ArticlesLatest

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-8

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದ ಕೃತಿಗಳನ್ನು ಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನು ಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ಸಂಕ್ಷಿಪ್ತವಾಗಿ ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ   ಪುಸ್ತಕ ವಿಮರ್ಶೆ)ವಾಗಿದೆ. ಇದನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ನಾಲ್ಕು ದಶಕಗಳ ಹಿಂದೆಯೇ ಬರೆದಿದ್ದು,  ವಿವಿಧ ಲೇಖಕರ ಸಂಪಾದಕತ್ವದ  ಗ್ರಂಥಗಳಲ್ಲಿ ಬೆಳಕು ಕಂಡಿವೆ. ಅದನ್ನು ಸಂಗ್ರಹಿಸಿ ಜನಮನಕನ್ನಡಕ್ಕೆ ನೀಡಿದ್ದಾರೆ.

36 ಕೃತಿ : ಅನೂಹ್ಯ (ಕಾದಂಬರಿ)

 ಲೇಖಕ : ಕೆ.ಎಸ್.ರಾಧಾಕೃಷ್ಣ

ಪ್ರಕಾಶಕ:ಪುಸ್ತಕ ಚಿಲುಮೆ ಶ್ರೀಧರ, 1860,ರತನಸಿಂಗ್ ರಸ್ತೆ 1ಮೇನ್, ಮೈಸೂರು

130ಪುಟ, 6ರೂ, 1978

‘ಅನೂಹ್ಯ’ ಕಾದಂಬರಿ ಬರೆದಿರುವ ರಾಧಾಕೃಷ್ಣ ತಮ್ಮ ಈ ಕಾದಂಬರಿಯನ್ನು ಬರೆಯುವ ಮೊದಲು ಬೇರೆಯವರ ಕಾದಂಬರಿಗಳನ್ನು ಪ್ರಾಮಾಣಿಕವಾಗಿ, ಗಂಭೀರವಾಗಿ ವಾಚನ ಮಾಡಬೇಕಿತ್ತು! ಕನ್ನಡ ಸಾಹಿತ್ಯ ಸಾಗರದಲ್ಲಿ ದರ್ಬಾರ್ ನಡೆಸಿದ್ದ ತಿಮಿಂಗಲಗಳ ಉದಾ.:- ಪತ್ತೇದಾರಿ ಕಾದಂಬರಿ ಸಾಮ್ರಾಟ ಎನ್.ನರಸಿಂಹಯ್ಯ, ಸಾಮಾಜಿಕ ಕಾದಂಬರಿ ಸಾರ್ವಭೌಮ ಅ.ನ.ಕೃಷ್ಣರಾವ್, ತ.ರಾ.ಸು., ಟಿ.ಕೆ.ರಾಮರಾವ್, ರಾವಬಹಾದ್ದೂರ, ಎಸ್.ಎಲ್.ಭೈರಪ್ಪ, ಶ್ರೀಕೃಷ್ಣಆಲನಹಳ್ಳಿ, ಪಿ.ಲಂಕೇಶ್, ತ್ರಿವೇಣಿ, ಎಂ.ಕೆ.ಇಂದಿರಾ, ವಾಣಿ, ಆರ್ಯಾಂಬ ಪಟ್ಟಾಭಿ, ಮಂಗಳಾ ಸತ್ಯನ್ ಮುಂತಾದವರ ಕಾದಂಬರಿಗಳನ್ನು ಹೆಚ್ಚು ಓದಬೇಕಾಗಿತ್ತು. ತಾನೂ ಕಾದಂಬರಿಕಾರ ನಾಗಬೇಕೆಂದು ಬಯಸಿ ಅಸಮರ್ಥ ಕಥೆಯನ್ನು ಆತುರಪಟ್ಟು ಬರೆದಂತಿದೆ, ಲೇಖಕನ ಬಾಲಿಶ ಬರವಣಿಗೆ!

