ಕಾಂಗ್ರೆಸ್ ನೇತೃತ್ವದ ಮಿತ್ರ ಪಕ್ಷಗಳು (ಇಂಡಿಕೂಟ) ಗೆದ್ದು ರಾಹುಲ್ ಗಾಂಧಿ ಪ್ರಧಾನ ಮಂತ್ರಿ ಯಾವಾಗ ಆಗ್ತಾರೋ ಗೊತ್ತಿಲ್ಲ. ಆದರೆ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಉಳಿಯುವ ಕನಸು ಮಾತ್ರ ನನಸಾಗಿದೆ. ಏಕೆಂದರೆ ಅವರಿಗೆ ಅಡ್ಡಗಾಲಾಗಿದ್ದ ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಈಗ ಬದಿಗೆ ಸರಿದಿದ್ದಾರೆ.. ಇದರಿಂದ ರಾಹುಲ್ ಗಾಂಧಿ ಹಾದಿ ಸುಗಮವಾಗಿದೆ… ಅವರು ಮುಂದಿನ 2029ರ ಲೋಕಸಭಾ ಚುನಾವಣೆಗೆ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಘೋಷಿಸುವುದಕ್ಕೆ ಯಾವುದೇ ಅಡ್ಡಿ ಆತಂಕ ಇಲ್ಲದಂತಾಗಿದೆ.
ಕಾಂಗ್ರೆಸ್ ನೇತೃತ್ವದ ಇಂಡಿ (ಐಎನ್ ಡಿಐಎ) ಕೂಟ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಯನ್ನು ಮಣಿಸಲೆಂದೇ ಕಳೆದ ಲೋಕಸಭಾ ಚುನಾವಣೆ ವೇಳೆ ಹುಟ್ಟಿಕೊಂಡ ಸುಮಾರು ಇಪ್ಪತ್ತಮೂರಕ್ಕೂ ಹೆಚ್ಚು ಪಕ್ಷಗಳನ್ನೊಳಗೊಂಡ ರಾಜಕೀಯ ಕೂಟವಾಗಿದೆ. ಇದು ಒಂದೊಳ್ಳೆಯ ಸ್ಪರ್ಧೆಯನ್ನು ನೀಡಿದ್ದಲ್ಲದೆ, ಎನ್ ಡಿಎ ಕೂಟಕ್ಕೆ ಸಣ್ಣಗಿನ ನಡುಕ ಹುಟ್ಟಿಸಿದಂತೂ ಸತ್ಯ. ಇಂತಹ ಇಂಡಿಕೂಟ ನಿಜವಾಗಿಯೂ ಒಗ್ಗಟ್ಟಾಗಿದೆಯಾ ಅಂಥ ಯಾರಾದ್ರೂ ಕೇಳಿದರೆ ಇಲ್ಲ ಅಂಥನೇ ಹೇಳಬೇಕಾಗುತ್ತದೆ.
ಇಂಡಿಕೂಟದಲ್ಲಿರುವ ಪಕ್ಷಗಳು ಮತ್ತು ಅವುಗಳ ನಡೆಯೂ ಒಂಥರಾ ವಿಚಿತ್ರವಾಗಿದೆ. ಒಂದಷ್ಟು ಪಕ್ಷಗಳ ಸಂಗಮವಾಗಿರುವ ಈ ಕೂಟ ಕೇವಲ ಲೋಕಸಭೆ ಚುನಾವಣೆ ವಿಚಾರಕ್ಕೆ ಅದರಲ್ಲೂ ಮೋದಿ ವಿರುದ್ಧ ಒಟ್ಟಾಗಿರುವುದನ್ನು ಬಿಟ್ಟರೆ, ಉಳಿದಂತೆ ಪ್ರಾದೇಶಿಕ ಮಟ್ಟದಲ್ಲಿ ಒಂದು ಪಕ್ಷ ಇನ್ನೊಂದು ಪಕ್ಷದ ವಿರೋಧಿಯೇ.. ಇದು ಅಚ್ಚರಿಯಾದರೂ ಸತ್ಯ. ಉದಾಹರಣೆಗೆ ಕೇರಳದಲ್ಲಿ ಕಮ್ಯೂನಿಸ್ಟ್ ಕಾಂಗ್ರೆಸ್ ನ ಭದ್ರ ವಿರೋಧಿ ಆದರೆ ಕೇಂದ್ರದ ವಿಚಾರಕ್ಕೆ ಬಂದಾಗ ಒಂದೇ ವೇದಿಕೆಯಲ್ಲಿ ಮೋದಿ ವಿರುದ್ಧ ಹೋರಾಟಕ್ಕೆ ಮುಂದಾಗುತ್ತಾರೆ, ಪಶ್ಚಿಮ ಬಂಗಾಳದ ಟಿಎಂಸಿ ವಿಚಾರದಲ್ಲಿಯೂ ಇದೇ ಆಗಿದೆ.

