LatestMysore

ಹುಣಸೂರಿಗೆ ಕೂಡಲೇ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಿ.. ಇಲ್ಲದಿದ್ದರೆ ಪ್ರತಿಭಟನೆ ಖಚಿತ

 ಹುಣಸೂರು(ಹಿರಿಕ್ಯಾತನಹಳ್ಳಿ ಸ್ವಾಮಿಗೌಡ): ಹುಣಸೂರು ಮತ್ತು ಮೈಸೂರು ನಡುವೆ ಪ್ರಯಾಣ ಮಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಪ್ರಯಾಣಿಕರಿಗೆ ತಕ್ಕಂತೆ ಬಸ್ ಗಳ ವ್ಯವಸ್ಥೆಯಿಲ್ಲದ ಕಾರಣ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು ಕೂಡಲೇ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸುವಂತೆ ಸತ್ಯ ಎಂ ಎ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮನವಿ ಮಾಡಿದ್ದು, ಅಧಿಕಾರಿಗಳು ಸಕಾಲದಲ್ಲಿ ಸ್ಪಂದಿಸದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ಅವರು ಹುಣಸೂರಿನಿಂದ ಮೈಸೂರಿಗೆ ಹಾಗೂ ಮೈಸೂರಿನಿಂದ ಹುಣಸೂರಿಗೆ ಪ್ರತಿದಿನ 10,000ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ನೌಕರರು ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಪ್ರಯಾಣ ಮಾಡುತ್ತಾರೆ. ಆರು ತಾಲೂಕುಗಳನ್ನು ಒಳಗೊಂಡ ಹುಣಸೂರು  ಉಪ ವಿಭಾಗ ಕೇಂದ್ರವಾಗಿರುವುದರಿಂದ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆಗಳಿದ್ದು ಅತಿ ಹೆಚ್ಚು ಜನಸಂದಣಿ ಇರುವುದರಿಂದ  ಪಿರಿಯಾಪಟ್ಟಣ ಹುಣಸೂರು  ಮಾರ್ಗವಾಗಿ ಮೈಸೂರಿಗೆ ಸಿಟಿ ಬಸ್ಸುಗಳನ್ನು ಹೆಚ್ಚುವರಿ ಮಂಜೂರು ಮಾಡಬೇಕೆಂದು ಆಗ್ರಹಿಸಿದ್ದಾರೆ.

ಮೈಸೂರಿನಿಂದ ಹುಣಸೂರು ಮಾರ್ಗವಾಗಿ ಕುಶಾಲನಗರ ಮಡಿಕೇರಿ ಮಂಗಳೂರಿಗೆ ತೆರಳುವ ಬಸ್ಸುಗಳಲ್ಲಿ  ಹುಣಸೂರಿಗೆ  ಹತ್ತುವ ಪ್ರಯಾಣಿಕರನ್ನು  ನೀವು ಹುಣಸೂರಾದರೆ ಹತ್ತಬೇಡಿ ಎಂದು ದಬ್ಬಾಳಿಕೆಯಿಂದ ಇಳಿಸುತ್ತಿರುವ ಪ್ರಸಂಗವು ನಡೆಯುತ್ತಿದೆ. ಈ ಬಗ್ಗೆ ಮಾನ್ಯ ವಿಭಾಗೀಯ ನಿಯಂತ್ರಣಾಧಿಕಾರಿಗಳು  ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

ಶಾಲಾ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಗಾರ್ಮೆಂಟ್ಸ್ ಗಳಿಗೆ ತೆರಳುವ ಮಹಿಳಾ ಉದ್ಯೋಗಿಗಳು ಸರಿಯಾದ ಸಮಯಕ್ಕೆ ಮೈಸೂರು ಕಡೆಗೆ ಬಸ್ ಇಲ್ಲದೆ, ಒಂದೊಮ್ಮೆ ಮಡಿಕೇರಿ ಕಡೆಯಿಂದ ಬಸುಗಳು ಬಂದರೂ ಸಹ ತುಂಬಿ ತುಳುಕುತ್ತಿರುವ ಬಸ್ಸುಗಳಿಗೆ ಹತ್ತಲಾಗದೆ ಅಸಹಾಯಕತೆಯಿಂದ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಸ್ಸುಗಳ ಅಭಾವದಿಂದಾಗಿ ಅಧಿಕಾರಿಗಳು ಸರಿಯಾದ ಸಮಯಕ್ಕೆ ತಮ್ಮ ಕಾರ್ಯ ಕಲಾಪಗಳಿಗೆ ಬರಲಾಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸರ್ಕಾರ ಸರಿಯಾಗಿ 10 ಗಂಟೆಯ ಒಳಗಡೆ ಕಚೇರಿಗೆ ತಲುಪಬೇಕೆಂದು ಕಟ್ಟುನಿಟಿನ ಆದೇಶ ಮಾಡಿದೆ. ಆದರೆ  ನೌಕರರು ಎಷ್ಟೇ ಬೇಗ ಬಸ್ ನಿಲ್ದಾಣಕ್ಕೆ ಬಂದು ಕಾದು ನಿಂತರು  ಸರಿಯಾದ ಸಮಯಕ್ಕೆ ಬಸ್ಸುಗಳಿಲ್ಲದೆ  ಗಂಟೆಗಟ್ಟಲೆ ಬಸ್ಸು ನಿಲ್ದಾಣದಲ್ಲಿಯೇ ಆತಂಕದಿಂದ  ಕಾಲ ಕಳೆಯುವ ಪರಿಸ್ಥಿತಿ ಇದೆ.

ಶಾಲಾ ಕಾಲೇಜುಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸರಿಯಾದ ಸಮಯಕ್ಕೆ ಬಸ್ಸು ಸಿಗದೇ ತೊಂದರೆ ಎದುರಿಸಿದ ನಿದರ್ಶನಗಳಿವೆ. ಸ್ಥಳೀಯ ಜನಪ್ರತಿನಿಧಿಗಳಿಗೆ ಇದರ ಬಗ್ಗೆ ಇಚ್ಛಾ ಶಕ್ತಿ ಕೊರತೆ ಇರುವುದರಿಂದ ನಮ್ಮ ಸಂಸ್ಥೆಗೆ ದೂರುಗಳ ಮೇಲೆ ದೂರುಗಳು ಬರುತ್ತಿವೆ. ಜನಪ್ರತಿನಿಧಿಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು  ಹಾಲಿ ಹಾಗೂ ಮಾಜಿ ಶಾಸಕರು ಕೇಂದ್ರ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಉಡುಗೊರೆಗಳನ್ನು ನೀಡುವಲ್ಲಿ ತೊಡಗಿದ್ದಾರೆ  ವಿನಃ ಜನರ ಸಮಸ್ಯೆಗಳನ್ನು ಅರಿಯುವಲ್ಲಿ ವಿಫಲರಾಗಿದ್ಧಾರೆ.

ಮಾನ್ಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಇನ್ನು 15 ದಿನಗಳ ಒಳಗಾಗಿ ಹೆಚ್ಚುವರಿ ಬಸ್ ಕಲ್ಪಿಸದೆ ಹೋದರೆ  ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಒಳಬಾಗದಲ್ಲಿಯೇ ಪ್ರಯಾಣಿಕರೊಂದಿಗೆ ಸೇರಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಸತ್ಯಪ್ಪ ಎಚ್ಚರಿಸಿದ್ದಾರೆ.

admin
the authoradmin

Leave a Reply