ಇದನ್ನೂ ಓದಿ….“ನೆಲಜಿಯ ಕಣ್ಣೀರು ಕರೆದಾಗ… ಕೊಡಗು ಎಚ್ಚೆತ್ತುಕೊಳ್ಳುವ ಸಮಯ” ಏನಿದು ಸ್ಟೋರಿ..?
ಇತ್ತೀಚೆಗೆ ಅದ್ಯಾಕೋ ಗೊತ್ತಿಲ್ಲ ಕೊಡಗಿನ ಮಳೆಗಾಲ ಒಂಥರಾ ವಿಚಿತ್ರ ಎನಿಸುತ್ತಿದೆ.. ಸಮಯವಲ್ಲದ ಸಮಯದಲ್ಲಿ ಮಳೆಯೇನೋ ಸುರಿಯುತ್ತಿದೆ.. ಆದರೆ ಮಳೆಗಾಲ ಹೊತ್ತು ತರುತ್ತಿದ್ದ ಅವತ್ತಿನ ಆ ಸುಂದರ ದೃಶ್ಯಗಳಿಗೆ ಪೊರೆ ಬಂದಿದೆ. ಬದಲಾದ ಕಾಲಘಟ್ಟದಲ್ಲಿ ಮೊದಲಿನಂತೆಯೇ ಇರಬೇಕೆಂದು ಬಯಸುವುದು ದಡ್ಡತನವಾಗ ಬಹುದು.. ಆದರೆ ನಮ್ಮ ಬದುಕಿನಲ್ಲಿ ಕಳೆದು ಹೋದ ಮಳೆಗಾಲಗಳನ್ನು ನೆನಪಿಸಿಕೊಂಡಾಗಲೆಲ್ಲ ಮೈಮನ ಪುಳಕಗೊಳ್ಳುತ್ತವೆ.. ಅಷ್ಟೇ ಅಲ್ಲದೆ ಮಳೆಗಾಲದ ಸುತ್ತಲೂ ಹರಡಿಕೊಳ್ಳುತ್ತಿದ್ದ ಸುಂದರ ದೃಶ್ಯಗಳು ಒಂದರ ಮೇಲೊಂದರಂತೆ ಕಣ್ಮುಂದೆ ಹಾದು ಹೋದಂತೆ ಭಾಸವಾಗುತ್ತವೆ…

ಮೂರ್ನಾಲ್ಕು ದಶಕಗಳ ಹಿಂದೆ ಹುಟ್ಟಿದವರಿಗೆ ಕೊಡಗಿನ ಮಳೆಗಾಲದ ವೈಭವ ನೆನಪಿರುತ್ತದೆ… ಮಳೆಗೆ ತೋಯ್ದುಕೊಂಡೇ ಶಾಲೆ ಕಡೆಗೆ ನಡೆಯುತ್ತಿದ್ದ, ಜೋರು ಮಳೆಯ ನೆಪವೊಡ್ಡಿ ಶಾಲೆಗೆ ಚಕ್ಕರ್ ಹಾಕುತ್ತಿದ್ದ ದಿನಗಳು, ಗದ್ದೆಯಲ್ಲಿ ಆಟ, ರಜಾ ದಿನಗಳಲ್ಲಿ ಅಣಬೆ ಹುಡುಕಾಟ, ಕಣಿಲೆ ಬೇಟೆ, ಕಾಡುಹಣ್ಣುಗಳನ್ನು ಕಿತ್ತು ತಿನ್ನುತ್ತಿದ್ದ ಮಜಾ ಎಲ್ಲವೂ ಮರೆತು ಹೋಗಲು ಸಾಧ್ಯವೇ ಇಲ್ಲ… ಅವುಗಳೆಲ್ಲವೂ ನಮ್ಮ ಬದುಕಿನ ಮರೆಯಲಾರದ ಘಟನೆಗಳು ಅಷ್ಟೇ ಅಲ್ಲ ನಮ್ಮೊಂದಿಗೆ ಜೀವಿಸಿ ನಮ್ಮೊಂದಿಗೆ ಮರೆಯಾಗುವ ನೆನಪುಗಳು..

