ಹೊಸೂರು(ಸಂಘಟನೆ ಮಂಜುನಾಥ್): ಮಂತ್ರಾಲಯದಲ್ಲಿ ರಸ್ತೆ ದಾಟುತ್ತಿದ್ದ ಬಾಲಕನಿಗೆ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಕ್ಕೆ ಸೇರಿದ ಬಸ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜೂ.16(ಮಂಗಳವಾರ)ರಂದು ನಡೆದಿದೆ.
ಸಾಲಿಗ್ರಾಮ ತಾಲೂಕಿನ ವಡ್ಡರಕೊಪ್ಪಲು ಗ್ರಾಮದ ನಿವಾಸಿ ಹರೀಶ್ ಮತ್ತು ಚೈತ್ರಾ ದಂಪತಿಯ ಪುತ್ರ ಕಾರ್ತಿಕ್ (4) ಮೃತಪಟ್ಟ ದುರ್ದೈವಿ ಬಾಲಕ. ಗುರುರಾಘವೇಂದ್ರರ ದರ್ಶನ ಪಡೆದು ಬರಲೆಂದು ನಾಲ್ಕು ವರ್ಷದ ಮಗನೊಂದಿಗೆ ಖುಷಿ, ಖುಷಿಯಾಗಿ ಮಂತ್ರಾಲಯಕ್ಕೆ ತೆರೆಳಿದ ಹರೀಶ್ ಮತ್ತು ಚೈತ್ರಾ ದಂಪತಿಗೆ ಇದೊಂದು ಮಹಾಆಘಾತವಾಗಿದೆ.
ಇಷ್ಟಕ್ಕೂ ನಡೆದಿದ್ದೇನು ಎಂಬುದನ್ನು ನೋಡಿದ್ದೇ ಆದರೆ ಮಂತ್ರಾಲಯಕ್ಕೆ ತೆರಳಿದ್ದ ಹರೀಶ್ ಮತ್ತು ಚೈತ್ರಾ ದಂಪತಿ ಪುತ್ರ ಕಾರ್ತಿಕ್ ನೊಂದಿಗೆ ಅಲ್ಲಿನ ಪಂಚಮುಖಿ ಆಂಜ ನೇಯ ದೇವಸ್ಥಾನದಲ್ಲಿ ದರ್ಶನ ಪಡೆದು, ಬಳಿಕ ರಸ್ತೆ ದಾಟುತ್ತಿದ್ದ ವೇಳೆ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಬಸ್ ಚಾಲಕನ ಅಜಾಗರೂಕತೆಯಿಂದಾಗಿ ಬಾಲಕ ಕಾರ್ತಿಕ್ ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಕಾರ್ತಿಕ್‌ನ ಹಣೆ ಮತ್ತು ಕಿವಿಗೆ ಬಲವಾದ ಪೆಟ್ಟು ಬಿದ್ದಿದ್ದು ಗಂಭೀರ ಗಾಯಗೊಂಡು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆ ನಂತರ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದು, ಮಂತ್ರಾಲಯದಲ್ಲಿರುವ ಆಸ್ಪತ್ರೆಗೆ ಬಾಲಕನ ಶವಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ವಗ್ರಾಮ ವಡ್ಡರಕೊಪ್ಪಲಿನಲ್ಲಿ ಕುಟುಂಬಸ್ಥರ ದುಃಖದ ಕಟ್ಟೆಯೊಡೆದಿದ್ದು, ಆಕ್ರಂದನ ಮುಗಿಲುಮುಟ್ಟಿದೆ. ದೇವರ ದರ್ಶನಕ್ಕೆ ಹೋದ ಬಾಲಕ ಶವವಾಗಿ ಮನೆಗೆ ಬರುತ್ತಿರುವುದು ನಿಜಕ್ಕೂ ದುಃಖದ ಸಂಗತಿ. ಇಂತಹದೊಂದು ಪರಿಸ್ಥಿತಿ ಯಾರಿಗೂ ಬಾರದಿರಲಿ..