ಹಾಗೆನೋಡಿದರೆ ಇಂಡಿಕೂಟದಲ್ಲಿದ್ದ ರಾಜಕೀಯ ಪಕ್ಷಗಳ ಪೈಕಿ ಲೋಕಸಭಾ ಚುನಾವಣೆ (2024)ಗೆ ಮುನ್ನ ಎಎಪಿ ಮತ್ತು ಟಿಎಂಸಿ ಪಕ್ಷಗಳು ಕಾಂಗ್ರೆಸ್ ಗಿಂತಲೂ ಶಕ್ತಿಶಾಲಿಯಾಗಿತ್ತು. ಇದೆರಡು ಪಕ್ಷಗಳು ಪ್ರಾದೇಶಿಕವಾಗಿದ್ದರೂ ತಮ್ಮ ರಾಜ್ಯದ ಹೊರಗೂ ಒಂದಷ್ಟು ಸ್ಥಾನವನ್ನು ಗೆಲ್ಲುವ ಶಕ್ತಿಯಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗಿಂತ ತಾವೇನು ಕಡಿಮೆಯಿಲ್ಲ. ಇಂಡಿಕೂಟದಿಂದ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಲು ಕೇವಲ ರಾಹುಲ್ ಗಾಂಧಿ ಮಾತ್ರವಲ್ಲ ನಾವು ಕೂಡ ಅರ್ಹತೆ ಹೊಂದಿದ್ದೇವೆ ಎಂಬ ಸಂದೇಶವನ್ನು ರವಾನಿಸಿದ್ದರು. ಇದು ಇಂಡಿಕೂಟ ಪ್ರಧಾನಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಚುನಾವಣೆಗೆ ಹೋಗುವಂತೆ ಮಾಡಿತ್ತು.
ಭಾರೀ ಹೋರಾಟದ ನಂತರ ನಿರೀಕ್ಷೆಗೂ ಮೀರಿದ ಸ್ಥಾನವನ್ನು ಇಂಡಿಕೂಟ ಪಡೆದಿತ್ತು. ಅವತ್ತು ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಮನಸ್ಸು ಮಾಡಿ ನಮಗೆ ಬೆಂಬಲ ನೀಡಿದರೆ ಅಧಿಕಾರ ಹಿಡಿಯುವ ಇರಾದೆಯನ್ನು ಹೊಂದಿದ್ದರು. ಆದರೆ ಅವರು ಅಂದುಕೊಂಡಂತೆ ಆಗಲೇ ಇಲ್ಲ. ಅಂಥ ಯಾವ ತೀರ್ಮಾನವನ್ನು ಚಂದ್ರಬಾಬು ನಾಯ್ಡು ಆಗಲೀ ನಿತೀಶ್ ಕುಮಾರ್ ಆಗಲೀ ಮಾಡಲಿಲ್ಲ. ಪರಿಣಾಮ ಕೆಲವೇ ದಿನಗಳಲ್ಲಿ ಇಂಡಿಕೂಟದ ಹುಮ್ಮಸ್ಸು ಗಾಳಿತೆಗೆದ ಟಯರ್ ನಂತೆ ಠುಸ್ ಆಗಿ ಹೋಯಿತು. ಅದಾದ ನಂತರ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆದರೂ ಎಲ್ಲಿಯೂ ಇಂಡಿಕೂಟ ಒಗ್ಗಟ್ಟು ಪ್ರದರ್ಶನವಾಗಲೇ ಇಲ್ಲ ಪರಿಣಾಮ ಬಿಜೆಪಿ ಗೆಲುವು ಕಂಡುಕೊಂಡಿತು. ಇಂಡಿಕೂಟದ ಕಾಂಗ್ರೆಸ್, ಎಎಪಿ, ಟಿಎಂಸಿ, ಡಿಎಂಕೆ ಹೀಗೆ ಎಲ್ಲ ಪಕ್ಷಗಳು ನೆಲಕಚ್ಚಿದವು.