ಅದು ಅರಣ್ಯದಿಂದ ಸಂಪದ್ಭರಿತವಾಗಿದ್ದ ಕಾಲ… ವಿರಳ ಮನೆಗಳಿಂದ ಕೂಡಿದ ಗ್ರಾಮಗಳು, ವಾಣಿಜ್ಯ ಬೆಳೆಗಳ ಭರಾಟೆಯಿಲ್ಲದ ಕಾರಣಗಳಿಂದ ಏಲಕ್ಕಿ ತೋಟಗಳ ನಡುವೆ ಕಾಡುಗಳು ಹೇರಳವಾಗಿದ್ದವು. ಈ ಕಾಡುಗಳಿಂದ ಕೃಷಿಗೆ ಬೇಕಾದ ಮರಮುಟ್ಟುಗಳು, ಸೊಪ್ಪು, ಕಾಡುಮಣ್ಣು ಹೀಗೆ ಎಲ್ಲವನ್ನು ರೈತರು ಬಳಸಿಕೊಳ್ಳುತ್ತಿದ್ದರು. ಭತ್ತದ ಕೃಷಿಯೇ ಪ್ರಧಾನವಾಗಿದ್ದರಿಂದ ದನಗಳನ್ನು ಮೇಯಿಸಲು ಕಾಡುಗಳ ಅಗತ್ಯತೆ ಹೆಚ್ಚಾಗಿಯೇ ಇತ್ತು.

ತಂಪಾದ ಪ್ರದೇಶಗಳಲ್ಲಿ ಏಲಕ್ಕಿ ತೋಟಗಳನ್ನು ಕೆಲವರು ನಿರ್ಮಾಣ ಮಾಡಿದ್ದರು. ಉಳಿದಂತೆ ಈಗಿನಂತೆ ಕಾಫಿ ತೋಟಗಳು ನಿರ್ಮಾಣವಾಗಿರಲಿಲ್ಲ. ಜತೆಗೆ ಅವತ್ತು ಕಾಫಿಯನ್ನು ಬೆಳೆಯುವುದು ಇವತ್ತಿನಷ್ಟು ಸುಲಭವಾಗಿರಲಿಲ್ಲ. ಕಾಫಿ ಮಂಡಳಿಯ ಹಿಡಿತದಲ್ಲಿದ್ದುದರಿಂದ ಕಾಫಿ ಬೆಳೆಯಲು ಮಾರಾಟ ಮಾಡಲು ಪರವಾನಗಿಯ ಅಗತ್ಯತೆಯಿತ್ತು. ಹೀಗಾಗಿ ಅನುಕೂಲವಿದ್ದವರು ಏಲಕ್ಕಿಯನ್ನು ಬೆಳೆದರೆ ಉಳಿದಂತೆ ತಮ್ಮ ಜಾಗವನ್ನು ಖಾಲಿ ಬಿಟ್ಟಿದ್ದರು. ಅಲ್ಲಿ ದನಗಳು ಮೇಯುತ್ತಿದ್ದವು.

ಹೆಚ್ಚಿನವರು ಭತ್ತ ಬೆಳೆಯುತ್ತಿದ್ದರು. ಪ್ರತಿವರ್ಷವೂ ಮಳೆ ಉತ್ತಮವಾಗಿ ಆಗುತ್ತಿತ್ತು. ಮಳೆಯ ನೀರನ್ನು ನಂಬಿ ಭತ್ತ ಬೆಳೆಯುತ್ತಿದ್ದ ರೈತರು ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ತಿಂಗಳಲ್ಲಿ ಭತ್ತದ ಕೃಷಿ ಚಟುವಟಿಕೆಗಳನ್ನು ಆರಂಭಿಸಿ ಬಿಡುತ್ತಿದ್ದರು. ಅವತ್ತಿನ ದಿನಗಳಲ್ಲಿ ಪೇಟೆಗೆ ಹೋಗುವವರ ಸಂಖ್ಯೆ ಕಡಿಮೆಯಿತ್ತು. ಕೆಲವರು ವಾರಕ್ಕೋ ತಿಂಗಳಿಗೋ ಒಮ್ಮೆ ಹೋಗಿ ಅಗತ್ಯವಿರುವ ಪದಾರ್ಥಗಳನ್ನು ತಂದು ಶೇಖರಿಸಿಟ್ಟುಕೊಳ್ಳುತ್ತಿದ್ದರು.