ನಾಗರಾಜ, ಚಂದ್ರಶೇಖರ, ಕೀರ್ತಿ ಮತ್ತು ತಂಗಿಯರು ಪ್ರಸ್ತುತ ಕೃತಿಯ ಕಥಾಹಂದರಕ್ಕೆ ಆಧಾರ. ನಿರುದ್ಯೋಗಿ ಪದವೀಧರ ಚಂದ್ರು ‘ಉದ್ಯೋಗಂ ಪುರುಷಲಕ್ಷಣಂ’ ನಾಣ್ಣುಡಿಯನ್ನೇ ಮರೆತು ‘ಪ್ರೀತಿಸೋ’ ಕೆಲಸಕ್ಕೆ ಸೇರಿಕೊಂಡರೆ, ಕೀರ್ತಿ ಎಂಬುವಳು ತನ್ನ ರೂಪು ಲಾವಣ್ಯ ಅವ-ಗುಣ ಲಕ್ಷಣ ಒನಪು ವಯ್ಯಾರದಿಂದ ಸಾಧ್ಯವಾದಷ್ಟು ಪಡ್ಡೆಹುಡುಗರು ತನ್ನ ಸುತ್ತಲು ಸುಳಿದಾಡುವಂತೆ ಮಾಡಬೇಕೆಂಬ ಅತಿಯಾಸೆ ಉಳ್ಳವಳು. ಹಾಗಾಗಿ ಪ್ರೀತಿಸೊ ನೆಪದಿಂದ ನಾಗರಾಜನಿಗೆ ತನ್ನ ಮೈ-ದಾನ ಮಾಡುವಳು. ಕಾಲಕ್ರಮೇಣ ಚಂದ್ರಶೇಖರನ ಮಡದಿಯಾದ ನಂತರ ಕೊನೆಗೆ ವಿಧವೆಯಾಗುತ್ತಾಳೆ, ಕಾದಂಬರಿ ಮುಗಿಯುತ್ತದೆ.

ಎರಡು ಪುರುಷ, ಓರ್ವ ಸ್ತ್ರೀ, ಒಟ್ಟಾರೆ 3 ಮುಖ್ಯಪಾತ್ರಗಳ ಸುತ್ತ ಹೆಣೆದ ಹಳಸಲು ಥೀಮ್ ಮುಲಾಜಿಲ್ಲದೆ ಹಳೇ ಸಿನಿಮ ನೆನಪಿಸುತ್ತದೆ. ತಂಗಳು ಶೈಲಿಯಲ್ಲಿ ಬರೆದು ಬೋರ್ ಹೊಡೆಸಿರುವುದಲ್ಲದೆ ಭರವಸೆ ಕಾಣದ ಕಾದಂಬರಿಯ ಕ್ಲೈಮ್ಯಾಕ್ಸ್ ಹಾಸ್ಯಾಸ್ಪದ ಎನಿಸುವಂತಿದೆ. ಕೃತಿ-ಕರ್ತೃ ಬಗೆಗಿನ ಈ ವಿಮರ್ಶೆಯಲ್ಲಿ ಯಾವುದೆ ವ್ಯಂಗ್ಯವಿಲ್ಲ, ಪೂರ್ವಾಗ್ರಹ ಪೀಡನೆಯೂ ಇಲ್ಲ. ಜೀವಾಳವಿಲ್ಲದ ಸಾರಾಂಶ, ಸುಶೀಲವಲ್ಲದ ಭಾಷೆ, ಕಾದಂಬರಿಪ್ರಿಯರಿಗೂ ಅಹಿತವೆನಿಸುವಂತಿದೆ?

(ಪುಸ್ತಕ ಪುರವಣಿ ಮಾಸಪತ್ರಿಕೆಯಲ್ಲಿ ಪ್ರಕಟಿತ ಸೆಪ್ಟೆಂಬರ್ 1978)

37.ಕೃತಿ:ಭಾಷೆಯ ಬಂಧನ (ಕಾದಂಬರಿ)