ಇನ್ನು ಎಲ್ಲವೂ ಸರಿಯಿದೆ ಎಂದುಕೊಳ್ಳುವಾಗಲೇ ಇತ್ತೀಚೆಗೆ ಬೆಳವಣಿಗೆಯನ್ನು ನೋಡಿದರೆ ತನ್ನ ಬಹುಕಾಲದ ಮಿತ್ರಪಕ್ಷವಾಗಿದ್ದ ತಮಿಳುನಾಡಿನ ಡಿಎಂಕೆ ಪಕ್ಷದ ಸಖ್ಯವೂ ಕಾಂಗ್ರೆಸ್ ಕಳೆದುಕೊಂಡಿದೆ. ಅಲ್ಲಿ ಕಾಂಗ್ರೆಸ್ ಗೆದ್ದ ಎತ್ತಿನ ಬಾಲ ಹಿಡಿದಿದೆ. ಇದೆಲ್ಲ ವೈರುದ್ಧದ ನಡುವೆ ಮುಂದಿನ ಲೋಕಸಭಾ ಚುನಾವಣೆಗೆ ತಯಾರಾಗಬೇಕಾಗಿದೆ. ಹೀಗಾಗಿ ಹರಿದು ಹಂಚಿಹೋಗಿರುವ ಇಂಡಿಕೂಟವನ್ನು ಮತ್ತೆ ಒಂದಾಗಿಸಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಆದರೆ ಕೆಲ ದಿನಗಳ ಇಂಡಿಕೂಟದ ನಾಯಕರು ಸಭೆ ನಡೆಸಿದರೂ ಅದರಲ್ಲಿ ಯಾವುದೇ ಹುಮ್ಮಸ್ಸು ಕಂಡು ಬರಲಿಲಲ್ಲ. ಬದಲಿಗೆ ಕಮ್ಯುನಿಸ್ಟ್ ಕಾಂಗ್ರೆಸ್ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದರೆ, ಡಿಎಂಕೆ ಗೈರಾಗಿತ್ತು. ಇದೆಲ್ಲವನ್ನು ಗಮನಿಸಿದರೆ ಇನ್ನು ಮೂರು ವರ್ಷದ ಲೋಕಸಭಾ ಚುನಾವಣೆಗೆ ಇವತ್ತಿನಿಂದಲೇ ಹೋರಾಟ ಮಾಡುವ ಹುಮ್ಮಸ್ಸಾಗಲೀ, ಪಕ್ಷ ಸಂಘಟನೆ ಮಾಡುವ ಆಲೋಚನೆಗಳಾಗಲೀ ಇಂಡಿಕೂಟದಲ್ಲಿ ಕಂಡು ಬರುತ್ತಿಲ್ಲ.
ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಸ್ವಂತ ಶಕ್ತಿಯನ್ನು ಕೆಲವೇ ಕೆಲವು ರಾಜ್ಯಗಳಲ್ಲಷ್ಟೇ ಉಳಿಸಿಕೊಂಡಿದೆ. ಉಳಿದಂತೆ ಬಹುತೇಕ ರಾಜ್ಯಗಳಲ್ಲಿ ಅದು ಪ್ರಾದೇಶಿಕ ಪಕ್ಷದ ಶಕ್ಯ ಇಲ್ಲದೆ ಹೋದರೆ ಒಂದು ಸ್ಥಾನ ಗೆಲ್ಲುವುದಕ್ಕೂ ಪರದಾಡುವಂತಾಗಿದೆ. ಹಾಗಾಗಿಯೇ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸುವ ಯಾವುದೇ ಪಕ್ಷವಿರಲಿ ಅದರ ಜತೆಗೆ ಕೈಜೋಡಿಸಲು ಮುಂದಾಗುತ್ತಾರೆ. ಅಷ್ಟೇ ಅಲ್ಲದೆ ಬೆನ್ನ ಮೇಲೆ ಹೊತ್ತುಕೊಂಡು ಒಂಥರಾ ಕೂಸುಮರಿ ತರ ಮುನ್ನಡೆಯುತ್ತಾರೆ.