ಪಟ್ಟಣದ ಗಂಧ ಗಾಳಿಯಿಲ್ಲದೆ ಬೆಳೆಯುತ್ತಿದ್ದ ಮಕ್ಕಳಿಗೆ ಮೂರು ಹೊತ್ತಿನ ಊಟದ ಹೊರತಾಗಿ ಇವತ್ತಿನಂತೆ ಕುರುಕ್ ತಿಂಡಿಗಳು ಸಿಗುತ್ತಿರಲಿಲ್ಲ. ಹೀಗಾಗಿ ಮನೆಯ ಸುತ್ತಮುತ್ತ ಸಿಗುವ ಹಲಸಿಕಾಯಿ, ಸೀಬೆಕಾಯಿ, ಪಪ್ಪಾಯಿ, ಗೆಣಸು ಸೇರಿದಂತೆ ಕಾಡುಹಣ್ಣುಗಳನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ.

ಪ್ರತಿಯೊಬ್ಬರೂ ಮಳೆಗಾಲದ ಭೀಕರತೆ ಅರಿವಿದ್ದ ಕಾರಣದಿಂದಾಗಿ ಬೇಸಿಗೆಯಲ್ಲಿಯೇ ಮಳೆಗಾಲಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಮೂರರಿಂದ ನಾಲ್ಕು ತಿಂಗಳಿಗಾಗುವಷ್ಟು ಸೌದೆ, ಛತ್ರಿ, ಸ್ಟೆಟರ್, ಮಳೆಕೋಟು, ಗಂಬೂಟು, ಮಳೆಯಿಂದ ರಕ್ಷಿಸಲು ವಾಟೆ ಯಿಂದ ತಯಾರಿಸಿದ ಗೊರ್ಗ(ಕೊರಂಬು), ಬಿಡುವಿನ ವೇಳೆಯಲ್ಲಿ ಹುರಿದು ತಿನ್ನಲು ಹಲಸಿನ ಬೀಜ, ಗೆಣಸು, ಸೌತೆಕಾಯಿ, ಕಾಳುಕಡ್ಡಿ ಹೀಗೆ, ಅಕ್ಕಿ ಹೀಗೆ ಎಲ್ಲವನ್ನು ಸಿದ್ಧ ಮಾಡಿಕೊಳ್ಳುತ್ತಿದ್ದರು.

ಮಳೆಗಾಲದಲ್ಲಿ ಹೊರಗೆ ಹೋಗಿ ಪೇಟೆಯಿಂದ ತರಕಾರಿ ತರುವ ಮಾತೇ ಇರುತ್ತಿರಲಿಲ್ಲ. ತಮ್ಮ ಸುತ್ತ ಮುತ್ತ ಸಿಗುವ ಸೊಪ್ಪು ಗೆಡ್ಡೆಗಳನ್ನು ಬಳಸಿಕೊಂಡು, ಪಲ್ಯ, ಸಾರು ಮಾಡುತ್ತಿದ್ದರು. ಬಿದಿರುಗಳು ಹೇರಳವಾಗಿದ್ದರಿಂದ ಅವುಗಳ ಮೊಳಕೆ(ಕಣಿಲೆ) ಬಳಕೆ ಮಾಡಿಕೊಳ್ಳುತ್ತಿದ್ದರು. ಇಷ್ಟೇ ಅಲ್ಲದೆ ಬೇಸಿಗೆಯಲ್ಲಿ ಸಿಗುವ ಕಾಡು ಮಾವಿನ ಹಣ್ಣನ್ನು ಉಪ್ಪಿನೊಳಗೆ ಹಾಕಿಟ್ಟು ಅದನ್ನು ಅಡುಗೆಗೆ ಬಳಸುತ್ತಿದ್ದರು.

ಬೇಸಿಗೆಯಲ್ಲಿ ತರಕಾರಿ ತೋಟ ಮಾಡಿ ಅಲ್ಲಿ ಸೌತೆಕಾಯಿ, ಕಾಳುಗಳನ್ನು ಬೆಳೆದು ಮಳೆಗಾಲಕ್ಕೆ ಶೇಖರಿಸಿಟ್ಟುಕೊಳ್ಳುತ್ತಿದ್ದರು. ಬೆಳಗ್ಗೆ ಎದ್ದು ಮಕ್ಕಳು ತೋಟ, ಗದ್ದೆಯಲ್ಲಿ ಅಡ್ಡಾಡಿ ಅಣಬೆಗಳನ್ನು ಹುಡುಕಿ ತರುತ್ತಿದ್ದರು. ಇದರಾಚೆಗೆ ಹೊಳೆ, ತೋಡಿಗಳಲ್ಲಿ ಮೀನು, ಏಡಿಗಳನ್ನು ಹಿಡಿದು ತರುತ್ತಿದ್ದರು.