ಲೇಖಕಿ:ಎಸ್.ಮಂಗಳಾಸತ್ಯನ್

ಹೇಮಂತ ಸಾಹಿತ್ಯ ಪ್ರಕಾಶನ ಬೆಂಗಳೂರು, ಪುಟ-44, ಬೆಲೆ:ರೂ.5.50,1978

ವಿಮಲಾ ಮತ್ತು ಪುಷ್ಪ ಸೋದರಿಯರು. ಸತೀಶ ಮತ್ತು ಹರೀಶ ಒಡಹುಟ್ಟಿದವರು. ಅಕ್ಕ-ತಂಗಿ ಮತ್ತು ಅಣ್ಣ-ತಮ್ಮ ಒಟ್ಟು ನಾಲ್ಕು ಪ್ರಮುಖ ಪಾತ್ರಗಳ ಕಾದಂಬರಿ ‘ಭಾಷೆಯಬಂಧನ’. ಇವರೆಲ್ಲರ ಸುತ್ತ ಹೆಣೆದ ಕತೆಯಲ್ಲಿ ಅದೇರಾಗ ಅದೇ ಹಾಡು, ಹಳೆ ಶರೀರಕ್ಕೆ ಹೊಸ ಉಡುಪು ಎಂಬಂತಿದೆ!  ಪಾತ್ರದ ಹೆಸರು ಸಂದರ್ಭ ವರ್ಣನೆ ಗಾತ್ರ ಇತ್ಯಾದಿಗಳಲ್ಲಿ ಮಾತ್ರ ತುಸು ಬದಲಾವಣೆ ಕಂಡುಬರುವ ಇದರ ಕತೆಯಲ್ಲಿ ಹೊಗಳಬಹುದಾದ ನವನವೀನ ಸಾರಾಂಶವಾಗಲೀ ಶೈಲಿಯಾಗಲೀ ಗಟ್ಟಿತನವಾಗಲೀ ಇಲ್ಲವೇಇಲ್ಲ.

ಪುಷ್ಪಾ ಮದುವೆಗೆ ಮುನ್ನವೇ ಗರ್ಭಿಣಿ ಆದಾಗ ಆಕೆಯ ಪ್ರಿಯತಮ ಹರೀಶ; “ತಾನು ಆತ್ಮಹತ್ಯೆ ಮಾಡಿಕೊಳ್ಳುವೆ ನೆಂತಲೂ ತನ್ನಿಂದಾಗಿ ಹುಟ್ಟುವ ಮಗುವಿಗಾದರು ಪುಷ್ಪ ಬದುಕಿರಲೇಬೇಕೆಂಬ ಭಾಷೆಯಬಂಧನಕ್ಕೆ” ಒಳಗಾಗುವಳು. ಹರೀಶಂಗೆ ಕೊಟ್ಟಮಾತಿಗೆ ಪುಷ್ಪ ಕಟ್ಟುಬಿದ್ದು ಕೊನೆತನಕವೂ ತನ್ನ ತೀರ್ಮಾನ ಬದಲಾಯಿಸದೆ ಕಡೆಗೆ ಕಾಲಯಮನ ವಶ ವಾಗುತ್ತಾಳೆ, ಇಲ್ಲಿಗೆ ಕಾದಂಬರಿ-ಶುಭಂ.

1975ರಲ್ಲಿ ತೆರೆಕಂಡ ಭಾರತಿ-ವಿಷ್ಣುವರ್ಧನ್-ಶುಭ ತಾರಾಗಣದ ಖ್ಯಾತ ಸಿನಿಮ ‘ಭಾಗ್ಯಜ್ಯೋತಿ’ ಕಾದಂಬರಿ ಬರೆದ ಜನಪ್ರಿಯ ಲೇಖಕಿ ಮಂಗಳಾಸತ್ಯನ್ ಇದರ ಕರ್ತೃ. ಕಣ್ಣೀರು ಭಾವನಾತ್ಮಕ ಸಂದರ್ಭ ಹೃದಯಸ್ಪರ್ಶ ಸನ್ನಿವೇಶ ಚಿತ್ರಿಸುವಲ್ಲಿ ನಿಸ್ಸೀಮರು ಇವರು. ಮಹಿಳಾ ಓದುಗ ವರ್ಗ ಅಥವ ಅಭಿಮಾನಿ ಬಳಗ ನಿರ್ಮಿಸಿಕೊಂಡ ಕೆಲವೇ ಕಾದಂಬರಿ ಗಾರ್ತಿಯರಲ್ಲಿ ಇವರೂ ಒಬ್ಬರು.

