ಕಾಳಿಹುಂಡಿ ಶಿವಕುಮಾರ್ ರವರ ಪುಸ್ತಕಗಳ ಉದ್ಘಾಟನಾ ಕಾರ್ಯಕ್ರಮ… ಇದು ಪುಸ್ತಕಗಳ ಲೋಕ!
ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಅನುಷ್ಠಾನ

ಮೈಸೂರು: ಮೈಸೂರಿನ ಲೇಖಕ, ವಿಮರ್ಶಕ ಕಾಳಿಹುಂಡಿ ಶಿವಕುಮಾರ್ ರವರು ಸಂಗ್ರಹಿಸಿರುವ ಸಾವಿರಾರು ಪುಸ್ತಕಗಳನ್ನು ಮೈಸೂರಿನ ಗೋವಿಂದರಾವ್ ಮೆಮೋರಿಯಲ್ ಪಿಯು ಕಾಲೇಜಿನ ಮೊದಲ ಮಹಡಿಯಲ್ಲಿ ಡಲು ಅವಕಾಶ ಕಲ್ಪಿಸಿದ್ದು, ಈ ಸಂಬಂಧ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆಗೊಂಡಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಜಿಲ್ಲಾ ಜಾಗೃತಿ ಸಮಿತಿ ವತಿಯಿಂದ “ಮನೆಗೊಂದು ಗ್ರಂಥಾಲಯ”- ಈ ಮಾಲಿಕೆಯ ಅನುಷ್ಠಾನ ಸಮಾರಂಭ ಭಾನುವಾರ ಕಾಲೇಜಿನಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ, ಕನ್ನಡಪ್ರಭ ದಿನಪತ್ರಿಕೆಯ ಮೈಸೂರಿನ ಕಾರ್ಯನಿರ್ವಾಹಕ ಸಂಪಾದಕರಾದ ಅಂಶಿ ಪ್ರಸನ್ನ ಕುಮಾರ್ ರವರು ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಾಳಿಹುಂಡಿ ಶಿವಕುಮಾರ್ ಸರ್ಕಾರಿ ನೌಕರರು. ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಲೆಕ್ಕ ಪರಿಶೋಧನಾಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ತಮ್ಮ ವೃತ್ತಿಯ ಜೊತೆಜೊತೆಗೆ ಬಿಡುವಿನ ವೇಳೆಯನ್ನು ಸದುಪಯೋಗಪಡಿಸಿಕೊಂಡು ಸದಭಿರುಚಿಯ ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದಾರೆ.
“ಪೇಪರ್ ಬ್ಯಾಂಕ್ ಶಿವಕುಮಾರ್” ಎಂದು ರಾಜ್ಯದಲ್ಲೇ ಹೆಸರು ಪಡೆದಿದ್ದು ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಇವರು ಪತ್ರಿಕೆ ಮತ್ತು ಪುಸ್ತಕಗಳನ್ನ ಕೊಂಡುಕೊಳ್ಳುವುದರ ಮೂಲಕ ಕನ್ನಡ ಪರಿಚಾರಕರಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ.

