತದೆ.  ಜನವರಿಯಿಂದ ಜುಲೈ ಅಂತ್ಯದವರೆಗೆ ತಿಂಗಳುವಾರು ವಾಡಿಕೆ ಮಳೆ ಪ್ರಮಾಣ ಗಮನಿಸಿದಾಗ ಜುಲೈ ತಿಂಗಳಲ್ಲಿ ವಾಡಿಕೆ ಮಳೆ 859 ಮಿ.ಮೀ.ಗಳಾಗಿದ್ದು, ಈ ಬಾರಿ ಜುಲೈ ತಿಂಗಳಲ್ಲಿ 599.4 ಮಿ.ಮೀ. ಮಳೆಯಾಗಿದೆ.

ಆದರೆ ಜೂನ್ ತಿಂಗಳಲ್ಲಿ ವಾಡಿಕೆ ಮಳೆ 534 ಮಿ.ಮೀ. ಆಗಿದ್ದು, 2026 ರ ಜೂನ್ ತಿಂಗಳಲ್ಲಿ 197.7 ಮಿ.ಮೀ ಮಾತ್ರ ಮಳೆಯಾಗಿದೆ. ಹಾಗೆಯೇ ಮೇ ತಿಂಗಳಲ್ಲಿ 139 ಮಿ.ಮೀ. ವಾಡಿಕೆ ಮಳೆಯಾಗಿದ್ದು, 76.4 ಮಿ.ಮೀ. ಮಾತ್ರ ಮಳೆಯಾಗಿದೆ. ಏಪ್ರಿಲ್ ತಿಂಗಳಲ್ಲಿ 84.4 ಮಿ.ಮೀ. ವಾಡಿಕೆ ಮಳೆಯಾಗಿದ್ದು, 20.6 ರಷ್ಟು ಮಾತ್ರ ಮಳೆಯಾಗಿದೆ. ಮಾರ್ಚ್ ತಿಂಗಳಲ್ಲಿ 21.5 ಮಿ.ಮೀ. ವಾಡಿಕೆ ಮಳೆಯಾಗಿದ್ದು, 21.4 ಮಿ.ಮೀನಷ್ಟು ಮಳೆಯಾಗಿದೆ. ಫೆಬ್ರವರಿ ಮತ್ತು ಜನವರಿ ತಿಂಗಳಲ್ಲಿ ಸಾಧಾರಣ ಮಳೆಯಾಗಿದೆ.

ಒಟ್ಟಾರೆ ಕಳೆದ 2018 ರಿಂದ 2025 ರವರೆಗೂ ಮಳೆಯ ಪ್ರಮಾಣವನ್ನು ಗಮನಿಸಿದಾಗ ಜುಲೈ ತಿಂಗಳಲ್ಲಿ ಸಾಮಾನ್ಯ ಮಳೆಯಾಗಿ, ಆಗಸ್ಟ್ ತಿಂಗಳಲ್ಲಿ ಹೆಚ್ಚಿನ ಮಳೆಯಾಗಿರುವುದು ತಿಳಿದುಬರುತ್ತದೆ. 2019 ರಲ್ಲಿ ಜೂನ್ ತಿಂಗಳಲ್ಲಿ 287.9 ಮಿ.ಮೀ., ಮಳೆಯಾಗಿತ್ತು, ಜುಲೈ ತಿಂಗಳಲ್ಲಿ 568.5 ಮಿ.ಮೀ. ಮಳೆಯಾಗಿದ್ದು, ಹಾಗೆಯೇ 2020 ರಲ್ಲಿ 412.2 ಮಿ.ಮೀ. ಮಳೆಯಾಗಿತ್ತು, ಜುಲೈ, ತಿಂಗಳಲ್ಲಿ 436.9 ಮಿ.ಮೀ. ಮಳೆಯಾಗಿತ್ತು.