ಹೊಸತನ ಹೊಸಕಥೆ ಹೊಸಬಗೆ, ವಿಭಿನ್ನತೆ, ವಿಶಿಷ್ಟತೆ, ಕುತೂಹಲ, ಕೌಟುಂಬಿಕ, ಸಂದೇಶಾತ್ಮಕ, ಸಾಮಾಜಿಕ ಕಳಕಳಿ, ರೈತ-ಯೋಧ-ಕಾರ್ಮಿಕ, ಮಹಿಳೆಮಕ್ಕಳ ವಿದ್ಯಾರ್ಥಿ-ಪೋಷಕ ಅಭಿವೃದ್ಧಿ, ದೇಶ-ಭಾಷೆ ಅಭಿಮಾನ, ಅಧ್ಯಯನ-ಸಂಶೋಧನ, ವಿಜ್ಞಾನ-ತಂತ್ರಜ್ಞಾನ, ಸಂಸ್ಕೃತಿ-ನಾಗರಿಕತೆ, ಇತಿಹಾಸ-ಪರಂಪರೆ ಮುಂತಾದ ಯೋಗ್ಯ ವಿಚಾರಗಳ ಸುತ್ತಲೂ ಹೆಣೆದ ಒಂದೇಒಂದು ಕಾದಂಬರಿಯನ್ನು ಇವರ್ಯಾರು ಬರೆಯುವುದಿಲ್ಲ! ಇಷ್ಟಾದರೂ ಇಂಥವರಿಗೆ ಕೇವಲ ಜನಪ್ರಿಯತೆ ಎಂಬುದುದೊಂದೇ ಹೆಗ್ಗಳಿಕೆ?

(ಸೆಪ್ಟೆಂಬರ್ 1978ರ “ಪುಸ್ತಕ ಪುರವಣಿ” ಮಾಸಿಕದಲ್ಲಿ ಪ್ರಕಟಿತ)

38 ಕೃತಿ: ಗವಿಯ ಹೊಂಬೆಳಕು

ಕರ್ತೃ : ಆದಯ್ಯ ಹಿರೇಮಠ

ಇತ್ತೀಚಿನ ದಿನಗಳಲ್ಲಿ ವಚನಕಾರರು ಕಣ್ಮರೆಯಾಗುತ್ತಿದ್ದಾರೆ. ಆದ್ದರಿಂದ ವಚನ ಸಾಹಿತ್ಯವು ವಿರಳ ಆಗುತ್ತಿದೆ. ಒಂದು ವೇಳೆ ಆಧುನಿಕ ವಚನಕಾರರು ಹುಟ್ಟಿಕೊಂಡು ನಿಸ್ವಾರ್ಥದಿಂದ ರಚಿಸಿದ ಅಥವ ಹಾಡಿದ ವಚನಗಳನ್ನು ಒಂದೆಡೆ ಕಲೆಹಾಕುವ ವಚನಗಳ ಅಭಿಮಾನಿಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಈ ಪೈಕಿ ತೀವ್ರ ಆಸಕ್ತಿಯುಳ್ಳ ಒಂದಷ್ಟು ಮಂದಿ ಪರಿಶ್ರಮ ವಹಿಸಿ ಸಂಗ್ರಹಿಸಿದ್ದನ್ನು ಆಸ್ಥೆಯಿಂದ ಸಂಪಾದಕ-ಪ್ರಕಾಶಕರಾಗಿ, ಸ್ವಇಚ್ಛೆಯಿಂದ ಲೋಕಾರ್ಪಣೆ ಮಾಡುವ ಸಾಧಕರು ಅಲ್ಲೊಬ್ಬರು ಇಲ್ಲೊಬ್ಬರು ಇರಬಹುದೇನೋ?! ಎಂಬುದೆ ಸಧ್ಯಕ್ಕೆ ಸಮಾಧಾನಕರ ಸಂಗತಿ!