ಚಿಕ್ಕಂದಿನಲ್ಲಿಯೇ ತಮ್ಮ ಹವ್ಯಾಸವನ್ನ ಮೈಗೂಡಿಸಿಕೊಂಡಿದ್ದು, ಇವರು ಇತರರಿಗೆ ಮಾದರಿಯಾಗಿದ್ದಾರೆ. ಚಿಕ್ಕದಾಗಿ ಪ್ರಾರಂಭಿಸಿದ ಇವರ ಸಂಗ್ರಹ ಇವತ್ತು ಬೃಹತ್ ಮಟ್ಟದಲ್ಲಿ ಇದ್ದು, ಇವರ ಬಳಿ ಸಾವಿರಾರು ಪತ್ರಿಕೆಗಳು, ಪುಸ್ತಕಗಳು, ವಿಶೇಷ ಸಂಚಿಕೆಗಳು, ಅಪರೂಪದ ಮಾಹಿತಿಗಳು ಇವೆ. ಅವುಗಳನ್ನ ಹಲವು ಕಡೆ ಪ್ರದರ್ಶನ ಮಾಡಿ ಮತ್ತಷ್ಟು ಜನರಿಗೆ ತಮ್ಮ ಪುಸ್ತಕ, ಪತ್ರಿಕೆ ಪ್ರೀತಿಯನ್ನ ಜೊತೆಗೆ ಕಾಳಜಿಯನ್ನ ಹೊಂದಿದ್ದು ಮನೆ-ಮನಗಳಿಗೆ ತಲುಪಿಸುತ್ತಿದ್ದಾರೆ ಎಂದು ಪ್ರಶಂಶಿಸಿದರು. ಈ ಕಾಲೇಜಿನ ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಜಾಗೃತಿ ಸಮಿತಿಯ ಸದಸ್ಯರಾದ ಹಾಗೂ ಶಿಕ್ಷ ಪಿಯು ಕಾಲೇಜಿನ ಪ್ರಾಂಶುಪಾಲರಾದ ದೇವರಾಜ್ ಪಿ ಚಿಕ್ಕಹಳ್ಳಿ (ದೇಚಿ) ತಮ್ಮ ಆಶಯ ಭಾಷಣದಲ್ಲಿ ರಾಜ್ಯ ವ್ಯಾಪಿ ನಡೆಯುತ್ತಿರುವ “ಮನೆಗೊಂದು ಗ್ರಂಥಾಲಯ” ಈ ಯೋಜನೆಯಿಂದ ಪುಸ್ತಕ ಪ್ರೀತಿ ಅಗಾಧವಾಗಿ ಬೆಳೆಯುತ್ತಿದ್ದು, ಮೂಲೆ ಸೇರಿರುವ ಪುಸ್ತಕಗಳು ಕಾಪಾಟಿನಲ್ಲಿ ಸ್ಥಾನ ಪಡೆದುಕೊಳ್ಳುತ್ತಿವೆ. ಜೊತೆಗೆ ಪ್ರದರ್ಶನ ಗೊಳ್ಳುತ್ತಿವೆ.

ಇದು ಒಂದು ಮನೆಯಿಂದ ಮತ್ತೊಂದು ಮನೆಗೆ ತೀರ ಭಿನ್ನವಾಗಿದ್ದು, ತಮ್ಮದೇ ಆದ ಶೈಲಿಯಲ್ಲಿ ಅಭಿರುಚಿಗೆ ತಕ್ಕಂತೆ ಪುಸ್ತಕಗಳ ಜೋಡಣೆ, ಪ್ರದರ್ಶನ ಮಾಡುವುದರ ಮೂಲಕ ಮತ್ತಷ್ಟು ಜನರಿಗೆ ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಮಾದರಿಯಾಗುತ್ತಿದ್ದಾರೆ. ಎಂದು ತಮ್ಮ ಆಶಯ ಭಾಷಣದಲ್ಲಿ ತಿಳಿಸಿದರು. ಜೊತೆಗೆ ಪುಸ್ತಕ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಪ್ರಮುಖರ ಉದಾಹರಣೆಗಳ ಮೂಲಕ ಸ್ವಾರಸ್ಯಕರ ಘಟನೆಗಳನ್ನ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರ ಜಿಲ್ಲಾ ಜಾಗೃತಿ ಸಮಿತಿಯ ಸಂಚಾಲಕರಾದ ಎಂ ಚಂದ್ರಶೇಖರ್ ರವರು ಮಾತನಾಡುತ್ತಾ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಮಾನಸ ರವರು ಹಲವು ಮಹತ್ವಪೂರ್ಣ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಅವುಗಳಲ್ಲಿ ಮನೆಗೊಂದು ಗ್ರಂಥಾಲಯ ಪ್ರಮುಖವಾದದ್ದು. ಈ ಶೀರ್ಷಿಕೆಯಡಿ ಬೀದರ್ ನಿಂದ ಚಾಮರಾಜನಗರದವರೆಗೆ ಸುಮಾರು ಒಂದು ಲಕ್ಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಿದ್ದು ಅದು ಎಲ್ಲಾ ಜಿಲ್ಲೆಗಳಲ್ಲೂ ಕೂಡ ಸಕ್ರಿಯವಾಗಿ ಕಾರ್ಯಕ್ರಮಗಳ ಮೂಲಕ ಸಾಗುತ್ತಿದೆ.

