ಸಾಹಿತಿ, ಪರಿಸರಪ್ರೇಮಿ ಭೇರ್ಯ ರಾಮಕುಮಾರ್, ಕೃಷಿಪರ ಚಿಂತಕ ಯೋಗ ಪ್ರಕಾಶ್ ಗೆ ಸುವರ್ಣ ಪರಿಸರ ಪ್ರಶಸ್ತಿ

ಮೈಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಸಂರಕ್ಷಣೆ, ಪರಿಸರ ಜಾಗೃತಿ ಹಾಗೂ ಪರಿಸರ ಸೇವೆಯಲ್ಲಿ ವಿಶೇಷ ಕೊಡುಗೆ ನೀಡಿರುವ ಸಾಧಕರನ್ನು ಗುರುತಿಸಿ ಸುವರ್ಣ ಬೆಳಕು ಫೌಂಡೇಶನ್ (ರಿ.), ಮೈಸೂರು ವತಿಯಿಂದ ‘ಸುವರ್ಣ ಪರಿಸರ ಪ್ರಶಸ್ತಿ’ ನೀಡಲಾಗುತ್ತಿದ್ದು ಪ್ರಶಸ್ತಿಗೆ ಹಿರಿಯ ಸಾಹಿತಿ, ಪರಿಸರ ಚಿಂತಕ ಹಾಗೂ ಗ್ರಾಮಾಂತರ ಬುದ್ಧಿಜೀವಿಗಳ ಬಳಗದ ಅಧ್ಯಕ್ಷರಾದ ಭೇರ್ಯ ರಾಮಕುಮಾರ್ ಹಾಗೂ ಪ್ರಕೃತಿ ಪರ ಕೃಷಿ ಚಿಂತಕರಾಗಿ ರೈತರಿಗೆ ಹಾಗೂ ಕೃಷಿಕರಿಗೆ ಸಹಜ ಕೃಷಿ ಮತ್ತು ಅರಣ್ಯ ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ರೂಪಿಸುವ ಕುರಿತು ಮಾರ್ಗದರ್ಶನ ನೀಡುತ್ತಾ ಬಂದಿರುವ ಯೋಗ ಪ್ರಕಾಶ್ ಅವರು ಭಾಜನರಾಗಿದ್ದಾರೆ.
ಭೇರ್ಯ ರಾಮಕುಮಾರ್ ಸ್ವತಃ ಸಾಹಿತಿಗಳು, ಹಿರಿಯ ಪತ್ರಕರ್ತರು ಆಗಿರುವ ಇವರು ಕಳೆದ 1985 ರಿಂದ ಇಲ್ಲಿಯವರೆಗೆ ಮೈಸೂರು, ಮಂಡ್ಯ, ಕೊಡಗು, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜುಗಳಲ್ಲಿ ಪರಿಸರ ಉಪನ್ಯಾಸಗಳನ್ನು ನಿರಂತರವಾಗಿ ನೀಡಿದ್ದಾರೆ.

ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ ಅಧ್ಯಕ್ಷರಾಗಿ ತಾವು ನಡೆಸಿರುವ 365 ಸಾಹಿತ್ಯ ಕಾರ್ಯಕ್ರಮ ಗಳಲ್ಲಿ ಪ್ರತಿ ಕಾರ್ಯಕ್ರಮದಲ್ಲೂ 100 ಸಸಿಗಳನ್ನು ಉಚಿತವಾಗಿ ವಿತರಿಸುತ್ತಾ ಬಂದಿದ್ದಾರೆ. ಜೊತೆಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಂದ, ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಕವಿ ಕಲಾವಿದರಿಂದ ಪರಿಸರ ಪ್ರತಿಜ್ಞೆ ಮಾಡಿಸುತ್ತಿದ್ದಾರೆ.
ಪ್ರತಿಯೊಬ್ಬರೂ ತಮ್ಮ ಜನ್ಮದಿನದಂದು, ತಮ್ಮ ತಂದೆ ತಾಯಿಯ ಜನ್ಮ ದಿನದಂದು, ತಮ್ಮ ಕುಟುಂಬದ ಹಿರಿಯರ ನೆನಪಿನಲ್ಲಿ ಪ್ರತಿ ವರ್ಷವೂ ಒಂದೊಂದು ಸಸಿ ನೆಟ್ಟು ಪೋಷಿಸುವುದಾಗಿ ಇವರು ಎಲ್ಲೆಡೆ ಪ್ರಮಾಣ ಮಾಡಿಸುತ್ತಾ ಬಂದಿದ್ದಾರೆ. ಪರಿಸರ ಸಂರಕ್ಷಣೆಗಾಗಿ ಭೇರ್ಯ ರಾಮಕುಮಾರ್ ಅವರು ಮಾಡುತ್ತಿರುವ ಅಪರೂಪದ ಸೇವೆಯನ್ನು ಪರಿಗಣಿಸಿ ಅವರಿಗೆ ಸುವರ್ಣ ಪರಿಸರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಾಗೆಯೇ ಯೋಗ ಪ್ರಕಾಶ್ ಅವರ ಕೃಷಿಪರ ಚಿಂತನೆ ರೈತರಿಗೆ ಹಾಗೂ ಕೃಷಿಕರಿಗೆ ಸಹಜ ಕೃಷಿ ಮತ್ತು ಅರಣ್ಯ ಕೃಷಿ ಬಗ್ಗೆ ಮಾರ್ಗ ದರ್ಶನ ನೀಡುತ್ತಿರುವ ಕಾರ್ಯವನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ.
ಸುವರ್ಣ ಬೆಳಕು ಫೌಂಡೇಶನ್ ಸಂಸ್ಥೆಯು ಜೂನ್ 20 ರಂದು ಮೈಸೂರಿನ ಅರಸು ಬೋರ್ಡಿಂಗ್ ಶಾಲೆಯ ಎದುರು ಪ್ರಕೃತಿ ಫುಡ್ ಸಭಾಂಗಣದಲ್ಲಿ ನಡೆಯಲಿರುವ ಸಾವಯುವ ಕೃಷಿ ಮೇಳದಲ್ಲಿ ಇಬ್ಬರು ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ.