ಪೇಟೆಯಿಂದ ಹಣ್ಣುಗಳನ್ನು ತರುವುದು ಅಪರೂಪವಾಗಿತ್ತು. ಮಕ್ಕಳು ಮನೆಯ ಬಳಿಯಲ್ಲಿದ್ದ ಸೀಬೆ ಕಾಯಿ, ಕಿತ್ತಳೆ, ಹಲಸಿನ ಮರಗಳಿಗೆ ಲಗ್ಗೆಯಿಡುತ್ತಿದ್ದರು. ಇನ್ನು ಕಾಡುಗಳಲ್ಲಿ ಹೇರಳವಾಗಿ ಕಾಡು ಹಣ್ಣುಗಳು ಸಿಗುತ್ತಿದ್ದವು. ಈ ಹಣ್ಣುಗಳು ರುಚಿ, ಗಾತ್ರ ಎಲ್ಲದರಲ್ಲಿಯೂ ಒಂದಕ್ಕಿಂತ ಒಂದು ಭಿನ್ನವಾಗಿರುತ್ತಿದ್ದವು. ಕೆಲವು ಹಣ್ಣುಗಳು ಬಳ್ಳಿಗಳಲ್ಲಿ, ಮತ್ತೆ ಕೆಲವು ಮರದಲ್ಲಿ ಬಿಡುತ್ತಿದ್ದವು. ಇವುಗಳನ್ನು ಕಿತ್ತು ತಿನ್ನುವುದೇ ಸಂಭ್ರಮ. ಅವತ್ತಿನ ಕಾಲದಲ್ಲಿ ಕರ್ಮಂಜಿ, ಮಡಿಕೆಹಣ್ಣು, ಮಜ್ಜಿಗೆಹಣ್ಣು, ಕಕ್ಕಡೆ, ಮುಕ್ಕುಳಿಚಾರ್, ಸರಳಿಹಣ್ಣು, ಹೀಗೆ ಕಾಡುಗಳಲ್ಲಿ ಹತ್ತಾರು ಹಣ್ಣುಗಳು ಸಿಗುತ್ತಿದ್ದವು. ಅವುಗಳನ್ನೆಲ್ಲ ಕಿತ್ತು ತಿಂದು ಸಂಭ್ರಮಿಸುತ್ತಿದ್ದರು.

ಬಹಳಷ್ಟು ಗ್ರಾಮಗಳ ಮನೆಗಳಲ್ಲಿ ವಿದ್ಯುತ್ ವ್ಯವಸ್ಥೆಯೇ ಇರುತ್ತಿರಲಿಲ್ಲ. ಈ ಸಮಯದಲ್ಲಿ ಸೀಮೆಣ್ಣೆಯ ಬುಡ್ಡಿ ದೀಪಗಳನ್ನು ಬಳಸಲಾಗುತ್ತಿತ್ತು. ಗದ್ದೆ ತೋಟದಲ್ಲಿ ಕೆಲಸ ಮಾಡಿ ಬಂದವರು, ಕೆಲಸದ ನಿಮಿತ್ತ ಹೊರಗೆ ಹೋದವರು ಮನೆ ತಲುಪುವ ವೇಳೆಗೆ ಮಳೆಗೆ ತೊಯ್ದು ಹೋಗುತ್ತಿದ್ದರು. ಆ ನಂತರ ಮನೆಯಲ್ಲಿ ರಾತ್ರಿ ಬಿಸಿನೀರು ಸ್ನಾನ ಮಾಡಿದರೆ ಮೈಮನ ಆಹ್ಲಾದಕರವಾಗುತ್ತಿತ್ತು. ಅಡುಗೆ ಮನೆಯಲ್ಲಿ ಸೌದೆ ಒಲೆ ಉರಿಯುತ್ತಿದ್ದರೆ ಅದರ ಮುಂದೆ ಕುಳಿತು ಚಳಿ ಕಾಯಿಸುತ್ತಾ ಹರಟೆ ಹೊಡೆಯುತ್ತಾ ಊಟ ಮಾಡುವುದು ನೆಮ್ಮದಿ ಕೊಡುತ್ತಿತ್ತು.