ಒಬ್ಬೊಬ್ಬರ ಪುಸ್ತಕ ಸಂಗ್ರಹದ ಮನೆಯಲ್ಲೂ ಕೂಡ ವಿಶಿಷ್ಟ ರೀತಿ ಅನುಭವ ಆಗುತ್ತಿದ್ದು, ಎಲ್ಲರೂ ಒಂದೆಡೆ ಸೇರಿ ಪ್ರದರ್ಶನದ ಜೊತೆಗೆ ಪುಸ್ತಕ ಕುರಿತಾದ ಮಾತುಗಳು, ಚರ್ಚೆಗಳು, ಅನುಭವಿಕರ ಮಾತುಗಳು ಇವೆಲ್ಲದರ ಮೂಲಕ ಪುಸ್ತಕ ಪ್ರೀತಿಯನ್ನು ಮತ್ತಷ್ಟು ಕಡೆ ಪಸರಿಸಲು ಇದು ಬಹು ಮುಖ್ಯ ಪಾತ್ರವನ್ನು ವಹಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಇದೇ ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೋವಿಂದರಾವ್ ಮೆಮೋರಿಯಲ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ರವಿ ಕೆ ಮಾತನಾಡುತ್ತಾ ನನಗೆ ಈ ವೇದಿಕೆಯಲ್ಲಿ ಮಾತನಾಡಲು ಅವಕಾಶ ಸಿಕ್ಕಿತು ನಮ್ಮದು ವಿಜ್ಞಾನ ಕಾಲೇಜ್ ಆದರೆ ಮೊದಲ ಮಹಡಿಯ ಮೇಲೆ ಕನ್ನಡದ ಪುಸ್ತಕಗಳು ಕಾಳಿಹುಂಡಿ ಶಿವಕುಮಾರ್ ರವರ ಸಾರ್ಥಕ ಸಂಗ್ರಹದ ಮೂಲಕ ಎಲ್ಲೆಡೆ ಜ್ಞಾನದ ಬೆಳಕನ್ನು ಹೆಚ್ಚಿಸಿದೆ.
ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕೂಡ ಈ ಒಂದು ಅಭಿಯಾನದಲ್ಲಿ ಭಾಗಿಯಾಗಿರುವುದು ತುಂಬಾ ಸಂತೋಷದ ವಿಷಯ ಎಂದರು. ಕಾಳಿಹುಂಡಿ ಶಿವಕುಮಾರ್ ಮೂರು ತಿಂಗಳ ಹಿಂದೆ ತಮ್ಮ ಬಾಡಿಗೆ ಮನೆಯನ್ನು ಖಾಲಿ ಮಾಡಿದಾಗ ಪುಸ್ತಕವನ್ನು ಎಲ್ಲಿ ಇಡುವುದು ಎಂದು ಯೋಚಿಸುತ್ತಿದ್ದರು. ಯಾರದೋ ಮೂಲಕ ವಿಷಯ ತಿಳಿದ ನನಗೆ ಅವರ ಸಂಗ್ರಹಕ್ಕೆ ನೆರವಾಗುವುದರ ಮೂಲಕ ಅವರ ಪುಸ್ತಕ ಪ್ರೀತಿಗೆ ಪ್ರೋತ್ಸಾಹ ಮಾಡಿದೆವು ಅಷ್ಟೇ.

ಆದರೆ ಈ ದಿನ ನಿಜಕ್ಕೂ ಇದು ಸಾರ್ಥಕ್ಯ ಕಂಡುಕೊಂಡಿದೆ. ಇನ್ನು ವ್ಯವಸ್ಥಿತವಾಗಿ ಕಪಾಟುಗಳ ಮೂಲಕ ಸಂಗ್ರಹಿಸಲು ನೆರವು ನೀಡಲಾಗುವುದು ಎಂದು ತಿಳಿಸುತ್ತಾ ನಾನು ಕೂಡ ಇಂಗ್ಲೀಷ್ ನಲ್ಲಿ ಕನ್ನಡ ಸಾಹಿತ್ಯವನ್ನು ಓದಿದ್ದೇನೆ. ಕಾಳಿಹುಂಡಿ ಶಿವಕುಮಾರ್ ಅವರನ್ನು ಹಲವು ವರ್ಷಗಳಿಂದ ಗಮನಿಸಿದ್ದೇನೆ ಅವರ ಪತ್ರಿಕೆ ಮತ್ತು ಪುಸ್ತಕ ಪ್ರೀತಿ ವಿಶಿಷ್ಟವಾದ ಹವ್ಯಾಸವಾಗಿದ್ದು ಎಂದು ಪ್ರಶಂಶಿಸಿದರು.