ಹಾಗೆಯೇ 2021 ರಲ್ಲಿ ಜೂನ್ ತಿಂಗಳಲ್ಲಿ 421 ಮಿ.ಮೀ, ಜುಲೈ ತಿಂಗಳಲ್ಲಿ 675.1 ಮಿ.ಮೀ ಮಳೆಯಾಗಿತ್ತು. 2022 ರಲ್ಲಿ ಜೂನ್ ತಿಂಗಳಲ್ಲಿ 227 ಮಿ.ಮೀ. ಮಳೆಯಾಗಿತ್ತು, ಜುಲೈ ತಿಂಗಳಲ್ಲಿ 1147.3 ಮಿ.ಮೀ. ಮಳೆಯಾಗಿತ್ತು. 2023 ರಲ್ಲಿ ಜೂನ್ ತಿಂಗಳಲ್ಲಿ 102 ಮಿ.ಮೀ. ಮಳೆಯಾಗಿದ್ದು, ಜುಲೈ ತಿಂಗಳಲ್ಲಿ 822 ಮಿ.ಮೀ. ಮಳೆಯಾಗಿದೆ. 2024 ರ ಜೂನ್ ತಿಂಗಳಲ್ಲಿ 435 ಮಿ.ಮೀ. ಮಳೆಯಾಗಿದ್ದು, ಜುಲೈ ತಿಂಗಳಲ್ಲಿ 1284.2 ಮಿ.ಮೀ. ಮಳೆಯಾಗಿದೆ. 2025 ರ ಜೂನ್ ತಿಂಗಳಲ್ಲಿ 665.4 ಮಿ.ಮೀ. ಮಳೆಯಾಗಿದ್ದು, ಜುಲೈ ತಿಂಗಳಲ್ಲಿ 763 ಮಿ.ಮೀ. ಮಳೆಯಾಗಿತ್ತು. 2026 ರ ಜೂನ್ ತಿಂಗಳಲ್ಲಿ 197.7 ಮಿ.ಮೀ., ಜುಲೈ ತಿಂಗಳಲ್ಲಿ 599.4 ಮಿ.ಮೀ. ಮಳೆಯಾಗಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈಗ ಉತ್ತಮ ಮಳೆಯಾಗುತ್ತಿದ್ದು ಎಲ್ಲರಲ್ಲಿ ಸಂತಸ ತಂದಿದೆ.

2026 ರ ಕ್ಯಾಲೆಂಡರ್ ವರ್ಷದಲ್ಲಿ ಜನವರಿಯಿಂದ ಇಲ್ಲಿಯ ವರೆಗೆ ದಿನದ 24 ಗಂಟೆ ಅವಧಿಯಲ್ಲಿ 50 ಮಿ.ಮೀ.ಗಿಂತ  ಹೆಚ್ಚು ಮಳೆ ಆಗಿರುವುದು ಜುಲೈ, 31 ರಂದು ದಾಖಲಾಗಿದೆ. ಜಿಲ್ಲೆಯ ಭಾಗಮಂಡಲ, ಶಾಂತಳ್ಳಿ, ಸೋಮವಾರಪೇಟೆ, ಸಂಪಾಜೆ, ಮಡಿಕೇರಿ, ಶ್ರೀಮಂಗಲ, ನಾಪೋಕ್ಲು, ಸುಂಟಿಕೊಪ್ಪ, ಕೊಡ್ಲಿಪೇಟೆ, ವಿರಾಜಪೇಟೆ, ಅಮ್ಮತ್ತಿ, ಮತ್ತಿತರ ಕಡೆಗಳಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಹೆಚ್ಚಿನ ಮಳೆಯಾಗಿರುವುದು ಕಂಡು ಬಂದಿದೆ.

ಕೃಷಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಭತ್ತ ನಾಟಿ ಮಾಡುವ ಗುರಿ ಹೊಂದಲಾಗಿದ್ದು, ಇದುವರೆಗೆ 400 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಕಾರ್ಯ ಆಗಿದ್ದು, ಆಗಸ್ಟ್ ಅಂತ್ಯದವರೆಗೂ ಭತ್ತ ನಾಟಿ ಕಾರ್ಯ ನಡೆಯಲಿದೆ. ಹಾಗೆಯೇ ಮುಸುಕಿನ ಜೋಳ ಭಿತ್ತನೆ ಕಾರ್ಯವು 1500 ಹೆಕ್ಟೇರ್ ಪ್ರದೇಶದಲ್ಲಿ ಭಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಚಂದ್ರಶೇಖರ್ ಅವರು ಮಾಹಿತಿ ನೀಡಿದ್ದಾರೆ.