ಮಳೆಗಾಲದ ಆ ದಿನಗಳನ್ನು ಅನುಭವಿಸಿದವರಿಗೆ ಅದನ್ನು ನೆನಪಿಸಿಕೊಂಡಾಗಲೆಲ್ಲ ಮೈಜುಮ್ಮೆನ್ನುತ್ತದೆ. ಅಷ್ಟೇ ಅಲ್ಲ ಆ ದಿನಗಳತ್ತ ಕರೆದೊಯ್ಯುತ್ತದೆ. ಬಹುಶಃ ಇದು ಬರೀ ಕೊಡಗು ಮಾತ್ರವಲ್ಲ. ಮಲೆನಾಡಿನ ಬಹುತೇಕರಿಗೆ ಈ ಅನುಭವ ಆಗಿರುತ್ತದೆ. ಆದರೆ ಒಂದೆರಡು ಮೂರು ದಶಕಗಳಲ್ಲಿ ಎಷ್ಟೊಂದು ಬದಲಾಗಿ ಹೋಗಿದೆ. ವಾಣಿಜ್ಯ ಬೆಳೆಗಳು ದಾಂಗುಡಿ ಇಟ್ಟ ಮೇಲೆ ಕಾಡುಗಳೆಲ್ಲವೂ ತೋಟಗಳಾಗಿವೆ. ಭತ್ತದ ಗದ್ದೆಯೂ ಮಾಯವಾಗುತ್ತಿವೆ. ಎಲ್ಲೆಂದರಲ್ಲಿ ಕಟ್ಟಡಗಳು ನಿರ್ಮಾಣವಾಗಿವೆ. ಅಭಿವೃದ್ಧಿಯ ವೇಗದಲ್ಲಿ ಅವತ್ತಿನ ಆ ಕ್ಷಣಗಳು ಮರೆತು ಹೋಗುತ್ತಿವೆ.

ಇವತ್ತಿಗೆ ಹೋಲಿಸಿದರೆ ಅವತ್ತಿನ ದಿನಗಳು ಅಭಿವೃದ್ಧಿಯೇ ಇಲ್ಲದ ಕಷ್ಟದ ದಿನಗಳಾಗಿದ್ದವು. ಆದರೆ ಅದು ಕಷ್ಟ ಅಂಥ ಅನಿಸುತ್ತಿರಲಿಲ್ಲ. ವಿದ್ಯುತ್ ಇಲ್ಲದೆ. ರಸ್ತೆ, ವಾಹನ, ದೂರವಾಣಿ ಸೇರಿದಂತೆ ಯಾವ ಆಧುನಿಕ ಸೌಲಭ್ಯವೂ ಇಲ್ಲದೆ ಬದುಕುವ ಕಾಲ ಅದಾಗಿತ್ತು. ಆದರೂ ಇವತ್ತು ಆ ದಿನಗಳನ್ನು ನೆನಪಿಸುವ ಬಹುತೇಕ ಮಂದಿ ಆ ದಿನವೇ ಚೆನ್ನಾಗಿತ್ತು ಎನ್ನುತ್ತಾರೆ. ಅದು ಏನೇ ಇರಲಿ ಅವತ್ತಿನ ಮತ್ತು ಇವತ್ತಿನ ಎರಡು ಕಾಲಘಟ್ಟವನ್ನು ನಾವು ನೋಡಿದ್ದೇವೆ, ಅನುಭವಿಸಿದ್ದೇವೆ ಅದೇ ಖುಷಿಯ ವಿಚಾರ…. ಏನಂತೀರಾ?
B M Lavakumar
ಕೊಡಗಿನಲ್ಲಿ ಮಳೆಗಾಲ ಆರಂಭವಾಯಿತೆಂದರೆ ಗುಡ್ಡಕುಸಿತದ ಭಯ… ಗುಡ್ಡದಭೂತ ಕಾಡಲು ಕಾರಣವೇನು ಗೊತ್ತಾ?