ಮೈಸೂರು ಆಕಾಶವಾಣಿಯ ಕೇಳುಗರ ಬಳಗ ಸಮುದ್ಯತಾ ದ ಅಧ್ಯಕ್ಷರಾದ ಹಾಗೂ ಆರ್ ಎಂ ಪಿ ಯ ಹಿರಿಯ ಶುಶ್ರೂಷಕರಾದ ಕಣ್ಣೂರು ವಿ ಗೋವಿಂದಾಚಾರಿ ಮಾತನಾಡುತ್ತಾ ಒಬ್ಬ ವ್ಯಕ್ತಿ ಮತ್ತೊಬ್ಬರಿಗೆ ಮಾದರಿಯಾಗುತ್ತಾರೆ ಎನ್ನುವುದಕ್ಕೆ ನಾನೇ ಉದಾಹರಣೆ ನಾನು ಕೂಡ ಇವರ ಜೊತೆ ಸೇರಿ ಹಲವು ಪತ್ರಿಕೆಗಳನ್ನ, ಪುಸ್ತಕಗಳನ್ನ ತಕ್ಕಮಟ್ಟಿಗೆ ಕೊಂಡುಕೊಳ್ಳುತ್ತಿದ್ದೇನೆ. ಈ ಪುಸ್ತಕ ಪ್ರೀತಿಯನ್ನು ಹಲವು ರೀತಿಯಲ್ಲಿ “ಕರ್ತವ್ಯ ಮಾಡು ಫಲ ನಿರೀಕ್ಷಿಸದಿರು”- ಎನ್ನುವ ಗೀತಸಾರದಂತೆ ಹಂಚುತ್ತಾ ಬರುತ್ತಿದ್ದಾರೆ ಎಂದರು.
ಚಾಮರಾಜನಗರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಇ ಸಿ ಓ ಆಗಿ ನಿರ್ವಹಿಸುತ್ತಿರುವ ಗಾಯಕ ಕುದೇರು ಎಸ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅವರೇ ನಿರೂಪಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಪತ್ರಿಕಾ ಮತ್ತು ಪುಸ್ತಕ ಸಂಗ್ರಹಕ, ಗಾಯಕ ಕಾಳಿಹುಂಡಿ ಶಿವಕುಮಾರ್ ಮಾತನಾಡುತ್ತಾ ಈ ಒಂದು ಕಾಲೇಜಿನಲ್ಲಿ ನನ್ನ ಪುಸ್ತಕಗಳು ಆಶ್ರಯ ಪಡೆಯುವುದರ ಮೂಲಕ ನನ್ನ ಬಹುದಿನಗಳ ಕನಸು ನನಸಾಗಿದೆ. ಮತ್ತಷ್ಟು ವ್ಯವಸ್ಥಿತವಾಗಿ ಪುಸ್ತಕವಾರು/ ವಿಷಯವಾರು ವಿಂಗಡಣೆ ಮೂಲಕ ಕ್ರಮ ವಹಿಸಲಾಗುವುದು ಎಂದರಲ್ಲದೆ ಈ ಒಂದು ಸಂದರ್ಭದಲ್ಲಿ ತಮ್ಮ ಕುಟುಂಬಸ್ಥರು, ಸ್ನೇಹಿತರು ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಪ್ರೋತ್ಸಾಹ ಮಾಡುತ್ತಾ ಬಂದಿದ್ದಾರೆ ಎಂದು ತಮ್ಮ ಅನಿಸಿಕೆ ಹಂಚಿಕೊಂಡರು. ಅಲ್ಲದೆ ಎಲ್ಲರಿಗೂ ವಂದನಾರ್ಪಣೆ ಮಾಡಿದರು. ನಂತರದಲ್ಲಿ ಸಂಜೆವರೆಗೂ ಅನೇಕರು ಅವರ ಪುಸ್ತಕ ಸಂಗ್ರಹಗಳ ಪ್ರದರ್ಶನವನ್ನು ವೀಕ್ಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ಕಲಾಪ್ರಸಾದ್, ಬೂಕನಕೆರೆ ವಿಜಯೇಂದ್ರ, ಕೊಕ್ಕಡ ವೆಂಕಟರಮಣ ಭಟ್, ಪ್ರೊಫೆಸರ್ ಆರ್ ಎ ಕುಮಾರ್, ರಾಮಶೇಷನ್, ಮಗ್ಗೆಯ ವೈ ಪಿ ನಾಗರಾಜ್ (ಪಾಪಣ್ಣ), ನಾಗೇಂದ್ರ ಹೆಬ್ಬಾರ್, ಲೆಕ್ಕ ಪರಿಶೋಧನಾಧಿಕಾರಿ ಭೈರಪ್ಪ, ಕೆ ವಿ ರಾಘವೇಂದ್ರ, ವೇಣುಗೋಪಾಲ್, ಅಭಿನಂದನ್ ಸಿ ಎಸ್, ಅರವಿಂದ್, ಸವಿಗನ್ನಡ ರಂಗಣ್ಣ, ಶೇಖರ್ ಕೆ ಎಚ್, ಮುಂತಾದವರು ಹಾಜರಿದ್ದರು.