ಎರಡು ತಿಂಗಳ ಹಿಂದೆ ನಡೆದ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಮತ್ತು ಕಾಂಗ್ರೆಸ್ ಪಕ್ಷಗಳು ಇಂಡಿಕೂಟದಲ್ಲಿದ್ದರೂ ಹಾವು ಮುಂಗುಸಿಯಂತೆ ಕಿತ್ತಾಡಿದ್ದವು. ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಆತ್ಮವಿಶ್ವಾಸದ ಕಾರಣಕ್ಕೆ ಕಾಂಗ್ರೆಸ್ ನ್ನು ಮಮತಾ ಬ್ಯಾನರ್ಜಿ ತಮ್ಮ ಹತ್ತಿರಕ್ಕೆ ಬಿಟ್ಟುಕೊಂಡಿರಲಿಲ್ಲ. ಆದರೆ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ ಬಳಿಕ ಮತ್ತು ಮಮತಾ ಬ್ಯಾನರ್ಜಿ ಹೀನಾಯವಾಗಿ ಸೋಲು ಕಂಡಿದ್ದರಿಂದ ಅವರ ಜತೆಗಿದ್ದ ನಾಯಕರು ತಿರುಗಿ ಬಿದ್ದಿರುವುದರಿಂದ ಸಂಪೂರ್ಣ ಜರ್ಜರಿತರಾಗಿರುವ ಮಮತಾ ಬ್ಯಾನರ್ಜಿ ಮತ್ತೆ ಕಾಂಗ್ರೆಸ್ ಬಳಿಗೆ ಬಂದಿದ್ದಾರೆ. ಅಧಿಕಾರದ ಗದ್ದುಗೆಯಲ್ಲಿದ್ದ ಕಾಲದಲ್ಲಿ ಇಂಡಿಕೂಟದ ನೇತೃತ್ವ ತನಗೆ ಕೊಡಿ ನಾನೇ ಮುನ್ನಡೆಸುತ್ತೇನೆ ಎಂದು ಬೀಗಿದ್ದ ದೀದಿ ಇವತ್ತು ನನಗೆ ಮೋಸವಾಗಿದೆ ಟಿಎಂಸಿ ಪಕ್ಷನ್ನು ಕಾಂಗ್ರೆಸ್ ಜತೆಗೆ ವಿಲೀನಗೊಳಿಸಿ ಎಂದು ಗೋಗರೆಯುವ ಮಟ್ಟಕ್ಕೆ ಬಂದು ನಿಂತಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಸೋಲಿನಿಂದ ಕಾಂಗ್ರೆಸ್ ಗೆ ಅದರಲ್ಲೂ ರಾಹುಲ್ ಗಾಂಧಿಗೆ ಒಳ್ಳೆಯದೇ ಆಗಿದೆ. ಇಂಡಿಕೂಟದಲ್ಲಿ ಕಾಂಗ್ರೆಸ್ ಪ್ರಭಾವ ಉಳಿಯುವಂತಾಗಿದೆ. ಜತೆಗೆ ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಪೈಪೋಟಿ ನೀಡುವವರೇ ಇಲ್ಲದಾಗಿದೆ. ಅರವಿಂದ್ ಕೇಜ್ರಿವಾಲ್ ಮತ್ತು ಮಮತಾ ಬ್ಯಾನರ್ಜಿ ಇಂಡಿಕೂಟದಲ್ಲಿ ಪ್ರಭಾವಶಾಲಿ ನಾಯಕರಾಗಿ ಗಮನಸೆಳೆದಿದ್ದರು. ಅವರು ಅಧಿಕಾರದಲ್ಲಿದ್ದ ಕಾರಣದಿಂದಾಗಿ ಅವರ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡುವಂತೆ ಇರಲಿಲ್ಲ ಎಲ್ಲದಕ್ಕೂ ತಲೆಯಾಡಿಸಬೇಕಾಗಿತ್ತು. ಆದರೀಗ ಇಬ್ಬರು ನಾಯಕರು ಸೋತಿದ್ದಾರೆ. ಅವರ ಪ್ರಭಾವವೂ ನೆಲಕಚ್ಚಿದೆ. ಇದು ಒಂದು ಹಂತದಲ್ಲಿ ಕಾಂಗ್ರೆಸ್ ಗೆ ಸರ್ವ ರೀತಿಯಲ್ಲಿಯೂ ರಾಜಕೀಯವಾಗಿ ಲಾಭವೇ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಾಂಗ್ರೆಸ್ ರಾಹುಲ್ ಗಾಂಧಿಯನ್ನು ಹೊರತುಪಡಿಸಿ ಇನ್ಯಾರನ್ನೂ ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡುವ ಸ್ಥಿತಿಯಲ್ಲಿಲ್ಲ. ಆದರೆ 2014ರಿಂದ ರಾಹುಲ್ ಗಾಂಧಿ ಸತತ ಸೋಲು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಸದ್ಯ ದೇಶದಲ್ಲಿ ಕೇವಲ ನಾಲ್ಕು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ. ಇದೀಗ ತಮಿಳುನಾಡಿನಲ್ಲಿ ವಿಜಯ್ ಜೋಸೆಫ್ ನೇತೃತ್ವದ ಟಿವಿಕೆಗೆ ಬೆಂಬಲ ನೀಡಿದರೂ ನಾವು ಆಡಳಿತದ ಭಾಗವಾಗಿದ್ದೇವೆ ಎನ್ನುವ ಸ್ಥಿತಿಯಲ್ಲಿಲ್ಲ. ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಸಿಎಂ ವಿಜಯ್ ಇಂಡಿಕೂಟವನ್ನು ಬೆಂಬಲಿಸುತ್ತಾರೆ ಎನ್ನುವ ಖಾತರಿಯೂ ಇಲ್ಲದಾಗಿದೆ.