ಈ ಬಗೆಯ ಅಪರೂಪದ ವಚನಕಾರರಲ್ಲಿ ಸಂಪಾದಕ, ಪ್ರಕಾಶಕರಾದ ಆದಯ್ಯ ಹಿರೇಮಠ ರವರೂ ಒಬ್ಬರು. ಮಾನ್ಯರು ರಚಿಸಿದ 2ನೇಯ ವಚನಕೃತಿ ಇದಾಗಿದೆ ಎಂಬುದು ಮೆಚ್ಚುವ ಸಂಗತಿ. ಒಟ್ಟು 74 ಪುಟಗಳ “ಗವಿಯ ಹೊಂಬೆಳಕು” ಪುಸ್ತಕದಲ್ಲಿ *ಆಧ್ಯಾತ್ಮಿಕ, *ಧಾರ್ಮಿಕ, *ಪ್ರಾಪಂಚಿಕ ಎಂಬ ೩ ವಿಭಾಗವಿದ್ದು, ಒಟ್ಟು ನೂರಾಒಂದು ವಚನಗಳಿವೆ. “ಶ್ರೀಗುರು ಗವಿಸಿದ್ದೇಶ್ವರಾ….”ಎಂಬ ಅಂತ್ಯಾಕ್ಷರದ ಅಂಕಿತದಲ್ಲಿ ಬರೆದಿರುವ ಪ್ರತಿಯೊಂದು ವಚನವನ್ನು ಸರಳ ಭಾಷೆಯಲ್ಲಿ ಬರೆದಿದ್ದರೂಸಹ ಸುಧೀರ್ಘ ಪದಗಳ-ವಾಕ್ಯಗಳ ಮಿಲನವೇ ಹೆಚ್ಚು ಇರುವುದರಿಂದ ಆಪ್ಯಾಯಮಾನ ಎನಿಸುವುದಿಲ್ಲ.

ಎಲ್ಲ ವಚನಗಳನ್ನು ಸಹನೆಯಿಂದ ವಾಚಿಸಿದರೆ ಮಾತ್ರ ಪ್ರತಿಫಲ ಸಿಗಬಹುದು. ಅಲ್ಲಲ್ಲಿ ವಿಚಾರಕ್ರಾಂತಿಯುಳ್ಳ ಉಪಯುಕ್ತ ಉಕ್ತಿಗಳು ಕಾಣಸಿಗುತ್ತವೆ. ಆಧ್ಯಾತ್ಮಿಕ ಸುವಿಚಾರದ ನಿಟ್ಟಿನಲ್ಲಿ ಸಾಗುವಂತಹ ಮತ್ತು ನವೀನತೆಯ ನೆರಳು ನೀಡುವಂಥ ಕೆಲವು ಸುಂದರ ವಚನಗಳನ್ನು ಉಧಾಹರಣೆಯಾಗಿ ತೆಗೆದುಕೊಂಡರೆ: 69, 83, 86, 93, 94 ಹಾಗೂ 100ನೇ ವಚನಗಳು ಸಾಕ್ಷಿಯಾಗಿ ನಿಲ್ಲುತ್ತವೆ.

ಅದೇನೇ ಇರಲಿ ಇವತ್ತಿನ ಆಧುನಿಕ ಚಿತ್ರ ವಿಚಿತ್ರ ಸಂಸ್ಕಾರದ ಸಮಾಜಕ್ಕೆ, ವಿಶೇಷವಾಗಿ ಪಾಶ್ಚಿಮಾತ್ಯ ಮತ್ತು ಐರೋಪ್ಯ ರಾಷ್ಟ್ರಗಳ ಅಲ್ಟ್ರಮಾಡ್ರನ್ ಸಂಸ್ಕೃತಿ, ನಾಗರಿಕತೆ ಅನುಸರಿಸುವ ಯುವ ಜನಾಂಗಕ್ಕೆ ತಿದ್ದಿ ಬುದ್ಧಿ ಹೇಳುವ ವಚನಗಳು ಅಗತ್ಯವಿದ್ದು, ಇಂತಹ ಕೆಲವನ್ನೂ ಈ ಕೃತಿಯಲ್ಲಿ ಕಾಣಬಹುದು. ಈ ಕಾರಣಕ್ಕೆ ವಚನ ಪುಸ್ತಕಗಳನ್ನು ಕೊಂಡು ಆಸಕ್ತಿಯಿಂದ ಓದುವವರ ಸಂಖ್ಯೆ ಅನುದಿನ ಹೆಚ್ಚುತ್ತಿರಲೆಂದು ಆಶಿಸೋಣ!