ಹಾರಂಗಿ ಜಲಾಶಯದಿಂದ 20 ಸಾವಿರ ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಬಿಡುಗಡೆ…

ಕುಶಾಲನಗರ : ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಹಾರಂಗಿ ಜಲಾಶಯಕ್ಕೆ ಒಳಹರಿವಿನಲ್ಲಿ ಗಣನೀಯ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಶನಿವಾರ‌ 20 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡುಗಡೆ ಮಾಡಲಾಯಿತು.

ಜಲಾಶಯಕ್ಕೆ 16000 ಸಾವಿರ ಕ್ಯೂಸೆಕ್ಸ್ ನೀರು ಒಳಹರಿವು ಇದ್ದು,ನದಿಗೆ 19700 ಸಾವಿರ ಕ್ಯೂಸೆಕ್ಸ್ ಹರಿಸಲಾಗುತ್ತಿದೆ.ಕಳೆದ ಮೂರು ದಿನಗಳಿಂದ ಮಳೆ ಧಾರಕಾರವಾಗಿ ಸುರಿಯುತ್ತಿದ್ದು, ನದಿತೊರೆ ತೋಡುಗಳು ಉಕ್ಕಿ ಹರಿಯುತ್ತಿವೆ. ನಾಡಿನ ಜೀವ ನದಿ ಕಾವೇರಿ ಹಾರಂಗಿ ನದಿಗಳಲ್ಲೂ ಕೂಡ ನೀರಿ ಪ್ರಮಾಣ ಏರಿಕೆ ಕಂಡು ಬಂದಿದೆ.

ಕಣಿವೆ ರಾಮಲಿಂಗೇಶ್ವರ ದೇವಾಲಯ ಬಳಿ ಹಾರಂಗಿ ಹಾಗೂ ಕಾವೇರಿ ನದಿಗಳು ಮೈದುಂಬಿ ಹರಿಯುತ್ತಿದ್ದು, ನದಿಯ ನೀರಿನ ಮಟ್ಟದಲ್ಲಿ  ಏರಿಕೆ ಕಂಡುಬಂದಿದೆ.

ಕಾವೇರಿ ನದಿಯಲ್ಲಿ ನೀರಿನ ಮಟ್ಟದಲ್ಲಿ  ಏರಿಕೆ ಕಂಡು ಬರುತ್ತಿದ್ದು,ನದಿ ಪಾತ್ರದ ಜನತೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಮೀನುಗಾರರು ಎಚ್ಚರಿಕೆಯಿಂದ ಇರುವಂತೆ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಮಹೇಶ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಚಿಕ್ಲಿಹೊಳೆ ಭರ್ತಿ : ನಂಜರಾಯಪಟ್ಟಣ ಪಂಚಾಯತಿ ವ್ಯಾಪ್ತಿಯ ರಂಗಸಮುದ್ರ ಬಳಿ ಇರುವ ಚಿಕ್ಲಿಹೊಳೆ ಜಲಾಶಯ ಶನಿವಾರ ಭರ್ತಿಯಾಗಿದ್ದು, ತಡೆಗೋಡೆ ಮೇಲಿಂದ ಅರ್ಧಚಂದ್ರಾಕೃತಿಯಲ್ಲಿ ಧುಮ್ಮಿಕ್ಕುತ್ತಿದೆ.

ಚಿಕ್ಲಿಹೊಳೆ ಜಲಾಶಯ ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಹಿನ್ನೆಲೆಯಲ್ಲಿ  ಮಳೆಗೆ ಮೈದುಂಬಿ ನಿಂತಿದೆ. ಅಣೆಕಟ್ಟೆ ತುಂಬಿರುವುದರಿಂದ ಹೆಚ್ಚುವರಿ ನೀರು ಜಲಾಶಯದ ಅರ್ಧ ಚಂದ್ರಾಕೃತಿಯ ತಡೆಗೋಡೆಯ ಮೇಲಿಂದ ಹಾಲು ನೊರೆಯಂತೆ ಹರಿಯುತ್ತಿದೆ.

 

admin
the authoradmin

Leave a Reply