ಬಹುಶಃ ಕಳೆದ ಲೋಕಸಭಾ ಚುನಾವಣೆ ವೇಳೆ ಇದ್ದಂತಹ ಜೋಶ್ ನ್ನು ಇಂಡಿಕೂಟ ಉಳಿಸಿಕೊಂಡು ಚುನಾವಣೆ ನಂತರವೂ ಮೈತ್ರಿಪಕ್ಷದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿತ್ತು. ಎರಡು ವರ್ಷಗಳ ಅವಧಿಯಲ್ಲಿ ಮೂರ್ನಾಲ್ಕು ಬಾರಿಯಾದರೂ ಸಭೆ ಸೇರಿ ಸಂಘಟನೆಯತ್ತ ಗಮನಹರಿಸಬೇಕಾಗಿತ್ತು. ಸಭೆ, ಸಮಾವೇಶ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ ಚುರುಕು ಮುಟ್ಟಿಸಬೇಕಿತ್ತು. ಆದರೆ ಅದ್ಯಾವುದೂ ಇದುವರೆಗೆ ಆದಂತೆ ಕಾಣುತ್ತಿಲ್ಲ.
ಅಧಿವೇಶನದ ವೇಳೆ ಲೋಕಸಭೆಯಲ್ಲಿ ಧರಣಿ ಮಾಡಿ ಕಲಾಪಕ್ಕೆ ಅಡ್ಡಿ ಮಾಡುವುದು ಬಿಟ್ಟರೆ ಆರೋಪಗಳನ್ನು ಮಾಡುವುದರಲ್ಲಿ ಎರಡು ವರ್ಷ ಕಳೆದು ಬಿಟ್ಟಿದ್ದಾರೆ. ಅದರಾಚೆಗೆ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಇಂಡಿಕೂಟವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಯಾವುದೇ ಕ್ರಮಗಳನ್ನು ಇದುವರೆಗೆ ಕೈಗೊಂಡಿಲ್ಲ. ಆ ನಿಟ್ಟಿನಲ್ಲಿ ಯಾರೂ ನಿಗಾ ವಹಿಸಿದಂತೆ ಕಾಣಿಸುತ್ತಿಲ್ಲ. ಇನ್ನು ರಾಹುಲ್ ಗಾಂಧಿ ಜತೆಗಿರುವ ನಾಯಕರಲ್ಲಿಯೂ ತಳಮಟ್ಟದಿಂದ ಪಕ್ಷ ಕಟ್ಟುವ ತಾಕತ್ತು ಇಲ್ಲದಾಗಿದೆ. ಅವರೆಲ್ಲರೂ ಮೋದಿ ವಿರುದ್ಧ ಹೇಳಿಕೆಗಳನ್ನು ನೀಡುವುದಕ್ಕಷ್ಟೇ ಸೀಮಿತರಾದವರಂತೆ ಗೋಚರಿಸುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷದಲ್ಲಾಗಲೀ, ಇಂಡಿಕೂಟದಲ್ಲಾಗಲೀ ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಸಜ್ಜಾಗಬೇಕೆಂಬ ಯಾವುದೇ ಉತ್ಸಾಹ ಕಾಣಿಸುತ್ತಿಲ್ಲ. ಅವರದ್ದೇನಿದ್ದರೂ ಸಂತೆ ವೇಳೆಗೆ ಮೂರು ಮೊಳ ನೇಯ್ದರೆ ಸಾಕೆಂಬ ಧೋರಣೆ… ಈ ಧೋರಣೆಯೇ ಕಳೆದ ಮೂರು ಚುನಾವಣೆಗಳಿಂದಲೂ ಮೋದಿ ಗೆಲುವಿಗೆ ಸಹಕಾರಿಯಾಗುತ್ತಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನಾದರೂ ಕಾಂಗ್ರೆಸ್ ನಾಯಕರು ನಿದ್ದೆ ಬಿಟ್ಟು ಮೇಲೇಳುತ್ತಾರಾ? ಇಂಡಿಕೂಟ ಬಲವರ್ಧನೆಯಾಗುತ್ತಾ? ಎಲ್ಲ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಬೇಕಿದೆ..
B M Lavakumar