(ನವೆಂಬರ್ ೧೯೭೮ ‘ಗ್ರಂಥಲೋಕ’ ಮಾಸಿಕದಲ್ಲಿ ಪ್ರಕಟಿತ)

39 ಕೃತಿ: ಸೋಪಾನ

ಕರ್ತೃ: ಗುರುಸ್ವಾಮಿ ಗಣಾಚಾರಿ

ಶರಣು ಗಣಪತಿ” ಎಂಬ ಭಕ್ತಿಗೀತೆಯಿಂದ ಪ್ರಾರಂಭವಾಗಿ “ಕಂಡೆ ನಾ ಕಂಡೆ” ಎಂಬುವ ಗೀತೆಯೊಂದಿಗೆ ಮುಕ್ತಾಯಗೊಳ್ಳುವ ‘ಸೋಪಾನ’ ಪುಸ್ತಕವನ್ನು ಬರೆದವರು ಗುರುಸ್ವಾಮಿ ಗಣಾಚಾರಿ. ಇದರಲ್ಲಿ ಬೇರೆಬೇರೆ ದೇವಾನುದೇವತೆಗಳ ಕುರಿತಾದ ಹಲವು ರೀತಿಯ ಒಟ್ಟು 111 ಭಕ್ತಿಗೀತೆಗಳಿವೆ.

ವಿವಿಧ ರಾಗ ತಾಳ ಲಯ ಸ್ಮರಿಸುವ ಯೋಗ್ಯ ಗೀತೆಗಳಿವೆ, ಉದಾಹರಣೆ: ಉದಯರಾಗ, ಶಂಕರಾಭರಣ, ಭೀಮಪಲಾಸ, ಕಲ್ಯಾಣಿ, ಪಟದೀಪ, ಸಾರಂಗ, ದುರ್ಗಾ, ಭಾಗ್ಯಶ್ರೀ, ಕಪಾಲಿ, ಮುಂತಾದ ಅನೇಕ ರಾಗಸಂಗಮದ ಸಂಗೀತ ಸಂಯೋಜನಾರ್ಹ ಭಕ್ತಿಗೀತೆಗಳು ಇದರಲ್ಲಿವೆ.

ಈ ಕೃತಿಯ ಮತ್ತೊಂದು ವೈಶಿಷ್ಟ್ಯವೆಂದರೆ, ಇದರಲ್ಲಿ ಅಚ್ಚಾಗಿರುವ ಬಹುತೇಕ ಗೀತೆಗಳು ‘ಕನ್ನಡ’ ಭಾಷೆಯನ್ನೇ ಮರೆಸುವಷ್ಟರ ಮಟ್ಟಿಗೆ ‘ಸಂಸ್ಕೃತ’ ಭಾಷಾಮಯ ಆಗಿರುವುದು! ಆದರೂ ಭಕ್ತಿಗೀತೆ ಇಷ್ಟ ಪಡುವಂಥವರಿಗೆ ಇಷ್ಟವಾಗುವ ಪುಸ್ತಕವಿದು. ಬಾತ್ ರೂಂ ಮತ್ತು ಎಲ್ಲೆಂದರಲ್ಲಿ ಆಗಾಗ್ಗೆ ಗುನುಗುನಿಸೊ ಅಭ್ಯಾಸವಿರುವ ಹೆಣ್ಣು-ಗಂಡು ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತದೆ. ಇನ್ನು ಕೆಲವು ಸಂಗೀತ-ಗೀತೆಗಳಿಂದ ತುಂಬಿದ್ದು, ಸಂಗೀತ ವಿದ್ವಾಂಸರಿಂದ ಮೊದಲ್ಗೊಂಡು ಸಂಗೀತ ಕಲಿಯುವ ವಿದ್ಯಾರ್ಥಿವರೆಗೂ ತುಸು ಅನುಕೂಲ ಆಗಬಹುದು.

( 1978 ನವೆಂಬರ್ ‘ಗ್ರಂಥಲೋಕ’ ಮಾಸಪತ್ರಿಕೆಯಲ್ಲಿ ಪ್ರಕಟಿತ)

40 ಕೃತಿ :ಪ್ರಾರ್ಥನಾಮಂಜರಿ

ಕರ್ತೃ: ಶಂ.ಬಾಲಚಂದ್ರ ಘಾಣೇಕರ

“ಪ್ರಾರ್ಥನಾಮಂಜರಿ” ಶೀರ್ಷಿಕೆಗೆ ಅನ್ವರ್ಥ ಆಗುವಂತಹ ಈ ಪುಸ್ತಕವು ಭಜನೆ ಮತ್ತು ಪ್ರಾರ್ಥನೆಗಳ ಸಂಗಮವಾಗಿದೆ. ಇದೇ ಕೃತಿಯು ಈ ಮೊದಲು 1969ರಲ್ಲಿ ಪ್ರಥಮ ಮುದ್ರಣ ಕಂಡು ಲೋಕಾರ್ಪಣೆಯಾಗಿತ್ತು. ಪುನಃ ೧೩ ವರ್ಷಗಳ ಧೀರ್ಘಕಾಲದ ನಂತರ ಮತ್ತೊಮ್ಮೆ ದ್ವಿತೀಯ ಮುದ್ರಣ ಕಂಡಿರುವುದು ಸಂತಸದ ಸಂಗತಿ. ಜತೆಗೆ ಎಲ್ಲ  ಪದ್ಯಗಳಿಗೆ ಗದ್ಯರೂಪದ ಭಾವಾರ್ಥವನ್ನೂ ಕೊಟ್ಟಿರುವುದು ೨ನೇ ಮುದ್ರಣದ ವಿಶೇಷ.

ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸ್ತುತಿಸಲು ಯೋಗ್ಯವಾದ ಭಕ್ತಿಗೀತೆ, ಪ್ರಾರ್ಥನೆ, ಭಜನೆ, ನಾಡಗೀತೆ, ದೇಶಭಕ್ತಿ ಗೀತೆಗಳು ಇಲ್ಲಿದೆ. ದೇವರನ್ನು ನಂಬುವವರಿಗೆ, ದೇಶಭಕ್ತರಿಗೆ ಹಾಗೂ ಸಾ(ತಾ)ತ್ವಿಕ ಜನರಿಗೆ ಅಭಿರುಚಿ ಆಗುವಂತಿದೆ. ಆಧ್ಯಾತ್ಮಕಿರಣ ಹೊರಸೂಸುವ ಸಕಲದೇವರ ಗೀತೆಗಳನ್ನು ಬರೆಯಲಾಗಿದೆ.

ಲೇಖಕರು ತಮ್ಮ ಸ್ವಂತ ರಚನೆಯ ಜತೆಗೆ ಬೇರೆಯವರ ಗೀತೆಗಳನ್ನೂ ಸೇರಿಸಿ ಬಹಳ ಶ್ರಮಪಟ್ಟು ಹೊರತಂದ ಈ ಪುಸ್ತಕವನ್ನು ಭಜನಾಪ್ರಿಯರು, ಪೂಜೆಮಾಡೋರು, ಇಷ್ಟಪಡಬಹುದು. ಬಹುತೇಕ ಪದ್ಯಗಳು ಬಾಯಿಪಾಠ ಮಾಡಲಿಕ್ಕು ಯೋಗ್ಯ ಎನಿಸುತ್ತವೆ. ಸ್ವಯಂ ಆಸಕ್ತಿಯಿಂದ ಹೆಚ್ಚಿನ ಕಾಳಜಿ ವಹಿಸಿ ಗಾಂಧೀ ಆಶ್ರಮದ ಕನ್ನಡ, ಹಿಂದಿ, ಸಂಸ್ಕೃತ ಭಾಷೆಗಳ ಜನಪ್ರಿಯ ಭಜನೆಗಳನ್ನೂ ಇದರಲ್ಲಿ ಸಂಗ್ರಹಿಸಿರೋದು ಕಂಡುಬರುತ್ತದೆ.

(ಜೂನ್ 1982 “ಗ್ರಂಥಲೋಕ” ಮಾಸಪತ್ರಿಕೆಯಲ್ಲಿ ಪ್ರಕಟಿತ)

ಅವಲೋಕನ…..  ಇದು ಸ್ಥಿರಶೀರ್ಷಿಕೆ ಅಡಿಯಲ್ಲಿ  ಪುಸ್ತಕ ವಿಮರ್ಶೆ…  ಐದು ಕೃತಿಗಳ ಪರಿಚಯ.. ಭಾಗ-7

admin
the authoradmin

Leave a Reply

Translate to any language you want